Thursday, 31 October 2013

ಗಿಳಿ ಬಾಗಿಲು(ಹವ್ಯಕ ಬ್ಲಾಗ್ ) -ಅವ° ರಜ್ಜ ಸಜ್ಜನ




ಎನ್ನ ಕೋಲೇಜಿಲಿ ಎನ್ನ ಹಾಂಗೆ ಲೆಕ್ಟುರು ಆಗಿಪ್ಪ ಮೇಡಂ ಒಂದಕ್ಕೆ ನಮ್ಮ ಭಾಷೆ ಸುಮಾರಾಗಿ ಮಾತಾಡುಲೆ ಬತ್ತು .ಒಂದಿನ ಎನ್ನತ್ತರೆ ಬಂದು “ಸಜ್ಜನ “ ಹೇಳ್ರೆ ಎಂತ ಅರ್ಥ ಹೇಳಿ ಕೇಳಿತ್ತು .ಇಷ್ಟು ಸುಲಭದ ಪದದ ಅರ್ಥ ಇದಕ್ಕೆ ಗೊಂತಿಲ್ಲೆಯ ಹೇಳಿ ಮನಾಸಿಲಿ ಜ್ಹಾನ್ಸಿಕೊಂಡು “ಸಾಧು ,ಒಳ್ಳೆಯ ವ್ಯಕ್ತಿ” ಹೇಳಿ ಅರ್ಥ ಹೇಳಿದೆ .ಅಷ್ಟಪ್ಪಗ ‘ಸ್ವಲ್ಪ ‘ಹೇಳ್ರೆ ಎಂತ ಕೇಳಿತ್ತು !ಅರೆ !ಹೀಂಗಿಪ್ಪ ಸುಲಭದ ಪದಂಗಳ ಅರ್ಥ ಕೇಳಕ್ಕಾದರೆ ಇದರಲ್ಲಿ ಏನೋ ಇದ್ದು ಹೇಳಿ ವಾಸನೆ ಸಿಕ್ಕಿತ್ತು ಎನಗೆ .ಚೂರು ಜಾಗ್ರತೆಲಿ “ತುಸು ,ಕಡಿಮೆ ,ಅಲ್ಪ” ಇತ್ಯಾದಿ ಅರ್ಥ ಹೇಳಿದೆ .ಸರಿ ಹಾಂಗಾದರೆ “ಸ್ವಲ್ಪ ಸಜ್ಜನ “ಹೇಳ್ರೆ ಎಂತ ಕೇಳಿತ್ತು .ಸ್ವಲ್ಪ ಸಜ್ಜನ ಹೇಳುವ ಪ್ರಯೋಗ ಎನಗೆ ಗೊಂತಿದ್ದಾ೦ಗೆ ಕನ್ನಡಲ್ಲಿ ಇಲ್ಲೆ ಹೇಳಿ ಹೇಳಿದೆ. ಸರಿ ಈ ಬಗ್ಗೆ ನಿನಗೆ ಸಂಶಯ ಹೇಳಿ ಕೇಳಿದೆ .ಅಷ್ಟೊತ್ತಿಂಗೆ ಅದು ಹೇಳಿತ್ತು “.ಅದು ನಿಂಗಳ ಭಾಷೆಲಿ “ಸ್ವಲ್ಪ ಸಜ್ಜನ ” ಹೇಳಿ ಇದ್ದಲ್ಲ ಅದರ ಅರ್ಥ ಬೇಕಾಗಿತ್ತು ಹೇಳಿ ” ಎಂಗಳ ಭಾಷೆಲಿದೆ ಸ್ವಲ್ಪ ಸಜ್ಜನ ಹೇಳಿ ಇಲ್ಲೆ ಹೇಳಿ ಹೇಳಿದೆ .”ಇದ್ದು ಎನ್ನ ಎದುರು ಮನೆಯ ನಿಂಗಳ ಜಾತಿಯ (ಹವ್ಯಕ )ಹೆಮ್ಮಕ್ಕ ಆರನ್ನೋ “ಅವ° ಸ್ವಲ್ಪ ಸಜ್ಜನ ಹೇಳಿ ಹೇಳ್ತಾ ಇತ್ತು “ಹೇಳಿ ಹೇಳಿತ್ತು .ಅಷ್ಟಪ್ಪಗ ಎನಗೆ ರಜ್ಜ ತಲೆಗೆ ಹೋತು !”ರಜ್ಜ ಸಜ್ಜನ “ಹೇಳಿ ಹೇಳಿದ್ದಾ ?ಹೇಳಿ ಕೇಳಿದೆ .ಅಪ್ಪು ಹೇಳಿ ಅದು ಹೇಳಿತ್ತು .ಅದು ನಮ್ಮ ಭಾಷೆಯ ರಜ್ಜ =ಸ್ವಲ್ಪ ಹೇಳುವ ಅರ್ಥವ ತೆಕ್ಕೊಂಡು ರಜ್ಜ ಸಜ್ಜನ ಹೇಳುದರ ಸ್ವಲ್ಪ ಸಜ್ಜನ ಹೇಳಿ ತರ್ಜುಮೆ ಮಾಡಿಗೊಂಡು ಅದರ ಅರ್ಥ ಕೇಳಿತ್ತು !ಸಜ್ಜನ ಹೇಳಿರೆ ಒಳ್ಳೆಯ ಗುಣದೋನು ಹೇಳಿ ಗೊಂತಿತ್ತು ! ರಜ್ಜ ಹೇಳ್ರೆ ಸ್ವಲ್ಪ ಹೇಳುವ ಅರ್ಥವೂ ಅದಕ್ಕೆ ಗೊಂತಿತ್ತು ,ಆದರೆ ರಜ್ಜ ಸಜ್ಜನ =ಸ್ವಲ್ಪ ಸಜ್ಜನ ಹೇಳ್ರೆ ಎಂತ ಹೇಳಿ ಗೊಂತಾಯಿದಿಲ್ಲೆ !
