Wednesday, 21 May 2014

ಗಿಳಿಬಾಗಿಲು (ಹವ್ಯಕ ಬ್ಲಾಗ್ )-ಆನೆ ಹೋಪಲ್ಲಿ ಬಿಟ್ಟು ಸೂಜಿ ಹೋಪಲ್ಲಿ ಅಡೆಪ್ಪುದು -ಡಾ.ಲಕ್ಷ್ಮೀ ಜಿ ಪ್ರಸಾದ

ಮನುಷ್ಯರ ಸ್ವಭಾವವೇ ವಿಚಿತ್ರ .ಒಬ್ಬ ಇನ್ನೊಬ್ಬನ ಹಾಂಗೆ ಇರ್ತವಿಲ್ಲೆ.
.ಕೆಲವು ಜನಂಗ ತುಂಬಾ ಉದಾರಿಗ .ಕೆಲವು ಜನಂಗ ಎಂಜೆಲು ಕೈಲಿ ಕಾಕೆ ಓಡ್ಸದ್ದಷ್ಟು ಪಿಟ್ಟಾಸಿಗ,ಕೆಲವು ಜನಂಗ ತುಂಬಾ ಸರಳವಾಗಿಪ್ಪಲೆ ಬಯಸುವೋರು ,ಕೆಲವು ಜನಂಗ ತುಂಬಾ ಧಂ ಧೂಮ್ ಆಗಿ ಖರ್ಚು ಮಾಡುವೋರು .ಮನೆಲಿ ಇದ್ದ ಇಲ್ಲೆಯ ಹೇಳಿ ಕೂಡಾ ನೋಡದ್ದೆ ಖರ್ಚು ಮಾಡುವೋರು,ಮನೇಲಿ ಕೊಳವಷ್ಟು ಇದ್ದರೂ ಬೇರೆಯೋರಿಂಗೆ ಒಂದು ತುಂಡು ಕೊಡದ್ದೋರು ,ಹೆಸರಿನ್ಗಾಗಿಯಾ ಅಥವಾ ಇನ್ನೇನಾದರೂ ಕಾರಣಕ್ಕೋ ಸಂಘ ಸಂಸ್ಥೆಗೊಕ್ಕೆ ಧಾರಾಳ ಕೊಡುವೋರು ,ಮನೆ ಬಾಗಿಲಿಂಗೆ ಬಂದ ಬಡವಂಗೆ ಅಶನ ಹಾಕುಲೂ ಕುರೆ ಮಾಡುವೋರು,ದೇವಸ್ಥಾನಕ್ಕೆ ,ಮಠ-ಮಂದಿರಂಗೊಕ್ಕೆ ಧಾರಾಳ ಕೊಡುವೋರುದೆ ಪಕ್ಕದ ಮನೆಯ ಬಡ ಮಾಣಿಗೆ ಕಿಡ್ನಿ ಜೋಡಣೆಗೆ ಪೈಸೆ ಕೊಡುಲೆ ಮನಸ್ಸು ಮಾಡದ್ದೆ ಇಪ್ಪೋರು ..ಹೀಂಗೆ ಪ್ರತಿಯೊಬ್ಬರಿಂಗು ಅವರದೇ ಆದ ಸ್ವಭಾವ ರೀತಿ ನೀತಿಗ ಇರ್ತು

ಆದರೂ ಸಮಾಜದ ಸಾಮಾನ್ಯವಾಗಿಪ್ಪ  ರೀತಿ ನೀತಿಗೊಕ್ಕೆ   ತೀರಾ ಭಿನ್ನವಾಗಿಪ್ಪೋರ ಬಗ್ಗೆ ಜನಂಗ ಮಾತಾಡಿಗೊಂಬದುದೆ ಸಾಮಾನ್ಯವಾದ ವಿಚಾರ. ಮನುಷ್ಯರ ಇಂಥ ಕೆಲವು ವಿಶಿಷ್ಟ ಸ್ವಭಾವಂಗಳ ಬಗ್ಗೆ ಹೇಳುವಾಗ ಹೆಚ್ಚಾಗಿ ನುಡಿಗಟ್ಟುಗಳ ಬಳಕೆ ಇರುತ್ತು .

ಇಂಥ ಒಂದು ವಿಶಿಷ್ಟ ನುಡಿಗಟ್ಟು "ಆನೆ ಹೋಪಲ್ಲಿ ಬಿಟ್ಟು ಸೂಜಿ ಹೋಪಲ್ಲಿ ಅಡೆಪ್ಪುದು "ಹೇಳುದು .ಒಂದು ಕಡೆ ಬೇಜವಾಬ್ದಾರಿ ಉದಾಸೀನ ಅವ್ಯವಸ್ಥೆಯ ಕಾರಣಂದಾಗಿ ಸಾವಿರ ಗಟ್ಲೆ ನಷ್ಟ ಆವುತ್ತಾ ಇರುತ್ತು .ಅದರ ಸರಿ ಪಡಿಸುಲೆ ಹೋಗದ್ದೆ ಸಣ್ಣ ಪುಟ್ಟ ವಿಚಾರಗಳ ಬಗ್ಗೆ ಹೆಚ್ಚು ಗಮನ ಕೊಟ್ಟು ಸರಿ ಪಡಿಸುಲೆ ಹೋಪ ಜನಂಗಳನ್ನು ನಾವು ಸುತ್ತ ಮುತ್ತ ನೋಡುತ್ತು .
ಉದಾ ಹರಣೆಗೆ ಹೇಳುತ್ತರೆ ತೋಟಕ್ಕೆ ವಾರಕ್ಕೆ ಒಂದರಿದೆ ಕಾಲು ಮಡುಗದ್ದೆ ಅಡಕೆ ತೆಂಗು ಕದ್ದು ಹೊವುತ್ತಾ ಇರ್ತು .ದನಗ ಬಂದು ಬೆಳೆ ಸಪ್ಪಾಯಿ ಆಗಿರ್ತು .ಅದರ ಬಗ್ಗೆ ಕಾಳಜಿ ಮಾಡದ್ದೆ ಮನೆ ಹತ್ರಣ ಮಾವಿನ ಮರಂದ ಬಿದ್ದ ನಾಲ್ಕು ಮಾವಿನ ಹಣ್ಣಿನ ಆರೋ ಹೆರ್ಕಿಕೊಂಡು ಹೋಪಗ ಅದರ ಬಗ್ಗೆ ಭಾರೀ ಜಾಗ್ರತೆ ಮಾಡುದು !

 ತೋಟಂದ ಹಾಡು ಹಗಲೇ  ಕದ್ದು ಹೋಪ ಬಗ್ಗೆ ಜಾಗ್ರತೆ ಮಾಡುಲೆ ಇಲ್ಲೇ .ಬದಲಿಂಗೆ ಮನೆ ಕೆಲಸದೋವಕ್ಕೆ ಬಳುಸುವಗ ಕೈ ಕುಂಟು ಮಾಡುದು ,ಅವಕ್ಕೆ ಬರೀ ಕಳಪೆ ಊಟ ತಿಂಡಿ ಕೊಡುದು ಇತ್ಯಾದಿ ಮಾಡುವ ಅನೇಕ ಜನರ ನಾವು ಕಾಣುತ್ತಾ ಇರುತ್ತು .

