Friday 6 June 2014

ಗಿಳಿ ಬಾಗಿಲು (ಹವ್ಯಕ ಬ್ಲಾಗ್ )-28 ಉಡುಗಿ ಇಡ್ಕಿದ ಕುಂಟು ಹಿಡಿಸೂಡಿದೆ ಪ್ರಯೋಜನಕ್ಕೆ ಬತ್ತು .ಡಾ.ಲಕ್ಷ್ಮೀ ಜಿ ಪ್ರಸಾದ

ಎಂಗ ಜಾಲಿಂಗೆ ಸಿಮೆಂಟ್ ಹಾಕಿದ್ದಿಲ್ಲೆ,ಮನೆ ಮುಂದೆ 30x 25 ಅಡಿ ಯಷ್ಟು ಜಾಗೆಲಿ ರಜ್ಜ ಹೂಗಿನ ಸೆಸಿ ,ಒಂದೆರಡು ಬದನೆ ಸೆಸಿ ,ಬಸಳೆ ಬಳ್ಳಿ ಒಟ್ಟಿಂಗೆ ಒಂದು ಪಾರಿಜಾತ ,ಎರಡು ಮೂರು ಮೀಸೆ ಹೂಗಿನ ಎತ್ತರದ ಸೇಸಿಗ,ಒಂದು ಬೇನ್ಸೊಪ್ಪಿನ ಸಣ್ಣ ಮರ  ಇದ್ದು . ಸಿಮೆಂಟ್ ಹಾಕಿದರೆ ನೀರು ಇಂಗುತ್ತಿಲ್ಲೆ ,ಸೇಸಿಗ ಬೆಳೆತ್ತಿಲ್ಲೆ ,ಹಕ್ಕಿಗ ಕುಂಡೆಚ್ಚಂಗ ಗಮ್ಮತ್ತು ಮಾಡಿಕೊಂಡು ಇರಲಿ ಹೇಳಿ ಸೇಸಿಗಳ  ಹಾಂಗೆ ಬಿಟ್ಟಿದೆಯ .ನಡುಗೆ ಒಂದು ಬೋರ್ ವೆಲ್,ಅದಕ್ಕೆ ಟೆರೇಸಿನ ನೀರು ಮತ್ತು ಜಾಲಿಂಗೆ ಬಿದ್ದ ನೀರಿನ ಇಂಗುವ ಹಾಂಗೆ ಮಾಡಿದ್ದೆಯ .
ನಡಕ್ಕೊಂದು ಹೋಪ ದಾರಿಗೆ ಮಾತ್ರ ಕಲ್ಲು ಹಾಸಿದ್ದೆಯ .
ಎರಡು ದಿನಂದ ಮಳೆಯೂ ಬತ್ತಾ ಇದ್ದು .ಒಟ್ಟಿಂಗೆ ಹೆಗ್ಳಂಗಳುದೆ ಮಣ್ಣು ಎಳದು ಹಾಕಿದ್ದವು .ಹಾಂಗೆ ಮಣ್ಣು  ಎದ್ದು ಹೋಪ ದಾರಿಗೆ ಬಿದ್ದು ಕಾಲಿನ್ಗೆ ಹಿಡ್ಕೊಂಡು ಇತ್ತು .ಮನೆ ಒಳಂಗೆ ಮಣ್ಣು ಬತ್ತು ಹೇಳಿ ದಾರಿಯ  ಉಡುಗುವ ಹೇಳಿ ಹೆರಟೆ.ಅದು ಈ ಮೆದು ಕಡ್ಡಿಯ ಆಧುನಿಕ ಹಿಡಿಸೂಡಿಲಿ ಹೊವುತ್ತಾ?
ಅಂಬಗ ಎನಗೆ ಊರಿನ ಮನೆ ಒಳ ಉಡುಗಿ ಕುಂಟು ಆದ ಹಿಡಿ ಸೂಡಿಯ ಇಡುಕ್ಕದ್ದೆ ಜಾಳು ಉಡುಗುಲೆ ಹೇಳಿ ಮಡಿಕ್ಕೊಂಡು ಇದ್ದದು ನೆನಪಾತು .ಒಟ್ಟಿಂಗೆ ಉಡುಗಿ ಇಡ್ಕಿದ ಕುಂಟು ಹಿಡಿಸೂಡಿದೆ ಪ್ರಯೋಜನಕ್ಕೆ ಬತ್ತು ಹೇಳುವ ನುಡಿಗಟ್ಟುದೆ ನೆಂಪಾತು.

