Monday, 30 October 2017

ಗಿಳಿಬಾಗಿಲು ಹವ್ಯಕ ನುಡಿಗಟ್ಟು 42 ಕೆಮಿ ಹರುದೋವು © ಡಾ.ಲಕ್ಷ್ಮೀ ಜಿ ಪ್ರಸಾದ



ನಿನ್ನೆ ಅಮ್ಮನತ್ತರೆ ಪಟ್ಟಾಂಗ ಹೊಡವಗ ಒಬ್ಬರ ಮಾತು ನಡೆನುಡಿ ಬಗ್ಗೆ ಯೂ ವಿಷಯ ಬಂತು.ನೇರವಾಗಿ ಯಾವುದೇ ಲೋಕಾಪವಾದದ ಹೆದರಿಕೆ ಇಲ್ಲದ್ದೆ ಇದ್ದದರ ಇದ್ದ ಹಾಂಗೆ ಹೇಳುವೋರ ಸ್ವಭಾವದ ಬಗ್ಗೆ ಹೇಳುತ್ತಾ ಅವು ಕೆಮಿ ಹರುದೋವು.ಆರ ಬಗ್ಗೆ ಮಾತಾಡಲುದೆ ಹಿಂದೆ ಮುಂದೆ ನೋಡದ್ದೋರು.ಅಂತೋರತ್ತರೆ ವ್ಯವಹರುಸುವಗ ತುಂಬಾ ಜಾಗೃತೆ ಇರಕ್ಕಾವುತ್ತು.ಇಲ್ಲದ್ದರೆ ಸಮಯ ಸಂದರ್ಭ ನೋಡದ್ದೆ ನಮ್ಮ ಮರ್ಯಾದೆ ತೆಗೆಗು ಹೇಳಿ ಅಮ್ಮ ಹೇಳಿದ.ಕೆಮಿ ಹರುದೋವು ಹೇಳುವದರ ಕೇಳಿ ಅಪ್ಪಗ ಎನ್ನ ಕೆಮಿ ಕುತ್ತ ಆತು.ಅಮ್ಮ ಹೇಳುವ ವಿಷಯವ ಅರ್ಧಲ್ಲಿ ನಿಲ್ಲಿಸಿ ಕೆಮಿ ಹರುದೋವು ಹೇಳಿರೆ ಕೆಮಿ ತಮ್ಮಟೆ ಹರುದು ಹೋಗಿ‌ಕೆಮಿ ಕೇಳದ್ದೋರ ಹೇಳಿ ಕೇಳಿದೆ.ಕೆಮಿ ಕೇಳದ್ದೋರಿಂಗೆ ಬೇರೆಯೋರು ಎಂತ ಹೇಳ್ತವು ಹೇಳುದು ಕೇಳ್ತಿಲ್ಲೆ.ಹಾಂಗಾಗಿ ಹೇಳಕ್ಕಾದ್ದರ ಯಾವುದೇ ಮುಲಾಜಿಲ್ಲದ್ದೆ ಹೇಳುಗು ಹಾಂಗಾಗಿ ಕೆಮಿ ಹರುದೋವು ಹೇಳುವ ನುಡಿಗಟ್ಟು ಬಂದಿಕ್ಕು ಹೇಳಿ ಗ್ರೇಸಿ ಆನು ಹಾಂಗೆ ಕೇಳಿದೆ.ಆದರೆ ಅಮ್ಮ ಹೇಳಿದ ಅರ್ಥ ಬೇರೆಯೇ ಇದ್ದು.
ಮೊದಲೆಲ್ಲ ಜನಂಗ ಕೆಮಿಗೆ ಹೆಮ್ಮಕ್ಕ ಬೆಂಡು ಹಾಕಿಯೊಂಡು ಇತ್ತಿದವು.ಹಾಂಗೆ ಗೆಂಡುಮಕ್ಕ ಕೆಮಿಗೆ ಟಿಕ್ಕೆ ಹಾಕಿಕೊಂಡು ಇತ್ತಿದವು ಅನ್ನೇ. ಸೊಪ್ಬಪು ಕೈವಗಲೋ ಅಥವಾ ಇನ್ನೇನಾದರೂ ಕೆಲಸಕ್ಕೆ  ಬಲ್ಲ್ಲೆ ಎಡಕ್ಕಿಲಿ ನುರ್ಕುವಗ ಕೆಮಿಗೆ ಹಾಕಿದ ಬೆಂಡು ಅಥವಾ ಟಿಕ್ಕಿಗೆ ಬಳ್ಳಿಗ ಸಿಕ್ಕಾಕೊಂಡು ಬಂಙ ಆವುತ್ತು.
ಆದರೆ ಕೆಮಿಯ ಹಾಳೆ ಹರುದು ಹೋದೋರಿಂಗೆ ಬೆಂಡು ಅಥವಾ ಟಿಕ್ಕಿ ಹಾಕುಲೆ ಎಡಿತ್ತಿಲ್ಲೆ.ಹಾಂಗಾಗಿ ಬಲ್ಲೆ ಒಳ ನುಗ್ಗುವಗ ಸಿಕ್ಕಾಕೊಂಬ ಹೆದರಿಕೆ ಇಲ್ಲೆ.ಹಾಂಗಾಗಿ ಅಂತೋರು ಸೀದಾ ಬಲ್ಲೆ ಒಳ ನುಗ್ಗುತ್ತವು