ಇಂಥೋರ ಬಗ್ಗೆ ಹೇಳುವಾಗ ಬಳಕೆ ಅಪ್ಪ ನುಡಿಗಟ್ಟು ಇದು
ಆನೆ ಹೋಪಲ್ಲಿ ಬಿಟ್ಟು ಸೂಜಿ ಹೋಪಲ್ಲಿ ಅಡೆಪ್ಪುದು ಹೇಳಿರೆ ಆನೆ ಹೊಪಷ್ಟು ದೊಡ್ಡ ಮಾರ್ಗಲ್ಲಿ ದೊಡ್ಡ ಮಟ್ಟಲ್ಲಿ ನಷ್ಟ ಅಪ್ಪದರ ತಡೆಯದ್ದೆ ಅದರ ಹಾಂಗೆ ಬಿಟ್ಟು ಸೂಜಿ ಹೊಪಷ್ಟು ಸಣ್ಣ ಮಾರ್ಗಲ್ಲಿ ಅಪ್ಪ ಸಣ್ಣ ಪುಟ್ಟ ನಷ್ಟವ ತಡವ ನಿರರ್ಥಕ ಯತ್ನ  ಹೇಳಿ ಅರ್ಥ .
ಸೂಜಿ ಹೊಪಷ್ಟು ಸಣ್ಣಕ್ಕೆ ನಷ್ಟ ಆದರೆ ಎಷ್ಟು ಅಕ್ಕು ?ಉಂಬಲೆ ತಿಂಬಲೆ ಕೊಡುದರಲ್ಲಿ  ಸಣ್ಣ ಮಾಡಿ ಎಷ್ಟು ಒಳಿಸುಲೆ ಎಡಿಗು ?

ಅಂತಹ   ಪ್ರಯತ್ನ ನಿರರ್ಥಕ ಹೇಳಿ ಈ ನುಡಿಗಟ್ಟು ತಿಳಿಸುತ್ತು.

Saturday, 3 May 2014

ಗಿಳಿಬಾಗಿಲು (ಹವ್ಯಕ ಬ್ಲಾಗ್ ) ಹಳೆ ಮನೆ ಪಾಪದೆ ಬೇಡ ,ಹೊಸ ಮನೆ ಪುಣ್ಯದೆ ಬೇಡ :ಡಾ.ಲಕ್ಷ್ಮೀ ಜಿ ಪ್ರಸಾದ

ಈಗೀಗ ನಮ್ಮ ಭಾಷೆಲಿ ತುಂಬಾ ಬದಲಾವಣೆ ಆವುತ್ತಾ ಇದ್ದು .ಕನ್ನಡ ಹಾಂಗೆ ಬೇರೆ ಭಾಷೆಗಳ ಪ್ರಭಾವಂದಾಗಿ ಸುಮಾರು ಆಡು ನುಡಿಗಲ ಬಳಕೆ ಅಪರೂಪ ಆವುತ್ತಾ ಇದ್ದು .

ಈಗ ಅಷ್ಟಾಗಿ ಬಳಕೆಲಿ ಇಲ್ಲದ್ದೆ ಇಪ್ಪ ಒಂದು ಅಪುರೂಪದ ನುಡಿಗಟ್ಟು ಹಳೆ ಮನೆ ಪಾಪದೆ ಬೇಡ ಹೊಸ ಮನೆ ಪುಣ್ಯದೆ ಬೇಡ ಹೇಳುದು .
ನಮಗೆ ಆರತ್ತರೆ ಆದರು ರಜ್ಜ ಅಸಮಾಧಾನ ಇದ್ದರೆ ಅಥವಾ ಅವು ತುಂಬಾ ಕಸಂಟುಗ/ಪಿಸುಂಟುಗ ಆಗಿದ್ದರೆ ಅವರ ಸುದ್ದಿಯೇ ನಮಗೆ ಬೇಡ ಹೇಳುವ ಸಂದರ್ಭದಲ್ಲಿ ಈ ಮಾತಿನ ಬಳಕೆ ಮಾಡುತ್ತವು .
ಅವರ ಒಳ್ಳೇದು ಕೆಟ್ಟದು ಎರಡುದೆ ನಮಗೆ ಬೇಡ ಅವರ ಸ್ನೇಹವೂ ಬೇಡ ವಿರೋಧವೂ ಬೇಡ ಎಷ್ಟು ಬೇಕೋ ಅಷ್ಟು ಇದ್ದರೆ ಸಾಕು ಹೇಳುವ ಅರ್ಥವ ಹಳೆ ಮನೆ ಪಾಪದೇ ಬೇಡ ಹೊಸ ಮನೆ ಪುಣ್ಯದೆ ಬೇಡ ಹೇಳುವ ಮಾತು ಧ್ವನಿಸುತ್ತು .

ಇಲ್ಲಿ ಹಳೆ ಮನೆ ಪಾಪ ಹೇಳುವ ಮಾತು ಕೆಡುಕು ,ವಿರೋಧ ದ್ವೇಷವ ಸೂಚಿಸಿದರೆ ಹೊಸ ಮನೆ ಪುಣ್ಯ ಹೇಳುವ ಮಾತು ಒಳಿತು, ಸ್ನೇಹ ವ ಸೂಚಿಸುತ್ತು .ಅವರ ಪಾಪ ಪುಣ್ಯ ಎರಡೂ ಬೇಡ ಹೇಳಿರೆ ಅವರ ಒಳ್ಳೇದು ಕೆಟ್ಟದು ಎರಡರ ಸಂಗತಿಯೂ ಅವರಲ್ಲಿ ನಮಗೆ ಬೇಡ ಅಷ್ಟಕ್ಕಷ್ಟೇ ಇದ್ದರೆ ನಮಗೆ ಒಳ್ಳೆದು ಹೇಳುವ ಭಾವದೆ ಇಲ್ಲಿ ಕಾಣುತ್ತು.
ಕೋಳ್ಯೂರು ಸೀಮೆಲಿ ಈ ನುಡಿಗಟ್ಟು ಬಳಕೆಲಿ ಇದ್ದು ಬೇರೆ ಕಡೆಲಿದೆ ಇಕ್ಕು ಅಥವಾ ಸಮಾನಾಂತರವಾಗಿ ಬೇರೆ ಯಾವುದಾದರೂ ಮಾತಿನ ಬಳಕೆ ಇಕ್ಕು ,ಗೊಂತಿದ್ದೋರು ತಿಳುಸಿ.ಓದಿಅಭಿಪ್ರಾಯ ತಿಳುಸಿ 
ಇನ್ನೊಂದರಿ ಕಾಂಬ
ನಮಸ್ಕಾರ
ಲಕ್ಷ್ಮೀ ಜಿ ಪ್ರಸಾದ

Thursday, 17 April 2014

ಗಿಳಿಬಾಗಿಲು (ಹವ್ಯಕ ಬ್ಲಾಗ್ )-ಮೂಗಿಲಿ ಎಷ್ಟು ಉಂಬಲೆಡಿಗು?

ನಮ್ಮ ಭಾಷೆಲಿ ಮಾತಿನ ನಡುಗೆ ಬಳಕೆ ಅಪ್ಪ ಒಂದು ಚಂದದ ನುಡಿಗಟ್ಟು "ಮೂಗಿಲಿ ಎಷ್ಟು ಉಂಬಲೆಡಿಗು?"ಹೇಳುದು
ನಾವು ಉಂಬದು ಬಾಯಿಲಿ .ಅದಕ್ಕೂ ಒಂದು ಮಿತಿ ಇದ್ದು ,ಮಿತಿ ಮೀರಿ ತಿಂಬಲೆ ಎಡಿತ್ತಿಲ್ಲೆ.

