Friday, 3 January 2014

ಗಿಳಿ ಬಾಗಿಲು (ಹವ್ಯಕ ಬ್ಲಾಗ್ )-ಮುಂಗೈ ಪತ್ತು


ನಮ್ಮ ಭಾಷೆಲಿ ಬಳಕೆ ಇಪ್ಪ ಅಪರೂಪದ ಒಂದು ನುಡಿಗಟ್ಟು ಇದು .ಅವ ಮುಂಗೈ ಪತ್ತು ಮಾಡಿದ ,ಅದು ಮುಂಗೈ ಪತ್ತು ಮಾಡಿತ್ತು ಹೇಳಿ !
ಎಂತದು ಮುಂಗೈ ಪತ್ತು ಹೇಳ್ರೆ ?ಅಂಗೈ ಹಾಂಗೆ ಮುಂಗೈ ಅರ್ಥ ಗೊಂತಿದ್ದನ್ನೇ !ಪತ್ತು ಹೇಳುದು ಪಟ್ಟು -ಹಿಡಿತ ಹೇಳುದೆ ಪತ್ತು ಆಗಿರೆಕ್ಕು .ಪಟ್ಟು ಹೇಳ್ರೆ ಕುಸ್ತಿ ಪಟುಗ ಸ್ಪರ್ಧಿಗಳ ತಪ್ಪಿಸಿಕೊಳ್ಳದ್ದ ಹಾಂಗೆ ,ಜಾರದ್ದ ಹಾಂಗೆ ಎಲ್ಲ ಗಟ್ಟಿಯಾಗಿ ಅಲುಗುಸುಲೆ ಎಡಿಯದ್ದ ಹಾಂಗೆ ಹಿಡಿವದು .

ಇಂಥ ಬಿಗಿಯಾದ ಪಟ್ಟಿನ ಎರಡು ಕೈಗಳ ಅಂಗೈ ಗಳ ಮೂಲಕ ಹಾಕುದು ಕ್ರಮ .ಇಂಥ ಪಟ್ಟಿನ ಮುಂಗೈಗಳ ಬಳಸಿ ಹಾಕುಲೆ ಹೋದರೆ ಅದು ಎಡಿಯ ಅನ್ನೇ ,ಅಂತ ಪಟ್ಟು /ಹಿಡಿತ ತುಂಬಾ ದುರ್ಬಲ ,ಆರಿನ್ಗೂ ತಪ್ಪಿಸಿಗೊಮ್ಬಲೆ ಎಡಿಗು .

ಇದು ನುಡಿಗಟ್ಟು ಆಗಿ ಬಳಕೆ ಅಪ್ಪಗ ಈ ರೀತಿಯ ಶಬ್ದಶಃ ಅರ್ಥ ಬತ್ತಿಲ್ಲೆ ,ಆದರೂ ಭಾವ ಇದೇ ಆಗಿರುತ್ತು .ಆಸ್ತಿ /ಮನೆ ಪಾಲು ವ್ಯಾಜ ,ಚರ್ಚೆ ಮೊದಲಾದ ಸಂದರ್ಭಗಳಲ್ಲಿ ಕೆಲವು ನಿರ್ಣಾಯಕವಾದ ,ಆರಿಂದು ಸರಿ ತಪ್ಪು ಹೇಳಿ ಸರಿಯಾಗಿ ಗೊಂತಿಪ್ಪ ವ್ಯಕ್ತಿಗ ಇರ್ತವು .

ಅಂತ ವ್ಯಕ್ತಿಗ ಇದು ತಪ್ಪು ಸರಿ ಹೇಳಿ ಸ್ಪಷ್ಟವಾಗಿ ಹೇಳಿದರೆ ಅಲ್ಲಿಗೆ ವಿವಾದ ಮುಗುದು ಹೋವುತ್ತು.ಆದರೆ ಎಷ್ಟೋ ಜನಂಗ ಸ್ಪಷ್ಟವಾಗಿ ಇದರ ಹೇಳುತ್ತವಿಲ್ಲೆ ,ಕಣ್ಣಾರೆ ಕಂಡಿದ್ದರೂ ಆನು ಅಲ್ಲಿ ಇತ್ತಿದೆ ,ಆದರೆ ಗೋಷ್ಠಿ ಮಾಡಿದ್ದಿಲ್ಲೆ /ಆನು ಗಮನಿಸಿದ್ದಿಲ್ಲೆ ,ಅವು ಏನೋ ಹೇಳಿದ್ದವು ಎಂಥ ಹೇಳಿ ಎನಗೆ ನೆನಪಿಂಗೆ ಬತ್ತಿಲ್ಲೆ ..ಇತ್ಯಾದಿಯಾಗಿ ಅಡ್ಡ ಗೋಡೆ ಮೇಲೆ ದೀಪ ಮಡುಗಿದ ಹಾಂಗೆ ಹೇಳುತ್ತವು .


ಉದಾ ಹರಣೆಗೆ ಹೇಳುದಾದರೆ ಒಬ್ಬ ಕೂದಿಪ್ಪಗ ಅವನ ಎದುರೇ ಒಬ್ಬಪಾಪದವಂಗೆ   ಇನ್ನೊಬ್ಬ ಜೋರಿನವ ವಿನಾಕಾರಣ ಜಗಳ ತೆಗದು  ಎರಡು ಮಡುಗುತ್ತ ಹೇಳಿ ಮಾಡಿಕ್ಕೊಂಬ ,ಮುಂದೆ ಆ ಬಗ್ಗೆ ಪಂಚಾಯತಿಕೆ ಅಪ್ಪಗ ಅಲ್ಲಿ ಕೂದು ಗೊಂಡು ಇದ್ದ ವ್ಯಕ್ತಿಯ ಹತ್ತರೆ ಎಂತಾತು ಹೇಳಿ ಕೇಳ್ತವು .ಅಷ್ಟಪ್ಪಗ ಅವ ಆನು ಪುಸ್ತಕ ಓದಿಕೊಂಡು ಇತ್ತಿದೆ ಏನೋ ಒಂದು ಶಬ್ದ ಆತು ಎಂತ ಹೇಳಿ ಎನಗೆ ಗೋಷ್ಠಿ ಆಯಿದಿಲ್ಲೆ ಹೇಳಿ ಹೇಳಿದರೆ ಅದರ ಮುಂಗೈ ಪತ್ತು ಮಾಡುದು ಹೇಳಿ ಹೇಳುತ್ತವು


 .ಎನಗೆ ಗೊಂತೆ ಇಲ್ಲೆ ಆನು ಅಲ್ಲಿ ಇತ್ತೇ ಇಲ್ಲೆ ಹೇಳಿರೆ ಅದೊಂದು ಬೇರೆ !ಆದರೆ ಅಲ್ಲಿ ಇತ್ತಿದೆ ಹೇಳಿ ಒಪ್ಪಿಗೊಂಡುದೆ ತಪ್ಪು ಮಾಡಿದವ ತಪ್ಪಿಸಿಕೊಂಬ ಅವಕಾಶ ಕೊಟ್ಟು ವ್ಯವಹರಿಸುವ ಬಗ್ಗೆ ಬಳಕೆ ಅಪ್ಪ ನಮ್ಮ ಭಾಷೆಯ ನುಡಿಗಟ್ಟು ಇದು.
ಕನ್ನಡಲ್ಲಿ ಬಳಕೆ ಇಪ್ಪ ಹಾವು ಸಾಯಬಾರದು ಕೋಲೂ ಮುರಿಯಬಾರದು .ಅಕ್ಕಿಯ ಮೇಲೆ ಆಸೆ ,ನೆಂಟರ ಮೇಲೆ ಪ್ರೀತಿ ಮೊದಲಾದ ಮಾತುಗ ಮುಂಗೈ ಪತ್ತು ಅಭಿವ್ಯಕ್ತಿಸುವ ಅರ್ಥದ ಹತ್ತರಂಗೆ ಬತ್ತು
ಬೇರೆಯೂ ಇದಕ್ಕೆ ಸಮಾನಾಂತರವಾದ ಬಳಕೆಗ ಇಕ್ಕು ,ಗೊಂತಿದ್ದೋರು ತಿಳುಸಿ

