Monday, 8 October 2018

ಮಹಿಳೆ( ಡಾ.ಲಕ್ಷ್ಮೀ ಜಿ ಪ್ರಸಾದ) ರಚಿಸಿದ ಮೊದಲ ಹವ್ಯಕ ಕನ್ನಡ ನಾಟಕ ಸುಬ್ಬಿ ಇಂಗ್ಲಿಷ್ ಕಲ್ತದು - ಒಂದು ಸಾಮಾಜಿಕ ವಿಶ್ಲೇಷಣೆ - ಅನಿತಾ ಜಿ,ಸಮಾಜ ಶಾಸ್ತ್ರ ಉಪನ್ಯಾಸಕರು

ಮಹಿಳೆ( ಡಾ.ಲಕ್ಷ್ಮೀ ಜಿ ಪ್ರಸಾದ) ರಚಿಸಿದ ಮೊದಲ ಹವ್ಯಕ ಕನ್ನಡ ನಾಟಕ ಸುಬ್ಬಿ ಇಂಗ್ಲಿಷ್ ಕಲ್ತದು - ಒಂದು ಸಾಮಾಜಿಕ ವಿಶ್ಲೇಷಣೆ
- ಅನಿತಾ ಜಿ,ಸಮಾಜ ಶಾಸ್ತ್ರ ಉಪನ್ಯಾಸಕರು
,ಸರ್ಕಾರಿ ಪದವಿ ಪೂರ್ವ ಕಾಲೇಜು ,ನೆಲಮಂಗಲ
( ದ್ರಾವಿಡ ವಿಶ್ವವಿದ್ಯಾಲಯ ಆಯೋಜಿಸಿದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅನಿತಾ ಜಿ ಇವರು ಮಂಡಿಸಿದ ಸಂಶೋಧನಾ ಪ್ರಬಂಧ)

ಹವಿಗನ್ನಡ ಸಾಹಿತ್ಯ ಚರಿತ್ರೆ ಪ್ರಾರಂಭವಾಗುವುದು 1887 ರಲ್ಲಿ ಮುಂಬಯಿಯಲ್ಲಿ ಪ್ರಕಟವಾದ ಇಗ್ಗಪ್ಪ ಹೆಗಡೆಯ ವಿವಾಹ ಪ್ರಹಸನದಿಂದ,ಕೃತಿ ಕರ್ತೃ ಕರ್ಕಿ ಸೂರಿ ವೆಂಕಟರಮಣ ರಮಣ ಶಾಸ್ತ್ರಿಗಳು,ಹವ್ಯಕ ಪ್ರಥಮ ವಾರ ಪತ್ರಿಕೆ " ಹವ್ಯಕ ಸುಬೋಧದ ಸ್ಥಾಪಕ ಸಂಶೋಧಕರು.
ಚಾರಿತ್ರಿಕ ಮಹತ್ವ
ಇದಾದ ಸುಮಾರು ನೂರು ವರ್ಷಗಳ ನಂತರ 1985ರಲ್ಲಿ ಹವ್ಯಕ ಮಹಿಳೆ ಡಾ.ಲಕ್ಷ್ಮೀ ಜಿ ಪ್ರಸಾದ್ ರಚಿಸಿದ ಸುಬ್ಬಿ ಇಂಗ್ಲಿಷ್ ಕಲ್ತದು ಎಂಬ ನಾಟಕ ಮಹಿಳೆ ರಚಿಸಿದ ಮೊದಲ ಹವ್ಯಕ ಕನ್ನಡದ ನಾಟಕವಾಗಿದೆ.