ಮೂಗಿಲಿ ಅಂತೂ ಉಂಬಲೆ ಎಡಿತ್ತಿಲ್ಲೆ ಅದು ಅಸಾಧ್ಯವಾದ ವಿಚಾರ.ಹಾಂಗೂ ಒಂದು ವೇಳೆ ಪ್ರಯತ್ನ ಮಾಡಿರೆ ಒಂದೆರಡು ಅಶನ ತಿಂಬಲೆ ಎದುಗು ಅಷ್ಟೇ !
ಸರಿಯಾದ ರೀತಿಲಿಯೇ ಬಾಯಿಲಿ ಉಂಬದಕ್ಕೆ ಒಂದು ಮಿತಿ ಇದ್ದು ಅದರ ದಾಂಟಿ ಹೋಪಲೆ ಎಡಿತ್ತಿಲ್ಲೆ .ಮಿತಿಯ ಒಳವೇ ತಿಂಬಲೆ ಎಡಿವದು !ಹಾಂಗಿಪ್ಪಗ ಸ್ವಾಭಾವಿಕ ನೇರ ದಾರಿಯ ಬಿಟ್ಟು  ಮೂಗಿಲಿ ತಿಂಬಲೆ ಹೆರಟರೆ ಎಷ್ಟು ತಿಂಬಲೆ ಎಡಿಗು ?ಹೇಳುವ ಅರ್ಥ ಇಲ್ಲಿ ಕಾಣುತ್ತು.

ನ್ಯಾಯವಾದ ಮಾರ್ಗಲ್ಲಿ ಸಂಪಾದನೆ ಮಾಡಿ ಬದುಕುವೋನ ಗಳಿಕೆಗೂ ಒಂದು ಮಿತಿ ಇದ್ದು. ನಮ್ಮ ಅಯುಸ್ಸಿಂಗು ಒಂದು ಮಿತಿ ಇದ್ದು .ಆರು ಎಂತ ಸಂಪಾದನೆ ಮಾಡಿರೂ ಎಲ್ಲವನ್ನು ಇಲ್ಲಿಯೇ  ಬಿಟ್ಟು ದೇವರೆಡೆ ನಡೆಯಕ್ಕಾವುತ್ತು

ಹಾಂಗಿದ್ದರೂ ಕೆಲವು ಜನಂಗ ಬೇರೆಯೋರದ್ದರ ಎಳದು ತಿಂಬಲೆ ನೋಡುತ್ತವು!ಜಾಗೆಯ ಗಡಿಯ ರಜ್ಜ್ಜ ರಜ್ಜವೇ ಮುಂದೆ ಹಾಕುದು ,ಮನೆಗೆ ಕಾಂಪೌಂಡ್ ಕಟ್ಟುವಗ ನಾಲ್ಕಿಂಚು ಅಕ್ಕ ಪಕ್ಕದ ಜಾಗೆಯ ಸೇರ್ಸಿ ಹಾಕುದು ಇತ್ಯಾದಿ ಮಾಡುದು ಕಾಣುತ್ತು!
ಇಂಥ ಸಂದರ್ಭಂಗಗಳಲ್ಲಿ ಮೂಗಿಲಿ ಉಂಡ್ರೆ ಎಷ್ಟು ಉಂಬಲೆ ಎಡಿಗು ಹೇಳುವ ಮಾತಿನ ಎಂಗಳ ಕೋಳ್ಯೂರು ಸೀಮೆಲಿ ನಮ್ಮ ಭಾಷೆಲಿ ಬಳಕೆ ಮಾಡುತ್ತವು !ಬಹುಶ ಬೇರೆ ಕಡೆಯೂ ಈ ಮಾತು ಬಳಕೆಲಿ ಇಕ್ಕು ಅಲ್ಲದ ?ಇದೆ ಅರ್ಥ ಬಪ್ಪ ಬೇರೆ ನುಡಿಗಟ್ಟುಗಳೂ ಇಕ್ಕು ಅಲ್ಲದ ?ನಿಂಗಳ ಗಮನಕ್ಕೆ ಬಂದದರ ತಿಳಿಸಿ

Thursday, 6 March 2014

ಗಿಳಿಬಾಗಿಲು-26 (ಹವ್ಯಕ ಬ್ಲಾಗ್ ) ಕಂಜಿ ಹಾಕಿರೆ ಸಾಲ ,ನಕ್ಕುಲೂ ಅರಡಿಯಕ್ಕು

ಇದೊಂದು ನಮ್ಮ ಭಾಷೆಲಿಪ್ಪ ಭಾರಿ ಚೆಂದದ ನುಡಿಗಟ್ಟು .ಸಣ್ಣಾದಿಪ್ಪಗಳೇ ಒಂದೆರಡು ಸತ್ತಿ ಎಲ್ಲೋ ಕೇಳಿದ್ದು ನೆನಪಿದ್ದು .ಅದರ ಅರ್ಥ ಗಿರ್ಥ ಎಲ್ಲ ಅಷ್ಟಾಗಿ ಆಲೋಚನೆ ಮಾಡಿತ್ತಿಲ್ಲೆ.
ಇತ್ತಿಚೆಗಂಗೆ ಇದು ಎನಗೆ ಅಂಬಗಂಬಗ ನೆನಪಾವುತ್ತ ಇದ್ದು.ಉದಾಹರಣೆ ಹೇಳ್ತರೆ ಎನ್ನ ಬ್ಲಾಗ್  ಬ್ಲಾಗ್ ಕಥೆಯನ್ನೇ ಹೇಳುಳಕ್ಕು.ಇದು ಈ ನುಡಿ ಗಟ್ಟಿಂಗೆ ಸೂಕ್ತ ಉದಾಹರಣೆ ಅಕ್ಕು ಹೇಳಿ ಅನ್ಸುತ್ತು ಎನಗೆ.

ಆರೋ ಎಲ್ಲ ಬ್ಲಾಗ್ ಬರವದು ನೋಡುವಾಗಮೊದಲೇ ಬರವ ತುಡಿತ ಇಪ್ಪ ಎನಗೂ ಬ್ಲಾಗ್ ಬರೆಯಕ್ಕು ಹೇಳಿ ಅನ್ಸಿತ್ತು.ಸರಿ ಹೇಳಿ ಒಂದು ಕಂಪ್ಯೂಟರ್ ತೆಗತ್ತು .ಕನ್ನಡ ಟೈಪಿಂಗ್ ಈಗ ಏನೂ ಕಷ್ಟದ ವಿಚಾರ ಅಲ್ಲನ್ನೇ! ಮಾಹಿತಿ ಸಂಗ್ರಹಂಗ ಮೊದಲೇ ಇತ್ತು.ಹಾಂಗಾಗಿ ಬರವಲೆ ಸುರುಮಾಡಿದೆ.
ನಂತರವೇ ಗೊಂತಾದ್ದು .ಇದರಲ್ಲಿ ಎಂತೆಲ್ಲ ಸಮಸ್ಯೆಗ ಇದ್ದು ಹೇಳಿ.ತುಂಬಾ ಜನಂಗ ಇದರ ನಕಲು ಮಾಡಿ ಅವರವರ ಹೆಸರಿಲಿ ಹಾಕಿಕೊಂಬಲೆ ಸುರುಮಾಡಿದವು.
ಸುರುವಿಂಗೆ ಫೋಟೋ ನಕಲು ಮಾಡಿಗೊಂಡು ಇತ್ತಿದವು.ಇದಕ್ಕೆ ಎಂತ ಮಾಡುದು ಹೇಳಿ ತಲೆಕೆಡಿಸಿಕೊಂಡು ಅಂತು ಇಂತೂ ವಾಟರ್ ಮಾರ್ಕ್ (ಫೋಟೋ ಮೇಲೆ ನಮ್ಮ ಹೆಸರು ) ಹಾಕುಲೆ ಸಹೃದಯಿ ಪದ್ಯಾಣ ರಾಮಚಂದ್ರಣ್ಣ ಅವರ ಕೈಂದ ಹೆಂಗೋ ಕಲ್ತೆ. ಇನ್ನು ತೊಂದರೆ ಇಲ್ಲೆಹೇಳಿ ಜ್ಹಾನ್ಸಿ ನೆಮ್ಮದಿಲಿ ಇತ್ತಿದೆ.

