Wednesday, 23 July 2014

ಗಿಳಿ ಬಾಗಿಲು (ಹವ್ಯಕ ಬ್ಲಾಗ್ )-30 ಕಾಡ ಸೊಪ್ಪು ತೋಡ ನೀರು -ಡಾ.ಲಕ್ಷ್ಮೀ ಜಿ ಪ್ರಸಾದ

ಮೊನ್ನೆ ಒಂದಿನ ಪೇಪರ್ ಓದುವಾಗ ಒಂದು ವಿಷಯ ಗಮನಕ್ಕೆ ಬಂತು .ಅದರಲ್ಲಿ ಒಂದಷ್ಟು ವಿಜ್ಞಾನಿಗಳ ಸಂಶೋಧನೆ ಬಗ್ಗೆ ಮಾಹಿತಿ ಇತ್ತು .
ನಾವು ಇಷ್ಟರತನಕ ಶುದ್ಧಗೊಳಿಸಿದ ಆಹಾರ ತಿನ್ನಕ್ಕು ,ಆಹಾರಲ್ಲಿ ಬ್ಯಾಕ್ಟೀರಿಯಂಗ ಇದ್ದರೆ ಆರೋಗ್ಯಕ್ಕೆ ಹಾನಿ ಹೇಳುದರ ಕೇಳಿಗೊಂಡು ಬಂದದು ಅನ್ನೇ.ಆದರೆ ಅದರಲ್ಲಿ ವಿಜ್ಞಾನಿಗ ಆಹಾರಲ್ಲಿ ಒಂದಷ್ಟು ಜೀವಿಗಳ ಸೇರಿಸಿ ತಿಮ್ಬದು ಒಳ್ಳೇದು ,ಆರೋಗ್ಯಕ್ಕೆ ಸಣ್ಣ ಪ್ರಮಾಣದ ಬ್ಯಾಕ್ಟೀರಿಯಂಗ ಬೇಕು .ಅದರಂದಾಗಿ ರೋಗ ನಿರೋಧಕ ಶಕ್ತಿ ಹೆಚ್ಚಾವುತ್ತು ಇತ್ಯಾದಿ ಮಾಹಿತಿಗಳ ಸಂಶೋಧನೆಯ ಆಧಾರಲ್ಲಿ ಕೊಟ್ಟಿದವು .ಅದಕ್ಕೆ ಸಾಕ್ಷಿಯಾಗಿ ಯೋಗರ್ಟ್ (ಹಾಲಿನ ಕಿಣ್ವನಕ್ಕೆ ಒಳಪಡಿಸಿದ ಪೇಯ ) ಇಂದಾಗಿ ಆರೋಗ್ಯದ ಮತ್ತ ಹೆಚ್ಚು ಅಪ್ಪದರ ಬಗ್ಗೆ ವಿವರಿಸಿದ್ದವು .ಇದರ ಓದುವಗ  ಎಂಗಳ ಭಾರೀ ಪ್ರೀತಿಯ ಪೆಲತ್ತಡ್ಕ ಅಜ್ಜಿ (ಎನ್ನ ಅಪ್ಪನ ಕಿರಿಯಬ್ಬೆ,ಅಮ್ಮನ ಸೋದರತ್ತೆ ಕೂಡಾ )  ಹೇಳುತ್ತಾ ಇದ್ದ ಒಂದು ಮಾತು ನೆನಪ್ಪಾತು .

ಎನ್ನ ಅಜ್ಜಂಗೆ ಅಮ್ಮಂದೆ ದೊಡ್ದಮ್ಮಂದೆ ಇಬ್ರು ಕೂಸುಗ ಮಾತ್ರ.ಹಾಂಗಾಗಿ  ಅಜ್ಜನ ಮನೆಲಿ ಹತ್ತು ಜನ (ದೊಡ್ಡಮ್ಮನ ಮಕ್ಕ ಐದು ಜನ ,ಎಂಗ ಐದು ಜನ) ಪುಳ್ಳಿಯಕ್ಕಳದ್ದೆ ಕಾರ್ಬಾರು .ಎಂಗ ಕಲ್ಲು ಇಡ್ಕದ್ದ ಬೀಜದ ಮರ/ಮಾವಿನ ಮರಂಗ  ಆ ಊರಿಲಿ ಒಂದುದೆ ಇತ್ತಿಲ್ಲೆ.ಬೇಸಗೆ ರಜೆಲಿ ಉದಿಯಪ್ಪಗ ಅಜ್ಜಿ ಮಾಡಿದ  ದೋಸೆಯೋ ಸೆಖೆಗೆರದ್ದೋ ತಿಂದಿಕ್ಕಿ ಕೊಕ್ಕೆದೆ ಬಟ್ಟಿದೆ ಹಿಡ್ಕೊಂಡು ಬೀಜ ಕೊಯ್ವ ನೆಪಲ್ಲಿ ಮನೆಂದ ಎಲ್ಲರೂ ಪರಾರಿ ಅಪ್ಪದು ,ನಾಲ್ಕು ಬೀಜ ಕೊಯ್ದ ಹಾಂಗೆ ಮಾಡಿಕ್ಕಿ ಎಂಗಳ ಕಲ್ಲು ಇಡ್ಕುವ ಗುರಿಯ ಪ್ರದರ್ಶನ ,ಕಲ್ಲು ಇಡ್ಕಿ ಬೀಜ ಹಣ್ಣಿನ ಬೀಳ್ಸುದು,ಮತ್ತೆ ಹತ್ತರೆ ಇಪ್ಪ ಮಾವಿನ ಮರಕ್ಕೆ ಕಲ್ಲು ಇಡುಕ್ಕಿ ಮಾವಿನಕಾಯಿ ಬೀಳ್ಸುದು,ಮನೆಂದ ಬಪ್ಪಗಳೇ ಉಪ್ಪು ಖಾರ ಅಜ್ಜಿಯ  ಕಣ್ಣಿಂಗೆ ಬೀಳದ್ದ ಹಾಂಗೆ ತಂದುಗೊಂಡು ಇತ್ತಿದೆಯ .ಅದರ ಹಾಕಿ ಮಾವ್ನಕಾಯಿ ತಿಂದು ಬೀಜ ಹಣ್ಣು ತಿಂದು ,ಬೆಟ್ಟು ಗೆದ್ದೆಲಿ ಪಿಲೆ(ಚಿನ್ನಿ ದಾಂಡು ?)ಆಡಿಕ್ಕಿ  ಮಧ್ಯಾಹ್ನ ಎರಡು ಗಂಟೆಗೆ ಮನೆಗೆ ಬಪ್ಪದು.ಹೋಪಗಳೇ ಅಜ್ಜಿ ಬೇಗ ಬನ್ನಿ ಹೊತ್ತು ಮಾಡ್ದಿ ಹೇಳುತ್ತ.ಆದರೂ ಎಂಗ ಬಪ್ಪದು ಎರಡು ಗಂಟೆ ಮೇಲೆಯೇ !ಎನ್ನ ಅಜ್ಜನ ಮನೆಲಿ ಪುಳ್ಳಿಯಕ್ಕಳಲ್ಲಿ ಕೂಸು ಮಾಣಿ ಹೇಳಿ ಬೇಧ ಇತ್ತಿಲ್ಲೆ,ಹಾಂಗಾಗಿ ಈ ಗುಂಪಿಲಿ ಆನುದೆ ಇತ್ತಿದೆ .

ಬೆಶಿಲಿಂಗೆ ಮನೆಗೆ ಬಂದು ಮೀವಲೆ ಹೋಪದು ರಜ್ಜವೇ ರಜ್ಜ ಹೊತ್ತು ಹೇಳಿ ಅಜ್ಜಿಯ ಪುಸಲಾಯಿಸಿ ತೋಡಿನ್ಗೆ ಈಜುಲೆ ಹೋಗಿಕೊಂಡು ಇತ್ತಿದೆಯ.(ಅಂಬಗ ಬೇಸಗೆಲಿ ಕೂಡಾ ಆ ತೋಡಿನ ಗುಂಡಿಲಿ ಈಜುವಷ್ಟು ನೀರು ಇತ್ತು ,ಈಗ ಮಾರ್ಚ್ ಬರಕ್ಕಾದರೆ ನೀರು ಹರಿವದು ನಿಲ್ಲುತ್ತು )ಅಷ್ಟೊತ್ತಿಂಗೆ ಎನ್ನ ಅಜ್ಜಿ ಎಂಗೊಗೆ ವಿಶೇಷವಾಗಿ ಎನಗೂ ದೊಡ್ಡಮ್ಮನ ಮಗಳು ತಂಗೆಗೂ ತಲೆ ಚೆಂಡಿ ಮಾಡಡಿ ಹೇಳಿ ಹೇಳಿಗೊಂದು ಇತ್ತಿದ.ಎಂಗ ಹೂ0ಕುಟ್ಟಿಕ್ಕಿ ಆಚೊಡೆ ಹೋಗಿ ಈಜುವ ಮೀವ ನೆಪಲ್ಲಿ ನೀರಿಲಿ ಮುಳುಗಿಕೊಂಡು ಇತ್ತಿದೆಯ.