ಯಾವ ವಸ್ತು ಕೂಡಾ ನಿಷ್ಪ್ರಯೋಜಕ ಅಲ್ಲ .ಒಂದಲ್ಲ ಒಂದು ಪ್ರಯೋಜನ ಇದ್ದೆ ಇರುತ್ತು,ಹಾಂಗಾಗಿ ಆರ ಬಗ್ಗೆದೆ ತಾತ್ಸಾರ ಭಾವನೆ ಇಪ್ಪಲಾಗ ಹೇಳುವ ಅರ್ಥವ ಇದು ತಿಳಿಸುತ್ತು .

ಯಶಸ್ಸು ಹೇಳುದು ಯಾವಾಗಲೂ ಒಬ್ಬನ ಯತ್ನಂದ ಮಾತ್ರ ಸಿಕ್ಕುತ್ತಿಲ್ಲೆ.ಅದಕ್ಕೆ ತುಂಬಾ ಜನಂಗ ಪ್ರತ್ಯಕ್ಷವಾಗಿ ಅಪ್ರತ್ಯಕ್ಷವಾಗಿ ಸಹ ಕರಿಸಿರುತ್ತವು .ಆದರೆ ಯಾವಾಗಲು ಯಶಸ್ಸು ಮುಂಚೂಣಿಲಿ ಇದ್ದ ಅಥವಾ ಆ ಕಾರ್ಯವ ಸುರುಮಾಡಿದ ,ಕೊನೆ ಎತ್ತಿಸಿದ ಒಬ್ಬನ ಹೆಸರಿಲಿ ದಾಖಲಾವುತ್ತು.ಅಂತ ಸಂದರ್ಭಗಳಲ್ಲಿ ತನ್ನ ಕಾರ್ಯದ ಯಶಸ್ಸಿಂಗೆಸಹಕರಿಸಿದ ಎಲ್ಲರನ್ನೂ ಮರ್ತುಬಿಡುವ ಪ್ರವೃತ್ತಿ ಅನೇಕ ಜೆನಂಗಳಲ್ಲಿ ನಾವು ಕಾಣುತ್ತು.
ಇಂಥ ಸಂದರ್ಭಲ್ಲಿದೆ "ಈಗ ಅವಂಗೆ ಉಪಕಾರ ಮಾಡಿದೋರ ನೆನಪಿಲ್ಲೆ,ಉಡುಗಿ ಇಡ್ಕಿದ ಕುಂಟು ಹಿಡಿಸೂಡಿದೆ ಬೇಕಾವುತ್ತು ,ಒಂದಿನ ನಮ್ಮ ಸಹಾಯ ಬೇಕಕ್ಕು,ಅಂಬಗ ನೆನಪಕ್ಕು, ನೋಡುವ ಹೇಳಿ ಕೋಳ್ಯೂರು ಕಡೆಲಿ ನಮ್ಮ ಭಾಷೆಲಿಈ ಮಾತಿನ ಬಳಕೆ ಮಾಡುತ್ತವು,
ಬೇರೆ ಕಡೆಲಿದೆ ಈ ಪಡೆನುಡಿ ಬಳಕೆಲಿ ಇಕ್ಕು .ಇದಕ್ಕೆ ಸಮಾನಾಂತರವಾದ ಮಾತುಗಳೂ ಇಕ್ಕು ,ಗೊಂತಿಪ್ಪೋರು ತಿಳುಸಿ .