ಇದರ ಯಾವುದೇ ಮುಲಾಜಿಲ್ಲದ್ದೆ ಮಾತಾಡುವೋರ ಬಗ್ಗೆ ಸಮೀಕರಣ ಮಾಡಿ ಅವರ ಸ್ವಭಾವದ ಬಗ್ಗೆ ಹೇಳುವಾಗ ಅವು ಕೆಮಿ ಹರುದೋವು, ಅವರತ್ತರೆ ಜಾಗ್ರತೆ ಇರಕ್ಕು ಹೇಳಿ ಹೇಳುತ್ತವು.
ಬಹುಶಃ  ಈ ಮಾತಿನ ಮೂಲ ತುಳು ಭಾಷೆಲಿ ಇದ್ದು .ತುಳುವಿಲಿ ಇಂತಹ ಸ್ವಭಾದೋವಕ್ಕೆ ಕೆಬಿ ಪರಿನಾಕುಲು ಹೇಳಿ ಹೇಳುತ್ತವು.
ಪರಿಸರದ ಭಾಷೆಯ ನುಡಿಗಟ್ಟುಗ ದಕ್ಷಿಣ ಕನ್ನಡ ಕಾಸರಗೋಡು ಪರಿಸರದ ಹವ್ಯಕ ಭಾಷೆಯ ಮೇಲೆ ಬೀರಿ ಇಂತಹ ಮಾತುಗ ಹವ್ಯಕ ಭಾಷೆಲಿ ಬಂದಿಕ್ಕು
ಕನ್ನಡದ ಮೂರೂ ಬಿಟ್ಟವರು ಹೇಳುವ ನುಡಿಗಟ್ಟು ಇದಕ್ಕೆ ಸಂವಾದಿಯಾಗಿ ಇದ್ದು
ಇಂತಹ ಚಂದದ ಶಬ್ದ ಪ್ರಯೋಗಂಗ ನಮ್ಮ ಭಾಷೆಲಿ ತುಂಬಾ ಇದ್ದು ಅಲ್ಲದಾ
- ಡಾ.ಲಕ್ಷ್ಮೀ ಜಿ ಪ್ರಸಾದ

Monday, 9 October 2017

ಗಿಳಿಬಾಗಿಲು - ಹವ್ಯಕ ನುಡಿಗಟ್ಟು 41 ವಾಸನೆ ಬರಲೇಳಿ ಸಗಣನೀರು ಹಾಕಿದ್ದು ಶುದ್ದಾತು©ಡಾ.ಲಕ್ಷ್ಮೀ ಜಿ ಪ್ರಸಾದ

ವಾಸನೆ ಬರಲೇಳಿ ಸಗಣನೀರು ಹಾಕಿದ್ದು ಶುದ್ದಾತು
ನಿನ್ನೆ ಅಮ್ಮನತ್ತರೆ ಮಾತಾಡುವಾಗ ಒಂದು ವಿಷಯ ಬಂತು.ಈ ಹಿಂದೆ ಎಂಗೊಗೆ ಒಬ್ರು ಉಪದ್ರ ಆಯಕ್ಕು ಹೇಳಿ ಏನೋ ಮಾಡಿತ್ತಿದವು.ಆದರೆ ಎಂಗೊಗೆ ಅದರಂದ ಉಪಕಾರ ಆಯಿದು ಇದರ ಮಾತಿನ ನಡುವೆ ಅಮ್ಮನ ಹತ್ತರೆ ಅನು ಹೇಳಿದೆ.ಅಂಬಗ ಅಮ್ಮ " ನಿನ್ನ ಅಪ್ಪ ಯಾವಾಗಲೂ ಹೇಳುಗು ವಾಸನೆ ಬಪ್ಪಲೆ ಹೇಳಿ ಸಗಣ ನೀರು ಹಾಕಿದರೆ ಶುಧ್ದ ಆತು ಹೇಳಿ.ಇದು ಹಾಂಗೆ ಆತು ಹೇಳಿ ಅಮ್ಮ ಹೇಳಿದ. ಅದರ ಕೇಳಿ ಎನ್ನ‌ಕೆಮಿ ಕುತ್ತ ಆತು.ಪುನಃ ಅಪ್ಪ ಎಂತ ಹೇಳಿಗೊಂಡಿತ್ತದು ಹೇಳಿ ಕೇಳಿದೆ. ಅಮ್ಮ ಈ ಮಾತಿನ ಹೇಳಿ ಅದರ ಅರ್ಥವ ವಿವರಿಸಿದ.
ನಮ್ಮ ಕಡೆ ಹವ್ಯಕ ಭಾಷೆಲಿ ಬಳಕೆಲಿ ಇಪ್ಪ ಒಂದು ನುಡಿಗಟ್ಟು ಇದು.ವಾಸನೆ ಬರಕ್ಕು ಹೇಳಿ ಆರೋ ಮನೆ ಜಾಲಿಂಗೆ ಸಗಣ ನೀರು ಹಾಕಿದವು.ಆದರೆ ಅದು ಯಜಮಾನಂಗೆ ಅದರಂದ ಉಪದ್ರ ಅಪ್ಪ ಬದಲು ಉಪಕಾರವೇ ಆತು.ಜಾಲು ಶುದ್ಧ ಆತು ಹೇಳಿದು ಈ ಮಾತಿನ ಅರ್ಥ.
ಆರಾದರೂ ನಮಗೆ ತೊಂದರೆ ಆಯಕ್ಕು  ಹೇಳಿ ಕುತಂತ್ರ ಮಾಡಿದರೂ ಅದುರಂದ  ಕೆಲವು ಸರ್ತಿ ನಮಗೆ ಉಪಕಾರವೇ ಆವುತ್ತು.ಅಂತಹ ಸಂದರ್ಭವ ವಿವರುಸುವಾಗ ಬಳಕೆಗೆ ಬಂದ ನುಡಿಗಟ್ಟು ಇದು.
© ಡಾ.ಲಕ್ಷ್ಮೀ ಜಿ ಪ್ರಸಾದ
ಕನ್ನಡ ಉಪನ್ಯಾಸಕರು ಸರ್ಕಾರಿ ಪದವಿ ಪೂರ್ವ ಕಾಲೇಜು ನೆಲಮಂಗಲ

Sunday, 13 August 2017

ಗಿಳಿ ಬಾಗಿಲು ಹವ್ಯಕ ನುಡಿಗಟ್ಟು -40 ಸೀವಿದ್ದು ಹೇಳಿ ಬೇರಿನವರೆಗೆ ಅಗಿವಲಾಗ - ಡಾ ಲಕ್ಷ್ಮೀ ಜಿ ಪ್ರಸಾದ