ಗಿಳಿ ಬಾಗಿಲು(ಹವ್ಯಕ ಬ್ಲಾಗ್ )- ಬೈಪ್ಪಣೆ ನಾಯಿ ಹಾಂಗೆ




 ಓ ಮೊನ್ನೆ ರಜೆಲಿ ಊರಿಂಗೆ ಅಮ್ಮನ ಮನೆಗೆ ವಾರಣಾಸಿಗೆ ಹೋಗಿತ್ತಿದೆ.ಇರುಳು ಆನುದೇ ಅಮ್ಮಂದೆ ಮಾತಾಡುತ್ತಾ ಇತ್ತಿದೆಯ ಟಿವಿ ಕೋಣೆಲಿ ಕೂದು.ಅಲ್ಲಿಯೇ ಎಡತ್ತಿನ್ಗೆ ಕೆದೆ ಇದ್ದು, ಒಂದೆರಡು ದನಂಗ ಕಂಜಿಗ ಇದ್ದವು.ಎಂಗ ಎಂತದೋ ಮಾತಾಡಿಗೊಂಡು ಇಪ್ಪಗ ಕೆದೆಂದ ಏನೋ ಶಬ್ದ ಕೇಳಿತ್ತು.


ದನಗ ಸೊಯಿಮ್ಪುದು ನಾಯಿ ಗುರ್ ಗುರ್ ಮಾಡಿದ ಹಾಂಗೆ.ಎಂತದು ಅದು ಹೇಳಿ ಕೇಳಿದೆ ಆನು ಅಮ್ಮನತ್ತರೆ.ಅಮ್ಮ ಹೇಳಿದ “ಅಲ್ಲಿ  ಸುಂದರಿ (ಎಂಗಳ ಮನೆಯ ಹೆಣ್ಣು ನಾಯಿ >ಬೊಗ್ಗಿ ) ಅಲ್ಲಿ ಬೈಪ್ಪಣೆಗೆ ಹೋಗಿ ದನಗಳ ಹತ್ತರೆ ಹೊಣವದು.ಅದರ ಕಟ್ಟದ್ದರೆ ಎಡಿಯ.ಇವರ ಬೊಬ್ಬೆಲಿ ನಮಗೆ ಒರಗುಲೆ ಎಡಿಯ ಹೇಳಿ” “ಸುಂದರಿ ಸುಂದರಿ” ಹೇಳಿ ನಾಯಿಯ ದೆನಿಗೇಳಿದ.

ಅದು ಎಂತ ಮಾಡ್ರೂ ಬಂತಿಲ್ಲೆ.ಮತ್ತೆ ಅಮ್ಮ ಬಿಸ್ಕುಟ್ ತೆಕ್ಕೊಂಡು ಹೋಗಿ ತೋರ್ಸಿ ಕೊರಳಿಂಗೆ ಸಂಕೋಲೆ ಹಾಕಿ ಎಳಕ್ಕೊಂಡು ಬಂದು ಕಟ್ಟಿದ.ದೆನಿಗೇಳಿದರೂ ಬಾರದ್ದೆ ಇರಕ್ಕಾದರೆ  “ಸುಂದರಿಗೆ ಅಲ್ಲೆಂತ ಕೆಲಸ ಬೈಪ್ಪಣೆಲಿ ಈಗ?ಅಲ್ಲೆಂತ ಇದ್ದು ಅದಕ್ಕೆ ತಿಂಬ ವಸ್ತು ?” ಹೇಳಿ ಆನು ಅಮ್ಮನ ಹತ್ತರೆ  ಕೇಳಿದೆ.ಬೇಸಗೆ ಹಲ್ಸಿನ ಹಣ್ಣು ಅಪ್ಪ ಸಮಯಲ್ಲಿ ಆದರೆ ದನಗೊಕ್ಕೆ ಹಣ್ಣಿನ ರೆಚ್ಚೆ ಹಾಕಿರೆ ಅದರ ಪರಿಮಳಕ್ಕೆ ನಾಯಿಗ ಹೋಗಿ ದನಗಳ ತಿನ್ನ ದ್ದ ಹಾಂಗೆ ಬೌರುದು ಜಗಳ ಮಾಡುದು ಗೊಂತಿತ್ತು ಎನಗೆ,ಈಗ ಎಂತ ಇದಕ್ಕೆ ಅಲ್ಲಿ ಕೆಲಸ ಹೇಳಿ ಗೊಂತಾತಿಲ್ಲೆ.

ಅದಕ್ಕೆ ಅಮ್ಮ “ಇದಕ್ಕೆಂತ(ನಾಯಿಗೆ ) ಕೆಲಸ ಅಲ್ಲಿ! ಅಂತೆ ಹೋಗಿ ಅವರ(ದನಂಗಳ ) ಹುಲ್ಲು ತಿನ್ನದ್ದ ಹಾಂಗೆ ಹೊಣವದು.ಮತ್ತೆ ಅಂತೆ ಹೇಳುದ ಬೈಪ್ಪಣೆ ನಾಯಿ ಹಾಂಗೆ ಹೇಳಿ “ಹೇಳಿದ.

ಓ ಅಪ್ಪು !!
ಗಿಳಿ ಬಾಗಿಲಿಂಗೆ ಬರವಲೆ ಒಂದು ನುಡಿಕಟ್ಟು ಸಿಕ್ಕಿತ್ತು ಹೇಳಿ ಕೊಷಿ ಆತು!. ಆರಾದರೂ  ಅವೂ ಉಪಯೋಗಿಸಿಕೊಳ್ಳದ್ದೆ ಬೇರೆಯೋರಿನ್ಗೂ ಉಪಯೋಗ ಮಾಡುಲೆ ಬಿಡದ್ದೆ ಇಪ್ಪೋರ ಬಗ್ಗೆ ಎಂಗಳ ಕೋಳ್ಯೂರು ಕಡೆ ಹವ್ಯಕ ಭಾಷೆಲಿ ಬೈಪ್ಪಣೆ ನಾಯಿ ಹಾಂಗೆ ಮಾಡಿದ ,ಅವ !ಆವ ಬೈಪ್ಪಣೆ ನಾಯಿ ಅವನೂ ತಿನ್ನ ಬೇರೆಯೋರಿಂಗೂ ಬಿಡ ಹೇಳಿ ಬಳಕೆ ಇದ್ದು.

ಬೈಪ್ಪಣೆಲಿ ನಾಯಿಗೊಕ್ಕೆ ಬೆಳುಲು ,ಹುಲ್ಲು ಯಾವದೂ ತಿಮ್ಬಲೇ ಎಡಿತ್ತಿಲ್ಲೆ;ಅವಕ್ಕೆ ಅದು ಬೇಡದೆ !ರೆಚ್ಚೆ ಹಾಕಿದರೂ ನಾಯಿಗೊಕ್ಕೆ ತಿಂಬಲೆ ಎಡಿತ್ತಿಲ್ಲೆ.ಆದರೂ  ಅಂತೆ ಕೆಲವು ನಾಯಿಗ  ಬೈಪ್ಪಣೆಗೆ ಹೋಗಿ ದನಗಳತ್ತರೆ ಓರುತ್ತವು,ಅವಕ್ಕೆ ಬೌರಿಗೊಂಡು ಕಚ್ಚುಲೆ ಹೊಯಿಕೊಂಡು ಅವರನ್ನು ಹುಲ್ಲು ತಿಂಬಲೆ  ಬಿಡ್ತವಿಲ್ಲೆ .