ಮುಂದಣ ಸರದಿ ಲೇಖನಂಗಳಕಾಪಿ ಮಾಡಿ ಹಾಕುಲೆ ಸುರು ಮಾಡಿದವು .ಈಗ ಅದಕ್ಕೂನಕಲು ಮಾಡುಲೆ ಎಡಿ ಯದ್ದ ಹಾಂಗೆ  ಮಾಡುಲೆ ಸಹೃದಯಿ ರಾಘವೇಂದ್ರ ನಾವಡ
ಹೇಳಿ ಕೊಟ್ಟವು ಅದನ್ನು ಹೆಂಗೋ ಎನ್ನ ಬ್ಲಾಗ್ ಗೆ ಅನ್ವಯ ಅಪ್ಪ ಹಾಂಗೆ ಮಾಡಿ ದೆ ಸಮ  .ಮತ್ತೆ ಈಗಾಗಲೇ ನಕಲು ಮಾಡಿದೋರ ಪತ್ತೆ ಮಾಡುದು ಹೇಂಗೆ?
ಅದೂ ಒಂದು ಉಪಾಯ ಗೊಂತಾತು,ಎನ್ನ ಲೇಖನಲ್ಲಿಪ್ಪ ಒಂದು ಮುಖ್ಯ ಪದ ಅಥವಾ ವಾಕ್ಯವ ಗೂಗಲ್ ಗೆ ಹಾಕಿ ಹುಡುಕಿ ಅಪ್ಪಗ ಅದು ಎಲ್ಲೆಲ್ಲ ಇದ್ದು ಹೇಳಿ ಗೊಂತಾವುತ್ತು .ಅದರ ಹಿಂದಂದ ಹೋಗಿ ಎನ್ನ ಲೇಖನಂಗ ಎಲ್ಲೆಲ್ಲ ಆರಾರು ನಕಲು ಮಾಡಿದ್ದವು ಹೇಳಿ ನೋಡಿ ಅವಕ್ಕವಕ್ಕೆ ಸಂದೇಶ ಕಳುಸಿದೆ ಅದು ಎನ್ನ ಬರಹ ಹೇಳಿ ಆಧಾರ ಸಾಕ್ಷಿ ಕೊಟ್ಟು !
ಫೇಸ್ ಬುಕ್ ಲಿ ಈ ಬಗ್ಗೆ ಸೂಚನೆಯೂ ಕೊಟ್ಟೆ !
ನಾವು ಹಸೆ ಕೆಲ ಹೊಕ್ರೆ ರಂಗೋಲಿ ಕೆಳ ಹೊಕ್ಕುವ ಜನಂಗ ಇರ್ತವು .ಬರವ ಉತ್ಸಾಹ ,ಮಾಹಿತಿ ಇದ್ದರೆ ಸಾಲ ,ಅದರ ಹೊರ ಜಗತ್ತಿಂಗೆ ತಿಳಿಸಿಯೂ ನಮ್ಮ್ಮದಾಗಿ ಮಡಿಕ್ಕೊಂಬಲೆ ಸುಮಾರು ಕಷ್ಟ ಇದ್ದು ಹೇಳಿ ಈಗ ಗೊಂತಾತು !
ಇದರೆಲ್ಲರ ಜಂಜಾಟ ನೋಡುವಾಗ ನೆನಪಾದ ನುಡಿಗಟ್ಟು ಕಂಜಿ  ಹಾಕಿರೆ ಸಾಲ ನಕ್ಕುಲೂ ಅರಡಿಯಕ್ಕು ಹೇಳಿ.ದನಗ ಕಂಜಿ ಹಾಕಿ ಬಿಟ್ರೆ ಅವರ ಜವಾಬ್ದಾರಿ ಮುಗುತ್ತಿಲ್ಲೆ.ನಂತರ ಕಂಜಿಯ ಮೈ ನಕ್ಕಿ ನಕ್ಕಿ ಅದಕ್ಕೆ ಬಲ ಬಪ್ಪ ಹಾಂಗೆ ಕೂಡಾ ಮಾಡಕ್ಕು .ಮುಂದೆ ಆ ಕಂಜಿ ಅದರ ಕಾಲ ಮೇಲೆ ನಿಂಬಲ್ಲಿಯವರೆಗೆ ಅದರ ಜವಾಬ್ದಾರಿ ದನದ್ದೇ ಅದನ್ನು ಅದು ನಿಭಾಯಿಸಕ್ಕು .ಹಾಂಗೆ ನಾವುದೇ ಒಂದು ಕೆಲಸ ಸುರು ಮಾಡಿರೆ ಸಾಲ ,ಅದರ ಪೂರ್ತಿ ಜವಾಬ್ದಾರಿ ಆಗು ಹೋಗುಗಳ ನೋಡಿಗೊಂಬ ಸಾಮರ್ಥ್ಯವೂ ನಮ್ಮ್ಮಲ್ಲಿ ಇರೆಕ್ಕು ಹಾಂಗಾರೆ ಮಾತ್ರ ಅಂತ ಕೆಲಸಕ್ಕೆ ಕೈ ಹಾಕೆಕ್ಕು ಹೇಳುವ ನೀತಿಯ ಈ ನುಡಿಗಟ್ಟು ಹೇಳುತ್ತು ಹೇಳಿ ಎನಗೆ ಅನ್ಸುತ್ತು .
ನಿಂಗ ಎಲ್ಲ ಎಂತ ಹೇಳ್ತಿ ?ನಿಂಗಳ ಅಭಿಪ್ರಾಯ ತಿಳಿಸಿ
ನಮಸ್ಕಾರ

Friday, 21 February 2014

ಗಿಳಿಬಾಗಿಲು-25 (ಹವ್ಯಕ ಬ್ಲಾಗ್ )- ತಲೆ ತುಂಬ ಸಂಸಾರ

ಎಂತಕೆ ಹೇಳಿ ಗೊಂತಿಲ್ಲೆ ,ಎನಗೆ ಸಣ್ಣಾದಿಪ್ಪಗಳೇ ಎನ್ನ ಕೆಮಿಗೆ ಬಿದ್ದ ಮಾತುಗಳ ಹಾಂಗೆ ಹೇಳ್ರೆ ಎಂತ ?ಹೀಂಗೆ ಹೇಳ್ರೆ ಎಂತ ಹೇಳಿ ಆಲೋಚನೆ ಮಾಡುವ ಸ್ವಭಾವ ಇತ್ತು !