ಎಂಗ ಗಂಟೆ ಮೂರು ಆದರೂ ಮಿಂದು ಬಾರದ್ದೆ ಅಪ್ಪಗ ಅಜ್ಜಿ ಕೋಲು ಹಿಡುಕ್ಕೊಂಡು ಬಂದಪ್ಪಗ ಓಡಿ  ಹೋಗಿ ಮನೆ ಸೇರಿ ಕೊಂಡು ಇತ್ತಿದೆಯ .

ಕೆಲವು ಸರ್ತಿ ಎಂಗೊಗೆ ಶೀತ ಜ್ವರ ಎಲ್ಲ ಬಂದುಕೊಂಡು ಇತ್ತಿದು. ಎನ್ನ ಪೆಲತ್ತಡ್ಕ ಅಜ್ಜಿ ಬಂದಿಪ್ಪಗಳುದೆ ಹೀಂಗೆ ಆಗಿಕೊಂಡು ಇತ್ತು.ಒಂದು ಸರ್ತಿ ಎಂಗೊಗೆ ಎಲ್ಲೊರಿಂಗೂ ಜ್ವರ ಬಂತು .ಅಂಬಗ ಎನ್ನ ಅಜ್ಜಿ ಪೆಲತ್ತಡಕ ಅಜ್ಜಿ ಹತ್ರೆ ಈ ಮಕ್ಕ ಒಂದುದೆ ಹೇಳಿದ್ದು ಕೇಳ್ತವಿಲ್ಲೇ,ಬೆಶಿಲಿಂಗೆ ಸೊಕ್ಕಿಕ್ಕಿ ಬಂದು ತೋಡ ನೀರಿಲಿ ಆಡುತ್ತವು .ಅಜ್ಜ ನೋಡಿಯೂ ನೋಡದ್ದ ಹಾಂಗೆ ಸುಮ್ಮನಿದ್ದವು (ಅಜ್ಜಂದು ಅಪರೊಕ್ಷವಾಗಿ ಎಂಗೊಗೆ ಬೆಂಬಲ ಇತ್ತು !)ಇತ್ಯಾದಿಯಾಗಿ ದೂರು ಹೇಳಿಗೊಂಡು ಇತ್ತಿದ.ಅಂಬಗ ಪೆಲತ್ತಡ್ಕ ಅಜ್ಜಿ "ಮಕ್ಕ ಹಾಂಗೆ ಇರಕ್ಕು ಲಕ್ಷ್ಮೀ   (ಎನ್ನ ಅಜ್ಜಿಯ ಹೆಸರು ಲಕ್ಷ್ಮೀ ಹೇಳಿ ,ಹಾಂಗಾಗಿಯೇ ಎನ್ನ ಹೆಸರು ಕೂಡ ಅದೇ)ಮಕ್ಕ ಕಾಡ ಸೊಪ್ಪು ತೋಡ ನೀರು ಹೇಳಿ ಬೆಳೆಯಕ್ಕು.ಹಾಂಗೆ ಬೆಳದರೆ ಅವಕ್ಕೆ ಎಲ್ಲವನ್ನು ತಡಕ್ಕೊಂಬ ಶಕ್ತಿ ಬಪ್ಪದು .ಮಕ್ಕಳ ಅತೀ ಜಾಗ್ರತೆ ಮಾಡುಲಾಗ ,ರಜ್ಜ ಮಳೆಲಿ ನೆನೆಯಕ್ಕು ,ಬೆಶಿಲಿಂಗೆ ಹೊಯಕ್ಕು ಸಿಕ್ಕಿದ್ದು ತಿನ್ನಕ್ಕು ಒಂದೆರಡು ಸರ್ತಿ ರಜ್ಜ ಶೀತ ಅಕ್ಕು .ಆದರೆ ಅವು ಗಟ್ಟಿ ಮುಟ್ಟಾಗಿ ಬೆಳೆತ್ತವು,ಶೀತ ಆದರೆ ಕುಂಕುಮ ಬೆಶಿ ಮಾಡಿ ನೆತ್ತಿಗೆ ಹಾಕಿ,ಮತ್ತೆ ಬೆಶಿ ಹಾಲಿನಗೆ ಒಂದು ಚಿಟಿಕೆ ಅರಿಶಿನ ಹಾಕಿ ಕುಡಿವಲೆ ಕೊಡು .ಅರ್ಧ ಗಂಟೆಲಿ ಕಮ್ಮಿ ಅವುತ್ತಿದ  ಹೇಳಿ" ಅಜ್ಜಿಗೆ ಸಮಾಧಾನ ಮಾಡಿಕೊಂಡು ಇತ್ತಿದವು .

ನಮ್ಮ ಹಿರಿಯರು  ಶಾಲೆ ಮೆಟ್ಲು ಹತ್ತದ್ದರೂ ,ಯಾವ ಸಂಶೋಧನೆ ಮಾಡದ್ದರೂ ಅವರಲ್ಲಿ ತುಂಬಾ ಅನುಭವ ಇತ್ತು ,ಜ್ಞಾನ ಇತ್ತು ,ಹಾಂಗಾಗಿ  ಈಗ ವಿಜ್ಞಾನಿಗ ಹೇಳಿದ ವಿಚಾರ ಅವಕ್ಕೆ ಅಂದೇ ಗೊಂತಿತ್ತು ,ಹಾಂಗಾಗಿಯೇ ಕಾಡ ಸೊಪ್ಪು ತೋಡ ನೀರು ಹೇಳುವ ಮಾತು ಬಳಕೆಗೆ ಬಂದಿರೆಕ್ಕು ಅಲ್ಲದ ?