ಈ ನಾಟಕವನ್ನು ಮಹಿಳಾ ಬರಹಗಾರರಾದ ,ತುಳು ಜಾನಪದ ಸಂಶೋಧಕಾರಾಗಿ ಖ್ಯಾತರಾಗಿರುವ ,ಪ್ರಸ್ತುತ ನೆಲಮಂಗಲ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾದ ಡಾ// ಲಕ್ಷ್ಮೀ ಜಿ ಪ್ರಸಾದ ಅವರು ತಾವು ಏಳನೆಯ ತರಗತಿಯಲ್ಲಿ ಓದುತ್ತಿದ್ದಾಗ 1994 ರಲ್ಲಿ ರಚಿಸಿದರು.ಇದು ಮಹಿಳೆ ರಚಿಸಿದ ಮೊದಲ ಹವ್ಯಕ ಕನ್ನಡ ನಾಟಕ ಎಂದು ಹವ್ಯಕ ಅಧ್ಯಯನ ಕೇಂದ್ರದ ಪ್ರಧಾನ ನಿರ್ದೇಶಕರಾದ ಶ್ರೀಯುತ ನಾರಾಯಣ ಶಾನುಭೋಗರು ದೃಢೀಕರಿಸಿದ್ದಾರೆ.ಹೀಗೆ ಹವ್ಯಕ ಕನ್ನಡದ ಮೊದಲ ನಾಟಕಗಾರ್ತಿ ಎಂಬ ಹೆಗ್ಗಳಿಕೆಗೆ ಡಾ.ಲಕ್ಷ್ಮೀ ಜಿ ಪ್ರಸಾದ ಪಾತ್ರರಾಗಿದ್ದಾರೆ.
ಈ ನಾಟಕ ರಚನೆಯಾದ ಮರು ವರ್ಷವೇ ಈ ಲೇಖಕಿ ಓದುತ್ತಿದ್ದ ಶ್ರೀ ವಾಣಿವಿಜಯ ಪ್ರೌಢಶಾಲೆಯ ಯುವಜನೋತ್ಸವದಲ್ಲಿ ಪ್ರದರ್ಶನಗೊಂಡು ಮೊದಲ ಬಹುಮಾನ ಗಳಿಸಿತು.
ಕಾವ್ಯೇಷು ನಾಟಕಂ ರಮ್ಯಂ ( ಕಾವ್ಯಗಳಲ್ಲಿ ನಾಟಕವು ರಮಣೀಯವಾದುದು) ನಾಟಕ ಎಂಬುದು ಪ್ರದರ್ಶನದಲ್ಲಿ ತನ್ನ ಸಾರ್ಥಕ್ಯವನ್ನು ಕಂಡುಕೊಳ್ಳಬೇಕಾಗಿರುವುದೇ ಮುಖ್ಯ.
ಒಳ್ಳೆಯ ನಾಟಕ ಕೃತಿಯಲ್ಲಿ ಸಾಹಿತ್ಯದ ಜೊತೆ ಜೊತೆಗೆ ರಂಗ ಪರಿಕರ,ರಂಗಸಜ್ಜಿಕೆ,ನಟ ನಟಿಯರು,ಅಭಿನಯ, ಪ್ರೇಕ್ಷಕರು ಮತ್ತು ರಂಗಮನೆ( Theatre) ಮುಂತಾದ ಅಂಶಗಳು ಇದ್ದಾಗ ಮಾತ್ರ ಅದಕ್ಕೆ ಪೂರ್ಣತ್ವ ಪ್ರಾಪ್ತಿಯಾಗುತ್ತದೆ ಎಂದು ನಾಟಕ ವಿಮರ್ಶಕರಾದ ಡಾ.ವಸಂತ ಕುಮಾರ್ ಪೆರ್ಲ ಅವರು ಹೇಳುತ್ತಾರೆ.ಈ ನಾಟಕವು ಇವುಗಳಲ್ಲಿ ಹೆಚ್ಚಿನ ಅಂಶಗಳನ್ನು ಹೊಂದಿದೆ.ಎಲ್ಲಕ್ಕಿಂತ ಹೆಚ್ಚಾಗಿ ಹವ್ಯಕ ಮಹಿಳೆ ರಚಿಸಿದ ಮೊದಲ ಹವ್ಯಕ ಕನ್ನಡ ನಾಟಕ ಎಂಬ ಚಾರಿತ್ರಿಕ ಮಹತ್ವವನ್ನು ಪಡೆದಿದೆ.