ಭೂಮಿಯ ಆಸ್ತಿಯ ಅಥವಾ ಇನ್ನೆನನ್ನಾದ್ರೂ ತಾನೂ ಅನುಭವಿಸದ್ದೆ ಬೇರೆಯೋರಿನ್ಗೂ ಅನುಭವಿಸುಲೆ ಬಿಡದ್ದೆ ಇಪ್ಪ ವ್ಯಕ್ತಿಗಳ ಬಗ್ಗೆ ಹೇಳುವಾಗ ಉಪಯೋಗಿಸುವ ಬಹಳ ಪರಿಣಾಮಕಾರೀ ವಿಶಿಷ್ಟ ನುಡಿಗಟ್ಟು ಇದು.ಇದು “ಬೈಪ್ಪಣೆ ನಾಯಿ ಲೆಕ್ಕೋ” ಹೇಳಿ ತುಳುವಿಲಿ ಬಳಕೆ ಇದ್ದು.ಕನ್ನಡಲ್ಲಿಯೂ ಇದ್ದ ?ಹವ್ಯಕಲ್ಲಿ ಬೇರೆ ಕಡೆ ಇದ್ದ ?

ಇದಕ್ಕೆ ಸಮಾನಾಂತರವಾಗಿ ಬೇರೆ ನುಡಿಗಟ್ಟುಗ ಏನಾರು ಇದ್ದ ?ತಾನು ತಿನ್ನ ಪರರಿಗೂ ಬಿಡ ಹೇಳುವ ಮಾತು ಕನ್ನದಲ್ಲಿ ಇದ್ದು ಅಲ್ಲದ ?ತಿಳುದೋರು ಹೇಳ್ರೆ ಎಲ್ಲೋರಿಂಗು ಗೊಂತಾವುತ್ತು ಎಲ್ಲೋರಿಂಗು ಉಪಕಾರ ಆವುತ್ತು ಒಟ್ಟಿಂಗೆ  ಎನಗುದೆ.

Friday, 13 December 2013

ಗಿಳಿ ಬಾಗಿಲು (ಹವ್ಯಕ ಬ್ಲಾಗ್ )-ಅಲ್ಪ ಒಳುದು ಹಾಳು ಹಲಾಕು ಆಯಿದು



“ಅಡಿಗ್ಗೆಯೋವು ಅಲ್ಪ ಮಾಡಿ ಹಾಕಿದ್ದವು . ಅಲ್ಪ ಒಳುದು ಹಾಳು ಹಲಾಕು ಆಯಿದು ಹೇಳುವ ಮಾತಿನ ನಮ್ಮ ಭಾಷೆಲಿ ಸಾಮನ್ಯಾವಾಗಿ ಉಪಯೋಗಿಸುತ್ತವು.ಅನುಪತ್ಯ ಮಾಡಿ ಅಪ್ಪಗ ಕೆಲವು ಸರ್ತಿ ಅಡಿಗೆಯೋರ (ಇದು ಸತ್ಯಣ್ಣನ ಬಗ್ಗೆ ಅಲ್ಲ.ಸತ್ಯಣ್ಣನ ಅಡಿಗೆ ಮೂರನೇ ಹಂತಿಗೆ ಅಲ್ಲಿಂದಲ್ಲಿಗೆ ಹರ ಹರಾ ಆವುತ್ತಡ!!)!ಅಂದಾಜು ತಪ್ಪಿ ಅಶನ, ಕೊದಿಲು,ಮೇಲಾರಂಗ ತುಂಬಾ ಒಳುದು ಹಾಳಪ್ಪದು ಇದ್ದು .ಕೆಲವು ಸರ್ತಿ ಗ್ರೇಶಿದಷ್ಟು ಜನಂಗ ಬಾರದ್ದೆ ಒಳಿವದು ಇದ್ದು .ಇಂಥ ಸಂದರ್ಭಲ್ಲಿ ತುಂಬ ಒಳುದು ಹಾಳಾಯಿದು ಹೇಳುದರ ಅಲ್ಪ /ಅಲ್ಪ ಒಳುದು ಹಾಳಾಯಿದು ಹೇಳಿ ಹೇಳ್ತವು.

ಕನ್ನಡದ ಪ್ರಾದೇಶಿಕ ಉಪ ಭಾಷೆ ಹೇಳಿಯೇ ಗುರುತಿಸಲ್ಪಡುವ ನಮ್ಮ ಭಾಷೆಲಿ ಬಳಕೆಲಿ ಇಪ್ಪ ಕೆಲವು ಕನ್ನಡ ಪದಂಗೊಕ್ಕೆ ನಮ್ಮ ಭಾಷೆಲಿ ವಿರುದ್ಧವಾದ ಅರ್ಥ ಬಳಕೆಲಿ ಇದ್ದು .ಇಂತಾದ್ದೆ ಒಂದು ಪದ ಅಲ್ಪ ಹೇಳುದು .ಕನ್ನಡಲ್ಲಿ ಅಲ್ಪ ಹೇಳ್ರೆ ಕಮ್ಮಿ ಹೇಳಿ ಅರ್ಥ .ಆದರೆ ನಮ್ಮ ಭಾಷೆಲಿ ತುಂಬ ಹೇಳುವ ಅರ್ಥಲ್ಲಿ ಇದು ಬಳಕೆ ಆವುತ್ತು .”ಅವೆಂತ ಒಂದೆರಡು ಜನಂಗಳ?ಅವು ಅಪ್ಪಚ್ಚಿ ದೊಡ್ಡಪ್ಪ ಮಾವ ಅತ್ತೆ ಮಕ್ಕ ಮರಿಗ ಹೇಳಿ ಅಲ್ಪ ಇದ್ದವು” ಹೇಳಿ ದೊಡ್ಡ ಕುಟುಂಬದ ಬಗ್ಗೆ ಹೇಳುದು ಇದ್ದು .

ಸುತ್ತ ಮುತ್ತ ಎಲ್ಲಿ ನೋಡ್ರೂ ಬ್ಯಾರಿಗಳೇ ಕಾಣ್ತಾ ಇಪ್ಪ ಕನ್ಯಾನ ಉಪ್ಪಳದ ನಡುವೆ ಮನೆ ಇಪ್ಪ ಎಂಗಳ ಬೇತದ ಅಜ್ಜ , ”ಅಲ್ಪ ಸಂಖ್ಯಾತರು ಹೇಳಿ ಇವರ ದೆನಿಗೇಳುದು ಸರಿ.ಆದರೆ ಅದು ನಮ್ಮ ಭಾಷೆಯ ಅಲ್ಪ ಕನ್ನಡದ ಅಲ್ಪ ಅಲ್ಲ” ಹೇಳಿ ಎರಡು ಕೈ ಆಕಡೆ ಈ ಕಡೆ ಬಿಡುಸಿ ಅಗಾಲ್ಸಿ ತೋರ್ಸಿ ನೆಗೆ ಮಾಡಿಗೊಂಡು ಇತ್ತಿದವು!