ಗಿಳಿ ಬಾಗಿಲು(ಹವ್ಯಕ ಬ್ಲಾಗ್ )-29 ಬೇಳೆಗೆ ಮಣ್ಣು ಉದ್ದಿದ ಹಾಂಗೆ -ಡಾ.ಲಕ್ಷ್ಮೀ ಜಿ ಪ್ರಸಾದ

ಆನು ಇಂದು ಅಮ್ಮಂಗೆ ಫೋನ್ ಮಾಡಿ ಅಪ್ಪಗ ಅಭಿ ಓಡಿ ಬಂದು ಫೋನ್ ನೆಗ್ಗಿತ್ತು ,ಅದರದ್ದು ಮನೆಲಿ “ಆನು ಫೋನ್ ನೆಗ್ಗುದು ಹೇಳಿ “ಯಾವಾಗಲು ಗಲಾಟೆ !ಅಭಿ ಹೇಳಿರೆ ಎನ್ನ ತಮ್ಮನ ಮಗಳು ,ಮೂರು ವರ್ಷದ ಸಣ್ಣ ಕೂಸು ,ಮಾತಿನ ಮಲ್ಲಿ .ಫೋನ್ ನೆಗ್ಗಿ ಹಲೋ ಹೇಳಿತ್ತು .ಎಂತ ಮಾಡುತ್ತಾ ಇದ್ದೆ ಅಭಿ,ಉಂಡಾತ ?ಹೇಳಿ ಕೊಂಡಾಟಲ್ಲಿ ಕೇಳಿದೆ .
ಆನು ತುಂಬಾ ಉಂಡಿದೆ ಹೇಳಿತ್ತು .,ಅದು ಎಂತದುದೆ ಸರಿಯಾಗಿ ಉಂಡು ತಿಂದು ಮಾಡುತ್ತಿಲ್ಲೆ (ಈಗಣ ಎಲ್ಲ ಮಕ್ಕಳದ್ದೂ ಇದೇ ಕಥೆ ಅನ್ನೇ ) ಹಾಂಗೆ ಸಪೂರಕ್ಕೆ ಸಣ್ಣಕ್ಕೆ ಇದ್ದು ನೋಡುಲೆ ,ಕಾರ್ಬಾರು ಮಾತ್ರ ಗುಡ್ಡೆ ಅಷ್ಟು ಇದ್ದು ,ಅದು ಬೇರೆ ವಿಚಾರ .ಎಂತದೂ ಉಂಡು ತಿಂದು ಮಾಡದ್ದೆ ಅದರಮ್ಮನ ಬೊಡಿಸುವ ಜೆನ ತುಂಬಾ ಉಂಡಿದೆ ಹೇಳುವಗ ನೆಗೆ ಬಂತು ಎನಗೆ .
ಮತ್ತೆ ಅಮ್ಮ ಫೋನ್ ತೆಕ್ಕೊಂಡ .ಹೀಂಗೆ ಮಾತಾಡುವಾಗ ಅಮ್ಮನತ್ರೆ ಹೇಳಿದೆ ಅಭಿ ತುಂಬಾ ಉಂಡಿದೆ ಹೇಳಿತ್ತು ,ಉಂಡು ತಿಂದು ಮಾಡುತ್ತಾ ?ಗೆನ ಆಯಿದ ಈಗ ?ಹೇಳಿ ಕೇಳಿದೆ .”ಉಂಬ ಕಥೆ ಹೇಳಿ ಪ್ರಯೋಜನ ಇಲ್ಲೆ .ಆದರೆ ರಜ್ಜ ಗೆನ ಆಗಿತ್ತು ”ಬೇಳೆಗೆ ಮಣ್ಣು ಉದ್ದಿದ ಹಾಂಗೆ” ,ಮತ್ತೆ ಮೊನ್ನೆ ಎರಡು ದಿನ ಶೀತ ಜ್ವರ ಬಂತು ಮತ್ತೆ ಪುನ ಹಾಂಗೆ ಬಚ್ಚಿದ್ದು” ಹೇಳಿ ಹೇಳಿದ ಅಮ್ಮ .
ಅಷ್ಟಪ್ಪಗ ಅಮ್ಮ ಮಾತಿನ ನಡುಗೆ ಉಪಯೋಗಿಸಿದ ಬೇಳೆಗೆ ಮಣ್ಣು ಉದ್ದಿದ ಹಾಂಗೆ ಹೇಳುವ ನುಡಿಗಟ್ಟು ಎನ್ನ ಗಮನಕ್ಕೆ ಬಂತು .ಆನು ಸಣ್ಣಾದಿಪ್ಪಗಲೇ ಈ ಮಾತಿನ ಕೇಳಿದ್ದೆ .ಎಂತ ಅದರ ಅರ್ಥ ಹೇಳಿ ಗಮನಿಸಿತ್ತಿಲ್ಲೆ.
ಸಣ್ಣಾದಿಪ್ಪಗ ಎನ್ನ ಅಜ್ಜನ ಮನೆಲಿ ಬೇಸಗೆಲಿ ಹಲಸಿನ ಹಣ್ಣು ತಿಂದ ಮೇಲೆ ಹೊದುಂಕುಳಿಂದ ಬೇಳೆಯ ಪೀಂಕಿಸಿ ತೆಗದು ,ಒಳ್ಳೆ ಬೇಳೆಗಳ ಬೇರೆ ಮಡುಗಿ ಕೊಂಡು ಇತ್ತಿದವು .ನಂತರ ಒಂದು ಅಳಗೆಲಿ ರಜ್ಜ ಲಾಯ್ಕ ಮಣ್ಣು ತಂದು ನೀರು ಹಾಕಿ ಮಣ್ಣು ನೀರು ತಯಾರು ಮಾಡಿಕೊಂಡು ,ಅದಕ್ಕೆ ಬೇಳೆಗಳ ಹಾಕಿ ಅದರ ಕೊಟ್ಟಗೆಯ ಮೂಲೆಲಿ ಸೊರುಗಿಕೊಂಡು ಇತ್ತಿದವು ,ಬೇಸಗೆಯ ಬೆಶಿಗೆ ನೀರು ಆವಿಯಾಗಿ ಬೇಳೆ ಹಾಂಗೆ ಒಳುಕ್ಕೊಂದು ಇತ್ತು , ಬೇಳೆಗಳ ಮೇಲೆ ತೆಳುವಾಗಿ ಕಂಡೂ ಕಾಣದ್ದ ಹಾಂಗೆ ಮಣ್ಣು ಹಿಡಿತ್ತು.
ಹಾಂಗೆ ಜತನ ಮಾಡಿದ ಹಲಸಿನ ಕಾಯಿಯ ಬೇಳೆ ಹುಟ್ಟಿಗೊಂಡು ಹಾಳಾವುತ್ತಿಲ್ಲೆ,ಮತ್ತೆ ಪೂನ್ಕೆ ಬಂದು ದೆ ಹಾಳಾವುತ್ತಿಲ್ಲೆ .ಅದರ ನಂತ್ರಣ ಬೇಸಗೆ ಬಪ್ಪಲ್ಲಿಯವರೆಗೂ ಉಪಯೋಗಿಸುಲೆ ಆಗಿಯೊಂಡು ಇತ್ತು. ನಮ್ಮ ಹೆರಿಯೋರತ್ತರೆ ಇಂಥ ಹಲವು ಉಪಾಯಂಗ ಕೌಶಲ್ಯಂಗ ಇತ್ತು .
ತೀರಾ ಬಚ್ಚಿ ಎಲ್ಕೋಟೆ ಕಟ್ಟಿದೋರು ರಜ “ಅಪ್ಪಾ ಅಲ್ಲದ ಹೇಳುವ ಹಾಂಗೆ” ಗೆನ ಆದರೆ,ಅದರ ರಜ ಗೆನ ಆಯಿದು ಬೇಳೆಗೆ ಮಣ್ಣು ಉದ್ದಿದ ಹಾಂಗೆ ಹೇಳಿ ಹೋಲಿಕೆ ಮಾಡಿ ಹೇಳುತ್ತವು .ಬೇಳೆಗೆ ತುಂಬಾ ತೆಳುವಾಗಿ ಮಣ್ಣು ಹಿಡಿವದು ಹಾಂಗೆ .ರಜ ಗೆನ ಆಗಿ, ಚೋಲಿ ಹಸಿ ಆಯಿದು ಹೇಳುದರ ಹೇಳುವಾಗ ಬೇಳೆಗೆ ಮಣ್ಣು ಉದ್ದಿದ ಹಾಂಗೆ ಹೇಳುವ ಮಾತಿನ ನಮ್ಮಲ್ಲಿ ಬಳಕೆ ಮಾಡುತ್ತವು .

Friday, 6 June 2014

ಗಿಳಿ ಬಾಗಿಲು (ಹವ್ಯಕ ಬ್ಲಾಗ್ )-28 ಉಡುಗಿ ಇಡ್ಕಿದ ಕುಂಟು ಹಿಡಿಸೂಡಿದೆ ಪ್ರಯೋಜನಕ್ಕೆ ಬತ್ತು .ಡಾ.ಲಕ್ಷ್ಮೀ ಜಿ ಪ್ರಸಾದ

ಎಂಗ ಜಾಲಿಂಗೆ ಸಿಮೆಂಟ್ ಹಾಕಿದ್ದಿಲ್ಲೆ,ಮನೆ ಮುಂದೆ 30x 25 ಅಡಿ ಯಷ್ಟು ಜಾಗೆಲಿ ರಜ್ಜ ಹೂಗಿನ ಸೆಸಿ ,ಒಂದೆರಡು ಬದನೆ ಸೆಸಿ ,ಬಸಳೆ ಬಳ್ಳಿ ಒಟ್ಟಿಂಗೆ ಒಂದು ಪಾರಿಜಾತ ,ಎರಡು ಮೂರು ಮೀಸೆ ಹೂಗಿನ ಎತ್ತರದ ಸೇಸಿಗ,ಒಂದು ಬೇನ್ಸೊಪ್ಪಿನ ಸಣ್ಣ ಮರ  ಇದ್ದು . ಸಿಮೆಂಟ್ ಹಾಕಿದರೆ ನೀರು ಇಂಗುತ್ತಿಲ್ಲೆ ,ಸೇಸಿಗ ಬೆಳೆತ್ತಿಲ್ಲೆ ,ಹಕ್ಕಿಗ ಕುಂಡೆಚ್ಚಂಗ ಗಮ್ಮತ್ತು ಮಾಡಿಕೊಂಡು ಇರಲಿ ಹೇಳಿ ಸೇಸಿಗಳ  ಹಾಂಗೆ ಬಿಟ್ಟಿದೆಯ .ನಡುಗೆ ಒಂದು ಬೋರ್ ವೆಲ್,ಅದಕ್ಕೆ ಟೆರೇಸಿನ ನೀರು ಮತ್ತು ಜಾಲಿಂಗೆ ಬಿದ್ದ ನೀರಿನ ಇಂಗುವ ಹಾಂಗೆ ಮಾಡಿದ್ದೆಯ .
ನಡಕ್ಕೊಂದು ಹೋಪ ದಾರಿಗೆ ಮಾತ್ರ ಕಲ್ಲು ಹಾಸಿದ್ದೆಯ .
ಎರಡು ದಿನಂದ ಮಳೆಯೂ ಬತ್ತಾ ಇದ್ದು .ಒಟ್ಟಿಂಗೆ ಹೆಗ್ಳಂಗಳುದೆ ಮಣ್ಣು ಎಳದು ಹಾಕಿದ್ದವು .ಹಾಂಗೆ ಮಣ್ಣು  ಎದ್ದು ಹೋಪ ದಾರಿಗೆ ಬಿದ್ದು ಕಾಲಿನ್ಗೆ ಹಿಡ್ಕೊಂಡು ಇತ್ತು .ಮನೆ ಒಳಂಗೆ ಮಣ್ಣು ಬತ್ತು ಹೇಳಿ ದಾರಿಯ  ಉಡುಗುವ ಹೇಳಿ ಹೆರಟೆ.ಅದು ಈ ಮೆದು ಕಡ್ಡಿಯ ಆಧುನಿಕ ಹಿಡಿಸೂಡಿಲಿ ಹೊವುತ್ತಾ?
ಅಂಬಗ ಎನಗೆ ಊರಿನ ಮನೆ ಒಳ ಉಡುಗಿ ಕುಂಟು ಆದ ಹಿಡಿ ಸೂಡಿಯ ಇಡುಕ್ಕದ್ದೆ ಜಾಳು ಉಡುಗುಲೆ ಹೇಳಿ ಮಡಿಕ್ಕೊಂಡು ಇದ್ದದು ನೆನಪಾತು .ಒಟ್ಟಿಂಗೆ ಉಡುಗಿ ಇಡ್ಕಿದ ಕುಂಟು ಹಿಡಿಸೂಡಿದೆ ಪ್ರಯೋಜನಕ್ಕೆ ಬತ್ತು ಹೇಳುವ ನುಡಿಗಟ್ಟುದೆ ನೆಂಪಾತು.