Thursday 5 June 2014

ಗಿಳಿ ಬಾಗಿಲು (ಹವ್ಯಕ ಬ್ಲಾಗ್ ) ಗುಡ್ದೆಂದ ಗುಡ್ಡೆ ಅಡ್ಡ ಸಾವಿರ ಇದ್ದು-ಡಾ.ಲಕ್ಷ್ಮೀ ಜಿ ಪ್ರಸಾದ


ಆನು ಹೈ ಸ್ಕೂಲ್  ಓದುವ  ಕಾಲಕ್ಕೆ  ಎಂಗಳ ಊರಿಲಿ ಎಸ್ ಎಸ್ ಎಲ್ ಸಿ ಲಿ ಫಸ್ಟ್ ಕ್ಲಾಸ್ ಪಾಸ್ ಅಪ್ಪದು ಒಂದು  ದೊಡ್ಡ ವಿಷಯ ಆಗಿತ್ತು.ಆನು ಫಸ್ಟ್ ಕ್ಲಾಸ್ ತೆಗೆದೆ.ಶಾಲೆಗೆ ಸೆಕೆಂಡ್ ಬಂದೆ. ಭಾರಿ ಕೊಷಿ ಆತು ಎನಗೆ !ಅಪ್ಪ- ಅಮ್ಮ ಅಜ್ಜಿ ಅಜ್ಜ ಎಲ್ಲೊರಿಂಗುದೆ. ಹಠ ಮಾಡಿ ಪಿಯುಸಿ ಗೆ ಸೇರಿದೆದೆ..
ಭಾರೀ ಹೆಮ್ಮೆಲಿ ಪಿಯುಸಿ ಕ್ಲಾಸ್ ಗೆ ಹೋದೆ .ಸುರುವಣ ದಿನ ಎಲ್ಲರ ಪರಿಚಯ ಹೇಳುಲೇ ಇತ್ತು .ಅಂಬಗ ಗೊಂತಾತು ಎನಗೆ ಎನ್ನ ಫಸ್ಟ್ ಕ್ಲಾಸ್ ಮಾರ್ಕು ಒಂದು ದೊಡ್ಡ ಮಾರ್ಕೆ ಅಲ್ಲ .ಅಲ್ಲಿ 80-85 % ಮಾರ್ಕು ತೆಗದ ಮಕ್ಕ ಇತ್ತಿದವು .

ಕಾಲೇಜಿಂಗೆ ಸೇರುವಾಗ ಎನಗೆ ಡಿಗ್ರಿ ಮಾಡುದು ದೊಡ್ಡ ವಿಷಯ ಹೇಳಿ ಅನ್ಸಿತ್ತು .ಡಿಗ್ರಿ ಮಾಡ್ರೆ ಒಳ್ಳೆ ಸಂಬಳದ ಗೌರವದ ಕೆಲಸ ಸಿಕ್ಕುತ್ತು ಹೇಳಿ ಆರೋ ಹೇಳುದರ ಕೇಳಿತ್ತಿದೆ.ಆದರೆ  ಬಿಎಸ್ಸಿ ಡಿಗ್ರಿ ಮಾಡಿ ಅಪ್ಪಗ ಗೊಂತಾತು ಡಿಗ್ರಿ ಲೆಕ್ಕಕ್ಕೇ ಇಲ್ಲೆ ,ಎಂ. ಎ ಮಾಡದ್ರೆ ಎಂತದೂ ಪ್ರಯೋಜನ ಇಲ್ಲೆ ಹೇಳಿ .
ಡಿಗ್ರಿ ಓದುವಾಗಲೇ ಮದುವೆ ಬೇರೆ ಆಗಿತ್ತು !ಇಪ್ಪತ್ತೊಂದು ವರ್ಷ ಹಿಂದೆ ಮದುವೆ ಆದ ಮೇಲೆ ಓದುದು ಹೇಳುವ ವಿಚಾರ ದೊಡ್ಡ ಕ್ರಾಂತಿಯೇ ಸರಿ !ಆದರೂ ಮನೆ ಮಂದಿ  ಎಲ್ಲರ ಎದುರು ಹಾಕಿಕೊಂಡು ಎಂ .ಎ (ಸಂಸ್ಕೃತ )ಓದಿದೆ .ಮೊದಲ ರಾಂಕ್ ದೆ ತೆಗದೆ.ರಜ್ಜ ಸಮಯ ಭಾರಿ ಸಂತೋಷಲ್ಲಿ ಇತ್ತಿದೆ (,ಎನ್ನ ಬಿಟ್ರೆ ಆರಿಲ್ಲೆ ಹೇಳುವ ಹಾಂಗೆ ಹೆಮ್ಮೆಲಿ ಬೀಗಿಕೊಂಡು !!)