ಸೀವಿದ್ದು ಹೇಳಿ ಬೇರಿನವರೆಗೆ ಅಗಿವಲಾಗ ಹೇಳುದು ನಮ್ಮ ಭಾಷೆಲಿ ಸಾಮಾನ್ಯವಾಗಿ ಅಂಬಗಂಬಗ ಮಾತಿನ ನಡುವೆ ಬಳಕೆ ಅಪ್ಪ ನುಡಿಗಟ್ಟು .ಆನುದೆ ಇದರ ಸಣ್ಣಾದಿಪ್ಪಗಲೇ ಕೇಳಿದ್ದೆ.ಆದರೆ ಸೀವಿಪ್ಪದು ಎಂತರ ಅಗಿವದು ಎಂತರ ಹೇಳಿ ಅಲೋಚನೆ ಮಾಡಿತ್ತಿಲ್ಲೆ
ಮೊನ್ನೆ ಅಮ್ಮನ ಹತ್ತರೆ ಮಾತಾಡುವಾಗ ಈ ಮಾತು ನಡುವೆ ಬಂತು.ನಮ್ಮಲ್ಲಿ ಹೆಚ್ಚಿನೋರಿಂಗೆ ಬೇರೆಯೋರ  ಕಷ್ಟ ಕಾರ್ಪಣ್ಯಗಳ ನೋಡಿ ಮರುಗುವ ಮನೋಭಾವ ಇಲ್ಲೆ .ಹೆಸರಿಂಗೆ ಬೇಕಾಗಿ ಶಿಫಾರ್ಸಿಂಗೆ ಬೇಕಾಗಿ ಸಂಘ ಸಂಸ್ಥೆಗೊಕ್ಕೆ ಲಕ್ಷ ಗಟ್ಟಲೆ ಪೈಸೆ ಕೊಡುವೋರು ಕೆಲವು ಜನಂಗ ಇದ್ದವು.ಆದರೆ ಮದ್ದಿಂಗೋ ಕಲಿವಲೋ ಸಹಾಯ ಮಾಡುವೋರು ತುಂಬಾ ಕಮ್ಮಿ ಜನಂಗ ಇಪ್ಪದು .ಇದು ಬೆಳ್ಳಾರೆಲಿ ಇಪ್ಪಗ ಎನಗೆ ಸ್ಪಷ್ಟವಾಗಿ ಅನುಭವಕ್ಕೆ ಬೈಂದು .ಬೆಳ್ಳಾರೆಯ ಹತ್ತರದ ನೆಟ್ಟಾರಿನ ಒಬ್ಬ ಸಣ್ಣ ಪ್ರಾಯದ ಮಾಣಿಗೆ ಕಿಡ್ನಿ ಹಾಳಾಗಿ ಬದಲಿ ಚಿಕಿತ್ಸೆ ಮಾಡಬೇಕಾಗಿ ಬಂತು.ಈ ಬಗ್ಗೆ ಸಹಾಯ ಕೇಳಿ ಸುಳ್ಯ ಸುದ್ದಿ ಬಿಡುಗಡೆ ಪತ್ರಿಕೆಲಿ ಹಾಕಿದ್ದರ ನೋಡಿ ಆನು ರಜ್ಜ ಪೈಸೆ ಸಂಗ್ರಹ ಮಾಡುಲೆ ಹೆರಟೆ. ಕೆಲವು ಗುರಿಕ್ಕಾರಕ್ಕಳ ದೊಡ್ಡ ಪೈಸೆ ಇಪ್ಪೋರ ಹತ್ರೆ ಪ್ರಸ್ತಾಪ ಮಾಡಿಯಪ್ಪಗ ಅವರ ಊರಿನ ಮಾಣಿ ಬಗ್ಗೆ ಅವಕ್ಕೆ ಜಾಣ ಮರೆವು ಬಂತು ! ಕೆಲವು ಜನಂಗ ನೂರಿನ್ನೂರು ಕೊಟ್ಟವು .ಆನು ಎನ್ನತ್ರೆ ಇಪ್ಪ ಮೂವತ್ತು ಸಾವಿರಕ್ಕೆ ಎನ್ನ ಅಣ್ಣ ತಮ್ಮಂದಿರು ಅಕ್ಕನ ಮಗ ಕೊಟ್ಟ ಪೈಸೆ ಎಲ್ಲಾ ಸೇರಿಸಿ ಒಂದು ಲಕ್ಷ ದಷ್ಟು ಮಾಡಿ ಕೊಟ್ಟೆ .ತಮಗಮನ ಗೆಳೆಯರಾಗಿಪ್ಪ ಒಬ್ಬರು ಒಂದರೆಡು ಲಕ್ಷ ಸಹಾಯ ಮಾಡಿದವು ನಂತರ ಬೇರೆ ಕಡೆಂದಲೂ ಸಹಾಯ ಬಂತಡ ಮತ್ತೆ ಆನು ಬೆಂಗಳೂರಿಂಗೆ ವರ್ಗಾವಣೆ ಪಡೆದು ಬಂದೆ ಮತ್ತೆ ಎಂತಾತು ಎನಗೆ ಗೊಂತಿಲ್ಲೆ  .ಎರಡು ತಿಂಗಳು ಮೊದಲು  ಅಲ್ಲೇ ಹತ್ರದ ಊರಿಂದ ಫೋನ್ ಮಾಡಿ ಎನ್ಬೇರಿನಂಗೆ ಪಿಯುಸಿ  ಓದುಲೆ ಸಹಾಯ ಮಾಡಕ್ಕು ಹೇಳಿ ಕೇಳಿದವು .ಅತು ಹೇಳಿ ಎಷ್ಟು ಫೀಸ್ ಅವುತ್ತು ಕೇಳಿದೆ.ಎರಡು ಲಕ್ಷ ಹೇಳಿದವು ಅಷ್ಟು ದುಬಾರಿ ಕಾಲೇಜೆಂತಕೆ ? ಅಲ್ಲೇ ಹತ್ರಣ ಬೆಳ್ಳಾರೆ ಗವರ್ನಮೆಂಟ್ ಕಾಲೇಜಿಂಗೆ ಹಾಕುಲಾಗದಾ ? ಹೇಳಿ ಕೇಳಿದೆ .( ಬೆಳ್ಳಾರೆ ಕಾಲೇಜಿಲಿಲಿ ಪಾಠ ಪ್ರವಚನಂಗ ಸರಿಯಾಗಿ ನಡೆತ್ರು ಒಳ್ಳೆಯ ರಿಸಲ್ಟ್ ಕೂಡ ಇದ್ದು)   ನಿಂಗಳ ಉಪದೇಶ ಬೇಡ ಸಹಾಯ ಮಾಡುವ ಮನಸಿದ್ದರೆ ಕೊಡಿ ಹೇಳಿದವು .ಆನೆಂತ ಮಾತಾಡಿದಿಲ್ಲೆ.ಎನ್ನ ದೂರುವ ನೂರಾರು ಜನರಲ್ಲಿ ಇವಂದೆ ಒಬ್ಬ ಸೇರಿದ ಅಷ್ಟೇ .
ಆರುದೆ ಪೈಸೆ ಹೆಚ್ಚಾಗಿ ಆರಿಂಗಾದರೂ ಸಹಾಯ ಮಾಡುದಲ್ಲ ಅದರ ಅರ್ಥ ಮಾಡಗೊಳ್ಳಕ್ಕು .ಅದು ಬಿಟ್ಟು ಕೊಡ್ತವು ಹೇಳಿ ಎಲ್ಲದಕ್ಕೂ ಕೇಳುದಲ್ಲ
ಮೊನ್ನೆ ಅಮ್ಮ ಊರಿಲಿ ಆರೋ ಹೀಂಗೆ ಮಾಡಿದ್ದರ ಹೇಳುವಾಗ ಆನು ಈ ವಿಚಾರ ಹೇಳಿದೆ ಅಂಬಗ ಅಮ್ಮ ಹೇಳಿದ ಆರಾದರು ಕೊಡ್ತವು ಹೇಳಿ ಅವರ ತೊಳ್ಳುಲಾಗ ಸೀವಿದ್ದು ಹೇಳಿ ಬೇರಿನ ವರೆಗೆ ಅಗಿವಲಾಗ ಹೇಳಿ.