ಯಾವ ವಸ್ತು ಕೂಡಾ ನಿಷ್ಪ್ರಯೋಜಕ ಅಲ್ಲ .ಒಂದಲ್ಲ ಒಂದು ಪ್ರಯೋಜನ ಇದ್ದೆ ಇರುತ್ತು,ಹಾಂಗಾಗಿ ಆರ ಬಗ್ಗೆದೆ ತಾತ್ಸಾರ ಭಾವನೆ ಇಪ್ಪಲಾಗ ಹೇಳುವ ಅರ್ಥವ ಇದು ತಿಳಿಸುತ್ತು .

ಯಶಸ್ಸು ಹೇಳುದು ಯಾವಾಗಲೂ ಒಬ್ಬನ ಯತ್ನಂದ ಮಾತ್ರ ಸಿಕ್ಕುತ್ತಿಲ್ಲೆ.ಅದಕ್ಕೆ ತುಂಬಾ ಜನಂಗ ಪ್ರತ್ಯಕ್ಷವಾಗಿ ಅಪ್ರತ್ಯಕ್ಷವಾಗಿ ಸಹ ಕರಿಸಿರುತ್ತವು .ಆದರೆ ಯಾವಾಗಲು ಯಶಸ್ಸು ಮುಂಚೂಣಿಲಿ ಇದ್ದ ಅಥವಾ ಆ ಕಾರ್ಯವ ಸುರುಮಾಡಿದ ,ಕೊನೆ ಎತ್ತಿಸಿದ ಒಬ್ಬನ ಹೆಸರಿಲಿ ದಾಖಲಾವುತ್ತು.ಅಂತ ಸಂದರ್ಭಗಳಲ್ಲಿ ತನ್ನ ಕಾರ್ಯದ ಯಶಸ್ಸಿಂಗೆಸಹಕರಿಸಿದ ಎಲ್ಲರನ್ನೂ ಮರ್ತುಬಿಡುವ ಪ್ರವೃತ್ತಿ ಅನೇಕ ಜೆನಂಗಳಲ್ಲಿ ನಾವು ಕಾಣುತ್ತು.
ಇಂಥ ಸಂದರ್ಭಲ್ಲಿದೆ "ಈಗ ಅವಂಗೆ ಉಪಕಾರ ಮಾಡಿದೋರ ನೆನಪಿಲ್ಲೆ,ಉಡುಗಿ ಇಡ್ಕಿದ ಕುಂಟು ಹಿಡಿಸೂಡಿದೆ ಬೇಕಾವುತ್ತು ,ಒಂದಿನ ನಮ್ಮ ಸಹಾಯ ಬೇಕಕ್ಕು,ಅಂಬಗ ನೆನಪಕ್ಕು, ನೋಡುವ ಹೇಳಿ ಕೋಳ್ಯೂರು ಕಡೆಲಿ ನಮ್ಮ ಭಾಷೆಲಿಈ ಮಾತಿನ ಬಳಕೆ ಮಾಡುತ್ತವು,
ಬೇರೆ ಕಡೆಲಿದೆ ಈ ಪಡೆನುಡಿ ಬಳಕೆಲಿ ಇಕ್ಕು .ಇದಕ್ಕೆ ಸಮಾನಾಂತರವಾದ ಮಾತುಗಳೂ ಇಕ್ಕು ,ಗೊಂತಿಪ್ಪೋರು ತಿಳುಸಿ .

Thursday, 5 June 2014

ಗಿಳಿ ಬಾಗಿಲು (ಹವ್ಯಕ ಬ್ಲಾಗ್ ) ಗುಡ್ದೆಂದ ಗುಡ್ಡೆ ಅಡ್ಡ ಸಾವಿರ ಇದ್ದು-ಡಾ.ಲಕ್ಷ್ಮೀ ಜಿ ಪ್ರಸಾದ


ಆನು ಹೈ ಸ್ಕೂಲ್  ಓದುವ  ಕಾಲಕ್ಕೆ  ಎಂಗಳ ಊರಿಲಿ ಎಸ್ ಎಸ್ ಎಲ್ ಸಿ ಲಿ ಫಸ್ಟ್ ಕ್ಲಾಸ್ ಪಾಸ್ ಅಪ್ಪದು ಒಂದು  ದೊಡ್ಡ ವಿಷಯ ಆಗಿತ್ತು.ಆನು ಫಸ್ಟ್ ಕ್ಲಾಸ್ ತೆಗೆದೆ.ಶಾಲೆಗೆ ಸೆಕೆಂಡ್ ಬಂದೆ. ಭಾರಿ ಕೊಷಿ ಆತು ಎನಗೆ !ಅಪ್ಪ- ಅಮ್ಮ ಅಜ್ಜಿ ಅಜ್ಜ ಎಲ್ಲೊರಿಂಗುದೆ. ಹಠ ಮಾಡಿ ಪಿಯುಸಿ ಗೆ ಸೇರಿದೆದೆ..
ಭಾರೀ ಹೆಮ್ಮೆಲಿ ಪಿಯುಸಿ ಕ್ಲಾಸ್ ಗೆ ಹೋದೆ .ಸುರುವಣ ದಿನ ಎಲ್ಲರ ಪರಿಚಯ ಹೇಳುಲೇ ಇತ್ತು .ಅಂಬಗ ಗೊಂತಾತು ಎನಗೆ ಎನ್ನ ಫಸ್ಟ್ ಕ್ಲಾಸ್ ಮಾರ್ಕು ಒಂದು ದೊಡ್ಡ ಮಾರ್ಕೆ ಅಲ್ಲ .ಅಲ್ಲಿ 80-85 % ಮಾರ್ಕು ತೆಗದ ಮಕ್ಕ ಇತ್ತಿದವು .