ಅಲ್ಪ ಹೇಳುವ ಪದಕ್ಕೆ ನುಡಿಗಟ್ಟಾಗಿ ಬಳಕೆ ಮಾಡುವಗ ತುಂಬಾ /ಹೆಚ್ಚು ಹೇಳುವ ಅರ್ಥ ಇದ್ದರೂ ಕಮ್ಮಿ ಹೇಳುವ ಸರ್ತ ಅರ್ಥಲ್ಲಿಯೂ ಬಳಕೆ ಆವುತ್ತು ಕೆಲವು ಸರ್ತಿ. “ಅವು ಬರಿ ಅಲ್ಪಂಗ ಅವರ ವ್ಯವಹಾರ ಆಗ ” ಹೇಳುವ ಮಾತು ನಮ್ಮ ಭಾಷೆಲಿ ಬಳಕೆಲಿ ಇದ್ದು.ಇಲ್ಲಿ ಆ ಅಲ್ಪಂಗ ಹೇಳ್ರೆ ಅವು ರಜ್ಜ ಬುದ್ಧಿ ಇಲ್ಲದ್ದೋರು,ನೀತಿ ನಿಯತ್ತು ಇಲ್ಲದ್ದೋರು, ಸಣ್ಣ ಮನಸ್ಸಿನೋರು ಹೇಳುವ ಅರ್ಥ ಇದ್ದು.
ಕೋಳ್ಯೂರು ಸೀಮೆಲಿ ” ಅಲ್ಪ ”ಪದಕ್ಕೆ ಹೀಂಗೆ ಇಪ್ಪ ಅರ್ಥ ಪ್ರಚಲಿತ ಇದ್ದು .ಹವ್ಯಕಲ್ಲಿ ಎಲ್ಲ ಕಡೆಲಿಯೂ ಇಕ್ಕು ಅಲ್ಲದ ?ತಿಳುಸಿ

Tuesday, 3 December 2013

ಗಿಳಿ ಬಾಗಿಲು(ಹವ್ಯಕ ಬ್ಲಾಗ್ ) ಪೊಡುಂಬು

ಮೊನ್ನೆ ಒಂದಿನ ಇಲ್ಲೇ ಹತ್ತರೆ ಒಂದು ಮದುವೆಗೆ ಹೋಗಿತ್ತಿದೆ.ಅಲ್ಲಿಗೆ ಬಂದಿದ್ದ ನಮ್ಮೋರು ಒಬ್ಬ್ರು ಪ್ರಾಯದೋರ ಪರಿಚಯ ಆತು .ಅವು ಮಾತಾಡುತ್ತಾ “ಈ ಪೇಟೆ ಬದುಕು ಎಲ್ಲ ನೋಡುಲೆ ಅಬ್ಬರ,ಒಂದು ಬಾಳೆ ಹಣ್ಣು ಬೇಕಾರೆ ಮೂರು ರೂಪಾಯಿ ಕೊಡಕ್ಕು ,ಬೊಂಡಕ್ಕು ಪೈಸೆ ಕೊಡಕ್ಕು ನೀರಿಂಗು ಪೈಸೆ ಕೊಡಕ್ಕು ತಿಂಬಲು ಪೈಸೆ ಕೊಡಕ್ಕು …ಗೂ ಪೈಸೆ ಕೊಡಕ್ಕು ಈ ಪೇಟೆಲಿ ಎಲ್ಲಾ ಹೆರಂದ ನೋಡ್ಲೆ ಎಲ್ಲ ಚಂದ, ಒಳ ಎಂತ ಇಲ್ಲೆ ಬರೀ ಪೊಡುಂಬು ,ಎಂಗೊಗೆ ಇಲ್ಲಿ ಪೇಟೆ ಹವೆ ಸರಿ ಆವುತ್ತಿಲ್ಲೆ ,ಎಂಗ ಬಾಕ್ರ ಬೈಲು ಹತ್ತರೆ ಇಪ್ಪದು, ಮಗ ಸೊಸೆ ಇಲ್ಲಿದ್ದವು,ಹಾಂಗೆ ಎರಡು ದಿನಕ್ಕೆ ಬಂದೋವು ಇಲ್ಲಿ ಮದುವೆಗೆ ಬಂದದು” ಹೇಳಿ ಹೇಳಿದವು .
ಅದು ಸಮ ,ಹಳ್ಳಿಲಿ ಹುಟ್ಟಿ ಬೆಳದೋರಿನ್ಗೆ ಪೇಟೆ ಹೊಂದಾಣಿಕೆ ಅಪ್ಪದು ಕಷ್ಟವೇ ! ಅದು ಬೇರೆ ವಿಚಾರ .ಎನಗೆ ಅವು ಬಳಕೆ ಮಾಡಿದ “ಪೊಡುಂಬು” ಹೇಳುವ ಪದ ರಜ್ಜ ವಿಶಿಷ್ಟ ಹೇಳಿ ಅನ್ಸಿತ್ತು. ಅಂಬಗ ಆನು “ಪೊಡುಂಬು ಹೇಳ್ರೆ ಎಂತ ಅಜ್ಜ “ಹೇಳಿ ಕೇಳಿದೆ. ಅಷ್ಟಪ್ಪಗ ಅವು “ಬಲ ಇಲ್ಲೆ,ಗಟ್ಟಿತನ ಇಲ್ಲೆ,ಸಾರ ಇಲ್ಲೆ”ಹೇಳುವ ಅರ್ಥಂಗಳ ಹೇಳಿದವು !
“ಅವ° ಬರೀ ಪೊಡುಂಬು ,ಎಲ್ಲಾ ಬಾಯಿಲಿ ಅಷ್ಟೇ ,ಒಳಂದ ಎಂತದೂ ಇಲ್ಲೆ” ಈ ಮಾತಿನ ಸಣ್ಣಾ ದಿಪ್ಪಗಂದ ಸುಮಾರು ಸರ್ತಿ ಕೇಳಿದ್ದೆ . ಕೋಳ್ಯೂರು ಕಡೆಯ ಹವ್ಯಕ ಭಾಷೆಲಿ ಈ ನುಡಿಗಟ್ಟಿನ ಬಳಕೆ ಇದ್ದು. ಅವಂದು ಬರೀ ಪೊಡು೦ಬುತನ/ಪೊಡುಂಬು ಬುದ್ಧಿ ಹೇಳಿದರೆ ಅವಂಗೆ ಬುದ್ಧಿವಂತಿಕೆ ಏನೂ ಇಲ್ಲೆ ,ಬುದ್ಧಿವಂತಿಕೆ ಸಾಲ ಹೇಳಿ ಅರ್ಥ .ಆದರೆ ಈ ಶಬ್ದದ ಅರ್ಥ ಎಂತದು ?ಇದರ ಮೂಲ ಎಂತದು ಹೇಳಿ ಗೊಂತಿತ್ತಿಲ್ಲೆ.ಈಗ ಇವು ಪೇಟೆಯ ಒಳ ಎಂತ ಇಲ್ಲೆ ಬರೀ ಪೊಡುಂಬು ಹೇಳಿ ಹೇಳಿದವು! ಅಲ್ಲಿಂದ ಬಂದ ಮೇಲೂ “ಅಂಬಗ ಪೊಡುಂಬು ಹೇಳಿರೆ ಎಂತ” ಹೇಳಿ ಎರಡು ಮೂರು ದಿನಂದ ಆಲೋಚನೆ ಮಾಡಿಗೊಂಡು ಇತ್ತಿದ್ದೆ.