ಕಬ್ಬು ಸೀವಿದ್ದು ಹೇಳಿ ಅದರ ಬೇರಿನವರೆಗೆ ತುಂಡು ಮಾಡುಲಾಗ ರಜ್ಜ ಕಡುದು ಚಿಗುರುಲೆ ಬಿಡಕ್ಕು ಇಲ್ಲದ್ದರೆ ಬುಡವೇ ಸತ್ತು ಹೋವುತ್ತಿಲ್ಲೆಯಾ ? ಆದರೆ ಜನಂಗ ಅದರ ಅರ್ಥ ಮಾಡಗೊಳ್ಳಕ್ಕು ಅಲ್ಲದಾ ?

Tuesday, 23 May 2017

ಹವ್ಯಕ ನುಡಿಗಟ್ಟು 39 ಬೆಲ್ಲಲ್ಲಿ ಕಡೆ ಕೊಡಿ ಇಲ್ಲೆ © ಡಾ ಲಕ್ಷ್ಮೀ ಜಿ ಪ್ರಸಾದ


ಸಾಮಾನ್ಯವಾಗಿ ಕೆಟ್ಟ ಜನರ ಬೈವಗ ಅಥವಾ ಒಂದು ಗುಂಇನ ಜನರ ಬಗ್ಗೆ ಹೇಳುವಾಗ ಪ್ರಯೋಗ ಮಾಡುವ ಹವ್ಯಕ ಮಾತಿದು
ಉದಾಹರಣೆಗೆ ಹೇಳುದಾದರೆ ದು ಕುಟುಂಬ ಇದ್ದು ಹೇಳಿ ಮಡಿಕೊಂಬ .ಅದರಲ್ಲಿ ಎಲ್ಲರೂ ಕೋಪಿಷ್ಟಂಗ ,ಸಂಸ್ಕರ ಇಲ್ಲದ್ದೋವು.ಅದರಲ್ಲಿ ಒಬ್ಬ ರಜ ವಾಸಿ ಹೇಳಿ ಆರಿಗಾದರೂ ಅನಿಸಿ ಅವ ತೊಂದರೆ ಇಲ್ಲೆ ಅಲ್ಲದಾ ? ರಜ್ಜ ಮನುಷ್ಯತ್ವ ಇದ್ದು ಅವನ ಅಣ್ಣ ತಮ್ಮಂದಿರ ಹಾಂಗ ಅಲ್ಲ ಹೇಳಿರೆ ಅವಂದೆ ಅದೇ ಸ್ವಭಾವ ಹೇಳಿ ಗೊಂತಿಪ್ಪೋರು ಎಂಥದೂ ಇಲ್ಲೆ ಬೆಲ್ಲಲ್ಲಿ ಕಡೆ ಕೊಡಿ ಇದ್ದಾ ? ಹಾಂಗೆ ಅವೆಲ್ಲ ಒಂದೇ ಹೇಳಿ ಹೇಳುತ್ತವು
ಕಬ್ಬಿಂದ ಬೆಲ್ಲ ತಯಾರು ಮಾಡುದು .ಕಬ್ಬಿಲಿ ಕಡೆ ಕೊಡಿ ತುಂಡು ಗಳಲ್ಲಿ ರುಚಿಲಿ ವ್ಯತ್ಯಾಸ ಇದ್ದು ಆದರೆ ಅದರಿದಲೇ  ತಯಾರಾದ
ಬೆ ಲ್ಲದ ಯಾವ ಕಡೆಲಿ ತಿಂದು ನೋಡಿರೂ ಒಂದೇ ರೀತಿಯ ರುಚಿ ಇರ್ತು ಅದರಲ್ಲಿ ಕಡೆ ತುಂಡು ಹೇಳಿ ಹೆಚ್ಚು ಸೀವು ಕೊಡಿ ತುಂಡು ಹೇಳಿ ಕಮ್ಮಿ ಸೀವು ಇರ್ತಿಲ್ಲೆ ( ಬೇಕಾರೆ ಈ ನೆಪಲ್ಲಿ ಆದರೂ ಅಚ್ಚು ಬೆಲ್ಲ ತಿಂದು ರುಚಿಯ ಸವಿಯಿರಿ ಆನು ಅದೇ ಮಾಡುತ್ತಾ ಇದ್ದೆ ಈಗ)  ಹಾಂಗೆ ದುಷ್ಟರ ಗುಂಪಿನ ಎಲ್ಲರೂ ಒಂದೇ ಅವರಲ್ಲಿ ಎಂತ ವ್ಯತ್ಯಾಸ ದೆ ಇಲ್ಲೆ ಹೇಳುವ ಸಂದರ್ಭಲ್ಲಿ ಬೆಲ್ಲಲ್ಲಿ ಕಡೆ ಕೊಡಿ ಇಲ್ಲೆ ಹೇಳುವ ನುಡಿಗಟ್ಟಿನ ನಮ್ಮ ಹಿರಿಯರು ಬಳಕೆ ಮಾಡಿಕೊಂಡು ಬೈಂದವು ಅದು ಎಷ್ಟು ಚಂದ ಇದ್ದು ಅಲ್ಲದಾ ? ಓದಿ ನಿಂಗಳ ಅಭಿಪ್ರಾಯ ತಿಳಿಸಿ ಇನ್ನೊಂದರಿ ಕಾಂಬ ಧನ್ಯವಾದಂಗ
ಡಾ ಲಕ್ಷ್ಮೀ ಜಿ ಪ್ರಸಾದ ಕನ್ನಡ ಉಪನ್ಯಾಸಕಿ ಮತ್ತು ತುಳು ಸಂಶೋಧಕಿ ಸರ್ಕಾರಿ ಪದವಿ ಪೂರ್ವ ಕಾಲೇಜು ನೆಲಮಂಗಲ ಬೆಂಗಳೂರು ಗ್ರಾಮಾಂತರ ಜಿಲ್ಲೆ