ಕಾಲೇಜಿಂಗೆ ಸೇರುವಾಗ ಎನಗೆ ಡಿಗ್ರಿ ಮಾಡುದು ದೊಡ್ಡ ವಿಷಯ ಹೇಳಿ ಅನ್ಸಿತ್ತು .ಡಿಗ್ರಿ ಮಾಡ್ರೆ ಒಳ್ಳೆ ಸಂಬಳದ ಗೌರವದ ಕೆಲಸ ಸಿಕ್ಕುತ್ತು ಹೇಳಿ ಆರೋ ಹೇಳುದರ ಕೇಳಿತ್ತಿದೆ.ಆದರೆ  ಬಿಎಸ್ಸಿ ಡಿಗ್ರಿ ಮಾಡಿ ಅಪ್ಪಗ ಗೊಂತಾತು ಡಿಗ್ರಿ ಲೆಕ್ಕಕ್ಕೇ ಇಲ್ಲೆ ,ಎಂ. ಎ ಮಾಡದ್ರೆ ಎಂತದೂ ಪ್ರಯೋಜನ ಇಲ್ಲೆ ಹೇಳಿ .
ಡಿಗ್ರಿ ಓದುವಾಗಲೇ ಮದುವೆ ಬೇರೆ ಆಗಿತ್ತು !ಇಪ್ಪತ್ತೊಂದು ವರ್ಷ ಹಿಂದೆ ಮದುವೆ ಆದ ಮೇಲೆ ಓದುದು ಹೇಳುವ ವಿಚಾರ ದೊಡ್ಡ ಕ್ರಾಂತಿಯೇ ಸರಿ !ಆದರೂ ಮನೆ ಮಂದಿ  ಎಲ್ಲರ ಎದುರು ಹಾಕಿಕೊಂಡು ಎಂ .ಎ (ಸಂಸ್ಕೃತ )ಓದಿದೆ .ಮೊದಲ ರಾಂಕ್ ದೆ ತೆಗದೆ.ರಜ್ಜ ಸಮಯ ಭಾರಿ ಸಂತೋಷಲ್ಲಿ ಇತ್ತಿದೆ (,ಎನ್ನ ಬಿಟ್ರೆ ಆರಿಲ್ಲೆ ಹೇಳುವ ಹಾಂಗೆ ಹೆಮ್ಮೆಲಿ ಬೀಗಿಕೊಂಡು !!)

ಆದರೆ  ಎಂ.ಎ ರಾಂಕ್ ಇದೆಲ್ಲ ದೊಡ್ಡ ವಿಷಯವೇ ಅಲ್ಲ ,ಎಂ ಫಿಲ್ , ಪಿಎಚ್. ಡಿ ಮಾಡಿದೋರು ತುಂಬಾ ಜನಂಗ ಇದ್ದವು ಹೇಳಿ ಮತ್ತೆ ಗೊಂತಾತು .
ಸರಿ ! ಕಲಿವಲೆ ತುಂಬಾ ಆಸಕ್ತಿ ಇದ್ದ ಆನು ಎಂ.ಫಿಲ್,ಪಿಎಚ್.ಡಿ ಯೂ ಮಾಡಿದೆ !ಅಷ್ಟಪ್ಪಗ ಎನಗೆ ಗೊಂತಾತು ಎನ್ನ ಕಲಿಕೆ ಏನೇನೂ ಅಲ್ಲ !ಡಬಲ್ ಪಿಎಚ್.ಡಿ ಮಾಡಿದೋರು  ಇದ್ದವು ತುಂಬಾ ಜೆನಂಗ ,ಪೋಸ್ಟ್  ಡಾಕ್ಟೊರಲ್ ಸ್ಟಡಿ ಮಾಡಿದ ವಿದ್ವಾಂಸರು ತುಂಬಾ ಜನಂಗ ಇದ್ದವು .
ಪಿಎಚ್.ಡಿ ಹೇಳುದು ಸಂಶೋಧನೆಯ ಕೊನೆ ಅಲ್ಲ ಸುರು ಹೇಳುದೂ ಗೊಂತಾತು !ಇನ್ನು ಮಾಡಕ್ಕಾದ  ಕೆಲಸ ತುಂಬಾ ಇದ್ದು ,ಮಾಡಿದ್ದು ಏನೇನೂ ಅಲ್ಲ ಹೇಳುದು ಮನವರಿಕೆ ಆತು
."ಗುಡ್ದೆಂದ ಗುಡ್ಡೆ ಅಡ್ಡ ಸಾವಿರ ಇದ್ದು" ಹೇಳುವ ನುಡಿಗಟ್ಟು ಎನಗೆ ಅಂಬಗ ಅರ್ಥ ಆತು .

ಒಂದೊಂದೇ ಹಂತ ಏರಿದ ಹಾಂಗೆ ಅದರಂದ ಮೇಲೆ ಎಷ್ಟೋ ಜನಂಗ ಇದ್ದವು ಹೇಳಿ ನಮಗೆ ಗೊಂತಾವುತ್ತಾ ಹೋವುತ್ತು.
ಇಂಥ ವಿಚಾರ ಹೇಳುವಾಗ "ಗುಡ್ದೆಂದ ಗುಡ್ಡೆ ಅಡ್ಡ ಸಾವಿರ ಇದ್ದು" ಹೇಳುವ ನುಡಿ ಗಟ್ಟಿನ ನಮ್ಮಲ್ಲಿ ಬಳಕೆ ಮಾಡುತ್ತು .

ನಾವು ತಲೆ ಎತ್ತಿ ನೋಡುವಾಗ ಒಂದು ಎತ್ತರದ ಗುಡ್ಡೆ ಕಾಣುತ್ತು.ಅದರ ಹತ್ತಿ ತಲೆ ಎತ್ತಿ ನೋಡುವಾಗ ಅದರಂದ ಎತ್ತರದ ಇನ್ನೊಂದು ಗುಡ್ಡೆ ಕಾಣುತ್ತು ,ಅದನ್ನೂ ಹತ್ತಿ ನೋಡ್ರೆ ಮತ್ತೊಂದು ಕಾಣುತ್ತು .
ಹಾಂಗೆ ನಮ್ಮಂದ ಪೈಸೆಲಿ,ವಿದ್ಯೆಲಿ ,ಸ್ಥಾನಲ್ಲಿ,ತಿಳುವಳಿಕೆಲಿ ,ಬುದ್ಧಿವಂತಿಕೆಲಿ  ಹೆಚ್ಚಿನೋರು ತುಂಬಾ ಜನಂಗ ಇದ್ದವು .ಹಾಂಗಾಗಿ ನಮ್ಮ ಬಿಟ್ರೆ ಆರಿಲ್ಲೆ ಹೇಳುವ ಹಾಂಗೆ ಹಾಂಕಾರ ತೋರ್ಸುಲೆ ಆಗ ಹೇಳುವ ತಿಳುವಳಿಕೆಯ ಈ ನುಡಿಗಟ್ಟು ತಿಳಿಸುತ್ತು.

Sunday, 1 June 2014

ಗಿಳಿ ಬಾಗಿಲು (ಹವ್ಯಕ ಬ್ಲಾಗ್ ) 26 ಅವ ಬಡ್ದು ಕತ್ತಿಲಿ ಬಡುದ -ಡಾ.ಲಕ್ಷ್ಮೀ ಜಿ ಪ್ರಸಾದ

ಇತ್ತೀಚೆಗೆಂಗೆ  ಒಂದು ಮದುವೆಗೆ ಹೋಗಿತ್ತಿದೆ.ಅಲ್ಲಿ ಎನ್ನ ಹಳೆಯ ಎನ್ನ ಫ್ರೆಂಡ್  ಮಾತಾಡುಲೆ ಸಿಕ್ಕಿತ್ತು.ಅದು ತುಂಬಾ ಸ್ನೇಹ ಮಯಿ ,ಬಾಯಿ ತುಂಬಾ ಮಾತಾಡಿಗೊಂಡು ಲವಲಿವಿಕೆಲಿ ಓಡಾಡಿಗೊಂಡು ಇಪ್ಪ ಜೆನ ಅದು .ಅಂದು ಎಂತಕೋ ತುಂಬಾ ಚಪ್ಪೆ ಇತ್ತು .ಸಾಮಾನ್ಯಕ್ಕೆಲ್ಲ ಯಾವುದೇ ಸಮಸ್ಯೆಗೂ ತಲೆಕೆದಿಸಿಕೊಂಬ ಜೆನ ಅಲ್ಲ ಅದು .ಹಾಂಗಾಗಿ ಎಂತ ಹೇಳಿ ?ಕೇಳಿದೆ .