ಮಾತಿನ ನಡುವೆ ಯಾವುದಾದರು ಪದ ಗೊಂತಾಗದ್ದರೆ ಹಾಂಗೆ ಹೇಳ್ರೆ ಎಂತ ಹೇಳಿ ಕೇಳುವ ಸ್ವಭಾವಂದಾಗಿ “ನಿನಗೆ ಅದು ಇದು ಅಜಕ್ಕೆ ಎಂತಕೆ ?ಸುಮ್ಮನೆ ಇಪ್ಪಲೆ ಆವುತ್ತಿಲ್ಲೆಯ ಹೇಳಿ ಆನು ಸುಮಾರು ಸರ್ತಿ ಮನೆಲಿ ಶಾಲೆಲಿದೆ ಮಂಗಳಾರತಿ ಮಾಡ್ಸಿಕೊಂಡಿದೆ !
ಆದರೂ ಆ ಸ್ವಭಾವ ದೊಡ್ಡ ಅಪ್ಪಗಲೂ ಎನಗೆ ಬಿಟ್ಟು ಹೋಯಿದಿಲ್ಲೆ !ಸಣ್ಣಾದಿಪ್ಪಗ ಸಮಯ ಸಂದರ್ಭ ನೋಡದ್ದೆ ಮಾತಿನ ನಡುವೆ ಬಾಯಿ ಹಾಕಿ ಬೈಗಳು ತಿಂತಿತ್ತಿದೆ !

ದೊಡ್ಡ ಆದ ಹಾಂಗೆ ಕೇಳುವ ಅಭ್ಯಾಸ ಬಿಟ್ಟು ಹೋತು ,ಆದರೆ ಗ್ರಹಿಸುವ ಅಭ್ಯಾಸ ಒಳುದ್ದು !ಹಾಂಗಾಗಿಯೇ ಬಹುಶ ಅವು ಇವು ಮಾತಾಡುವಾಗ ಬಳಕೆ ಅಪ್ಪ ವಿಶಿಷ್ಟ ಬಳಕೆ ಬಗ್ಗೆ ಎನ್ನ ಗಮನ ಹೋ ವುತ್ತು ಹೇಳಿ ಕಾಣೆಕ್ಕು !

ಆನು ಇದರ ಎಂತಕೆ ಹೇಳಿದ್ದು ಹೇಳಿರೆ ಮೊನ್ನೆ ದ್ವಾದಶಿ ಸಮಾರಾಧನೆಗೆ ಎಂಗಳ ಕೋಳ್ಯೂರು ದೇವಸ್ಥಾನಕ್ಕೆ ಹೋಗಿತ್ತಿದೆ,ಅಲ್ಲಿ ಊಟಕ್ಕೆ ಮೊದಲು ಇಬ್ರು ರಜ್ಜ ಪ್ರಾಯದ ಹೆಮ್ಮಕ್ಕ ಸುಖ ದುಃಖ ಮಾತಾಡಿಗೊಂಡು ಇತ್ತಿದವು. ಮಾತಿನ ನಡುವೆ “ಅವಂಗೆ ಭಾರೀ ಬಂಗ ,ತಲೆ ತುಂಬ ಸಂಸಾರ ಪಾಪ !ಎಲ್ಲವನ್ನು ನೋಡಿಗೊಂಡು ಹೋಯಕ್ಕು “ಹೇಳಿ ಆರ ಬಗ್ಗೆಯೋ ಹೇಳಿದ್ದು ಎನ್ನ ಗಮನಕ್ಕೆ ಬಂತು !

ತನ್ನಷ್ಟಕ್ಕೆ ಎನ್ನ ಕೈ ತಲೆ ಹತ್ತರಂಗೆ ಹೋತು !ಎನ್ನ ಅಪ್ಪಚ್ಚಿಯಕ್ಕ ತುಂಬಾ ಕುಶಾಲಿನೋರು,ಅವು “ಅವಂಗೆ ತಲೆ ತುಂಬಾ ಸಂಸಾರ” ಡಿಡಿಟಿ ಸಾಕಾ  ?ಅಥವಾ ಬಿ ಎಚ್ ಸಿ ತರಕ್ಕಾವುತ್ತಾ ಹೇಳಿ ತಲೆ ತೊರ್ಸಿ ಹೇನು ಕುಟ್ಟುವ ಅಭಿನಯ ಮಾಡುತ್ತಾ ಇದ್ದದು ನೆನಪಾಗಿ ನೆಗೆ ಬಂತು ಕೂಡಾ !

ತಲೆ ತುಂಬ ಸಂಸಾರ ಹೇಳುವ ನುಡಿಗಟ್ಟು ತುಂಬಾ ಜನ  ಅಕ್ಕ ತಂಗೆಕ್ಕ ,ಅಣ್ಣ ತಮ್ಮಂದಿರು ,ಅಪ್ಪಚ್ಚಿ ಚಿಕ್ಕಮ್ಮಂದಿರು ಸೋದರತ್ತೆಕ್ಕ, ಮೊದಲಾದ ತುಂಬಾ ಜನ ಬಂಧು ಬಳಗ ಇಪ್ಪ ದೊಡ್ಡ ಸಂಸಾರ /ಕುಟುಂಬ ಹೇಳುವ ಅರ್ಥವ ಅಭಿವ್ಯಕ್ತಿಸುತ್ತು .
ತುಂಬಾ ಜನ ಅಕ್ಕ ತಂಗೆಕ್ಕ ತಮ್ಮಂದಿರು ಸೋದರತ್ತೆಕ್ಕ ಮೊದಲಾದೋರ ಸಲಹುವ ಜವಾಬ್ದಾರಿ ಸ್ಥಾನಲ್ಲಿ ಇಪ್ಪ ವ್ಯಕ್ತಿಯ ಬಗ್ಗೆ “ಅವಂಗೆ ತಲೆ ತುಂಬಾ ಸಂಸಾರ “ಹೇಳುವ ಮಾತಿನ ಬಳಕೆ ಮಾಡುತ್ತವು.
ಈಗ ನಮ್ಮ ಭಾಷೆ ಕೂಡಾ ಆಧುನಿಕತೆಗೆ ಒಳಗಾಗಿ ಇಂಥ ಅಪರೂಪದ ಮಾತುಗ ಕೇಳುಲೆ  ಸಿಕ್ಕುದೇ ಅಪರೂಪ ಆಯಿದು ಅಲ್ಲದ ?ಇಂಥ ಪದಂಗಳ ಬಳಸಿ ಉಳಿಸಕ್ಕು ಹೇಳಿ ಎನ್ನ ಗಮನಕ್ಕೆ ಬಂದದರ ಬರದು ಮಡುಗುತ್ತಾ ಇದ್ದೆ ಆನು  

Friday, 14 February 2014

ಗಿಳಿ ಬಾಗಿಲು (ಹವ್ಯಕ ಬ್ಲಾಗ್ )-ಕಾಸು ಕೊಟ್ಟು ಹೊಳೆ ನೀಂದುವ ಪಂಚಾಯತಿಗೆ ಆಗ !