Tuesday, 16 May 2017

ಗಿಳಿ ಬಾಗಿಲು ಹವ್ಯಕ‌ನುಡಿಗಟ್ಟು 38 ಕೇರೆ ತಿಂಬ ರಾಜ್ಯಕ್ಕೆ ಹೋದರೆ ನಡು ತುಂಡು ತಿನ್ನಕ್ಕು © ಡಾ ಲಕ್ಷ್ಮೀ ಜಿ ಪ್ರಸಾದ

ಕಳುದ ಸರ್ತಿ ಊರಿಂಗೆ ಹೋದಿಪ್ಪಗ ಅಕ್ಕಂದೆ ಭಾವಂದೆ ಅಮೇರಿಕಲ್ಲಿ ಇಪ್ಪ ಮಗಳು ಅಳಿಯ ಮಗ ಸೊಸೆ ಮನೆಗೆ ಹೋಪ‌ ಸುದ್ಧಿ ಬಂತು.ಅಮ್ಮಂದೆ ಒಟ್ಟಂಗೆ ಹೋಪ ಅಂದಾಜು ಎನ್ನ ಅಣ್ಣಂದೆ ಒಬ್ಬ ತಮ್ಮಂದೆ ಅಮೇರಿಕಲ್ಲಿ ಇಪ್ಪದು ಈಗ ಅಕ್ಕನ‌ಮಗಳ‌ಅಳಿಉ‌ಮಗ ಸೊಸೆದೆ ಅಲ್ಲಿ ಇಪ್ಪದು ಇವು ಅಮ್ಮಂಗೆ ಪುಳ್ಳಿಯಕ್ಕ ಅನ್ನೇ ಹಾಂಗೆ ಎಲ್ಲರ ಮನೆಗೆ ಹೋಗಿ ಊರು ನೋಡಿ ಬಪ್ಪ ಪ್ಲಾನ್ ಲಿ ಇದ್ದವು ಎನ್ನ ಅಮ್ಮ ಇದಕ್ಕೆ ಮೊದಲೇ ಒಂದು ಸರ್ತಿ ಹೋಗಿ‌ಮಗಂದಿರ ಮನೆಲಿ ಆರು ತಿಂಗಳು ಇದ್ದು ಬೈಂದ .ಎನ್ನ ಅಕ್ಕ ಶುರು ಹೋಪದು  .ಅಕ್ಕಂಗೆ ರಜ್ಜ ಶುಧ್ಧ ಕ್ಲೀನ್ ಮಡಿ ಮೈಲಿಗೆ ಜಾಸ್ತಿ.ಹಾಂಗೆ ವಿಮಾನಲ್ಲಿ ಅಲ್ಲಿಯಣ ಹೋಟೆಲ್ ಗಳಲ್ಲಿ ಇದು ಎಂತ ಮಾಡುಗಪ್ಪ ಹೇಳಿ ಆನು ಯೋಚನೆ ಮಾಡಿದೆ .ಅಮ್ಮನತ್ತರೆ ಅದನ್ನೇ ಹೇಳಿದೆ.ನಾವು ಹೆರ ಹೋದಿಪ್ಪಗ ಅದೆಲ್ಲ ನೋಡುಲಾಗ ನಮ್ಮ ಊರಿಲಿ ಇಪ್ಪಗ ಇಲ್ಲಿ ಇಪ್ಪ ಹಾಂಗೆ ಇರಕ್ಕು .ಬೇರೆ ಊರಿಂಗೆ ಹೋದರೆ ಅಲ್ಲಿ ಇಪ್ಪ ಹಾಂಗೆ ಇರಕ್ಕು .ಕೇರೆ ತಿಂಬ ಊರಿಂಗೆ ಹೋದರೆ ನಡು ತುಂಡು ತಿನ್ನಕ್ಕು ಹೇಳುವ ಹವ್ಯಕ ನುಡಿಗಟ್ಟಿನ ಮಾತಿನ‌ನಡುವೆ ಹೇಳಿದ .ಅಪ್ಪಲ್ಲದ ? ಎಷ್ಟು ಒಳ್ಳೆಯ ಮಾತು.ಹೇಂಗೂ ಕೇರೆ ಮಾತ್ರ ತಿಂಬೋರ ಊರಿಂಗೆ ಹೋವುತ್ತು ಹೇಳಿ ಆದರೆ ಮತ್ತೆ ಅಂಜಿಕೆ ಮಾಡಿಕೊಂಡು ಕಡೆ ಕೊಡಿ ತಿಂಬದಲ್ಲ ನಡು ತುಂಡು ತಿಂದು ಖುಷಿ ಪಡಕ್ಕು ! ಹಾಂಗೆ ಬೇರೆ ಊರಿಂಗೆ ಹೋದಿಪ್ಪಗ ನಮ್ಮಮೂಲಭೂತ ಆಹಾರ ಸಂಸ್ಕೃತಿ ಸಸ್ಯಾಹಾರ ಹೇಳುದರ ಮಾತ್ರ ಮಡುಕ್ಕೊಂಡು ಒಳುದ ಮಡಿ ಮೈಲಿಗೆ ಎಲ್ಲ ಬಿಟ್ಟು ಸಂತೋಷ ಪಡಕ್ಕು .ಹುಟ್ಟಿನಿಂದ ಸಸ್ಯಾಹಾರಿ ಗೊಕ್ಕೆ ಅದರ ಯಾವ ಊರಿಂಗೆ ಹೋದರೂ ಬಿಡುಲೆ ಎಡಿಯ ಬ್ರಾಹ್ಮಣಾಗಿ ಹುಟ್ಟಿದ ಮೇಲೆ ಅಸರ ಬಿಡುಲೂ ಆಗ ಅಲ್ಲದ ? ಉಳಿದಂತೆ ವೇಷಭೂಷಣ, ಮಡಿ ಮೈಲಿಗೆ ಸಂಪ್ರದಾಯ ವ ಇಲ್ಲಿ ಬಿಟ್ಟು ಹೋಗಿ‌ಮತ್ತೆ ಪುನಃ ಬಂದ ಮೇಲೆ ಶುರು ಮಾಡಿದರೆ ಸಾಕು ಇಲ್ಲದ್ದರೆ ಅಲ್ಲಿ ಹೋಗಿ ಖುಷಿಯಾಗಿ ಇಪ್ಪಲೆ ಎಡಿಯ ಅಲ್ಲದ ? ನಿಂಗ ಎಲ್ಲ ಎಂಥ ಹೇಳ್ತೀರಿ ? ತುಂಬಾ ದಿನದ ನಂತರ ಗಿಳಿಬಾಗಿಲು ತೆರದ್ದೆ ಧನ್ಯವಾದಂಗ ©ಡಾ ಲಕ್ಷ್ಮೀ ಜಿ ಪ್ರಸಾದ ಕನ್ನಡ ಉಪನ್ಯಾಸಕರು ಸರ್ಕಾರಿ ಪದವಿ ಪೂರ್ವ ಕಾಲೇಜು ನೆಲಮಂಗಲ ಬೆಂಗಳೂರು ಗ್ರಾಮಾಂತರ ಜಿಲ್ಲೆ. 