ಅಪ್ಪು ! ಸಾಧು ಸಜ್ಜನ ಹೇಳುವ ಪದಂಗಳ ಅರ್ಥ ಕನ್ನಡ ಗೊಂತಿಪ್ಪ ಎಲ್ಲೋರಿಂಗು ಗೊಂತಿರ್ತು .ಆದರೆ ಆವ° ರಜ್ಜ ಸಜ್ಜನ ,ಅವ° ಬರೀ ಸಜ್ಜನ ಹೇಳ್ರೆ ಎಂತ ಅರ್ಥ ಹೇಳಿ ಗೊಂತಾಯ್ಕಾರೆ ನಮ್ಮ ಭಾಷೆಗೇ ಬರಕ್ಕು .ಆವ° /ಅದು ರಜ್ಜ ಸಾಧು ಹೇಳಿ ನಮ್ಮಲ್ಲಿ ಬಳಕೆ ಇಲ್ಲೆ ; ಆದರೆ ಅದು ಬರೀ ಸಾಧು ಕೂಸು ಹೇಳುದು ಬಳಕೆಲಿದ್ದು .ಇಲ್ಲಿ ಸಾಧು ಹೇಳ್ರೆ ನಿಜವಾಗಿಯೂ ಸಾತ್ವಿಕ ಗುಣದ್ದು ಹೇಳಿ ಅರ್ಥ .ಆದರೆ ಕನ್ನಡಲ್ಲಿ ಸಾಧು ಪದದ ಒಟ್ಟಿಂಗೆ ಬಪ್ಪ ಸಜ್ಜನ ಹೇಳುವ ಪದಕ್ಕೆ ಎಂಗಳ ಕಡೆ ನಮ್ಮ ಭಾಷೆಲಿ ಒಳ್ಳೆಯೋನು ಹೇಳುವ ಅರ್ಥ ಇಲ್ಲೆ .ಅವ° ರಜ್ಜ ಸಜ್ಜನ ,ಅದು ರಜ್ಜ ಸಜ್ಜಂತಿ ಹೇಳ್ರೆ ಅವಕ್ಕೆ ರಜ್ಜ ಬುದ್ಧಿವಂತಿಕೆ ಕಮ್ಮಿ ಹೇಳಿ ಅರ್ಥ . ರಜ್ಜ ಹೆಡ್ಡು ಹೇಳುವ ಬದಲು ರಜ್ಜ ಸಜ್ಜಂತಿ ಹೇಳುದು.ಇನ್ನು ಅವ° ಬರೀ ಸಜ್ಜನ ,ಅದು ಬರೀ ಸಜ್ಜಂತಿ ಹೇಳುವ ಮಾತಿನ ಒಟ್ಟಿಂಗೆ ಅವಂಗೆ /ಅದಕ್ಕೆಬೇರೆಯೋರ ಕುತಂತ್ರಂಗ ಕೊಕ್ಕೆಗ ಎಲ್ಲ ಅರಡಿಯ ಹೇಳುವ ಮಾತುದೆ ಬತ್ತು .ಇಲ್ಲಿ “ಅವಂಗೆ /ಅದಕ್ಕೆ ಇವರ ಕುತಂತ್ರಂಗ ಕೊಕ್ಕೆಗ ಎಲ್ಲ ಅರಡಿಯ” ಹೇಳುವ ಮಾತು, “ಅವ° ಬರೀ ಸಜ್ಜನ ,ಅದು ಬರೀ ಸಜ್ಜಂತಿ ” ಹೇಳುವ ಮಾತಿನ ಅರ್ಥವ ಸ್ಪಷ್ಟ ಪಡುಸುತ್ತು .ಬರೀ ಸಜ್ಜನ /ಸಜ್ಜಂತಿ ಹೇಳುವಲ್ಲಿ ವ್ಯವಹಾರ ಜ್ಞಾನ ಕಮ್ಮಿ ಹೇಳುದರ ಒಟ್ಟಿಂಗೆ ಒಳ್ಳೆಯ ಗುಣದೋರು ಹೇಳುವ ಭಾವ ಎದ್ದು ಕಾಣುತ್ತು .
ಆದರೆ ಎಂಗಳ ಕಡೆ ನಮ್ಮ ಭಾಷೆಲಿ ರಜ್ಜ ಸಜ್ಜನ ,ಅದು ರಜ್ಜ ಸಜ್ಜಂತಿ ಹೇಳುವಲ್ಲಿ ಅದು ಅವ° ಒಳ್ಳೆಯ ಗುಣದೋರು ಹೇಳುವ ಭಾವ ಕಾಣುತ್ತಿಲ್ಲೆ,ಬದಲಿಂಗೆ ರಜ್ಜ ಹೆಡ್ಡು ಹೇಳುವ ಅರ್ಥವೇ ಹೆಚ್ಚು ಕಂಡು ಬತ್ತು .
ಕನ್ನಡಲ್ಲಿ ಸಜ್ಜನ ಹೇಳುವ ಪದಕ್ಕೆ ಸಂವಾದಿಯಾಗಿ ಕೋಳ್ಯೂರು ಸೀಮೆಯ ನಮ್ಮ ಭಾಷೆಲಿ ಅವ° /ಅದು ತುಂಬಾ ಸಾತ್ವಿಕ ಹೇಳುವ ಮಾತು ಬಳಕೆಲಿ ಇದ್ದು .ಅವು ತುಂಬಾ ಒಳ್ಳೆಯೋರು ,ಅದು/ಅವ° ಬಾರೀ ಸಾತ್ವಿಕ ಕೂಸು/ಮಾಣಿ ಹೇಳುವ ಮಾತಿನ ಯಾವಾಗಲು ಬಳಕೆ ಮಾಡುತ್ತವು
ಹೀಂಗಿಪ್ಪ ಸುಮಾರು ನುಡಿಗಟ್ಟುಗ ದಿನ ನಿತ್ಯ ನಮ್ಮ ಮಾತಿನ ನಡುವೆ ಬತ್ತು .ಆದರೆ ನಾವು ಅದರ ಗಮನಿಸುತ್ತಿಲ್ಲೆ.ಎಂತಕೆ ಹೇಳ್ರೆ ಅದು ನಮ್ಮ ಭಾಷೆಲಿ ಸಹಜವಾಗಿ ಇಪ್ಪದು .ಎಂಗಳ ಮೇಡಂ ಈ ಬಗ್ಗೆ ಕೇಳುವ ತನಕ ಎನಗೂ ತಲೆಗೆ ಹೋಗಿತ್ತಿಲ್ಲೆ.ಬೇರೆಯೋರು ಹೇಳಿ ಅಪ್ಪಗ, ಅಪ್ಪಲ್ಲದ ಹೇಳಿ ಅನ್ಸುತ್ತು ಅಲ್ಲದ ?ನಿಂಗ ಎಲ್ಲ ಎಂತ ಹೇಳ್ತೀರಿ ?ನಿಂಗಳ ಅಭಿಪ್ರಾಯ ತಿಳುಸಿ ,