'ಕಾಸು ಕೊಟ್ಟು ಹೊಳೆ ನೀಂದುವ ಪಂಚಾಯತಿಗೆ ಆಗ ''ಎಂಗಳ ಹೊಸ ಮನೆ ಅಜ್ಜ ಹೀಂಗೆ ಹೇಳ್ತಾ ಇಪ್ಪದರ ಆನು ಸಣ್ಣಾದಿಪ್ಪಗಲೇ ಕೇಳಿತ್ತಿದೆ.ನೀಂದುದು ಹೇಳಿದರೆ ಈಜುದು ಹೇಳಿ ಎನಗೆ ಗೊಂತಿತ್ತು.ಅಜ್ಜನ ಮನೆಯ ತೋಡಿಲಿ ಎಂಗ ಎಲ್ಲ ಸೊಕ್ಕಿಗೊಂಡು ಇತ್ತಿದೆಯಬೇಸಗೆಲಿ ನೀರು ತುಂಬಾ ಕಮ್ಮಿ ಅಪ್ಪಗ ಅಲ್ಲಿ ನೀಂದುಲೆ ಹೋದರೆ ಕೈಕಾಲಿಂಗೆ ಗೆರಕಿ ತಾಗಿಕೊಂಡು ಇತ್ತು.ಹಾಂಗೆ ಆನು ಅಜ್ಜನ ಮನೆಯ ತೋಡಿನ ಬದಲು ಹೊಳೆ ಇದ್ದರ ಒಳ್ಳೆದಿತ್ತು ಹೇಳಿ ಜ್ಹಾನ್ಸಿಗೊಂಡು ಇತ್ತಿದೆ.ಆ ಸಮಯಲ್ಲಿ“ಅಜ್ಜ ಕಾಸು ಕೊಟ್ಟು ಹೊಳೆ ನೀಂದುವ ಪಂಚಾಯತಿಗೆ ಆಗ”ಹೇಳಿ ಆರತ್ತರೋ ಮಾತಾಡುದು ಅಲ್ಲಿಯೇ ಓಂಗಿಗೊಂಡು ಇದ್ದ ಎನ್ನ ಕೆಮಿಗೆ ಬಿದ್ದದು!
'' ಓ ಹೊಳೇಲಿ ನೀಂದಕ್ಕಾದರೆ ಪೈಸೆ ಕೊಡಕ್ಕು ಅಂಬಗ !ಸದ್ಯ ಅಜ್ಜನ ಮನೆಲಿ ತೋಡು ಇದ್ದದೆ ಪುಣ್ಯ!ಹೊಳೆ ಇರ್ತಿತ್ತರೆ ಈಜುಲೂ ಪೈಸೆ ಕೊಡಕ್ಕಾವುತ್ತಿತ್ತು,ಈಜುಲೂ ಪೈಸೆ ಕೊಟ್ಟರೆ , ಅಜ್ಜಿ ಕೊಟ್ಟ ಹಾಲು ತೆಕ್ಕೊಂಡು ಹೋದ್ದರ ಪೈಸೆ,ಅಜ್ಜ ಅಡಕ್ಕೆ ಹೆರ್ಕಿದ್ದಕ್ಕೆ,ಹೊತ್ತದಕ್ಕೆ,ಹಿಂಡಿ ತಂದದಕ್ಕೆ ಕೊಟ್ಟ ಪೈಸೆ ಎಲ್ಲ ಮುಗುದರೆ ಮತ್ತೆ ಕೋಳ್ಯೂರು ಮಂಡಲ ಪೂಜೆಲಿ ಸಂತೆಗೆ ಬಪ್ಪ ಶೆಟ್ಟಿ ಐಸು ಕ್ರೀಮು ತಿಮ್ಬಲೆ,ದಂಬಾರು ತೊಟ್ಲಿಲಿ ಕೂಪಲೆ ಪೈಸೆ ಒಳಿಯ ಅನ್ನೇ '' ಹೇಳಿ ಆನು ಅಂಬಗ ಜ್ಹಾನ್ಸಿತ್ತಿದೆ !ನಿಂಗೊಗೆ ಎಲ್ಲ ಈಗ ನೆಗೆ ಬಂದಿಕ್ಕು ಅಲ್ಲದ ?ಎನಗೆ ಅಷ್ಟೇ ಬೊಂಡು ಬೆಳದಿತ್ತದು!ಮತ್ತೆದೆ ಅದು ಬೆಳದ್ದೇ ಇಲ್ಲೆ ಹೇಳುದು ಬೇರೆ ವಿಚಾರ!! .
ಇರಲಿ; ಅಜ್ಜ ಹೇಳಿಗೊಂಡು ಇದ್ದ ಕಾಸು ಕೊಟ್ಟು ಹೊಳೆ ನೀಂದುವ ಸಂಗತಿ ಎನಗೆ ನೆನಪಾದ್ದು ಓ ಮೊನ್ನೆ ಎರಡು ಮೂರು ತಿಂಗಳು ಮೊದಲು ಎನ್ನ ಪುಸ್ತಕ ಪ್ರಕಟ ಮಾಡುವ ಸಮಯಲ್ಲಿ .
ರಜ್ಜ ಸಮಯ ಮೊದಲು ಎನ್ನ ಪಿಎಚ್.ಡಿ ಸಂಶೋಧನ ಮಹಾ ಪ್ರಬಂಧ ತುಳುನಾಡಿನ ನಾಗ ಬ್ರಹ್ಮ ಮತ್ತು ಕಂಬಳ-ಒಂದು ವಿಶ್ಲೇಷಣಾತ್ಮಕ ಅಧ್ಯಯನ ,.ಭೂತಗಳ ಅದ್ಭುತ ಜಗತ್ತು ,ತುಳು ಜಾನಪದ ಕಾವ್ಯಗಳಲ್ಲಿ ಕಾವ್ಯತತ್ವಗಳು ,ಬಂಗ್ಲೆ ಗುಡ್ಡೆ ಸಣ್ಣಕ್ಕನ ಮೌಖಿಕ ಸಾಹಿತ್ಯ ,ಮತ್ತೆ ಶಾರದಾ ಜಿ ಬಂಗೇರರ ಮೌಖಿಕ ಸಾಹಿತ್ಯ ಹೇಳುವ 5 ಪುಸ್ತಕಂಗಳ ಪ್ರಕಟಣೆ ಮಾಡುತ್ತೆಯ ಹೇಳಿ ಒಂದು ಪ್ರಕಾಶನ ಸಂಸ್ಥೆ ಒಪ್ಪಿತ್ತು .ಆನುದೆ ಒಪ್ಪಿ ಎಲ್ಲ ತಯಾರಿ ನಡದು ಅಪ್ಪಗ ಪ್ರಕಾಶಕರ ಕಡೆಂದ ಒಂದು ಮನವಿ ಬಂತು.ಎಂಗೊಗೆ ಈಗ ಪೈಸೆ ಭಾರೀ ಟೈಟ್ ಆಯಿದು.ನಿಂಗ ಒಂದು 30,೦೦೦ ಈಗ ಕೊಟ್ಟಿರಿ.ಬಪ್ಪ ತಿಂಗಳು ಎನಗೆ ಪೈಸೆ ಬಪ್ಪದು ಇದ್ದು ಅಂಬಗ ಕೊಡ್ತೆ ಹೇಳಿ!ಎಂತ ಹೇಳುದು ಹೇಳಿ ಗೊಂತಾತಿಲ್ಲೆ ಒಂದು ಕ್ಷಣ .ಎಂತಕ್ಕೂ ನಾಳೆ ಹೇಳುತ್ತೆ ಹೇಳಿ ಹೇಳಿದೆ.