Tuesday, 12 April 2016

ಗಿಳಿ ಬಾಗಿಲು (ಹವ್ಯಕ ಬ್ಲಾಗ್ ) 37 ತೊಟ್ಟು ಮುರುದು ನಕ್ಕುವಷ್ಟೇ ಇಪ್ಪದು -ಡಾ.ಲಕ್ಷ್ಮೀ ಜಿ ಪ್ರಸಾದ

ತುಂಬಾ ದಿನಂದ ಗಿಳಿ ಬಾಗಿಲಿನ ಸುದ್ದಿಗೆ ಬೈನ್ದಿಲ್ಲೇ ಆನು ,ಬರೆಯಕ್ಕು ಹೇಳಿ ಕೂದರೆ ಎನಗೆ ಎರಡು ಗೆರೆ ಬರವಲೆ ಎಡಿತ್ತಿಲ್ಲೆ.
ಬರೆಯಕ್ಕು ಹೇಳಿ ಅನ್ಸಿದ ದಿನ ಇರುಳು ಎರಡು ಗಂಟೆ ತನಕ ಕೂಡ ಕೂದು ಬರವಲೆ ಆವುತ್ತು .ಆದರೆ ಬರವ ಮೂಡ್ ಬಪ್ಪದೆ ಸಮಸ್ಯೆಯ ವಿಚಾರ
ಇತೀಚೆಗೆ ಎನಗೆ ಬರವ ಆಸಕ್ತಿ ತುಂಬಾ ಕಮ್ಮಿ ಆಯಿದು .ಎಂತಕೆ ಹೇಳಿ ಗೊಂತಿಲ್ಲೇ .ಮೊನ್ನೆ ಊರಿಂಗೆ ಹೊದಿಪ್ಪಗ ಅಮ್ಮ ಈಗ ಎಂತ ನೀನು ಹಬ್ಯಕ ನುಡಿಗಟ್ಟುಗಳ ಬಗ್ಗೆ ಬರೆತ್ತಾ ಇಲ್ಲೇ ಹೇಳಿ ಕೇಳಿದ .ಎಂತಕೋ ಬರವ ಮನಸ್ಸು ಇಲ್ಲೇ ಹೇಳಿದೆ .ಅಂಬಗ ಅಮ್ಮ ಹಾಂಗೆ ಬರವದರ ಬಿಟ್ಟುಕೊಂಡು ಬಂದರೆ ನಿನಗೆ ಮತ್ತೆ ಬರವಲೆ ಎಡಿಯ ಹೇಳಿದ .
ಅಪ್ಪಲ್ಲದ ಹೇಳಿ ಅನ್ಸಿತ್ತು ಎನಗೆ .ಈ ಮಾತಿನ ಎನಗೆ ಈ ಹಿಂದೆ ಎನ್ನ ಫೇಸ್ ಬುಕ್ ಫ್ರೆಂಡ್  ಮೆಡಿಕಲ್ ಓದುವ ಲಕ್ಷ್ಮೀಶ ಜೆ ಹೆಗಡೆ ಮಿಜಾರ್ ಕೂಡ ಹೇಳಿತ್ತಿದ.
ಅಪ್ಪು ಒಂದರಿ ಬರವದು ನಿಲ್ಸಿರೆ ಮತ್ತೆ ಬರವಲೆ ಸುರು ಮಾಡುಲೆ ತುಂಬಾ ಕಷ್ಟ ಆವುತ್ತು ಹೇಳಿ ಎನಗೂ ಅನ್ಸಿತ್ತು ಆದರೆ ಬರವ ಮನಸೇ ಇಲ್ಲದ್ದರೆ ಎಂತ ಮಾಡುದು ?
ಅದು ಇರಲಿ ಮೊನ್ನೆ ಅಮ್ಮ ಹೇಳಿ ಅಪ್ಪಗ ಮತ್ತೆ ಬರೆಯಕ್ಕು ಹೇಳಿ ಅನ್ಸಿತ್ತು .