ಆಶಯ
ಈ ನಾಟಕವು ಗಡಿನಾಡು ಕೇರಳದ ಕಾಸರಗೋಡು ಪರಿಸರದ ಹವ್ಯಕ ಕನ್ನಡ ಆಡುಭಾಷೆಯಲ್ಲಿ ರಚಿತವಾಗಿದೆ.ಕಾಸರಗೋಡಿನ ಪರಿಸರದ ಹವ್ಯಕ ಸಮುದಾಯದಲ್ಲಿ ಎಂಭತ್ತರ ದಶಕದಲ್ಲಿ ಹುಡುಗಿಯರನ್ನು ಪ್ರೌಢಶಾಲೆಗೆ ಕಳಹಿಸುವುದು, ಪಡೆಯುವುದು ಅಪರೂಪದ ವಿಚಾರವಾಗಿತ್ತು‌.ಹತ್ತನೆಯ ತರಗತಿ ನಂತರದ ಕಾಲೇಜು ಓದು ಬಹುತೇಕ ಗಗನ ಕುಸುಮವೇ ಆಗಿತ್ತು.ಬಡ ಹಾಗೂ ಮಧ್ಯಮ ವರ್ಗದ ಕುಟುಂಬದ ಹುಡುಗಿಯರನ್ನು ಉನ್ನತ ಶಿಕ್ಷಣಕ್ಕಾಗಿ ಕಳುಹಿಸುತ್ತಿರಲಿಲ್ಲ.
ಆ ಆತಂಕದ ಹಿನ್ನೆಲೆಯಲ್ಲಿ ನಾಟಕದ ವಸ್ತುವಿನಲ್ಲಿ ಸ್ತ್ರೀ ಶಿಕ್ಷಣದ ಅಗತ್ಯತೆಯ ಆಶಯ ಈ ನಾಟಕದಲ್ಲಿ  ಸಹಜವಾಗಿ ಮೂಡಿ ಬಂದಿದೆ.
"ಕೂಸು ಎಂತ ಓದಿದರೆಂತ ಒಲೆ ಬೂದಿ ಒಕ್ಕುದು ತಪ್ಪ"
ಹುಡುಗಿಯರು ಏನು ಓದಿದರೇನು? ಒಲೆ ಬೂದಿ ಗೋರುವುದು ತಪ್ಪದು ಎಂಬ ಗಾದೆ ಮಾತು ಹವ್ಯಕ ಭಾಷೆಯಲ್ಲಿ ಪ್ರಚಲಿತವಿತ್ತು.ಆಗಿನ ಕಾಲದಲ್ಲಿ ಎಂದರೆ ಸುಮಾರು ಮೂವತ್ತಮೂರು ವರ್ಷಗಳ ಹಿಂದೆ ರಚನೆಯಾದ ಕಾಲದ ಸಾಮಾಜಿಕ ಸ್ಥಿತಿಗತಿಗಳು,ಪರಿಸರ ಆಚರಣೆ,ಪದ್ದತಿಗಳು ಇದರಲ್ಲಿ ಅಭಿವ್ಯಕ್ತಿಯನ್ನು ಪಡೆದಿದೆ.
ಈ  ಕಿರು ನಾಟಕದಲ್ಲಿ ಆರು ಪಾತ್ರಗಳಿವೆ‌.,ಸುಬ್ಬಿ ,ಸುಬ್ಬಿಯ ಗಂಡ,ಸುಬ್ಬಿಯ ತಂದೆ ತಾಯಿ ಮತ್ತು ಸುಬ್ಬನ ಇಬ್ಬರು ಸ್ನೇಹಿತರು.ಇವರುಗಳು ಆಡುವ ಸಂಭಾಷಣೆಗಳು ಸಹಜವಾಗಿದ್ದು,ಪಾತ್ರಗಳು ನೈಜವಾಗಿ ಮೂಡಿ ಬಂದಿವೆ‌.
ಈ ನಾಟಕವು ಹಾಸ್ಯದ ಜೊತೆಗೆ ಗಂಭೀರ ಸಾಮಾಜಿಕ ಸಮಸ್ಯೆಯಾದ ಬಾಲ್ಯ ವಿವಾಹದ ಪರಿಣಾಮವನ್ನು ಬಿಂಬಿಸುತ್ತದೆ‌.ಕನ್ನಡ ಭಾಷೆಯ ಮಹತ್ವ ,ಅನ್ಯಭಾಷಾ ವ್ಯಾಮೋಹ,ಕಾನೂನು ಮಾಹಿತಿ ಹಾಗೂ ಸ್ತ್ರೀ ಶಿಕ್ಷಣದ ಅಗತ್ಯತೆಯ ಸಂದೇಶಗಳನ್ನು ಒಳಗೊಂಡಿದೆ.