ಅಷ್ಟಪ್ಪಗ ಅದು ಹೇಳಿತ್ತು .ಎಂಗೊಗು ಪಕ್ಕದ ಜಾಗವ ತೆಕ್ಕೊಂಡು ಹೊಸತಾಗಿ ಬಂದ ಜೆನಂಗಳದ್ದು ರಜ್ಜ ಜಾಗೆಯ ತಕರಾರು .ಸುಮ್ಮನೆ ಸುಮಾರು ಮಾರ್ಗ ಹತ್ರೆ ಇಪ್ಪ ಎಂಗಳ ಜಾಗೆಯ ಹತ್ತು ಸೆನ್ಸ್ ಅವರದ್ದು ಹೇಳಿ ಗಲಾಟೆ ಮಾಡುತ್ತಾ ಇದ್ದವು .ಅದು ದೊಡ್ಡ ವಿಷಯ ಅಲ್ಲ,ಅವರ ಸುಲಭಲ್ಲಿ ಬಾಯಿ ಮುಚ್ಚುಸುಲೆ  ಎಡಿತ್ತಿತ್ತು.ಆದರೆ ಆಚಮನೆ ರಾಜಣ್ಣ  ಬಡ್ದು ಕತ್ತಿಲಿ ಬಡುದ
 .ಅವಕ್ಕೆ ಮನೆಗೆ ಹೋಪ ದಾರಿ ಎಂಗ ಕೊಡಕ್ಕು ಅಥವಾ ಆಚ ಮನೆ ರಾಜಣ್ಣ (ಹೆಸರು ಬದಲಾಯಿಸಿದ್ದು )ಕೊಡಕ್ಕು.ಇಷ್ಟರ ವರೆಗೆ ಎಂಗಳ ಜಾಗೆಲಿ ಹೋಗಿಕೊಂಡು ಇದ್ದದು .ಮಾರ್ಗ ಹತ್ರಣ ಜಾಗೆ ಅವರದ್ದು ಹೇಳಿ ಬೇಲಿ ಹಾಕಿದ್ದಕ್ಕೆ  ಎಂಗ ಅಂಬಗ ದಾರಿ ಹೋಪಲೆ ಬಿಡೆಯ ಹೇಳಿ" ಹೇಳಿದೆಯ .
ಎಂಗೊಗು ಆಚ ಮನೆ ರಾಜಣ್ಣ ನೋರಿಂಗೂ ತುಂಬಾ ಒಳ್ಳೆದಿದ್ದು .ಅವು ಗೆಂಡ ಹೆಂಡತಿ ಇಬ್ರೂ ಕೆಲಸಕ್ಕೆ ಹೋಪ ಕಾರಣ ಅವು ಬಪ್ಪಲ್ಲಿಯವರೆಗೆ ಅವರ ಇಬ್ರು ಮಕ್ಕಳೂ ಎಂಗಳ ಮಕ್ಕಳ ಒಟ್ಟಿಂಗೆ ಎಂಗಳ ಮನೆ ಮಕ್ಕಳ ಹಾಂಗೆ ಬೆಳದ್ದು..ಹೊತ್ತಪ್ಪಗ ಕಾಪಿ ತಿಂಡಿ ಎಂಗಳಲ್ಲಿಯೇ ಆನು ಕೊಟ್ಟು ಗೊಂಡು ಇದ್ದದು.ಎಷ್ಟೋ ಸರ್ತಿ ಅವು ಕೆಲಸಂದ ಬಪ್ಪಗ ತಡವು ಆದರೆ ಅವರ ಮಕ್ಕ ಎರಡುದೆ ಎಂಗಳಲ್ಲಿ ಉಂಡು ಒರಗಿಕೊಂಡು ಇತ್ತಿದವು .
ಈಗ ಆಚ ಮನೆ ರಾಜಣ್ಣ ಅವಕ್ಕೆ ಹೋಪಲೆ ದಾರಿ ಬಿಟ್ಟಿದ. .ಅ ಮಾರ್ಗದ ಹತ್ರಣ ಜಾಗೆ ಬಗ್ಗೆ ಎಂಗಳತ್ರೆ ರೆಕಾರ್ಡ್ ಗಟ್ಟಿ ಇದ್ದು .ಆದರೆ ಎಂಗಳ ಜಾಗೆ ಎಂಗಳದ್ದು ಹೇಳಿ ಸಾಧಿಸಕ್ಕಾದರೆ ಇನ್ನು ಕೋರ್ಟ್ ಗೆ ಹೋಗಿ ಆಯಕ್ಕು.ಆಚ ಮನೆ ರಾಜಣ್ಣನ್ಗೆ ಆ ಜಾಗೆ ಎಂಗಳದ್ದು ಹೇಳಿ ಗೊಂತಿದ್ದು ಆದರೂ ಎಂಗ ಕೋರ್ಟು ಕಚೇರಿ ಅಲವಾಂಗೆ ಮಾಡಿದ .ಪಕ್ಕದ ಜಾಗೆ ತೆಕ್ಕೊಂಡೋರು ಹೊಣದ್ದರಂದ ಹೆಚ್ಚು ಬೇಜಾರು ಆದ್ದು ಎಂಗೊಗೆ ಆಚ ಮನೆ ರಾಜಣ್ಣ ಮಾಡಿದ ವಿಶ್ವಾಸ ದ್ರೋಹ "ಹೇಳಿ ಹೇಳಿತ್ತು .

ಅವ ಎಂಥಕೆ ಹಾಂಗೆ ಮಾಡಿದ್ದು ?ಹೇಳಿ ಆನು ಕೇಳಿದೆ ."ಆನು  ಇಬ್ರ ಕಡೆಲಿ ಇಲ್ಲೆ,ಎನಗೆ ಇಬ್ರೂ ಅಕ್ಕ ಪಕ್ಕದೋರು ,ಹೋಪಲೆ ದಾರಿ ಕೇಳುವಾಗ ಇಲ್ಲೆ ಹೇಳಿ ಹೇಂಗೆ ಹೇಳುದು ?ಹೇಳುತ್ತ ಹೇಳಿ ಹೇಳಿತ್ತು .
ಅಪ್ಪು !ಅದರ ಪರಿಸ್ಥಿತಿ ಎನಗೆ ಅರ್ಥ ಆತು .ಆರೋ ಮಾಡುವ ದ್ರೋಹಂದ ನಮ್ಮ ಆತ್ಮೀಯರು ಹೇಳಿ ಇಪ್ಪೋರು ಮಾಡುವ ವಿಶ್ವಾಸ ದ್ರೋಹ ತುಂಬಾ ಪೆಟ್ಟು ಕೊಡುತ್ತು.!ಅದರಂದ ಚೇತರಿಸಿ ಕೊಳ್ಳಕ್ಕಾದರೆ ತುಂಬಾ ಸಮಯ ಹಿಡಿತ್ತು.
ಹರಿತದ ಕತ್ತಿಲಿ ಕಡುದರೆ ಗಾಯ ಆವುತ್ತು .ಗಾಯ ಗುಣ ಆದರೆ ಅಲ್ಲಿಗೆ ಬೇನೆದೆ ಹೋವುತ್ತು.ಆದರೆ ಬಡ್ದು ಕತ್ತಿಲಿ ಬಡುದರೆ ಹೇರಂದ ಗಾಯ ಕಾಣುತ್ತಿಲ್ಲೇ,ಆದರೆ ಅಪ್ಪ ಬೇನೆ ತುಂಬಾ ಸಮಯ ಒಳಿತ್ತು .
ಹಾಂಗೆ ಆರೋ ದ್ರೋಹ ಮಾಡ್ರೆ ಅವರತ್ರೆ ಕೋಪ, ದ್ವೇಷ ಮಾತ್ರ ಬತ್ತು ,ಆದರೆ ನಂಬಿದೋರು ವಿಶ್ವಾಸ ದ್ರೋಹ ಮಾಡಿ ನಮ್ಮ ವಿರೋಧಿಗಳ ಒಟ್ಟಿಂಗೆ ಕೈ ಜೋಡಿಸಿದರೆ, ಕೋಪಂದ ಹೆಚ್ಚು ಮನಸಿಂಗೆ ಪೆಟ್ಟು ಆವುತ್ತು .ಆ ಬೇನೆ ತುಂಬಾ ಸಮಯ ಒಳಿತ್ತು .ಇಂಥ ಸಂದರ್ಭಲ್ಲಿ ಬಡ್ದು ಕತ್ತಿಲಿ ಬಡುದ ಹೇಳುವ ಮಾತಿನ ಬಳಕೆ ಮಾಡುತ್ತವು.ಇದಕ್ಕೆ ಸಂವಾದಿಯಾಗಿ ಬೆನ್ನಿಂಗೆ ಕತ್ತಿ  ಹಾಕಿದ ಹೇಳುವ ಮಾತುದೆ ಬಳಕೆಲಿ ಇದ್ದು .
ಕನ್ನಡಲ್ಲಿ ಕಂಬಳಿಯಲ್ಲಿ ಸುತ್ತಿ ಹೊಡೆಯುವುದು ಹೇಳುವ ಮಾತು ಮೇಲ್ನೋಟಕ್ಕೆ ಇದಕ್ಕೆ ಸಮಾನ ಹೇಳುವ ಹಾಂಗೆ ಅನ್ಸುತ್ತು .ಆದರೆ ಇದಕ್ಕೂ ಅದಕ್ಕೂ ಭಾವಲ್ಲಿ ತುಂಬಾ ವ್ಯತ್ಯಾಸ ಇದ್ದು .ಬಡ್ದು ಕತ್ತಿಲಿ ಬಡುದ ಹೇಳುದು ವಿಶ್ವಾಸ ದ್ರೋಹ ಮಾಡಿದ ಹೇಳುವ ಅರ್ಥವ ಸೂಚಿಸುತ್ತು.ಕಂಬಳಿಲಿ ಸುತ್ತಿ ಬಡಿವದು ಹೇಳ್ರೆ  ಮಾಡಕ್ಕಾದ್ದರ  ನೇರವಾಗಿ ಮಾಡದ್ದೆ ಉಪಾಯವಾಗಿ ಮಾಡಿದ ಹೇಳುವ ಅರ್ಥ ಬತ್ತು ಹೇಳಿ ಎನಗೆ ಅನ್ಸುತ್ತು .
ಈ ಬಗ್ಗೆ ತಿಳುದೋರು ತಿಳುಸಿ