ಎಂಗಳ ಮನೆ ಎದುರಿನ ಮಾರ್ಗದ ಆಚ ಹೊಡೆಲಿ ಒಂದೆರಡು ದಿನ ಮೊದಲು ಯಾವುದೋ ಹೊಸ ಅಂಗಡಿ ಹಾಕಿತ್ತಿದವು .ಆರು ?ಎಂತ ಅಂಗಡಿ ಹೇಳಿ ಆನು ಗಮನಿಸಿತ್ತಿಲ್ಲೆ.ನಿನ್ನೆ ಹೊತ್ತಪ್ಪಗ ಟೆರೇಸ್ ಹತ್ತಿ ಆ ಕಡೆ ಈ ಕಡೆ ಗೆಬ್ಬಾಯಿಸಿಗೊಂಡು ಇಪ್ಪಗ ಎದುರಣ ಹೊಸ ಅಂಗಡಿ ಕಂಡತ್ತು. ಅದು ಒಂದು ಮರ ಕೆಲಸದ ಅಂಗಡಿ .ಆನು ನೋಡುವಗ ಎದುರಿನ ಅಂಗಡಿಯ ಮರ ಕೆಲಸದೋರು ಒಂದು ದೊಡ್ಡ ಮರದ ತುಂಡಿಂದ ಸುಮಾರು ಭಾಗವ ಗೀಸಿ ಗೀಸಿ ತೆಗೆತ್ತಾ ಇತ್ತಿದವು.
ಸಣ್ಣಾದಿಪ್ಪಗ ಎಂಗಳ ಮನೆ ಕೆಲಸಕ್ಕೆ ಬಂದ ಆಚಾರಿಗಳುದೆ ಹೀಂಗೆ ಮರದ ತುಂಡಿಂದ ಸುಮಾರು ಭಾಗವ ತೆಗೆತ್ತಾ ಇತ್ತಿದವು .ಅಂಬಗ ಹೀಂಗೆ ಎಂತಕೆ ಮಾಡುದು ಹೇಳಿ ಕೇಳಿಪ್ಪಗ “ಅದು ಬೊಳುಂಬು ಇಪ್ಪ ಜಾಗೆ ,ಅದು ಎಳತ್ತು ಜಾಗೆ ,ಅದರ ಹಾಂಗೆ ಬಿಟ್ರೆ ಆ ಜಾಗೆ ಕು೦ಬಾಗಿ ಮಂಚ, ಕುರ್ಚಿ ಹಾಳಾವುತ್ತು ,ಅದಕ್ಕೆ ಆ ಜಾಗೆಯ ತೆಗದು ಹಾಕುತ್ತವು “ಹೇಳಿ ಎನ್ನ ಅಜ್ಜ ಹೇಳಿತ್ತಿದವು. ಈಗ ಈ ಅಂಗಡಿಯೋರುದೆ ಹಾಂಗೆ ಬೊಳು೦ಬಿನ ತೆಗೆತ್ತಾ ಇಪ್ಪದು ಆದಿಕ್ಕು ಹೇಳಿ ಅನ್ಸಿತ್ತು ಎನಗೆ .
ಬೊಳುಂಬು ಇಪ್ಪ ಮರ ನೋಡುಲೆ ಮಾತ್ರ ದಪ್ಪ ಕಾಣುತ್ತು .ಅದು ಒಳ ಗಟ್ಟಿ ಇಲ್ಲೆ.ಬೊಳುಂಬು ಎಲ್ಲ ತೆಗದರೆ ಆ ಮರ ತುಂಡಿಲಿ ಉಪಯೋಗಕ್ಕೆ ಸಿಕ್ಕುವ ಭಾಗ ಬರೀ ರಜ್ಜ .ಎಂತಕೋ ಏನೋ ಎನಗೆ ಅಂಬಗ ಬೊಳುಂಬು ಹೇಳುದೆ ಕಾಲಾಂತರಲ್ಲಿ ಪೊಡುಂಬು ಹೇಳಿ ಬದಲಾಗಿ ಈಗ ಎಳಸು /ಕಡಮೆ ಬುದ್ಧಿ ಹೇಳುವ ಅರ್ಥಲ್ಲಿ ಬಳಕೆಗೆ ಬಂದಿಕ್ಕಾ ಏನೋ ಹೇಳಿ ಅನ್ಸಿತ್ತು.ಜೊತೆಗೆ ಒಳ ಟೊಳ್ಳು/ಗಟ್ಟಿ ಇಲ್ಲೆ/ಸತ್ವ ಇಲ್ಲೆ ಹೇಳುವ ಅರ್ಥಲ್ಲಿ ಬಳಕೆಗೆ ಬಂತೋ ಏನೋ ಹೇಳಿ ಅನ್ಸಿತ್ತು. ಭಾಷಾ ವಿಜ್ಞಾನದ ಆಧಾರಲ್ಲಿ ಹೇಳುದಾದರೆ ಳ ಮತ್ತು ಡ ನಡುವೆ ವರ್ಣ ವ್ಯತ್ಯಯ ಸಾಮಾನ್ಯ (ಉದಾ-ಇಳಾ-ಇಡಾ,ಕುಮ್ಬುಳ-ಕುಮ್ಬುಡ,ಬಳುಸು- ಬಡುಸು)ಅಪರೂಪಕ್ಕೆ ಪ ಬ ನಡುವೆ ವರ್ಣ ವ್ಯತ್ಯಯ ಇದ್ದು (ಉದಾ -ಪಡಿವಾರ-ಬಡಿವಾರ )ಹಾಂಗಾಗಿ ಬೊಳುಂಬು- ಪೊಡುಂಬು ಹೇಳಿ ಬಪ್ಪ ಸಾಧ್ಯತೆ ಇದ್ದು . ಪೊಟ್ಟು ಹಮ್ಮು /ಒಣ ಹಮ್ಮು ಹೇಳುದರಿಂದಲೂ ಪೊಡುಂಬು ಪದ ಬಂದಿಪ್ಪ ಸಾಧ್ಯತೆ ಇದ್ದು , ನಿಂಗ ಎಲ್ಲ ಎಂತ ಹೇಳ್ತೀರಿ ?ನಿಂಗಳ ಅಭಿಪ್ರಾಯವ ತಿಳುಸಿ.