Tuesday, 8 October 2013

ಗಿಳಿಬಾಗಿಲು(ಹವ್ಯಕ ಬ್ಲಾಗ್ )-ಎಮ್ಮೆ ಕಂಜಿ ಹಾಂಗೆ


“ಅದು ಮಾಡುದು ನೋಡು ,ನಿದಾನಕ್ಕೆ ಎಮ್ಮೆ ಕಂಜಿ ಹಾಂಗೆ ”

ಹೇಳುವ ಬೈಗಳು ನಿದಾನ ಪ್ರವೃತ್ತಿಯೋರಿ೦ಗೆ ಬಳಕೆ ಮಾಡುತ್ತವು .ಈ ಬೈಗಳಿನ  ಅರ್ಥ ಎಂತದು ಹೇಳಿ ಗೊಂತಾಯಕ್ಕಾದರೆ ಎಮ್ಮೆ ಕಂಜಿಯನ್ನೇ ನೋಡಿರಕ್ಕು .ಅದು ಬಿಟ್ಟು ಬೇರೆ ದಾರಿ ಇಲ್ಲೆ .ಎಂಗ ಸಣ್ಣಾ ದಿಪ್ಪಗ ಅಜ್ಜನ ಮನೇಲಿ ಸುಮಾರು ಎಮ್ಮೆಗಳ, ದನಗಳ ಸಾಂಕಿಗೊಂಡು ಇತ್ತಿದವು .ಅಂಬಗ ಎಮ್ಮೆಗಳ ಕಂಜಿ ಹಾಕುವ ಸಮಯ ಬಂದರೆ ಗುಡ್ಡೆಗೆ ಬಿಟ್ಟುಗೊಂಡು ಇತ್ತಿದವಿಲ್ಲೆ.ದನಗಳ ಕಂಜಿ ಹಾಕುಲೆ ಹತ್ತರೆ ಆದರೂ ಗುಡ್ಡೆಗೆ ಬಿಟ್ಟುಕೊಂಡು ಇತ್ತಿದವು .ಎಷ್ಟೋ ಸರ್ತಿ ದನಗ ಗುಡ್ಡೆಲಿಯೇ ಕಂಜಿ ಹಾಕಿ ಕಂಜಿಗಳ ನಿದಾನಕ್ಕೆ ನಡೆಸಿಗೊಂಡು ಹೊತ್ತಪ್ಪಗ ಮನೆಗೆ ಬತ್ತ ಇತ್ತಿದವು .
ಕೆಲವು ಸರ್ತಿ ಮನೆಯೋರು ಹುಡುಕ್ಕಿ ಗೊಂಡು  ಹೋಗಿ ಕಂಜಿಯನ್ನು ಅದರ ಅಬ್ಬೆಯನ್ನೂ ಎಬ್ಬಿ ಕೊಂಡು  ಬತ್ತಾ ಇತ್ತಿದೆಯ° .ಆದರೆ ಎಮ್ಮೆ ಬಗ್ಗೆ ಹೆಚ್ಚಿನ ಕಾಳಜಿ ಬೇಕಾಗಿತ್ತು .ಅದು ಮನೆಲಿಯೇ ಕಂಜಿ ಹಾಕಿದರೂ ಕೂಡಾ ಕಂಜಿಯ ನೆಗ್ಗಿ ಎಮ್ಮೆಯ ಕೆಚ್ಚಲಿನ ಮೂಸಿಸಿ ಕೆಲವು ಸರ್ತಿ ಅದರ ಬಾಯಿಗೆ ಹಾಲು ಹಿಂಡಿ ರುಚಿ ಹಿಡಿಸಕ್ಕಾಗಿತ್ತು .ದನದ ಕಂಜಿಗ ಅವರಷ್ಟಕ್ಕೆ ಎದ್ದು ನಿಂದುಕೊಂಡು ಇತ್ತಿದವು ( ಈ ಮಾತು ಊರ ದನಗೊಕ್ಕೆ ಮಾತ್ರ ಅನ್ವಯ !).ಅವರಷ್ಟಕ್ಕೆ ಕೆಚ್ಚೆಲುಹುಡುಕಿ ಹಾಲು ಕುಡುಕ್ಕೊಂಡು  ಇತ್ತಿದವು .
ಎಮ್ಮೆ ಕಾಂಜಿಗ ಅಷ್ಟು ಚುರುಕು ಇರ್ತವಿಲ್ಲೆ .ಎಮ್ಮೆ ಕಂಜಿಗ ಅವರಷ್ಟಕ್ಕೆ ಎದ್ದು ನಿಂದು ಹಾಲು ಕುಡಿವಲೆ ಒಂದೆರಡು ಬೇಕಾಗಿ ಕೊಂಡು  ಇತ್ತು .ಅದರ೦ದಾಗಿಯೇ ನಿದಾನ ಪ್ರವೃತ್ತಿಯೋರಿ೦ಗೆ ಎಮ್ಮೆ ಕಂಜಿ ಹಾಂಗೆ ಹೇಳುವ ಮಾತು ಬಂದಿಕ್ಕು ಹೇಳಿ ಎನಗೆ ಅನ್ಸುತ್ತು .ಅದಲ್ಲದ್ದೆ ಚೊಕ್ಕವಾಗಿ ಕೆಲಸ ಮಾಡದ್ದೆ  ತಚಿ ಪಿಚಿ ಮಾಡುವೊರಿಂಗು ಎಮ್ಮೆ ಕಂಜಿ ಹಾಂಗೆ ಹೇಳುವ ಮಾತಿನ ಬಳಕೆ ಮಾಡ್ತವು .ಎಮ್ಮೆ ಕಂಜಿ ಅಲ್ಲಿ ಇಲ್ಲಿ ಬಿದ್ದು ಮನುಗುವ ಕಾರಣ ಈ ಮಾತು ಬಂದಿಕ್ಕು ಹೇಳಿ ಎನಗೆ ಅನ್ಸುತ್ತು .~ಜ್ಎಮ್ಮೆಗಳುದೆ ಪಳ್ಳದ ಕೆಸರು ನೀರಿಲಿ ಬಿದ್ದು ಕೊಂಡರೆ ಅಲ್ಲಿಂದ ಹೆರ ಹೆರಡುಸುದು ಬಾರೀ ಬ೦ಙದ ಕೆಲಸ .ಯಾವಾಗಲು ಮೈಲಿ ಕೆಸರು ಮೆತ್ತಿಗೊಂಡು ಇರ್ತವು .
ಹಾಂಗಾಗಿ ಈ ರೀತಿಯ ತಿರಸ್ಕಾರದ /ನಿಂದನೆಯ ಮಾತು ಬಳಕೆಗೆ ಬಂದಿಕ್ಕು ಹೇಳಿ ಎನಗೆ ಅನ್ಸುತ್ತು ,ನಿಂಗೊ ಎಲ್ಲೊರು ಎಂತ ಹೇಳುತ್ತಿ ?ನಿಂಗಳ ಅಭಿಪ್ರಾಯ ತಿಳಿಸಿ .

Saturday, 21 September 2013

ಗಿಳಿ ಬಾಗಿಲು (ಹವ್ಯಕ ಬ್ಲಾಗ್ )-ಅದು/ಅವ ಪಾತಾಳ ಗರಡಿ

"ಅದಕ್ಕೆ ಬೇಡದ್ದ ವಿಚಾರ ಇಲ್ಲೆ ,ಮತ್ತೆ ಮತ್ತೆ ತೊಳಚ್ಚಿ ತೊಳಚ್ಚಿ ತಲೆ ತಿಂತು ,ಅದು ಮಹಾ ಪಾತಾಳ ಗರಡಿ ,ಅದರತ್ತರೆ ಯಾವುದೂ ಗುಟ್ಟು ಮಾಡುಲೆ ಎಡಿಯ"ಹೇಳಿ ಹೇಳುವ ಮಾತಿನ ಆನು ಸುಮಾರು  ಸರ್ತಿ ಅಲ್ಲಿ ಇಲ್ಲಿ ಕೇಳಿದ್ದೆ .ನಿನ್ಗಳೂ ಕೇಳಿಪ್ಪಿ.  .ಪಾತಾಳ ಗರಡಿ ಹೇಳ್ರೆ ಒಂದು   ಸಾಧನ .ಬಾವಿಗೆ ಏನಾರೂ ಕೊಡ ಪಾನ, ಚೆಂಬು ,ಪಾತ್ರಂಗ ಬಿದ್ದರೆ ಪಾತಾಳ ಗರಡಿಯ ಬಾವಿಯ ಬಳ್ಳಿಗೆ ಇಳುಸಿ ಬಿದ್ದ ವಸ್ತುಗಳ ತೆಗೆತ್ತಾ ಇತ್ತಿದವು .ಅದರಲ್ಲಿ ಅನೇಕ ಬೇಕಾದ ಕಡೆಗೆ ಚಲಿಸುವ ,ಬೇರೆ ಬೇರೆ ಗಾತ್ರದ ಕೊಕ್ಕೆಗ ಇದ್ದು .ಆ ಕೊಕ್ಕೆಗೆ ಕೊಡ ಪಾನ ಪಾತ್ರಂಗಳ ಸಿಕ್ಕುಸಿ ಮೇಲೆ ಎಳದು ತೆಗೆತ್ತಾ ಇತ್ತಿದವು ಮೊದಲು ,ಪಾತಾಳ ಗರಡಿಗೆ ಸಿಕ್ಕಿದ್ದಿಲ್ಲೇ ಹೇಳಿ ಆದ್ರೆ ಇನ್ನು ಆ ಕೊದಪ್ಪಾನದ ಆಸೆ ಬಿಡ ಕ್ಕು ಇನ್ನದು ಸಿಕ್ಕ ಹೇಳುವ ಮಾತು ಪ್ರಚಲಿತ ಇತ್ತು .ಪಾತಾಳ ಗರಡಿಯ ರೀತಿಲಿ ಹೆಂಗಾರೂ ಮಾಡಿ ಇನ್ನೊಬ್ಬರ ವಿಚಾರವ ಪತ್ತೆ ಹಚ್ಚಿ ತೆಗವ ಸ್ವಭಾವದೊರಿನ್ಗೆ  ಎಂಗಳ ಕಡೆ ಪಾತಾಳ ಗರಡಿ ಹೇಳಿ ಹೇಳ್ತವು ."ಅವ/ಅದು ಪಾತಾಳ ಗರಡಿ ಅವನ/ಅದರ ಹಿಡಿಪ್ಪಿಂದ ತಪ್ಪಿಸಿಕೊಂಬಲೆ ಎಡಿಯಪ್ಪ" ಹೇಳುವ ಮಾತುದೆ  ಬಳಕೆಲಿ ಇದ್ದು ."ಆವ /ಅದು ಪಾತಾಳ ಗರಡಿ" ಹೇಳುದು ಒಂದು ರೀತಿ ದೂಷಣೆ /ಬೈಗಳು .ಆದರೆ ಪಾತಾಳ ಗರಡಿ ನಿಜವಾಗಿಯೂ ಒಂದು  ಬಹು ಉಪಯುಕ್ತ ಸಾಧನ ,ಆದರೆ  ನುಡಿಗಟ್ಟಾಗಿ ಬಳಸುವಗ ಪಾತಾಳ ಗರಡಿ ಹೇಳುದು ಬೈಗಳಾಗಿ /ದೂಷಣೆಯ ಮಾತಾಗಿ ಬದಲಾವುತ್ತು.ಇಂತಹ ಅನೇಕ ನುಡಿಗಟ್ಟುಗ ನಮ್ಮಲ್ಲಿ ಬಳಕೆಲಿ ಇದ್ದು .ನೆನಪಾದ್ದರ ಆನಿಲ್ಲ್ಲಿ ಬರದ್ದೆ .ನಿಂಗಳ ಅಭಿಪ್ರಾಯ ತಿಳುಸಿ ,
ನಮಸ್ಕಾರ 
ಇನ್ನೊಂದರಿ ಕಾಂಬ 
-ಲಕ್ಷ್ಮೀ ಜಿ ಪ್ರಸಾದ