ಈ 5 ಪುಸ್ತಕಂಗಳ ಆನು ಸ್ವಂತ ಪ್ರಿಂಟ್ ಮಾಡಿ ಪ್ರಕಟಿಸುತ್ತರೆ ಕಮ್ಮಿ ಹೇಳ್ರೂ ನಾಲ್ಕು ಲಕ್ಷ ರೂಪಾಯಿ ಬೇಕು.ಎನ್ನ ಈ ಹಿಂದೆ ಪ್ರಕಟ ಆದ 15 ಪುಸ್ತಕಂಗ ಇಷ್ಟರ ತನಕ ಯಾವುದೂ ಮಾರಾಟ ಆಗದ್ದೆ ಒಳುದ್ದಿಲ್ಲೆ .ಪುಸ್ತಕಂಗ ಮಾರಾಟ ಆದರೆ ಒಳ್ಳೆ ಲಾಭವೂ ಬತ್ತು .ಆನು ಲಾಭದ ದೃಷ್ಟಿಲಿ ಪ್ರಕಟ ಮಾಡಿದ್ದು ಅಲ್ಲ.ಆದರು ಎನಗೆ ನಷ್ಟ ಆಯಿದಿಲ್ಲೆ .ಅಲ್ಪ ಸ್ವಲ್ಪ ಲಾಭವೇ ಅಯಿದು.
ಈಗ ಪ್ರಕಟ ಅಪ್ಪ ಪುಸ್ತಕಂಗಳಲ್ಲಿ 3 ಪುಸ್ತಕಂಗ ಒಳ್ಳೆ ಬೇಡಿಕೆ ಇಪ್ಪ ಕ್ಷೇತ್ರದ ನಾಗಾರಾಧನೆ,ಭೂತಾರಾಧನೆ ಇಪ್ಪ ಪುಸ್ತಕಂಗ.ಇದು ಪ್ರಕಟ ಮಾಡಿರೆ ಒಳ್ಳೆ ಲಾಭ ಬಪ್ಪಂತಹಾದ್ದು.ಹಾಂಗಿಪ್ಪಗ ಪ್ರಕಾಶಕರು ಮೂವತ್ತು ಸಾವಿರ ಕೊಡಿ ಹೇಳಿರೆ !
ನಿದಾನಕ್ಕೆ ಕೂದು ಆಲೋಚನೆ ಮಾಡಿದೆ.ಈಗ ಮೂವತ್ತು ಸಾವಿರ ಕೇಳಿದೋರು ಇದರ ಕೊಟ್ಟಪ್ಪಗ ಮತ್ತೆ ಪುನ ಇಷ್ಟು ಕೊಡಿ ಹೇಳಿರೆ ..!ಇದು ಆಗ! ಕಾಸು ಕೊಟ್ಟು ಹೊಳೆ ನೀಂದುವ ಪಂಚಾಯತಿಕೆ ಆತಿಲ್ಲೆ.ಅದರ ಆನೇ ಬಂಡವಾಳ ಹಾಕಿ ಒಂದೊಂದೇ ಪುಸ್ತಕ ನಿದಾನಕ್ಕೆ ಪ್ರಕಟ ಮಾಡುಲೆ ಅಕ್ಕನ್ನೇ ಹೇಳಿ ಕಂಡತ್ತು!
ಮರು ದಿನ ಫೋನ್ ಮಾಡಿ ಅವಕ್ಕೆ ಖಡಾ ಖಂಡಿತವಾಗಿ ಹೇಳಿದೆ.”ಎನ್ನ ಕಡೆಂದ ಒಂದು ನಯಾ ಪೈಸೆ ಹೂಡಿಕೆ ಇಲ್ಲೆ.ಲಾಭ ನಷ್ಟ ಎರಡೂ ನಿಂಗಳದ್ದೆ.ಒಪ್ಪಿಗೆ ಇದ್ದರೆ ಮಾತ್ರ ಪ್ರಕಟ ಮಾಡಿ ಇಲ್ಲದ್ದರೆ ಬೇಡ” ಹೇಳಿ.”ಅರ್ಧಾಂಶ ನಿಂಗ ಬಂಡವಾಳ ಹಾಕದ್ದರೆ ಎಂಗೊಗೆ ಎಡಿಯ” ಹೇಳಿದವು.(ಇದರ ಅರ್ಥ ಅವು ಎನ್ನ ಕೈಂದ ಎರಡು ಲಕ್ಷ ಪೀಂಕುಸುವ ಅಂದಾಜಿಲಿ ಇತ್ತಿದವು ಹೇಳಿ ಅಲ್ಲದ! )
ಸರಿ ಹೇಳಿದೆ.
ಎರಡು ಪುಸ್ತಕವ ಕೂಡಲೇ ಅನೇ ಪ್ರಕಟಮಾಡುದು ಹೇಳಿ ಆಲೋಚಿಸಿದೆ.ಅಷ್ಟರಲ್ಲಿ ಬೇರೆ ಒಂದು ಪ್ರಕಾಶನದೋರು (ಪ್ರಚೇತ ಬುಕ್ ಹೌಸ್ ಪ್ರಕಾಶಕರು) ಅವ್ವೆ ಪೂರ್ತಿಯಾಗಿ ಬಂಡವಾಳ ಹಾಕಿ ಎನ್ನ ಎಲ್ಲ ಪುಸ್ತಕ ಪ್ರಕಟಮಾಡುಲೆ ಮುಂದೆ ಬಂದವು.ಈಗ ಎಲ್ಲ ಪ್ರಕಟ ಆತುದೆ.
ಆದರೆ ಈ ಪ್ರಕರಣ ಕಾಸು ಕೊಟ್ಟು ಹೊಳೆ ನೀಂದುದು ಹೇಳ್ರೆ ಎಂತದು ಹೇಳಿ ಕಲಿಸಿತ್ತು.ಆನು ಮೋಸ ಹೋಗದ್ದಾಂಗೆ ಎನ್ನ ಸಕಾಲಲ್ಲಿ ಎಚ್ಚರಿಸಿತ್ತು ಕೂಡಾ ಅಜ್ಜನ ಅನುಭವದ ಮಾತು!.
ಮೊದಲೆಲ್ಲ ಈಗಲುದೆ ಕೆಲವೆಡೆ ಹೊಳೆ ದಾಂಟುಲೆ ಸಂಕ ಇತ್ತಿಲ್ಲೆ.ಮಳೆಗಾಲಲ್ಲಿ ಓಡದೋರಿನ್ಗೆ ಪೈಸೆ ಕೊಟ್ಟು ಓಡಲ್ಲಿ ಹೊಳೆ ದಾಂಟಿ ಗೊಂಡು ಇದ್ದದು.ಕೆಲವು ಜನಂಗ ನೀರು ಕಮ್ಮಿ ಇದ್ದರೆ ಈಜಿಕೊಂಡು ಅಥವಾ ಹೀಂಗೆ ನದಕ್ಕೊಂದು ದಾಂಟಿ ಕೊಂಡು ಹೋಗಿಗೊಂಡು ಇತ್ತಿದವು.ಆದರೆ ಕಾಸು ಕೊಟ್ಟು ಹೊಳೆ ನೀಂದುದು ಹೇಳುವ ನುಡಿಗಟ್ಟು ಹೇಂಗೆ ಬಳಕೆಗೆ ಬಂತು ಗೊಂತಿಲ್ಲೆ.ನಮ್ಮ ಭಾಷೆಲಿ ಇಂಥ ಒಂದು ಚೆಂದದ ನುಡಿಗಟ್ಟು ಇದ್ದು.ತುಳುವಿಲಿಯೂ ಕಾಸು ಕೊರ್ದು ಸುದೆ ನೀನ್ದುನೆ ಹೇಳುವ ಬಳಕೆ ಇದ್ದು ಹೇಳಿ ಎನಗೆ ನೆನಪು .ಈ ನುಡಿಗಟ್ಟು ಬಳಕೆಗೆ ಬಪ್ಪಲೆ ಬೇರೆ ಏನಾದರೂ ಕಾರಣ ಇಕ್ಕ ?ಗೊಂತಿಪ್ಪೋರು ತಿಳುಸಿ