Wednesday, 28 May 2014

ಗಿಳಿ ಬಾಗಿಲು (ಹವ್ಯಕ ಬ್ಲಾಗ್ )-25 ಪರವೂರಿನ ಮಾವಿನ ಕಾಯಿಂದ ನಮ್ಮ ಊರಿನ ಅಂಬಟೆ ಕಾಯಿ ಅಕ್ಕು

ಕಳುದ ಸರ್ತಿ ಊರಿಂಗೆ ಅಪ್ಪನ ಮನೆ ವಾರಣಾಸಿಗೆ ಹೋದಿಪ್ಪಗ ಅಲ್ಲಿ ಅಮ್ಮಂದೆ ತಮ್ಮನುದೆ ಏನೋ ಬೆಶ್ರೊಟ್ಟಗೆ ಗೋಡೆ ಅಡಿ ರಜ್ಜ  ಜಗ್ಗಿದ್ದು .ಮಳೆ ಬರಕ್ಕಾದರೆ ಅದರ ಸರಿಯಾಗಿ ಕಟ್ಟಕ್ಕು ಹೇಳಿ ಮಾತಾಡಿಗೊಂಡು ಇತ್ತಿದವು .ಎಂಗಳ ಊರಿಲಿಯೇ ಒಂದು ಮೇಸ್ತ್ರಿ ಇದ್ದು .ಕಂಡಾಬಟ್ಟೆ ಬ್ಯುಸಿ ಆಗಿರೆಕ್ಕು .ಅದರ ಬಪ್ಪಲೆ ಹೇಳಿದೆ ಬೈನ್ಡಿತ್ತಿಲ್ಲೆ ಅಡ.ಅಂಬಗ ಮಾತಿನ ನಡುವೆ ಅಮ್ಮ "ಹೇಳಿದ "ವಾಣಿಯ (ಎನ್ನ ಅಕ್ಕನ )ಮನೆ ಹತ್ತರೆ  ಒಂದು ಒಳ್ಳೆ ಮೇಸ್ತ್ರಿ ಇದ್ದಡ ,ಅದರ ಹೇಳುವ" ಹೇಳಿ .ಅಂಬಗ ತಮ್ಮ  "ಬೇರೆ ಊರಿನೋರ ಸಂಗತಿ ಆಗ ಅಮ್ಮ  .ಪರ ಊರಿನ ಮಾವಿನ ಕಾಯಿಂದ ನಮ್ಮ ಊರಿನ ಅಂಬಟೆ ಅಕ್ಕು ಹೇಳಿ ಮಾತೇ ಇಲ್ಲೆಯ "ಹೇಳಿ ಹೇಳಿದ .
ಅಷ್ಟರ ತನಕ ಅವರ ಮಾತು ಕಥೆಲಿ ಎನಗೆನೂ ಅಷ್ಟು ಆಸಕ್ತಿ ಇತ್ತಿಲ್ಲೆ.ಅಲ್ಲೇ ಕೂದಿತ್ತಿದೆ.ಹಾಂಗೆ ಕೆಮಿಗೆ ಬಿದ್ದತ್ತು ಅಷ್ಟೇ .ಆದರೆ ಈ ನುಡಿಗಟ್ಟು ಕೇಳಿದ ತಕ್ಷಣ ಎನ್ನ ಕೆಮಿ ಕುತ್ತ ಆತು !

ಅಪ್ಪು !ಬೇರೆ ಊರಿನೋರು  ಒಂದರಿಯಂಗೆ ಬಂದು ಕೆಲಸ ಮಾಡಿ ಕೊಟ್ಟಿಕ್ಕಿ ಹೋಕು.ಆದರೆ ಮತ್ತೆ ಏನಾರು ಅದರಲ್ಲಿ ಸಣ್ಣ ಪುಟ್ಟ ಸಮಸ್ಯೆಗ ಬಂದರೆ ,ಅಥವಾ ಇನ್ನೇನೋ ಸಣ್ಣ ಪುಟ್ಟ ಕೆಲಸ ಹೇಳುಲೆ ಅವು ಇರ್ತವ ?ಮತ್ತೆ ಬಂದು ಸರಿ ಮಾಡಿ ಕೊಡುತ್ತವ ?,ಮತ್ತೆ ಅದಕ್ಕೆ ನಾವು ನಮ್ಮ ಊರಿನ ಮೇಸ್ತ್ರಿಯನ್ನೇ ಹಿಡಿಯಕ್ಕು .ಇಲ್ಲದ್ದರೆ ಬೇರೆಯೋರು ಮಾಡಿದ ಕೆಲಸವ ಅವು ಸರಿ ಮಾಡುಲೆ ಸುಲಭಕ್ಕೆ  ಒಪ್ಪುತ್ತವ ?ಅದೆಲ್ಲ ದೊಡ್ಡ ರಗಳೆ ಸಂಗತಿ .
ಅದರ ಬದಲು ನಮ್ಮ ಊರಿನ ಮೇಸ್ತ್ರಿಹತ್ತರೆ ಕೆಲಸ ಮಾಡ್ಸಿರೆ ಮುಂದೆ ಕೂಡಾ ಏನಾರು ಬೇಕಾರೆಅದು ಊರಿಲಿಯೆ ಇರ್ತನ್ನೇ .
ದೂರದ ಊರಿಲಿ ಅಪ್ಪ ಅಪ್ಪೆಮಿಡಿಯಂಥ ಮಾವಿನ ಕಾಯಿ ಉಪ್ಪಿನಕಾಯಿ ಹಾಕುಲೆ ,ಗೊಜ್ಜಿ ಮಾಡುಲೆ  ತುಂಬಾ ಒಳ್ಳೆಯ ರುಚಿಯ ವಸ್ತು .ಅಂಬಟೆ ಕಾಯಿ ಮಾವಿನಕಾಯಿಯಷ್ಟು ರುಚಿಯಲ್ಲ .ಆದರೆ ಅಂಬಟೆ ಕಾಯಿ ನಮ್ಮ ಜಾಲಿನ ಹತ್ರಣಮರಲ್ಲಿಯೇ ಆವುತ್ತು ,ಕೊಕ್ಕೆ ತೆಕ್ಕೊಂಡು ಹೋಗಿ ಯಾವಾಗ ಬೇಕಾರು ಕೊಯ್ದು ತಪ್ಪಲಕ್ಕು.ಆರತ್ರೂ ಕೆಳಕ್ಕೂ ಹೇಳಿ ಇಲ್ಲೇ. ಎಂತಕೆ ಹೇಳ್ರೆ ಅದು ನಮ್ಮದೇ ಅನ್ನೇ .ಅದಕ್ಕೆ ಹೇಳುದು ಪರ ಊರಿನ ಮಾವಿನ ಕಾಯಿಂದ ನಮ್ಮ ಊರಿನ ಅಂಬಟೆ ಕಾಯಿ ವಾಸಿ ಹೇಳಿ .
ಆದರೆ ಇದು ನಮ್ಮ ಭಾಷೆಲಿ ನುಡಿಗಟ್ಟು ಆಗಿ ಬಳಕೆ ಆವುತ್ತು .

ನಮಗೆ ದೂರಲ್ಲಿತುಂಬಾ ಜನ ಆತ್ಮೀಯರು  ಹತ್ತರಣ ಸಂಬಂಧಿಕರು ಇಕ್ಕು.ಆದರೆನಮಗೆ ಏನಾರುಸಮಸ್ಯೆಗ ಬಂದರೆ ತಕ್ಷಣ ಸಹಾಯಕ್ಕೆ ಬಪ್ಪದು ,ಸಿಕ್ಕುದು ನೆರೆ ಕರೆಯ ಜನಂಗ ಅಲ್ಲದ ?ಅವು ನಮಗೆ ಸಂಬಂಧಿಕರು ಅಲ್ಲದ್ದೇ ಇಕ್ಕು .ಆದರೆ ಅವರತ್ರೆ ನಾವು ಒಳ್ಳೆದು ಮಾಡಿಕ್ಕೊಳ್ಳಕ್ಕು ಹೇಳುವ ಲೋಕ ಜ್ಞಾನದ ತಿಳುವಳಿಕೆಯ ಮಾಡ್ಸುತ್ತು "ಪರವೂರಿನ ಮಾವಿನ ಕಾಯಿಂದ ನಮ್ಮ ಊರಿನ ಅಂಬಟೆ ಕಾಯಿ ಅಕ್ಕು"ಹೇಳುವ ಹವ್ಯಕ ನುಡಿಗಟ್ಟು .
ಕೋಳ್ಯೂರು ಸೀಮೆಯ ಹವ್ಯಕ ಭಾಷೇಲಿ ಇದರ ಬಳಕೆ ಇದ್ದು ,ಬೇರೆ ಕಡೆದೆ ಇಕ್ಕು ಅಲ್ಲದ ?