Sunday, 1 September 2013

ಗಿಳಿ ಬಾಗಿಲು (ಹವ್ಯಕ ಬ್ಲಾಗ್ )-ಕಡುದ ಕೈಗೆ ಉಪ್ಪು ಹಾಕದ್ದೋವು

 ಇದೊಂದು ತಿರಸ್ಕಾರವ ಹೆರ ಹಾಕುವ ಮಾತು .ಮನುಷ್ಯರು ಎಲ್ಲೊರು ಒಂದೇ ರೀತಿಯ ಗುಣ ಸ್ವಭಾವದೊರು ಆಗಿ ಇರ್ತವಿಲ್ಲೆ .ಕೆಲವು ಜನಂಗ ಕೊಪಿಷ್ಟಂಗ ,ಕೆಲವು ಜನಂಗ ಸಮಾಧನಿಗ ಕೆಲವು ಜನಂಗ ಧಾರಾಳಿಗ ,ಕೆಲವು ಜನಂಗ ಕುರೆಗ ,ಪಿಟ್ಟಾಸಿಗ ಇರ್ತವು .ಎಂಗಳ ಕಡೆ ಆರಿನ್ಗೊಬ್ಬಂಗೂ ಏನೊಂದೂ ಕೊಡದ್ದ ಜಿಪುಣನ್ಗಳ ಕುರೆಗ ,ಪಿಟ್ಟಾಸಿಗ   ಹೇಳಿ ಹೇಳ್ತವು .ಕುರೆ ಬುದ್ಧಿಯ ಅತಿರೇಕವ ಹೇಳುವ ಮಾತು "ಕಡುದ ಕೈಗೆ ಉಪ್ಪು ಹಾಕದ್ದೋವು ಅವು" ಹೇಳುದು.ಆದರೆ ಈ ಮಾತಿನ ಒಳಾರ್ಥ ಎಂತ ಹೇಳಿ ಎನಗೆ ಗೊಂತಾಯಿದಿಲ್ಲೆ .ಹಾಂಗೆ ಅಮ್ಮಂಗೆ ಫೋನ್ ಮಾಡಿ ಕೇಳಿದೆ ಆನು .ಕಡುದ ಕೈಗೆ ಉಪ್ಪು ಎಂತಕೆ ಹಾಕುದು ?ಇದಕ್ಕೂ ಕುರೆಗೂ ಎಂತ ಸಂಬಂಧ ಹೇಳಿ.  ಎನ್ನ ಅಮ್ಮನ್ಗೂ  ಇದರ ಅರ್ಥ ಗೊಂತಿತ್ತಿಲ್ಲೆಡ .ಸುಮಾರು ೪೦ ವರ್ಷ ಮೊದಲು ಅಮ್ಮ ಮದುವೆ ಆಗಿ ಬಂದ ಹೊಸತರಲ್ಲಿ ಅಜ್ಜಿ ಆರ ಬಗ್ಗೋ ಮಾತಾಡುವಗ  ಈ ಮಾತಿನ ಹೇಳಿದವಡ ,ಅಂಬಗ ಅಮ್ಮ ಅಜ್ಜಿ ಹತ್ತರೆ "ಹಾಂಗೆ ಹೇಳ್ರೆ ಎಂತದು" ಹೇಳಿ ಕೇಳಿತ್ತಿದ ಅಡ.ಅಂಬಗ ಅಜ್ಜಿ ಅಮ್ಮಂಗೆ ಹೇಳಿದ್ದರ ಅಮ್ಮ ಎನಗೆ ಹೇಳಿದ ಇಂದು . ಅದರ ಆನಿಲ್ಲಿ ಈಗ ಹೇಳುತ್ತೆ . ಆರತ್ತರಾದರು ನಮಗೆ ಕೋಪ, ದ್ವೇಷ ಇದ್ದರೆ ಅವು ಹಾಳಾಯಕ್ಕು ಹೇಳಿ ಏನಾರೂ ಮಾಡುವಗ ಏನಾರು ರಜ್ಜ ನಷ್ಟ ಆದರೆ ಅದರ ಬಗ್ಗೆ ಚಿಂತೆ ಮಾಡ್ತವಿಲ್ಲೇ ಆರುದೆ .ನಮಗೆ ನಷ್ಟ ಆದರೂ ಸಮ ಆವಾ ಹಾಲಾಯಕ್ಕು ಹೇಳಿ ಭಾವಿಸಿ ಹೊಣೆತ್ತವು ಎಲ್ಲೊರು .ಆದರೆ ಜಾತಿಕುರೆಗ (ಅತಿ ಜಿಪುಣರು )ಮಾತ್ರ ಯಾವ ಕಾರಣಕ್ಕೂ ನಷ್ಟ ಮಾಡಿಗೊಳ್ಳುತ್ತವಿಲ್ಲೆ .ಅವರ ಪರಮ ಶತ್ರುವಿನ ಕೈಯ ಆರೋ ಕಡುದ್ದವು.ಕಡುದ ಕೈಗೆ ಉಪ್ಪು ಹಾಕುಲಾಗ ,ಉಪ್ಪು ಹಾಕಿರೆ ನೆತ್ತರು ಕಟ್ಟುತ್ತಿಲ್ಲೆ ,ಅಲ್ಲದ್ದೆ ಭಯಂಕರ ಉರಿತ್ತು ಕೂಡಾ .ಆದರೆ ಪರಮ ಶತ್ರುವಿನ ಕೈಯ ಆರಾದರೂ ಕಡುದರೆ ಅವರ ಮೇಲೆ ದ್ವೇಷ ಇಪ್ಪೋರು ಆ ಕೈಗೆ ಉಪ್ಪು ಹಾಕಿ ಅವಕ್ಕೆ ಉರಿ ಅಪ್ಪ ಹಾಂಗೆ ,ನೆತ್ತರು ಕಟ್ದದ್ದ  ಹಾಂಗೆ ಮಾಡಿ ಅವರ ಹಗೆಯ ತೀರಿಸಿಗೊಂಗು! .ಆದರೆ ಜಾತಿ ಕುರೆಗ ಅದನ್ನೂ ಮಾಡವು .ಹಿಂದಣ ಕಾಲಲ್ಲಿ ಉಪ್ಪು ಧರ್ಮಕ್ಕೆ ಸಿಕ್ಕಿಗೊಂಡು ಇದ್ದ ಸಾಮಾನು .ಆದರೆ ಅದರ ಕೂಡ ಹಗೆಗಳ ಕಡುದ ಕೈಗೆ ಹಾಕಿ ಹಾಕಿ ಹಗೆ ತೀರಿಸಿ ಕೊಳ್ಳದ್ದಷ್ಟು ಕುರೆಗ :ಅವು  ಹಗೆ ಸಾಧನೆ ಮಾಡುದಕ್ಕಾಗಿ ಲೇ ಕೂಡಾ .ಧರ್ಮಕ್ಕೆ ಸಿಕ್ಕುವ ವಸ್ತು ಆಗಿಪ್ಪ ಉಪ್ಪ್ಪಿನ ಇಡುಕ್ಕವು ಅಷ್ಟೂ ಕುರೆಗ ಹೇಳ್ರೆ ಜಿಪುಣತನದ ಪರಮಾವಧಿ ಇಪ್ಪೋರ ಬಗ್ಗೆ  ಈ ಆಡು ಮಾತು ತಿಳುಸುತ್ತು .
ಇಂತ ತುಂಬಾ ವಿಶಿಷ್ಟ ಆಡು ಮಾತುಗ ಗಾದೆಗ ನಮ್ಮ ಭಾಷೆಲಿ ಇದ್ದು ,ಇದರ ಒಟ್ಟು ಮಾಡಿ ಮಾಡಿ ಒಂದು ಕಡೆ ಬರದು ಮಡುಗಿದರೆ ಒಳ್ಳೆದು ಅಲ್ಲದ ?ನಿಂಗೆಲ್ಲ ಎಂತ ಹೇಳ್ತಿ ?
ನಿಂಗಳ ಅಭಿಪ್ರಾಯವ ತಿಳುಸಿ ,
ಇನ್ನೊಂದರಿ ಕಾಂಬ ,ನಮಸ್ಕಾರ 
ಡಾ .ಲಕ್ಷ್ಮೀ ಜಿ ಪ್ರಸಾದ