Thursday, 6 February 2014

ಗಿಳಿ ಬಾಗಿಲು (ಹವ್ಯಕ ಬ್ಲಾಗ್ ) -ಪೊಟ್ಟು ಕಡಮ್ಮೆ



ಮೊನ್ನೆ ಒಂದಿನ ಬೆಂಗಳೂರಿಂಗೆ ರೈಲಿಲಿ ಬಪ್ಪಗ ಒಬ್ಬ ಹೆಮ್ಮಕ್ಕಳ ನೋಡಿದೆ .ಅವು ಟೀಚರ್ ಆಗಿರೆಕ್ಕು ,ಒಂದು ವಿದ್ಯಾರ್ಥಿನಿಯೂ ಇತ್ತು ,ಅದರ ಯಾವುದೊ ಕಾರ್ಯಕ್ರಮಕ್ಕೆ ಬಹುಶ ಸ್ಕೌಟ್ /ಗೈಡ್ ತರಬೇತಿಗೆ ಕರಕೊಂಡು ಹೋಪದು ಆಗಿರೆಕ್ಕು .ಆ  ಕೂಸಿಂಗೆ ಒರಕ್ಕು ತೂಗಿ ಕಣ್ಣು ಮುಚ್ಚಿ ಮುಚ್ಚಿ ಹೋಗಿಕೊಂಡು ಇತ್ತು .
ಇರುಳು ಹನ್ನೊಂದು ಗಂಟೆ ಕಳುದರೂ ಈ ಟೀಚರ್ ಅದರತ್ತರೆ ಅದರ ಹಿಂದಿನ ಕಾರ್ಯನ್ಗಳ ಬಗ್ಗೆ ವಿದ್ಯಾರ್ಥಿಗಳ  ಹಿಡಿತಲ್ಲಿ ಮಡುಗುಲೆ ಎಷ್ಟು ಕಷ್ಟ ಇದ್ದು ಹೇಳುದರ ಬಗ್ಗೆ ..ಹೀಂಗೆ ಕೊಚ್ಚಿ ಕೊಳ್ಳುತ್ತಾನೇ  ಇತ್ತು .ಅಲ್ಲಿ ಇದ್ದ ಬೇರೆಯೋರಿಂಗೂ ಒರಕ್ಕು (ಒಟ್ಟಿಂಗೆ ಎನಗೂ !)ಇಲ್ಲೆ ಇವರ ದೆಸೆಲಿ !
ಅವರ ನೋಡಿ ಅಪ್ಪಗ ಎನಗೆ ಇದರ ಪೊಟ್ಟು ಕಡುಮ್ಮೆ ಹೇಳಿ ಹೇಳುದು ಎಂತರ ಹೇಳಿ ತಲೆಗೆ ಹೋತು .ತೀರಾ ಪ್ರದರ್ಶನ ಮಾಡಿಕೊಂಬ ,ತೀರಾ ಅಹಂಕಾರಿಗಳ ಬಗ್ಗೆ ಕೋಳ್ಯೂರು ಕಡೆ 
“ಅದರ  ಕೆಲಸದ ಪೊಟ್ಟು ಕಡಮ್ಮೆಗಿಷ್ಟು ಉಪ್ಪು ಹಾಕಲಿ,ಅವನ   ಪೈಸೆಯ ಪೊಟ್ಟು ಕಡುಮ್ಮೆಗಿಷ್ಟು ಮಣ್ಣು “ಹೇಳುವ ಮಾತು ಬಳಕೆಲಿ ಇದ್ದು ..
ಸಣ್ಣ ಪುಟ್ಟ  ಹುದ್ದೆ ಕೆಲಸಂಗಳಲ್ಲಿ ಇಪ್ಪೋರು ತಾನು ಮಹಾ ಹೇಳುವ ಹಾಂಗೆ ತೋರ್ಸಿಗೊಂಡು ತುಂಬಾ ಏಕರೆ ,ಹಾಂಕಾರ ತೋರ್ಸಿದರೆ ಅವಕ್ಕೆ ಹಿಂದಂದ ಪ್ರಯೋಗ ಅಪ್ಪ ತಿರಸ್ಕಾರದ ಮಾತು ಇದು .

ಪೊಟ್ಟು ಕಡಮ್ಮೆ ಯ ,ಪೊಟ್ಟು ಕಡುಮ್ಮೆ  ,ಪೊಟ್ಟು ಕಡುಮೆ ಹೇಳಿಯೂ ಬಳಕೆ ಮಾಡುತ್ತವು.
ಇದು ತುಳುವಿಲಿಯೂ ಬಳಕೆಲಿ ಇದ್ದು ಆಯಿನ ಪೊಟ್ಟು ಕಡುಮ್ಮೆಗೀತು ಉಪ್ಪು ಪಾಡಡು  ಹೇಳಿ ಅಲ್ಲಿ ಬಳಕೆ ಅವುತ್ತು .
ತನ್ನ ಬಿಟ್ರೆ ಆರೂ ಇಲ್ಲೆ ಹೇಳಿ ಟೆಂಕಾರಲ್ಲಿ ಮೆರವೋರ ಬಗ್ಗೆ ಬಳಕೆ ಅಪ್ಪ ಸೂಕ್ತವಾದ ಮಾತು ಇದು
ಪೊಟ್ಟು ಹೇಳಿರೆ ಹೊಟ್ಟು,ಸಾರ ಇಲ್ಲದ್ದು ಹೇಳುವ ಅರ್ಥ .ಕಡಮ್ಮೆ/ಕಡುಮ್ಮೆ/ಕಡಮೆ  ಹೇಳಿದರೆ ಎಂತದು ?
ಗರಿಮೆ ಹೇಳುದೆ ಕಡುಮೆ ಹೇಳಿ ಬದಲಾದಿಪ್ಪ ಸಾಧ್ಯತೆ ಇದ್ದು .ಅಥವಾ ಅಹಂ /ಅಹಮಿಕೆ ಹೇಳುದು ಕಡುಮೆ ಹೇಳಿ ಆಡಿಪ್ಪ ಸಾಧ್ಯತೆ ಇದ್ದು .ಆದರೂ ಪೊಟ್ಟು ಗರಿಮೆ ಹೇಳ್ರೆ ವ್ಯರ್ಥ>ಹೊಟ್ಟು ಗರಿಮೆ ಪದ ಬಳಕೆಯಿಂದ ಬಂದಿಪ್ಪ ಸಾಧ್ಯೆತೆ ಹೆಚ್ಚು ಹೇಳಿ ಎನಗೆ ಅನ್ಸುತ್ತು ,ನಿಂಗ ಎಲ್ಲ ಎಂತ ಹೇಳ್ತಿ ?ಈ ರೀತಿಯ ಬಳಕೆ ನಮ್ಮ ಭಾಷೆ ಬೇರೆ ಕಡೆಲಿಯೂ ಇದ್ದ ?