ಆದರೆ  ಎಂ.ಎ ರಾಂಕ್ ಇದೆಲ್ಲ ದೊಡ್ಡ ವಿಷಯವೇ ಅಲ್ಲ ,ಎಂ ಫಿಲ್ , ಪಿಎಚ್. ಡಿ ಮಾಡಿದೋರು ತುಂಬಾ ಜನಂಗ ಇದ್ದವು ಹೇಳಿ ಮತ್ತೆ ಗೊಂತಾತು .
ಸರಿ ! ಕಲಿವಲೆ ತುಂಬಾ ಆಸಕ್ತಿ ಇದ್ದ ಆನು ಎಂ.ಫಿಲ್,ಪಿಎಚ್.ಡಿ ಯೂ ಮಾಡಿದೆ !ಅಷ್ಟಪ್ಪಗ ಎನಗೆ ಗೊಂತಾತು ಎನ್ನ ಕಲಿಕೆ ಏನೇನೂ ಅಲ್ಲ !ಡಬಲ್ ಪಿಎಚ್.ಡಿ ಮಾಡಿದೋರು  ಇದ್ದವು ತುಂಬಾ ಜೆನಂಗ ,ಪೋಸ್ಟ್  ಡಾಕ್ಟೊರಲ್ ಸ್ಟಡಿ ಮಾಡಿದ ವಿದ್ವಾಂಸರು ತುಂಬಾ ಜನಂಗ ಇದ್ದವು .
ಪಿಎಚ್.ಡಿ ಹೇಳುದು ಸಂಶೋಧನೆಯ ಕೊನೆ ಅಲ್ಲ ಸುರು ಹೇಳುದೂ ಗೊಂತಾತು !ಇನ್ನು ಮಾಡಕ್ಕಾದ  ಕೆಲಸ ತುಂಬಾ ಇದ್ದು ,ಮಾಡಿದ್ದು ಏನೇನೂ ಅಲ್ಲ ಹೇಳುದು ಮನವರಿಕೆ ಆತು
."ಗುಡ್ದೆಂದ ಗುಡ್ಡೆ ಅಡ್ಡ ಸಾವಿರ ಇದ್ದು" ಹೇಳುವ ನುಡಿಗಟ್ಟು ಎನಗೆ ಅಂಬಗ ಅರ್ಥ ಆತು .

ಒಂದೊಂದೇ ಹಂತ ಏರಿದ ಹಾಂಗೆ ಅದರಂದ ಮೇಲೆ ಎಷ್ಟೋ ಜನಂಗ ಇದ್ದವು ಹೇಳಿ ನಮಗೆ ಗೊಂತಾವುತ್ತಾ ಹೋವುತ್ತು.
ಇಂಥ ವಿಚಾರ ಹೇಳುವಾಗ "ಗುಡ್ದೆಂದ ಗುಡ್ಡೆ ಅಡ್ಡ ಸಾವಿರ ಇದ್ದು" ಹೇಳುವ ನುಡಿ ಗಟ್ಟಿನ ನಮ್ಮಲ್ಲಿ ಬಳಕೆ ಮಾಡುತ್ತು .

ನಾವು ತಲೆ ಎತ್ತಿ ನೋಡುವಾಗ ಒಂದು ಎತ್ತರದ ಗುಡ್ಡೆ ಕಾಣುತ್ತು.ಅದರ ಹತ್ತಿ ತಲೆ ಎತ್ತಿ ನೋಡುವಾಗ ಅದರಂದ ಎತ್ತರದ ಇನ್ನೊಂದು ಗುಡ್ಡೆ ಕಾಣುತ್ತು ,ಅದನ್ನೂ ಹತ್ತಿ ನೋಡ್ರೆ ಮತ್ತೊಂದು ಕಾಣುತ್ತು .
ಹಾಂಗೆ ನಮ್ಮಂದ ಪೈಸೆಲಿ,ವಿದ್ಯೆಲಿ ,ಸ್ಥಾನಲ್ಲಿ,ತಿಳುವಳಿಕೆಲಿ ,ಬುದ್ಧಿವಂತಿಕೆಲಿ  ಹೆಚ್ಚಿನೋರು ತುಂಬಾ ಜನಂಗ ಇದ್ದವು .ಹಾಂಗಾಗಿ ನಮ್ಮ ಬಿಟ್ರೆ ಆರಿಲ್ಲೆ ಹೇಳುವ ಹಾಂಗೆ ಹಾಂಕಾರ ತೋರ್ಸುಲೆ ಆಗ ಹೇಳುವ ತಿಳುವಳಿಕೆಯ ಈ ನುಡಿಗಟ್ಟು ತಿಳಿಸುತ್ತು.