Saturday, 24 August 2013

ಗಿಳಿ ಬಾಗಿಲು(ಹವ್ಯಕ ಬ್ಲಾಗ್ ) -ಪೊಡುಂಬು



ಮೊನ್ನೆ ಒಂದಿನ ಇಲ್ಲೇ ಹತ್ತರೆ  ಒಂದು  ಮದುವೆಗೆ ಹೋಗಿತ್ತಿದೆ.ಅಲ್ಲಿಗೆ ಬಂದಿದ್ದ  ನಮ್ಮೋರು ಒಬ್ಬ್ರು ಪ್ರಾಯದೋರ ಪರಿಚಯ ಆತೆನಗೆ .ಅವು ಮಾತಾಡುತ್ತಾ "ಈ ಪೇಟೆ ಬದುಕು ಎಲ್ಲ ನೋಡುಲೆ ಅಬ್ಬರ,ಒಂದು ಬಾಳೆ ಹಣ್ಣು ಬೇಕಾರೆ ೩ ರೂಪಾಯಿ ಕೊಡಕ್ಕು ,ಬೊಂಡಕ್ಕು ಪೈಸೆ ಕೊಡಕ್ಕು ನೀರಿಂಗು ಪೈಸೆ ಕೊಡಕ್ಕು ತಿಂಬಲು ಪೈಸೆ ಕೊಡಕ್ಕು ...ಗೂ ಪೈಸೆ ಕೊಡಕ್ಕು  ಈ ಪೇಟೆಲಿ ಎಲ್ಲಾ ಹೆರಂದ ನೋಡ್ಲೆ ಎಲ್ಲ ಚಂದ, ಒಳ ಎಂತ ಇಲ್ಲೆ ಬರೀ ಪೂಡುಂಬು ,ಎಂಗೊಗೆ ಇಲ್ಲಿ ಪೇಟೆ ಹವೆ ಸರಿ ಆವುತ್ತಿಲ್ಲೆ ,ಎಂಗ ಬಾಕ್ರ ಬೈಲು ಹತ್ತರೆ ಇಪ್ಪದು, ಮಗ ಸೊಸೆ ಇಲ್ಲಿದ್ದವು,ಹಾಂಗೆ ಎರಡು ದಿನಕ್ಕೆ ಬಂದೋವು ಇಲ್ಲಿ ಮದುವೆಗೆ ಬಂದದು ಹೇಳಿ ಹೇಳಿದವು .ಅದು ಸಮ ,ಹಳ್ಳಿಲಿ ಹುಟ್ಟಿ ಬೆಳದೋರಿನ್ಗೆ ಪೇಟೆ ಹೊಂದಾಣಿಕೆ ಅಪ್ಪದು ಕಷ್ಟವೇ !  ಅದು ಬೇರೆ ವಿಚಾರ .ಎನಗೆ ಅವು ಬಳಕೆ ಮಾಡಿದ "ಪೊಡುಂಬು" ಹೇಳುವ ಪದ ರಜ್ಜ ವಿಶಿಷ್ಟ ಹೇಳಿ ಅನ್ಸಿತ್ತು. ಅಂಬಗ ಆನು "ಪೊಡುಂಬು ಹೇಳ್ರೆ ಎಂತ ಅಜ್ಜ "ಹೇಳಿ ಕೇಳಿದೆ. ಅಷ್ಟಪ್ಪಗ ಅವು "ಬಲ ಇಲ್ಲೆ,ಗಟ್ಟಿತನ ಇಲ್ಲೆ,ಸಾರ ಇಲ್ಲೆ"ಹೇಳುವ ಅರ್ಥಂಗಳ ಹೇಳಿದವು !