Thursday, 14 November 2013

ಗಿಳಿ ಬಾಗಿಲು (ಹವ್ಯಕ ಬ್ಲಾಗ್ ) ಅಲ್ಪ ಒಳುದು ಹಾಳು ಹಲಾಕು ಆಯಿದು




“ಅಡಿಗ್ಗೆಯೋವು ಅಲ್ಪ ಮಾಡಿ ಹಾಕಿದ್ದವು . ಅಲ್ಪ ಒಳುದು  ಹಾಳು ಹಲಾಕು ಆಯಿದು ಹೇಳುವ ಮಾತಿನ ನಮ್ಮ ಭಾಷೆಲಿ ಸಾಮನ್ಯಾವಾಗಿ ಉಪಯೋಗಿಸುತ್ತವು.ಅನುಪತ್ಯ ಮಾಡಿ ಅಪ್ಪಗ ಕೆಲವು ಸರ್ತಿ  ಅಡಿಗೆಯೋರ ಅಂದಾಜು ತಪ್ಪಿ ಅಶನ, ಕೊದಿಲು,ಮೇಲಾರಂಗ ತುಂಬಾ ಒಳುದು ಹಾಳಪ್ಪದು ಇದ್ದು .ಕೆಲವು ಸರ್ತಿ ಗ್ರೇಶಿದಷ್ಟು ಜನಂಗ ಬಾರದ್ದೆ ಒಳಿವದು ಇದ್ದು .ಇಂಥ ಸಂದರ್ಭಲ್ಲಿ ತುಂಬ ಒಳುದು ಹಾಳಾಯಿದು ಹೇಳುದರ ಅಲ್ಪ /ಅಲ್ಪಾ ಒಳುದು ಹಾಳಾಯಿದು ಹೇಳಿ ಹೇಳ್ತವು.
ಕನ್ನಡದ ಪ್ರಾದೇಶಿಕ ಉಪ ಭಾಷೆ ಹೇಳಿಯೇ ಗುರುತಿಸಲ್ಪಡುವ ನಮ್ಮ ಭಾಷೆಲಿ  ಬಳಕೆಲಿ ಇಪ್ಪ ಕೆಲವು ಕನ್ನಡ ಪದಂಗೊಕ್ಕೆ ನಮ್ಮ ಭಾಷೆಲಿ ವಿರುದ್ಧವಾದ ಅರ್ಥ ಬಳಕೆಲಿ ಇದ್ದು .ಇಂತಾದ್ದೆ ಒಂದು ಪದ ಅಲ್ಪ ಹೇಳುದು .ಕನ್ನಡಲ್ಲಿ ಅಲ್ಪ ಹೇಳ್ರೆ  ಕಮ್ಮಿ  ಹೇಳಿ ಅರ್ಥ .ಆದರೆ ನಮ್ಮ ಭಾಷೆಲಿ ತುಂಬ ಹೇಳುವ ಅರ್ಥಲ್ಲಿ ಇದು ಬಳಕೆ ಆವುತ್ತು “.ಅವೆಂತ ಒಂದೆರಡು ಜನಂಗಳ?ಅವು ಅಪ್ಪಚ್ಚಿ ದೊಡ್ಡಪ್ಪ ಮಾವ ಅತ್ತೆ ಮಕ್ಕ ಮರಿಗ ಹೇಳಿ ಅಲ್ಪ ಇದ್ದವು” ಹೇಳಿ ದೊಡ್ಡ ಕುಟುಂಬದ ಬಗ್ಗೆ ಹೇಳುದು ಇದ್ದು .
 ಸುತ್ತ ಮುತ್ತ ಎಲ್ಲಿ ನೋಡ್ರೂ ಬ್ಯಾರಿಗಳೇ ಕಾಂತಾ ಇಪ್ಪ ಕನ್ಯಾನ ಉಪ್ಪಳದ ನಡುವೆ ಮನೆ ಇಪ್ಪ  ಎಂಗಳ ಬೇತದ “ಅಜ್ಜ  ಅಲ್ಪ ಸಂಖ್ಯಾತರು ಹೇಳಿ ಇವರ ದೆನಿಗೇಳುದು ಸರಿ.ಆದರೆ ಅದು ನಮ್ಮ ಭಾಷೆಯ ಅಲ್ಪ ಕನ್ನಡದ ಅಲ್ಪ ಅಲ್ಲ” ಹೇಳಿ ಎರಡು ಕೈ ಆಕಡೆ    ಕಡೆ ಬಿಡುಸಿ ಅಗಾಲ್ಸಿ ತೋರ್ಸಿ ನೆಗೆ ಮಾಡಿಗೊಂಡು ಇತ್ತಿದವು!
ಅಲ್ಪ ಹೇಳುವ ಪದಕ್ಕೆ ನುಡಿಗಟ್ಟಾಗಿ ಬಳಕೆ ಮಾಡುವಗ  ತುಂಬಾ /ಹೆಚ್ಚು ಹೇಳುವ ಅರ್ಥ ಇದ್ದರೂ ಕಮ್ಮಿ  ಹೇಳುವ  ಸರ್ತ ಅರ್ಥಲ್ಲಿಯೂ ಬಳಕೆ ಆವುತ್ತು ಕೆಲವು ಸರ್ತಿ. “ಅವು ಬರಿ ಅಲ್ಪಂಗ ಅವರ ವ್ಯವಹಾರ ಆಗ “ಹೇಳುವ ಮಾತು ನಮ್ಮ ಭಾಷೆಲಿ  ಬಳಕೆಲಿ ಇದ್ದು.ಇಲ್ಲಿ ಆ ಅಲ್ಪಂಗ ಹೇಳ್ರೆ ಅವು ರಜ್ಜ ಬುದ್ಧಿ ಇಲ್ಲದ್ದೋರು,ನೀತಿ ನಿಯತ್ತು ಇಲ್ಲದ್ದೋರು, ಸಣ್ಣ ಮನಸ್ಸಿನೋರು ಹೇಳುವ ಅರ್ಥ ಇದ್ದು.
ಎಂಗಳ ಕೋಳ್ಯೂರು ಸೀಮೆಲಿ ಅಲ್ಪ /ಅಲ್ಪಾ ಪದಕ್ಕೆ ಹೀನೆ ಅರ್ಥ ಪ್ರಚಲಿತ ಇದ್ದು .ನಿಂಗಳ ಕಡೆಲಿಯೂ ಇಕ್ಕು ಅಲ್ಲದ ?ತಿಳುಸಿ   