ಕಥಾವಸ್ತು
ಸುಬ್ಬಿ ಹಳ್ಳಿಯ ಹುಡುಗಿ.ನಾಟಕದ ನಾಯಕಿ,ಹೈಸ್ಕೂಲ್ ಮೆಟ್ಟಿಲು ಹತ್ತದ ತುಸು ಮುಂಗೋಪಿ ಹುಡುಗಿ.ರಾಜನ( ಸುಬ್ಬನ) ಪೂರ್ಣ ಹೆಸರು ಸುಬ್ಬರಾಜ .ಅದನ್ನು ಎಸ್ ರಾಜ ಎಂದು ಚಿಕ್ಕದಾಗಿಸಿ ಚೊಕ್ಕದಾಗಿಸಿಕೊಂಡಿರುವ ಆಧುನಿಕ ಶಿಕ್ಷಣ ಪಡೆದ ಯುವಕ.ಈತ ನಾಟಕದ ನಾಯಕ.ಸುಬ್ಬ ರಾಜ ತನ್ನ ಸ್ನೇಹಿತರಲ್ಲಿ ತನ್ನ ಮಡದಿ ತುಂಬಾ ಓದಿದ ಹುಡುಗಿ ಎಂದು ಸುಳ್ಳು ಹೇಳುವುದು, ಸ್ನೇಹಿತರು ಮನೆಗೆ ಬರುತ್ತಾರೆಂದು ದಿಢೀರಾಗಿ ಇಂಗ್ಲಿಷ್ ಕಲಿಸುವುದು,ಇದರಿಂದಾಗಿ ಸ್ನೇಹಿತರ ಎದುರು ನಗೆ ಪಾಟಲಿಗೀಡಾಗಿ,ಮುಂದೆ ತನ್ನ ತಪ್ಪಿನ ಅರಿವಾಗಿ ನಮ್ಮ ಭಾಷೆ ಕನ್ನಡ ಕಸ್ತೂರಿ ಎಂದು ಅರಿವು ಆಗುತ್ತದೆ.
ಹೈಸ್ಕೂಲ್ ಓದ ಬೇಕಾದ ಚಿಕ್ಕ ವಯಸ್ಸಿನಲ್ಲಿ ಮಗಳಿಗೆ ಮದುವೆ ಮಾಡಿದ ಬಗ್ಗೆ ಪಶ್ಚಾತ್ತಾಪ ಪಟ್ಟ ತಂದೆ ತಾಯಿ ಮುಂದೆ ಸುಬ್ಬಿಯನ್ನು  ಓದಿಸಲು ಸಿದ್ಧರಾಗುವ ಕಥಾನಕ ಇದರಲ್ಲಿದೆ.
ಇಂಗ್ಲಿಷ್ ಬಾರದ್ದರೆ  ಏನು ತೊಂದರೆ ಇಲ್ಲೆ,ಅದು ನಾಚಿಕೆ ಹೇಳುವ ಭ್ರಮೆ ಬೇಡ,ಚೆಂದದ ಭಾಷೆ ನಮ್ಮ ಕನ್ನಡ ಕಸ್ತೂರಿ ಇಪ್ಪಗ ನಮಗೆ ಇಂಗ್ಲಿಷ್ ನ  ಹಂಗು ನಮಗೆಂತಕೆ  ? ಎಂಬಲ್ಲಿ ಕನ್ನಡದ ಮಹತ್ವವನ್ನು ಎತ್ತಿ ಹಿಡಿಯಲಾಗಿದೆ.