 "ಅವ ಬರೀ ಪೊಡುಂಬು ,ಎಲ್ಲಾ ಬಾಯಿಲಿ ಅಷ್ಟೇ ,ಒಳಂದ ಎಂತದೂ ಇಲ್ಲೆ" ಈ ಮಾತಿನ ಸಣ್ಣಾ ದಿಪ್ಪಗಂದ ಸುಮಾರು ಸರ್ತಿ ಕೇಳಿದ್ದೆ . ಎಂಗಳ ಕಡೆಯ ಹವ್ಯಕ ಭಾಷೆಲಿ ಈ ಪದದ ಬಳಕೆ ಇದ್ದು.  ಅವಂದು ಬರೀ ಪೊಡುಮ್ಬುತನ/ಪೊಡುಂಬು ಬುದ್ಧಿ  ಹೇಳಿದರೆ ಅವಂಗೆ ಬುದ್ಧಿವಂತಿಕೆ ಏನೂ ಇಲ್ಲೆ ,ಬುದ್ಧಿವಂತಿಕೆ ಸಾಲ ಹೇಳಿ ಅರ್ಥ .ಆದರೆ ಈ ಶಬ್ದದ ಅರ್ಥ ಎಂತದು ?ಇದರ ಮೂಲ ಎಂತದು ಹೇಳಿ ಗೊಂತಿತ್ತಿಲ್ಲೆ.ಈಗ ಇವು ಪೇಟೆಯ ಒಳ ಎಂತ ಇಲ್ಲೆ ಬರೀ ಪೊಡುಂಬು ಹೇಳಿ ಹೇಳಿದವು! ಅಲ್ಲಿಂದ ಬಂದ ಮೇಲೂ "ಅಂಬಗ ಪೊಡುಂಬು ಹೇಳಿರೆ ಎಂತ" ಹೇಳಿ ಎರಡು ಮೂರು ದಿನಂದ ಆಲೋಚನೆ ಮಾಡಿಗೊಂಡು ಇತ್ತಿದೆ
.
ಎಂಗಳ ಮನೆ ಎದುರಿನ ಮಾರ್ಗದ ಆಚ ಹೊಡೆಲಿ ಒಂದೆರಡು ದಿನ ಮೊದಲು ಯಾವುದೋ ಹೊಸ ಅಂಗಡಿ ಹಾಕಿತ್ತಿದವು .ಆರು ?ಎಂತ ಅಂಗಡಿ ಹೇಳಿ ಆನು ಗಮನಿಸಿತ್ತಿಲ್ಲೆ.ನಿನ್ನೆ ಹೊತ್ತಪ್ಪಗ ಟೆರೇಸ್ ಹತ್ತಿ  ಆ ಕಡೆ ಈ ಕಡೆ ಗೆಬ್ಬಾಯಿಸಿ ಗೊಂಡು ಇಪ್ಪಗ ಎದುರಣ ಹೊಸ ಅಂಗಡಿ ಕಂಡತ್ತು. ಅದು  ಒಂದು ಮರ ಕೆಲಸದ ಅಂಗಡಿ .ಆನು ನೋಡುವಗ  ಎದುರಿನ ಅಂಗಡಿಯ  ಮರ ಕೆಲಸದೋರು ಒಂದು ದೊಡ್ಡ ಮರದ ತುಂಡಿಂದ ಸುಮಾರು ಭಾಗವ ಗೀಸಿ ಗೀಸಿ ತೆಗೆತ್ತಾ ಇತ್ತಿದವು.
ಸಣ್ಣಾದಿಪ್ಪಗ ಎಂಗಳ ಮನೆ ಕೆಲಸಕ್ಕೆ ಬಂದ ಆಚಾರಿಗಳುದೆ ಹೀಂಗೆ ಮರದ ತುಂಡಿಂದ ಸುಮಾರು ಭಾಗವ ತೆಗೆತ್ತಾ ಇತ್ತಿದವು .ಅಂಬಗ ಹೀಂಗೆ ಎಂತಕೆ ಮಾಡುದು ಹೇಳಿ ಕೇಳಿಪ್ಪಗ "ಅದು ಬೊಳುಂಬು ಇಪ್ಪ ಜಾಗೆ ,ಅದು ಎಳತ್ತು ಜಾಗೆ ,ಅದರ ಹಾಂಗೆ ಬಿಟ್ರೆ ಆ ಜಾಗೆ ಕುಮ್ಬಾಗಿ ಮಂಚ, ಕುರ್ಚಿ ಹಾಳಾವುತ್ತು ,ಅದಕ್ಕೆ ಆ ಜಾಗೆಯ ತೆಗದು ಹಾಕುತ್ತವು "ಹೇಳಿ ಎನ್ನ  ಅಜ್ಜ ಹೇಳಿತ್ತಿದವು. ಈಗ ಈ ಅಂಗಡಿಯೋರುದೆ ಹಾಂಗೆ ಬೋಳುಮ್ಬಿನ ತೆಗೆತ್ತಾ ಇಪ್ಪದು ಆದಿಕ್ಕು ಹೇಳಿ ಅನ್ಸಿತ್ತು ಎನಗೆ .ಬೊಳುಂಬು ಇಪ್ಪ ಮರ ನೋಡುಲೆ ಮಾತ್ರ ದಪ್ಪ ಕಾಣುತ್ತು .ಅದು ಒಳ ಗಟ್ಟಿ ಇಲ್ಲೆ.ಬೊಳುಂಬು ಎಲ್ಲ ತೆಗದರೆ ಆ ಮರ ತುಂಡಿಲಿ ಉಪಯೋಗಕ್ಕೆ ಸಿಕ್ಕುವ ಭಾಗ ಬರೀ ರಜ್ಜ .ಎಂತಕೋ ಏನೋ ಎನಗೆ ಅಂಬಗ ಬೊಳುಂಬು ಹೇಳುದೆ ಕಾಲಾಂತರಲ್ಲಿ  ಪೊಡುಂಬು ಹೇಳಿ ಬದಲಾಗಿ ಈಗ ಎಳಸು /ಕಡಮೆ ಬುದ್ಧಿ ಹೇಳುವ ಅರ್ಥಲ್ಲಿ ಬಳಕೆಗೆ ಬಂದಿಕ್ಕಾ  ಏನೋ ಹೇಳಿ ಅನ್ಸಿತ್ತು.ಜೊತೆಗೆ ಒಳ ಟೊಳ್ಳು/ಗಟ್ಟಿ ಇಲ್ಲೆ/ಸತ್ವ ಇಲ್ಲೆ ಹೇಳುವ ಅರ್ಥಲ್ಲಿ  ಬಳಕೆಗೆ ಬಂತೋ ಏನೋ ಹೇಳಿ ಅನ್ಸಿತ್ತು. ಭಾಷಾ ವಿಜ್ಞಾನದ ಆಧಾರಲ್ಲಿ ಹೇಳುದಾದರೆ ಳ ಮತ್ತು ಡ  ನಡುವೆ ವರ್ಣ ವ್ಯತ್ಯಯ ಸಾಮಾನ್ಯ (ಉದಾ-ಇಳಾ<>ಇಡಾ,ಕುಮ್ಬುಳ<>ಕುಮ್ಬುಡ,ಬಳುಸು <>ಬಡುಸು)ಅಪರೂಪಕ್ಕೆ ಪ ಬ ನಡುವೆ ವರ್ಣ ವ್ಯತ್ಯಯ ಇದ್ದು (ಉದಾ -ಪಡಿವಾರ<>ಬಡಿವಾರ )ಹಾಂಗಾಗಿ ಬೊಳುಂಬು <>ಪೊಡುಂಬು ಹೇಳಿ ಬಪ್ಪ ಸಾಧ್ಯತೆ ಇದ್ದು .  ನಿಂಗ  ಎಲ್ಲ  ಎಂತ ಹೇಳ್ತೀರಿ ?ನಿಂಗಳ ಅಭಿಪ್ರಾಯವ ತಿಳುಸಿ