ಮೊನ್ನೆ ಅಮ್ಮನ ಹತ್ರೆ ಮಾತಾಡುವಾಗ ಎಂಗಳ ದೂರದ ಸಂಬಂಧಿಗಳ ವಿಚಾರ ಬಂತು .ಅವು ಅಂತ ದೊಡ್ಡ ಶ್ರೀಮಂತ ರು ಏನೂ ಅಲ್ಲ ಆದರೆ ದೊಡ್ಡೋರ ಹಾಂಗೆ ಪ್ರದರ್ಶನ ಇದ್ದು ಅಡ.
ಅದರ ಹೇಳುವಾಗ ಅಮ್ಮ "ಅವಕ್ಕೆ ಎಂಥ ದೊಡ್ಡ ಆಸ್ತಿ ಎಂತದೂ ಇಲ್ಲೇ ತೊಟ್ಟು ಮುರುದು ನಕ್ಕುವಷ್ಟೇ ಇಪ್ಪದು ಹೇಳಿ ಹೇಳಿದ .
ಅಂಬಗ ಆನು ಕೇಳಿದೆ ತೊಟ್ಟು ಮುರುದು ನಕ್ಕುದು ಹೇಳಿರೆ ಎಂತದು ಹೇಳಿ ಅಮ್ಮಂಗೂ ಸರಿಯಾಗಿ ಗೊಂತಿಲ್ಲೇ
ಅಲ್ಲಿಂದಲ್ಲಿಗೆ ಉಂಡು ತಿಮ್ಬಷ್ಟು ಇಪ್ಪದರ ಹೇಳುವಾಗ ಹಾಂಗೆ ಹೇಳುದು ಹೇಳಿದ.ಮತ್ತೆ ಎನ್ಗೊಗೆ ಒಂದು ವಿಷಯ ನೆನಪ್ಪಾತು .ಕೆಲವು ಅತ್ತಿ ತೆಂಗಿನಂಥ ಮರಂಗ ಮುರುದು ಬಿದ್ದರೆ ಅದರ ಎಡೆಂದ ತುಂಬಾ ನೀರು ಬತ್ತು ಅದು ಭಾರಿ ರುಚಿದೆ ಇರ್ತು ಆರೋಗ್ಯಕ್ಕೂ ತುಂಬಾ ಒಳ್ಳೇದು ಅಡ
ಮರ ಮುರುದರೆ ಬೇಕಾದಷ್ಟು ನೀರು ಸಿಕ್ಕುತ್ತು ತೊಟ್ಟು ಮುರುದರೆ ರಜ್ಜ ಪಸೆ ಮಾತ್ರ ಸಿಕ್ಕಿತ್ತು ಅಲ್ಲದ ?ಬಹುಶ ಅದೇ ಅರ್ಥಲ್ಲಿ ತೊಟ್ಟು ಮುರುದು ನಕ್ಕುವಾಗ ಸಿಕ್ಕುವಷ್ಟು ಮಾತ್ರ ಇಪ್ಪದು ಹೇಳುವ ಮಾತು ಬಂದಿರೆಕ್ಕು
ಈ ಬಗ್ಗೆ ಹೆಚ್ಚಿನ ಮಾಹಿತಿ ಇಪ್ಪೋರು ತಿಳಿಸಿ
ನಮಸ್ಕಾರ

Wednesday, 21 October 2015

ಗಿಳಿಬಾಗಿಲು (ಹವ್ಯಕ ಬ್ಲಾಗ್ )-36 ಕುಂಡೆಗೆ ಹೆಟ್ಟಿ ಹಲ್ಲು ಉದುರ್ಸುಲೇ ಎಡಿಯ -ಡಾ.ಲಕ್ಷ್ಮೀ ಜಿ ಪ್ರಸಾದ

ತುಂಬಾ ದಿನಂದ ಬರವಲೇ ಆಯಿದಿಲ್ಲೇ ಪುರುಸೊತ್ತು ಇಲ್ಲ್ಲೇ ಹೇಳುದು ಒಂದು ನೆಪ ಅಷ್ಟೇ ವಾಸ್ತವಲ್ಲಿ ಅದು ಉದಾಸೀನವೇ ಆಗಿರೆಕ್ಕು ಹಾಂಗಾಗಿ ಇಂದು ಬರೆಯಕ್ಕೆ  ಹೇಳಿಗಟ್ಟಿ ಮಾಡಿ ಬರವಲೇ ಹೆರಟಿದೆ.