ಇನ್ನು ಇನ್ನೊಂದು ಕೊನೆಯ ಮತ್ತು ಒಂದು ಪ್ರಮುಖ ಅಂಶದ ಬಗ್ಗೆ ವಿಶ್ಲೇಷಿಸುವುದಾದರೆ ಸ್ತ್ರೀ ಶಿಕ್ಷಣದ ಮಹತ್ವದ ಬಗ್ಗೆ " ಒಂದು ಹೆಣ್ಣು ಕಲಿತರೇ ಆ ಕುಟುಂಬ ಕಲಿತಂತೆ" ಎಂಬ ಮಾತಿನಂತೆ ಈ ನಾಟಕವು ಮಹಿಳಾ ಲೇಖಕರಿಂದ ರಚನೆಗೊಂಡು ಸ್ತ್ರೀ ಶಿಕ್ಷಣದ ಅಗತ್ಯವನ್ನು ಸಾರುವ ನಾಟಕವಾಗಿದೆ‌
ಈ ನಾಟಕದ ಕೊನೆಯ ಘಟ್ಟದಲ್ಲಿ ಸುಬ್ಬಿಯ ತಂದೆ ತಾಯಿಯರು ಅವಳನ್ನು ಮತ್ತೆ ಶಾಲೆಗೆ ಕಳಹಿಸಲು ನಿರ್ಧರಿಸುತ್ತಾರೆ‌.ಸುಬ್ಬಿಯ ತಂದೆ " ಅವ ಬಪ್ಪಗ ಎರಡು ಮೂರು ವರ್ಷ ಆವುತ್ತು ,ಅಷ್ಟು ಸಮಯ ಇನ್ನು  ಸುಬ್ಬಿ ಶಾಲೆಗೆ ಹೋಗಿ ಕಲಿಯಲಿ,ಮುಂದೆದೆ ಅದು ಓದಲಿ " ಎನ್ನುವಲ್ಲಿ  ಇದು ಸ್ಪಷ್ಟವಾಗುತ್ತದೆ.
ನಾಟಕದ ಯಶಸ್ಸು ರಂಗ ಪ್ರಯೋಗದಲ್ಲಿದೆ.
ಸುಬ್ಬಿ ಇಂಗ್ಲಿಷ್ ಕಲ್ತದು ನಾಟಕದ ಮೊದಲ ರಂಗ ಪ್ರಯೋಗ: 1985 ಸ್ಥಳ: ವಾಣೀ ವಿಜಯ ಪ್ರೌಢಶಾಲೆ,ಕೊಡ್ಲಮೊಗರು
ಎರಡನೇ ರಂಗ ಪ್ರಯೋಗ: 1995 ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ ಪ್ರಥಮ ದರ್ಜೆ ಕಾಲೇಜು, ಕಟೀಲು
ತೃತೀಯ ರಂಗ ಪ್ರಯೋಗ : 1997 ಹವ್ಯಕ ಮಹಾ ಸಭಾ ವಾರ್ಷಿಕೋತ್ಸವ
ನಂತರವೂ ಅನೇಕ ಪ್ರದರ್ಶನಗಳನ್ನು ಕಂಡಿದೆ.
( ದ್ರಾವಿಡ ವಿಶ್ವವಿದ್ಯಾಲಯ ಆಯೋಜಿಸಿದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅನಿತಾ ಜಿ ಇವರು ಮಂಡಿಸಿದ ಸಂಶೋಧನಾ ಪ್ರಬಂಧ)( ನನ್ನ ನಾಟಕವನ್ನು ಆಧರಿಸಿ ರಾಷ್ಟ್ರೀಯ ವಿಚಾರ ಸಂಕಿರಣ ದಲ್ಲಿ ಪ್ರಬಂಧ ಮಂಡನೆ ಆಗಿದ್ದರೂ ಕೂಡ ಹವ್ಯಕ ನಾಟಕ ಸಂಕಲನಕ್ಕೆ ಸೇರುವಷ್ಟು ಯೋಗ್ಯತೆ ಪಡೆದಿಲ್ಕ,ಯಾಕೆಂದರೆ ಯಾರಿಗೂ ನಾನು ಡೊಂಕು ಸಲಾಮು ಹಾಕಿಕೊಂಡು ಬಕೆಟ್ ಹಿಡಿದುಕೊಂಡು ಹೋಗುವುದಿಲ್ಲ- ಡಾ.ಲಕ್ಷ್ಮೀ ಜಿ ಪ್ರಸಾದ)
 ಪೂರ್ಣ ನಾಟಕವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ https://laxmihavyaka.blogspot.com/2014/01/1984.html?m=1