Thursday, 31 October 2013

ಗಿಳಿ ಬಾಗಿಲು(ಹವ್ಯಕ ಬ್ಲಾಗ್ ) -ಅವ° ರಜ್ಜ ಸಜ್ಜನ




ಎನ್ನ ಕೋಲೇಜಿಲಿ ಎನ್ನ ಹಾಂಗೆ ಲೆಕ್ಟುರು ಆಗಿಪ್ಪ ಮೇಡಂ ಒಂದಕ್ಕೆ ನಮ್ಮ ಭಾಷೆ ಸುಮಾರಾಗಿ ಮಾತಾಡುಲೆ ಬತ್ತು .ಒಂದಿನ ಎನ್ನತ್ತರೆ ಬಂದು “ಸಜ್ಜನ “ ಹೇಳ್ರೆ ಎಂತ ಅರ್ಥ ಹೇಳಿ ಕೇಳಿತ್ತು .ಇಷ್ಟು ಸುಲಭದ ಪದದ ಅರ್ಥ ಇದಕ್ಕೆ ಗೊಂತಿಲ್ಲೆಯ ಹೇಳಿ ಮನಾಸಿಲಿ ಜ್ಹಾನ್ಸಿಕೊಂಡು “ಸಾಧು ,ಒಳ್ಳೆಯ ವ್ಯಕ್ತಿ” ಹೇಳಿ ಅರ್ಥ ಹೇಳಿದೆ .ಅಷ್ಟಪ್ಪಗ ‘ಸ್ವಲ್ಪ ‘ಹೇಳ್ರೆ ಎಂತ ಕೇಳಿತ್ತು !ಅರೆ !ಹೀಂಗಿಪ್ಪ ಸುಲಭದ ಪದಂಗಳ ಅರ್ಥ ಕೇಳಕ್ಕಾದರೆ ಇದರಲ್ಲಿ ಏನೋ ಇದ್ದು ಹೇಳಿ ವಾಸನೆ ಸಿಕ್ಕಿತ್ತು ಎನಗೆ .ಚೂರು ಜಾಗ್ರತೆಲಿ “ತುಸು ,ಕಡಿಮೆ ,ಅಲ್ಪ” ಇತ್ಯಾದಿ ಅರ್ಥ ಹೇಳಿದೆ .ಸರಿ ಹಾಂಗಾದರೆ “ಸ್ವಲ್ಪ ಸಜ್ಜನ “ಹೇಳ್ರೆ ಎಂತ ಕೇಳಿತ್ತು .ಸ್ವಲ್ಪ ಸಜ್ಜನ ಹೇಳುವ ಪ್ರಯೋಗ ಎನಗೆ ಗೊಂತಿದ್ದಾ೦ಗೆ ಕನ್ನಡಲ್ಲಿ ಇಲ್ಲೆ ಹೇಳಿ ಹೇಳಿದೆ. ಸರಿ ಈ ಬಗ್ಗೆ ನಿನಗೆ ಸಂಶಯ ಹೇಳಿ ಕೇಳಿದೆ .ಅಷ್ಟೊತ್ತಿಂಗೆ ಅದು ಹೇಳಿತ್ತು “.ಅದು ನಿಂಗಳ ಭಾಷೆಲಿ “ಸ್ವಲ್ಪ ಸಜ್ಜನ ” ಹೇಳಿ ಇದ್ದಲ್ಲ ಅದರ ಅರ್ಥ ಬೇಕಾಗಿತ್ತು ಹೇಳಿ ” ಎಂಗಳ ಭಾಷೆಲಿದೆ ಸ್ವಲ್ಪ ಸಜ್ಜನ ಹೇಳಿ ಇಲ್ಲೆ ಹೇಳಿ ಹೇಳಿದೆ .”ಇದ್ದು ಎನ್ನ ಎದುರು ಮನೆಯ ನಿಂಗಳ ಜಾತಿಯ (ಹವ್ಯಕ )ಹೆಮ್ಮಕ್ಕ ಆರನ್ನೋ “ಅವ° ಸ್ವಲ್ಪ ಸಜ್ಜನ ಹೇಳಿ ಹೇಳ್ತಾ ಇತ್ತು “ಹೇಳಿ ಹೇಳಿತ್ತು .ಅಷ್ಟಪ್ಪಗ ಎನಗೆ ರಜ್ಜ ತಲೆಗೆ ಹೋತು !”ರಜ್ಜ ಸಜ್ಜನ “ಹೇಳಿ ಹೇಳಿದ್ದಾ ?ಹೇಳಿ ಕೇಳಿದೆ .ಅಪ್ಪು ಹೇಳಿ ಅದು ಹೇಳಿತ್ತು .ಅದು ನಮ್ಮ ಭಾಷೆಯ ರಜ್ಜ =ಸ್ವಲ್ಪ ಹೇಳುವ ಅರ್ಥವ ತೆಕ್ಕೊಂಡು ರಜ್ಜ ಸಜ್ಜನ ಹೇಳುದರ ಸ್ವಲ್ಪ ಸಜ್ಜನ ಹೇಳಿ ತರ್ಜುಮೆ ಮಾಡಿಗೊಂಡು ಅದರ ಅರ್ಥ ಕೇಳಿತ್ತು !ಸಜ್ಜನ ಹೇಳಿರೆ ಒಳ್ಳೆಯ ಗುಣದೋನು ಹೇಳಿ ಗೊಂತಿತ್ತು ! ರಜ್ಜ ಹೇಳ್ರೆ ಸ್ವಲ್ಪ ಹೇಳುವ ಅರ್ಥವೂ ಅದಕ್ಕೆ ಗೊಂತಿತ್ತು ,ಆದರೆ ರಜ್ಜ ಸಜ್ಜನ =ಸ್ವಲ್ಪ ಸಜ್ಜನ ಹೇಳ್ರೆ ಎಂತ ಹೇಳಿ ಗೊಂತಾಯಿದಿಲ್ಲೆ !
ಅಪ್ಪು ! ಸಾಧು ಸಜ್ಜನ ಹೇಳುವ ಪದಂಗಳ ಅರ್ಥ ಕನ್ನಡ ಗೊಂತಿಪ್ಪ ಎಲ್ಲೋರಿಂಗು ಗೊಂತಿರ್ತು .ಆದರೆ ಆವ° ರಜ್ಜ ಸಜ್ಜನ ,ಅವ° ಬರೀ ಸಜ್ಜನ ಹೇಳ್ರೆ ಎಂತ ಅರ್ಥ ಹೇಳಿ ಗೊಂತಾಯ್ಕಾರೆ ನಮ್ಮ ಭಾಷೆಗೇ ಬರಕ್ಕು .ಆವ° /ಅದು ರಜ್ಜ ಸಾಧು ಹೇಳಿ ನಮ್ಮಲ್ಲಿ ಬಳಕೆ ಇಲ್ಲೆ ; ಆದರೆ ಅದು ಬರೀ ಸಾಧು ಕೂಸು ಹೇಳುದು ಬಳಕೆಲಿದ್ದು .ಇಲ್ಲಿ ಸಾಧು ಹೇಳ್ರೆ ನಿಜವಾಗಿಯೂ ಸಾತ್ವಿಕ ಗುಣದ್ದು ಹೇಳಿ ಅರ್ಥ .ಆದರೆ ಕನ್ನಡಲ್ಲಿ ಸಾಧು ಪದದ ಒಟ್ಟಿಂಗೆ ಬಪ್ಪ ಸಜ್ಜನ ಹೇಳುವ ಪದಕ್ಕೆ ಎಂಗಳ ಕಡೆ ನಮ್ಮ ಭಾಷೆಲಿ ಒಳ್ಳೆಯೋನು ಹೇಳುವ ಅರ್ಥ ಇಲ್ಲೆ .ಅವ° ರಜ್ಜ ಸಜ್ಜನ ,ಅದು ರಜ್ಜ ಸಜ್ಜಂತಿ ಹೇಳ್ರೆ ಅವಕ್ಕೆ ರಜ್ಜ ಬುದ್ಧಿವಂತಿಕೆ ಕಮ್ಮಿ ಹೇಳಿ ಅರ್ಥ . ರಜ್ಜ ಹೆಡ್ಡು ಹೇಳುವ ಬದಲು ರಜ್ಜ ಸಜ್ಜಂತಿ ಹೇಳುದು.ಇನ್ನು ಅವ° ಬರೀ ಸಜ್ಜನ ,ಅದು ಬರೀ ಸಜ್ಜಂತಿ ಹೇಳುವ ಮಾತಿನ ಒಟ್ಟಿಂಗೆ ಅವಂಗೆ /ಅದಕ್ಕೆಬೇರೆಯೋರ ಕುತಂತ್ರಂಗ ಕೊಕ್ಕೆಗ ಎಲ್ಲ ಅರಡಿಯ ಹೇಳುವ ಮಾತುದೆ ಬತ್ತು .ಇಲ್ಲಿ “ಅವಂಗೆ /ಅದಕ್ಕೆ ಇವರ ಕುತಂತ್ರಂಗ ಕೊಕ್ಕೆಗ ಎಲ್ಲ ಅರಡಿಯ” ಹೇಳುವ ಮಾತು, “ಅವ° ಬರೀ ಸಜ್ಜನ ,ಅದು ಬರೀ ಸಜ್ಜಂತಿ ” ಹೇಳುವ ಮಾತಿನ ಅರ್ಥವ ಸ್ಪಷ್ಟ ಪಡುಸುತ್ತು .ಬರೀ ಸಜ್ಜನ /ಸಜ್ಜಂತಿ ಹೇಳುವಲ್ಲಿ ವ್ಯವಹಾರ ಜ್ಞಾನ ಕಮ್ಮಿ ಹೇಳುದರ ಒಟ್ಟಿಂಗೆ ಒಳ್ಳೆಯ ಗುಣದೋರು ಹೇಳುವ ಭಾವ ಎದ್ದು ಕಾಣುತ್ತು .
ಆದರೆ ಎಂಗಳ ಕಡೆ ನಮ್ಮ ಭಾಷೆಲಿ ರಜ್ಜ ಸಜ್ಜನ ,ಅದು ರಜ್ಜ ಸಜ್ಜಂತಿ ಹೇಳುವಲ್ಲಿ ಅದು ಅವ° ಒಳ್ಳೆಯ ಗುಣದೋರು ಹೇಳುವ ಭಾವ ಕಾಣುತ್ತಿಲ್ಲೆ,ಬದಲಿಂಗೆ ರಜ್ಜ ಹೆಡ್ಡು ಹೇಳುವ ಅರ್ಥವೇ ಹೆಚ್ಚು ಕಂಡು ಬತ್ತು .
ಕನ್ನಡಲ್ಲಿ ಸಜ್ಜನ ಹೇಳುವ ಪದಕ್ಕೆ ಸಂವಾದಿಯಾಗಿ ಕೋಳ್ಯೂರು ಸೀಮೆಯ ನಮ್ಮ ಭಾಷೆಲಿ ಅವ° /ಅದು ತುಂಬಾ ಸಾತ್ವಿಕ ಹೇಳುವ ಮಾತು ಬಳಕೆಲಿ ಇದ್ದು .ಅವು ತುಂಬಾ ಒಳ್ಳೆಯೋರು ,ಅದು/ಅವ° ಬಾರೀ ಸಾತ್ವಿಕ ಕೂಸು/ಮಾಣಿ ಹೇಳುವ ಮಾತಿನ ಯಾವಾಗಲು ಬಳಕೆ ಮಾಡುತ್ತವು
ಹೀಂಗಿಪ್ಪ ಸುಮಾರು ನುಡಿಗಟ್ಟುಗ ದಿನ ನಿತ್ಯ ನಮ್ಮ ಮಾತಿನ ನಡುವೆ ಬತ್ತು .ಆದರೆ ನಾವು ಅದರ ಗಮನಿಸುತ್ತಿಲ್ಲೆ.ಎಂತಕೆ ಹೇಳ್ರೆ ಅದು ನಮ್ಮ ಭಾಷೆಲಿ ಸಹಜವಾಗಿ ಇಪ್ಪದು .ಎಂಗಳ ಮೇಡಂ ಈ ಬಗ್ಗೆ ಕೇಳುವ ತನಕ ಎನಗೂ ತಲೆಗೆ ಹೋಗಿತ್ತಿಲ್ಲೆ.ಬೇರೆಯೋರು ಹೇಳಿ ಅಪ್ಪಗ, ಅಪ್ಪಲ್ಲದ ಹೇಳಿ ಅನ್ಸುತ್ತು ಅಲ್ಲದ ?ನಿಂಗ ಎಲ್ಲ ಎಂತ ಹೇಳ್ತೀರಿ ?ನಿಂಗಳ ಅಭಿಪ್ರಾಯ ತಿಳುಸಿ ,