ಇನ್ನೊಂದರಿ ಕಾಂಬ
ನಮಸ್ಕಾರ
     ಡಾ. ಲಕ್ಷ್ಮೀ ಜಿ ಪ್ರಸಾದ

Thursday, 15 August 2013

ಗಿಳಿ ಬಾಗಿಲು (ಹವ್ಯಕ ಬ್ಲಾಗ್ )-ಅವ ಮಹಾ ತೆಗಲೆ ಕಂಠ

                                                    
"ಅವ ಎಂತಕ್ಕೂ ಆಗ ,ಮಹಾ ತೆಗಲೆ ಕಂಠ " ಈ ಮಾತಿನ ಎಂಗಳ ಕಡೆ ತುಂಬಾ ಸತ್ತಿ ಕೇಳಿದ್ದೆ ಆನು .ಎಂತ ಕೆಲಸವನ್ನೂ ಸಸೂತ್ರ ಮಾಡದ್ದೋರ ಬಗ್ಗೆ ಮಾತಾಡುವಗ ಈ ಮಾತಿನ ಹೇಳ್ತವು .ಸಾಮಾನ್ಯವಾಗಿ ತುಂಬಾ ಉದಾಸೀನ ಪ್ರವೃತ್ತಿಯ ಸೋಮಾರಿಗಳ ಸ್ವಭಾವವ ಈ ಮಾತು ಸೂಚಿಸುತ್ತು.ಇದು ತುಳುವಿಲಿ ಕೂಡ ಚಾಲ್ತಿಲಿ ಇದ್ದು . ತುಳುವಿಲಿ ತಿಗಲೆ ಕಂಟೆ  ಹೇಳಿ ಉದಾಸೀನದ ಮುದ್ದೆಗಳ ಬೈತ್ತವು .ಈ ನುಡಿಗಟ್ಟಿನ ಆನು ಸಣ್ಣಾ ದಿಪ್ಪಗಂದ ಕೇಳುತ್ತಾ ಬಂದಿದ್ದರೂ ಇದರ ಅರ್ಥ ಎಂತ ಹೇಳಿ ಎನಗೆ ತಲೆಗೆ ಹೋಗಿತ್ತಿಲ್ಲೆ .ಆ ಬಗ್ಗೆ ತಲೆ ಕೆಡುಸುಲೆ ಹೋಗಿಯೂ ಇತ್ತಿಲ್ಲೆ ಹೇಳುದು ಬೇರೆ ವಿಚಾರ .ಇಂದು ಸ್ವಾತಂತ್ರ್ಯೋತ್ಸವ ಎಲ್ಲರಿಂಗು ಗೊಂತಿದ್ದನ್ನೆ .ಎಲ್ಲ ಶಾಲಾ ಕಾಲೇಜುಗಳಲ್ಲಿ ಉದಿಯಪ್ಪಗ ಒಂಬತ್ತು ಗಂಟೆ ಒಳ ಧ್ವಜಾರೋಹಣ ಮಾಡಿ ಉತ್ಸವ ಆಚರಣೆ ಮಾಡುತ್ತವು ,ಮಾಡಕ್ಕಾದ್ದೆ ಅನ್ನೆ !
ವಿಷಯ ಅದಲ್ಲ ! ಆನುದೆ ಇಂದು ಉದಿಯಪ್ಪಗ ಬೇಗ 8 ಗಂಟೆಗೆ ಎತ್ತಕ್ಕಾದ ಕಾರಣ ಬೇಗ ಎದ್ದು ೬ ಗಂಟೆಗೆ ಬಸ್ಸು ಹತ್ತಿದೆ .ಎನ್ನ ಹಾಂಗೆ ದೂರಂದ ಶಾಲೆ ಕಾಲೇಜಿನ್ಗೆ ಹೋಗಿ ಬಪ್ಪ  ಸುಮಾರು  ಜನಂಗ ಮಾಸ್ತ್ರಕ್ಕ ಟೀಚರುಗ ಆ ಬಸ್ಸಿಲಿ  ಇತ್ತಿದವು .ಎಲ್ಲರೂ ಎನ್ನ ಹಾಂಗೆ ಉದಿಯಪ್ಪಗ ೪-೫ ಗಂಟೆಗೆ ಎದ್ದು ತಯಾರಾಗಿ ೬  ಗಂಟೆಗೆ ಬಸ್ಸು ಹತ್ತಿದೊರು .ಬೆಂಗಳೂರಿಂದ ದೊಡ್ಡ ಬಳ್ಳಾಪುರ ಹೋಪಲೆ ಸುಮಾರು ಒಂದು ಒನ್ದೂವರೆ ಗಂಟೆ ಬೇಕಾವುತ್ತು .ಆ ಬಸ್ಸಿಲಿದ್ದೊರು ಹೆಚ್ಚಿನೋರು ದೊಡ್ಡ ಬಲ್ಲಾಪುರಕ್ಕೆ ಹೊಪೋರು .ಬಸ್ಸು ಹೆರಟು ೫-೧೦ ನಿಮಿಷಕ್ಕೆ ಎಲ್ಲರೂ ಚಂದಕ್ಕೆ ಬಸ್ಸಿಲಿಯೇ ಒರಗಿದವು !ಎನಗೆ ಬಸ್ಸಿಲಿ ಜಪ್ಪಯ್ಯ ಹೇಳಿರೂ ಒರಕ್ಕು ಬತ್ತಿಲ್ಲೆ .ಹಾಂಗೆ ಅಲ್ಲಿ ಇಲ್ಲಿ ಗೆಬ್ಬಾಯಿಸಿಕೊಂಡು ಇತ್ತಿದೆ.ಹಾಂಗೆ ಎಲ್ಲ ಕಡೆ ನೋಡುವಗ ಅಕ್ಕ ಪಕ್ಕ ಸುತ್ತ ಮುತ್ತ ಇಪ್ಪೋರೆಲ್ಲ ಒರಗಿದ್ದವು ! ಎಲ್ಲರ ಮೋರೆ (ಗಡ್ಡ )ಎದೆಗೆ ತಾಗಿಕೊಂಡು ಇದ್ದು !!ಕೂಡ್ಲೆ ಜ್ಞಾನೋದಯ ಆತು ,ತೆಗಲೆ ಕಂಠ ಹೇಳಿರೆ ಎಂತ ಹೇಳಿ ತಲೆಗೆ ಹೋತು !ತೆಗಲೆ=ಎದೆ ,ಕಂಠ =ಕೊರಳು ,ಕೊರಳು ಎದೆಗೆ ಬಗ್ಗಿ ಒರಗಿಕೊಂಡು ಇಪ್ಪದಕ್ಕೆ ತೆಗಲೆ ಕಂಠ ಹೇಳುದು !ಯಾವ ಕೆಲಸವೂ ಮಾಡದ್ದೆ ಉದಾಸೀನಂದ ಒರಕ್ಕು ತೂಗಿಕೊಂಡು ಇಪ್ಪೋರಿನ್ಗೆ ಒಪ್ಪುವ ಮಾತಿದು ,ಉದಾಸೀನದ ಮುದ್ದೆಗಳ ಬಗ್ಗೆ ಹೇಳುಲೇ ಇದಕ್ಕಿಂತ ಚಂದದ ಪದ ಬೇರೆಲ್ಲ್ಲಿಯೂ ಸಿಕ್ಕ ,ನಿಂಗ ಎಂತ ಹೇಳ್ತೀರಿ ?ನಿಂಗಳ ಅಭಿಪ್ರಾಯ ತಿಳುಸಿ
,ಇನ್ನೊಂದರಿ ಕಾಂಬ ,
                                                    ನಮಸ್ಕಾರ  
                                                                                               