ಗಿಳಿ ಬಾಗಿಲು(ಹವ್ಯಕ ಬ್ಲಾಗ್ )- ಉಪ್ಪಿದ್ದ ಉಪ್ಪಿನ ಕಲ್ಲಿದ್ದ ?ಹೇಳಿ ಕೇಳಿದ್ದಿಲ್ಲೆ

ಇಂದು  ಕೊದಿಲಿಂಗೆ ರಜ್ಜ ಉಪ್ಪು ಕಮ್ಮಿ ಆಗಿತ್ತು .ಮಗ ಉಂಬಗ ಉಪ್ಪಿದ್ದ ಹೇಳಿ ಕೇಳಿದ .ಅಷ್ಟಪ್ಪಗ ಅವನ ಬಾಯಿಗೆ ಕೋಲು ಹಾಕುಲೆ ಆನು ಸುಮ್ಮನೆ ಉಪ್ಪು ತಂದು ಬಳುಸದ್ದೆ :ಮನೇಲಿ ಉಪ್ಪು ಇರದ್ದೆ ಒಳಿತ್ತ ಮಾರಾಯ ?ಹೇಳಿ ಕೇಳಿದೆ .ಅವಂದೆ ಬಿಡದ್ದೆ "ಅಪ್ಪು ಉಪ್ಪೇ ಇರಕ್ಕು ಹೇಳಿ ಎಂತ ?ಉಪ್ಪಿನ ಕಲ್ಲುದೆ ಇರ್ತಿಲ್ಲೆಯ" ಹೇಳಿ ಕೇಳಿದ .ಅಷ್ಟಪ್ಪಗ ಉಪ್ಪುದೆ ಉಪ್ಪಿನ ಕಲ್ಲುದೆ ಬೇರೆಯ ಹೇಳಿ ಚರ್ಚೆ ಬಂತು .ಅಷ್ಟಪ್ಪಗ ಎನಗೆ "ಉಪ್ಪಿದ್ದ ಉಪ್ಪಿನ ಕಲ್ಲಿದ್ದ ಹೇಳಿ ಕೇಳಿದ್ದಿಲ್ಲೆ " ಹೇಳುವ ಒಂದು ಆಡು ಮಾತು ನೆಂಪು ಆತು .
ಅನು ಸಣ್ಣಾದಿಪ್ಪಗ ಈ ನುಡಿಗಟ್ಟಿನ ಕೇಳಿದ್ದೆ.ಆದರೆ ಅದರ ಅರ್ಥ ಎಂತ ಹೇಳಿ ಎನಗೆ ಗೊಂತಿತ್ತಿಲ್ಲೆ.
.ಮನುಷ್ಯ ಸಮಾಜ ಜೀವಿ .ತನ್ನ ಸುತ್ತ ಮುತ್ತಲಿನ ಜನರತ್ತರೆ ನೆಂಟ್ರು ಗಳ ಅಮ್ಬಗಂಬಗ ಕಾಣಕ್ಕಾವುತ್ತು.ಅವರ ಮನೆಗೆ ಹೊಯಕ್ಕಾವುತ್ತು .ಎಲ್ಲೋರು ಒಂದೇ ರೀತಿ ಇರ್ತವಿಲ್ಲೆ .ನಮಗೆ ಕೆಲವು ಜನಂಗಳ ಹತ್ರೆ ಹೆಚ್ಚು ಆತ್ಮೀಯತೆ ಇರುತ್ತು .ಕೆಲವು ಜನಂಗಳ ಹತ್ತರೆ ಅಷ್ಟಕ್ಕಷ್ಟೇ ಇರುತ್ತು .
ನಮಗೆ ಹೆಚ್ಚ್ಚು ಆತ್ಮೀಯರಾಗಿಪ್ಪೋರ ಮನೆಗೆ ಹೋದರೆ ಅಥವಾ ಅವರ ಎಲ್ಲಿಯಾದರೂ ಕಂಡರೆ ನಾವು ಅವರತ್ರೆ ಅವರ ಕೆಲಸ ಕಾರ್ಯ ದ ಬಗ್ಗೆ ಮಕ್ಕಳು ಮರಿಗಳ ಬಗ್ಗೆ ವಿಚಾರ್ಸುತ್ತು
ಆರಾದರೂ ನಮಗೆ ಅಷ್ಟು ಹಿತ ಇಲ್ಲದ್ದೋರ ಮನೆಗೆ ಹೋದರೆ  ಅವರ ಖಾಸಾ ವಿಷಯಲ್ಲಿ ಎಂತದುದೆ ಮಾತಾಡುತ್ತವಿಲ್ಲೆ .ಹೋದ ಕೆಲಸ ಎಂತದು ಅದರ ಮಾತ್ರ ಮುಗಿಸಿಕ್ಕಿ ಅವು ಕೊಟ್ಟ ಕಾಪಿಯ ಚಾಯವಾ ಕುಡುದಿಕ್ಕಿ ಬತ್ತು !
ಇಂಥ ಸಂದರ್ಭಲ್ಲಿ ಆನು ಅವರತ್ತರೆ" ಉಪ್ಪಿದ್ದ ಉಪ್ಪಿನ ಕಲ್ಲಿದ್ದ ?ಹೇಳಿ ಕೇಳಿದ್ದಿಲ್ಲೆ .ಎನ್ನಷ್ಟಕ್ಕೆ ಕೆಲಸ ಮುಗಿಸಿಕ್ಕಿ ಬೈಂದೆ" ಹೇಳಿ ಹೇಳುತ್ತವು .
ಅವರ ಒಳಗಿನ ವ್ಯವಹಾರ ನಮಗೆ ಇಷ್ಟ ಇಲ್ಲೇ ಅವರತ್ತರೆ ಎಷ್ಟು ಬೇಕೋ ಅಷ್ಟು ಇದ್ದರೆ ಸಾಕು ಹೇಳುವ ಅರ್ಥವ ಉಪ್ಪಿದ್ದ ಉಪ್ಪಿನ ಕಲ್ಲಿದ್ದ ?ಹೇಳಿ ಕೇಳಿದ್ದಿಲ್ಲೆ" ಹೇಳುವ ನುಡಿಗಟ್ಟು ತಿಳುಸುತ್ತು .
ಇದು ಕೋಳ್ಯೂರು ಸೀಮೆ ಕನ್ನಡಲ್ಲಿ ಕೂಡಾ ಉಪ್ಪುಂಟ ಉಪ್ಪಿನ ಕಲ್ಲುಂಟ ?ಹೇಳಿ ಬಳಕೆಲಿ ಇದ್ದು .ಈ ಪರಿಸರಲ್ಲಿ ಇದು ತುಳುವಿಲಿ ರಜ್ಜ ಬೇರೆ ರೀತಿಲಿ ಬಳಕೆ ಇದ್ದು .ತುಳುವಿಲಿ ನೀರುಂಡ ಅರ್ಕಂಜಿ ಉಂಡಾದ್ ಕೇನುದುಜ್ಜಿ ಹೇಳುವ ಮಾತುಪ್ರಚಲಿತ ಇದ್ದು .
ಬಹುಶ ಬೇರೆ ಕಡೆಲಿದೆ ನಮ್ಮ ಹವ್ಯಕ ಭಾಷೆಲಿ ಈ ರೀತಿಯ ನುಡಿಗಟ್ಟಿನ ಬಳಕೆ ಇಕ್ಕು ಹೇಳಿ ಎನ್ನ ಅಂದಾಜು .ಅಥವಾ ಇದಕ್ಕೆ ಸಮಾನಾಂತರವಾದ ಬೇರೆ ಮಾತುಗಳ ಬಳಕೆ ಇಪ್ಪಲೂ ಸಾಕು .ಈ ಬಗ್ಗೆ ಗೊಂತಿಪ್ಪೋರು ತಿಳುಸಿ ಆತಾ .