Tuesday, 8 October 2013

ಗಿಳಿಬಾಗಿಲು(ಹವ್ಯಕ ಬ್ಲಾಗ್ )-ಎಮ್ಮೆ ಕಂಜಿ ಹಾಂಗೆ


“ಅದು ಮಾಡುದು ನೋಡು ,ನಿದಾನಕ್ಕೆ ಎಮ್ಮೆ ಕಂಜಿ ಹಾಂಗೆ ”

ಹೇಳುವ ಬೈಗಳು ನಿದಾನ ಪ್ರವೃತ್ತಿಯೋರಿ೦ಗೆ ಬಳಕೆ ಮಾಡುತ್ತವು .ಈ ಬೈಗಳಿನ  ಅರ್ಥ ಎಂತದು ಹೇಳಿ ಗೊಂತಾಯಕ್ಕಾದರೆ ಎಮ್ಮೆ ಕಂಜಿಯನ್ನೇ ನೋಡಿರಕ್ಕು .ಅದು ಬಿಟ್ಟು ಬೇರೆ ದಾರಿ ಇಲ್ಲೆ .ಎಂಗ ಸಣ್ಣಾ ದಿಪ್ಪಗ ಅಜ್ಜನ ಮನೇಲಿ ಸುಮಾರು ಎಮ್ಮೆಗಳ, ದನಗಳ ಸಾಂಕಿಗೊಂಡು ಇತ್ತಿದವು .ಅಂಬಗ ಎಮ್ಮೆಗಳ ಕಂಜಿ ಹಾಕುವ ಸಮಯ ಬಂದರೆ ಗುಡ್ಡೆಗೆ ಬಿಟ್ಟುಗೊಂಡು ಇತ್ತಿದವಿಲ್ಲೆ.ದನಗಳ ಕಂಜಿ ಹಾಕುಲೆ ಹತ್ತರೆ ಆದರೂ ಗುಡ್ಡೆಗೆ ಬಿಟ್ಟುಕೊಂಡು ಇತ್ತಿದವು .ಎಷ್ಟೋ ಸರ್ತಿ ದನಗ ಗುಡ್ಡೆಲಿಯೇ ಕಂಜಿ ಹಾಕಿ ಕಂಜಿಗಳ ನಿದಾನಕ್ಕೆ ನಡೆಸಿಗೊಂಡು ಹೊತ್ತಪ್ಪಗ ಮನೆಗೆ ಬತ್ತ ಇತ್ತಿದವು .
ಕೆಲವು ಸರ್ತಿ ಮನೆಯೋರು ಹುಡುಕ್ಕಿ ಗೊಂಡು  ಹೋಗಿ ಕಂಜಿಯನ್ನು ಅದರ ಅಬ್ಬೆಯನ್ನೂ ಎಬ್ಬಿ ಕೊಂಡು  ಬತ್ತಾ ಇತ್ತಿದೆಯ° .ಆದರೆ ಎಮ್ಮೆ ಬಗ್ಗೆ ಹೆಚ್ಚಿನ ಕಾಳಜಿ ಬೇಕಾಗಿತ್ತು .ಅದು ಮನೆಲಿಯೇ ಕಂಜಿ ಹಾಕಿದರೂ ಕೂಡಾ ಕಂಜಿಯ ನೆಗ್ಗಿ ಎಮ್ಮೆಯ ಕೆಚ್ಚಲಿನ ಮೂಸಿಸಿ ಕೆಲವು ಸರ್ತಿ ಅದರ ಬಾಯಿಗೆ ಹಾಲು ಹಿಂಡಿ ರುಚಿ ಹಿಡಿಸಕ್ಕಾಗಿತ್ತು .ದನದ ಕಂಜಿಗ ಅವರಷ್ಟಕ್ಕೆ ಎದ್ದು ನಿಂದುಕೊಂಡು ಇತ್ತಿದವು ( ಈ ಮಾತು ಊರ ದನಗೊಕ್ಕೆ ಮಾತ್ರ ಅನ್ವಯ !).ಅವರಷ್ಟಕ್ಕೆ ಕೆಚ್ಚೆಲುಹುಡುಕಿ ಹಾಲು ಕುಡುಕ್ಕೊಂಡು  ಇತ್ತಿದವು .
ಎಮ್ಮೆ ಕಾಂಜಿಗ ಅಷ್ಟು ಚುರುಕು ಇರ್ತವಿಲ್ಲೆ .ಎಮ್ಮೆ ಕಂಜಿಗ ಅವರಷ್ಟಕ್ಕೆ ಎದ್ದು ನಿಂದು ಹಾಲು ಕುಡಿವಲೆ ಒಂದೆರಡು ಬೇಕಾಗಿ ಕೊಂಡು  ಇತ್ತು .ಅದರ೦ದಾಗಿಯೇ ನಿದಾನ ಪ್ರವೃತ್ತಿಯೋರಿ೦ಗೆ ಎಮ್ಮೆ ಕಂಜಿ ಹಾಂಗೆ ಹೇಳುವ ಮಾತು ಬಂದಿಕ್ಕು ಹೇಳಿ ಎನಗೆ ಅನ್ಸುತ್ತು .ಅದಲ್ಲದ್ದೆ ಚೊಕ್ಕವಾಗಿ ಕೆಲಸ ಮಾಡದ್ದೆ  ತಚಿ ಪಿಚಿ ಮಾಡುವೊರಿಂಗು ಎಮ್ಮೆ ಕಂಜಿ ಹಾಂಗೆ ಹೇಳುವ ಮಾತಿನ ಬಳಕೆ ಮಾಡ್ತವು .ಎಮ್ಮೆ ಕಂಜಿ ಅಲ್ಲಿ ಇಲ್ಲಿ ಬಿದ್ದು ಮನುಗುವ ಕಾರಣ ಈ ಮಾತು ಬಂದಿಕ್ಕು ಹೇಳಿ ಎನಗೆ ಅನ್ಸುತ್ತು .~ಜ್ಎಮ್ಮೆಗಳುದೆ ಪಳ್ಳದ ಕೆಸರು ನೀರಿಲಿ ಬಿದ್ದು ಕೊಂಡರೆ ಅಲ್ಲಿಂದ ಹೆರ ಹೆರಡುಸುದು ಬಾರೀ ಬ೦ಙದ ಕೆಲಸ .ಯಾವಾಗಲು ಮೈಲಿ ಕೆಸರು ಮೆತ್ತಿಗೊಂಡು ಇರ್ತವು .
ಹಾಂಗಾಗಿ ಈ ರೀತಿಯ ತಿರಸ್ಕಾರದ /ನಿಂದನೆಯ ಮಾತು ಬಳಕೆಗೆ ಬಂದಿಕ್ಕು ಹೇಳಿ ಎನಗೆ ಅನ್ಸುತ್ತು ,ನಿಂಗೊ ಎಲ್ಲೊರು ಎಂತ ಹೇಳುತ್ತಿ ?ನಿಂಗಳ ಅಭಿಪ್ರಾಯ ತಿಳಿಸಿ .