                                                                             ಡಾ. ಲಕ್ಷ್ಮೀ ಜಿ ಪ್ರಸಾದ

Wednesday, 7 August 2013

ಗಿಳಿ ಬಾಗಿಲು -ಅವ ದೊಡ್ಡ ಮುಂಡೆಂಗಿ ಕುಜುವೆ

                                                 ಅವ ದೊಡ್ಡ ಮುಂಡೆಂಗಿ ಕುಜುವೆ
ಎನ್ನ ಮಗ ೧೦ನೆಲಿ ಓದ್ತಾ ಇದ್ದ .ಮೊಬೈಲ್ ಲಿ ಫೇಸ್ ಬುಕ್ ಲಿ ಅವನ ಸಹಪಾಟಿ  ಗಳತ್ತರೆ ಮಾತಾಡ್ತಾ ಇರ್ತ .ಒಳ್ಳೆ ಸಾತ್ವಿಕ ಮಾಣಿ ,ಆದರೂ  ಆವ ಆರತ್ತರೆ ಎಂತ ಮಾತಾಡ್ತಾ ಹೇಳುದರ ಗಮನಿಸುತ್ತಾ ಇರ್ತೆ ,ಹಾಂಗೆ ಇಂದು ಅವನ ಫೇಸ್ ಬುಕ್  ತೆಗದು ಆರತ್ತರೆ ಎಂತ ಚಾಟ್  ಮಾಡಿದ್ದ ಹೇಳಿ ನೋಡ್ತಾ ಇತ್ತಿದೆ .ಅವನ ಗೆಳೆಯನೊಟ್ಟಿನ್ಗೆ ಅದು ಇದು ಮಾತಾಡಿದ್ದ .ಅದರಲ್ಲಿ ಒಬ್ಬನ ಹತ್ತರೆ ನಮ್ಮ ಭಾಷೇಲಿ ಮಾತಾಡಿದ್ದ .ಆರನ್ನೊ  ಅವು ಇಬ್ರು ದೂರಿದ್ದವು !ಅದರಲ್ಲಿ ಆರೋ ಒಬ್ಬ ಇವಕ್ಕಿಬ್ರಿಂಗೆ ಎಂಥದೋ ಬೇಕಾದ ಸಹಾಯ ಮಾಡಿದ್ದಾ ಇಲ್ಲೆ .ಅದರ ಎನ್ನ ಮಗ "ಅ ವ ಎಂತಕ್ಕೂ ಆಗ ಮಾರಾಯ"  ಹೇಳಿ ಬರದ್ದ .ಮಗನ ಗೆಳೆಯ " ಅಪ್ಪು ಮಾರಾಯ ಅವ ದೊಡ್ಡ ಮುಂಡೆಂಗಿ ಕುಜುವೆ" ಹೇಳಿ ಬರದ್ದ .ಎನಗೆ ಇದರ ಓದಿ ಭಾರಿ ಕೊಷಿ ಆತು.! ನಮ್ಮ ಭಾಷೆಲಿ ಎಷ್ಟು ಚಂದದ ಪದಂಗಳ ಬಳಕೆ ಇದ್ದು ಹೇಳಿ .ಒತ್ತಿನ್ಗೆ ಈಗಣ ಮಕ್ಕೊಗೂ ಇಂತ ವಿಶಿಷ್ಟ ಪದಂಗಳ ಬಳಕೆ ಗೊಂತಿದ್ದಲ್ಲದಾ ಹೇಳಿ! .ಕುಜುವೆ ಹೇಳಿದರೆ ಹಲಸಿನ ಕಾಯಿ. ಬಹು ಉಪಯೋಗಿ ತರಕಾರಿ ಅದು .ಅದರ ಬೆಂದಿ ಮಾಡುಲೆ, ಆವುತ್ತು ಬೇಳೆ ಯನ್ನೂ ಕೊದಿಲಿನ್ಗೆ ಹಾಕುತ್ತವು ,ಇನ್ನು ರೆಚ್ಚೆ, ಹೊದುಂಕುಳು,ಹೂಸರೆ  ಎಲ್ಲವೂ ದನಗೊಕ್ಕೆ ತಿಮ್ಬಲೆ ಆವುತ್ತು .ಅದರ ಎಲ್ಲ ಭಾಗಂಗಳುದೆ ಉಪಕಾರಿ .ಆದರೆ ಮುಂಡೆಂಗಿ ಕುಜುವೆ ಇದಕ್ಕೆ ತದ್ವಿರುದ್ಧ .ಹಸೆ ಮಡವಲೆ ಉಪಯೋಗಿಸುವ ಮುಂಡೆಂಗಿ  ಸೆಸಿ /ಬಲ್ಲೆಲಿ ಎಷ್ಟುದೆ ಕಾಯಿ ಬಿಡ್ತು. ಇದು ನೋಡುಲೆ ಕುಜುವೆ (ಎಳತ್ತು ಹಲಸಿನ ಕಾಯಿ )ಹಾಂಗೆ ಕಾಣ್ತು .ಹಾಂಗಾಗಿ ಇದರ ಮುಂಡೆಂಗಿ ಕುಜುವೆ ಹೇಳಿ ಹೇಳ್ತವು .ಆದರೆ ಇದು ನಿರರ್ಥಕ ವಸ್ತು .ಇದರಲ್ಲಿ ಸೊಳೆ ,ಬೇಳೆ ಯಾವದೂ ಇಲ್ಲೆ .ಇದರ ದನಗ ಕೂಡ ತಿನ್ತವಿಲ್ಲೆ .ಇದರಲ್ಲಿ ಬೀಜ ಇಲ್ಲೆ ,ಹಾಂಗಾಗಿ ಇನ್ನೊಂದು ಮುಂಡೆಂಗಿ  ಸೆಸಿ ಕೂಡಾ ಇದರಲ್ಲಿ ಹುಟ್ಟುತ್ತಿಲ್ಲೆ. ಹಾಂಗಾಗಿ ಇದರ ಹುಟ್ಟೇ ವ್ಯರ್ಥ .ಅದರಂದ ಆರಿನ್ಗೂ ಒಂದಿನಿತೂ ಉಪಯೋಗ ಆಗ .ಆರೋಬ್ಬಂಗೂ ಏನೊಂದೂ ಉಪಕಾರ ಮಾಡದ್ದೋರಿನ್ಗೆ ನಮ್ಮ  ಭಾಷೆಲಿ " ಅವ ದೊಡ್ಡ ಮುಂಡೆಂಗಿ ಕುಜುವೆ" ಹೇಳಿ ಹೇಳ್ತವು .ಎಷ್ಟು ಚೆಂದದ ಹೋಲಿಕೆ ,ಉಪಮೆ ಅಲ್ಲದ ? ಇದು  ಆಡು ಮಾತಿಲಿ ರೂಪಕವಾಗಿ  ಬತ್ತು .ಇದೊಂದು ಅತ್ಯಂತ ನೈಜವಾದ ಮಾತಿನ ಬಳಕೆ ,ಇಂತ ತುಂಬಾ ಚೆಂದದ ಪದಂಗ ಎಂಗಳ ಭಾಷೆಲಿ ಇದ್ದು ಇತ್ತೀಚೆಗಂಗೆ ಇಂತ ಪದಂಗಳ ಬದಲಿನ್ಗೆ ಆವಾ ಯೂಸ್ಲೆಸ್ ಇತ್ಯಾದಿ ಇಂಗ್ಲಿಷ್ ಪದಂಗ ಬತ್ತಾ ಇದ್ದು ಹೇಳುದು ರಜ್ಜ ಬೇಜಾರಿನ ವಿಷಯ !ಯೂಸ್ಲೆಸ್ ಹೇಳುವ ಪದ ಮುಂಡೆಂಗಿ ಕುಜುವೆ ಯಷ್ಟು ಗಟ್ಟಿ  ಪದ ಅಲ್ಲ !ಇದಕ್ಕೆ ಎಂತ ಹೇಳ್ತಿ ?ನಿಂಗಳ ಅಭಿಪ್ರಾಯ ತಿಳಿಸಿ ,
   
ಇನ್ನೊಂದರಿ ಕಾಂಬ
                           ನಮಸ್ಕಾರ
                                                           ಲಕ್ಷ್ಮೀ ಜಿ ಪ್ರಸಾದ