ಮೊನ್ನೆ ಊರಿಂಗೆ ಹೋದಿಪ್ಪಗ ಅಮ್ಮಯಾವುದೊ ಮಾತಿನ ನಡುವೆ "ಕುಂಡೆಗೆ ಹೆಟ್ಟಿ ಹಲ್ಲು ಉದುರ್ಸುಲೇ ಎಡಿಯ"  ಹೇಳುವ ಮಾತಿನ ಹೇಳಿದ.ಅಂಬಗ ಈ ನುಡಿಗಟ್ಟಿನ ಬಗ್ಗೆ ಬರೆಯಕ್ಕು ಹೇಳಿ ಗ್ರೇಶಿ ಅದರ ಎನ್ನ ಮೊಬೈಲ್ ನೋಟ್ ಲಿ ಬರದು ಮಡುಗಿದೆ 
ಎನ್ನ ಅಮ್ಮಎಲ್ಲರ ಹಾಂಗೆ ಅಲ್ಲ ,ತುಂಬಾ ವಿವೇಕಿ ,ಪ್ರಜ್ಞಾವಂತೆ , ಬಹಳ ವಾಸ್ತವವಾದಿ ಮತ್ತು ನೇರ ಮಾತಿನ ದಿಟ್ಟೆ ,ಹಾಂಗಾಗಿ ಎಲ್ಲವನ್ನೂ ಅವರ ಎದುರೇ ಇಪ್ಪದರ ಇಪ್ಪ ಹಾಂಗೆ ಹೇಳುತ್ತ.ಎನ್ನ ಅಮ್ಮನ ಹತ್ತರೆ ಹಿಂದೆ ಒಂದು ಎದುರು ಒಂದು ಸ್ವಭಾವ ಇಲ್ಲೇ ,ಎಲ್ಲವು ನೇರ.ಸ್ಪಷ್ಟ ಅಭಿಪ್ರಾಯಂಗ
 ಹಾಂಗಾಗಿ ಅಮ್ಮಂಗೆ ಅಡ್ಡ ಗೋಡೆ ದೀಪ ಮಡುಗಿದ ಹಾಗೆ ಇಪ್ಪ ಅಸ್ಪಷ್ಟ ಮಾತುಗ ನಡೆ ನುಡಿಗ ಅವುತ್ತಿಲ್ಲೇ .ಇಂಥ ಸಂದರ್ಭಗಳಲ್ಲಿ ಅಪ್ಪನ ಹತ್ರೆ ಅಮ್ಮ ಯಾವಾಗಲೂ ಹೇಳುತ್ತಾ ಇದ್ದ ನುಡಿಗಟ್ಟು ಇದು .
ಆರಾದರೂ ನಮಗೆ ಹಿಂದಂದ ಮುಂದಂದ ಕೆಟ್ಟದು  ಮಾತಾಡಿದರೆ ನಮಗೆ ಅವರ ಬಗ್ಗೆ ಏನಾದರೂ ಅಸಮಾಧಾನ ಇದ್ದರೆ ಅದರ ಅವರ ಸಂಬಂಧಿಕರ ಹತ್ತರೆ ಅಥವಾ ಇನ್ನರ ಹತ್ತರೆ ಹೇಳಿ ಪ್ರೆಯೋಜನ ಇಲ್ಲೇ .ಅದರ ಅವರತ್ರೆ ಮಾತಾಡಿ ಪರಿಹಾರ ಮಾಡಿಕೊಳ್ಳಕ್ಕು ಹೇಳುದು ಈ ನುಡಿಗಟ್ಟಿನ ತಾತ್ಪರ್ಯ .

ಹಲ್ಲು ಉದುರುಸಕ್ಕಾದರೆ ದೌಡೆಗೆ ಎರಡು ಮಡುಗಕ್ಕು ಹೊರತು ಕುಂಡೆಗೆ ಹೆಟ್ಟಿರೆ ಎಡಿಯ ,ಹಾಂಗೆಯೇ ಯಾವುದಾರು ಸಮಸ್ಯೆ ಇದ್ದರೆ ಅದರ ಅವರ ಹತ್ರೆ ಮಾತಾಡಿಯೇ ಪರಿಹರಿಸಕ್ಕು ಹೊರತು ಅದರ ಆರತ್ತ್ರಾದರೂ ದೂರಿ ಬೈದು ಪ್ರಯೋಜನ ಇಲ್ಲೇ .ಅವು ನಾವು ಹೇಳಿದ್ದಕ್ಕೆ ನಾಲ್ಕು ಹೆಚ್ಚು ಸೇರ್ಸಿ ಅವರತ್ರೆ ಹೇಳಿ ಸಮಸ್ಯೆಯ ಪರಿಹರಿಸುವ ಬದಲು ಇನ್ನೂ ದೊಡ್ಡ ಮಾಡುವ ಸಾಧ್ಯತೆ ಹೆಚ್ಚು .ಹಾಗಾಗಿ ಯಾವುದೇ ಸಮಸ್ಯೆ ಇದ್ದರೂ ಅದರ ನೇರವಾಗಿ ವ್ಯವಹರಿಸಿ ಪರಿಹಾರ ಮಾಡಿಕೊಳ್ಳಕ್ಕು ಹೇಳಿ ಸೂಚಿಸುವ ಹವ್ಯಕ ಭಾಷೆಯ ಚೆಂದದ ಒಂದು ನುಡಿಗಟ್ಟು ಇದು
ಕುಂಡೆ ಹೇಳುವ ಪದ ಬಳಕೆ ಅಸಭ್ಯ ಅನ್ಸುತ್ತೋ ಏನೋ ಹಾಂಗೆ ಅದರ ಬೆನ್ನು ಹೇಳಿಮಾಡುವ ಹೇಳಿ ಜ್ಹಾನ್ಸಿದೆ ಒಂದರಿ ಆದರೆಅದು ಬಳಕೆಲಿ ಇಪ್ಪದೆ ಹಾಂಗೆ ಅದು ಮಾತಾಡುವಾಗ ಅಸಭ್ಯ ಹೇಳಿ ಏನೂ ಅನ್ಸುತ್ತಿಲ್ಲೇ ಅದುಸಹಜವಾಗಿ ಬಳಕೆ ಆವುತ್ತು ಹಾನ್ಗಿಪ್ಪಗ ಅದರ ಬದಲಾಯಿಸುವ ಸ್ವಾತಂತ್ರ್ಯ ನಮಗಿಲ್ಲ ಹಾಂಗಾಗಿ ಅದರ ಹಾಂಗೆ ಮಡುಗಿದೆ ಬದಲಾಯಿಸುಲೇ ಹೋಯ್ದಿಲ್ಲೇ
ನಿಂಗಳ ಕಡೆಲಿಯೂ ಇದಕ್ಕೆ ಸಂವಾದಿಯಾಗಿಪ್ಪ ನುಡಿಗಟ್ಟುಗ ಇಕ್ಕು ಅಲ್ಲದ ?ಇದ್ದರೆ ತಿಳಿಸಿ ಆತಾ

ನಮಸ್ಕಾರ

ಡಾ.ಲಕ್ಷ್ಮೀ ಜಿ ಪ್ರಸಾದ
ಕನ್ನಡ ಉಪನ್ಯಾಸಕಿ
ಸರ್ಕಾರಿ ಪದವಿ ಪೂರ್ವ ಕಾಲೇಜು
ನೆಲಮಂಗಲ ಬೆಂಗಳೂರು ಗ್ರಾಮಾಂತರ ಜಿಲ್ಲೆ