Sunday 1 June 2014

ಗಿಳಿ ಬಾಗಿಲು (ಹವ್ಯಕ ಬ್ಲಾಗ್ ) 26 ಅವ ಬಡ್ದು ಕತ್ತಿಲಿ ಬಡುದ -ಡಾ.ಲಕ್ಷ್ಮೀ ಜಿ ಪ್ರಸಾದ

ಇತ್ತೀಚೆಗೆಂಗೆ  ಒಂದು ಮದುವೆಗೆ ಹೋಗಿತ್ತಿದೆ.ಅಲ್ಲಿ ಎನ್ನ ಹಳೆಯ ಎನ್ನ ಫ್ರೆಂಡ್  ಮಾತಾಡುಲೆ ಸಿಕ್ಕಿತ್ತು.ಅದು ತುಂಬಾ ಸ್ನೇಹ ಮಯಿ ,ಬಾಯಿ ತುಂಬಾ ಮಾತಾಡಿಗೊಂಡು ಲವಲಿವಿಕೆಲಿ ಓಡಾಡಿಗೊಂಡು ಇಪ್ಪ ಜೆನ ಅದು .ಅಂದು ಎಂತಕೋ ತುಂಬಾ ಚಪ್ಪೆ ಇತ್ತು .ಸಾಮಾನ್ಯಕ್ಕೆಲ್ಲ ಯಾವುದೇ ಸಮಸ್ಯೆಗೂ ತಲೆಕೆದಿಸಿಕೊಂಬ ಜೆನ ಅಲ್ಲ ಅದು .ಹಾಂಗಾಗಿ ಎಂತ ಹೇಳಿ ?ಕೇಳಿದೆ .

ಅಷ್ಟಪ್ಪಗ ಅದು ಹೇಳಿತ್ತು .ಎಂಗೊಗು ಪಕ್ಕದ ಜಾಗವ ತೆಕ್ಕೊಂಡು ಹೊಸತಾಗಿ ಬಂದ ಜೆನಂಗಳದ್ದು ರಜ್ಜ ಜಾಗೆಯ ತಕರಾರು .ಸುಮ್ಮನೆ ಸುಮಾರು ಮಾರ್ಗ ಹತ್ರೆ ಇಪ್ಪ ಎಂಗಳ ಜಾಗೆಯ ಹತ್ತು ಸೆನ್ಸ್ ಅವರದ್ದು ಹೇಳಿ ಗಲಾಟೆ ಮಾಡುತ್ತಾ ಇದ್ದವು .ಅದು ದೊಡ್ಡ ವಿಷಯ ಅಲ್ಲ,ಅವರ ಸುಲಭಲ್ಲಿ ಬಾಯಿ ಮುಚ್ಚುಸುಲೆ  ಎಡಿತ್ತಿತ್ತು.ಆದರೆ ಆಚಮನೆ ರಾಜಣ್ಣ  ಬಡ್ದು ಕತ್ತಿಲಿ ಬಡುದ
 .ಅವಕ್ಕೆ ಮನೆಗೆ ಹೋಪ ದಾರಿ ಎಂಗ ಕೊಡಕ್ಕು ಅಥವಾ ಆಚ ಮನೆ ರಾಜಣ್ಣ (ಹೆಸರು ಬದಲಾಯಿಸಿದ್ದು )ಕೊಡಕ್ಕು.ಇಷ್ಟರ ವರೆಗೆ ಎಂಗಳ ಜಾಗೆಲಿ ಹೋಗಿಕೊಂಡು ಇದ್ದದು .ಮಾರ್ಗ ಹತ್ರಣ ಜಾಗೆ ಅವರದ್ದು ಹೇಳಿ ಬೇಲಿ ಹಾಕಿದ್ದಕ್ಕೆ  ಎಂಗ ಅಂಬಗ ದಾರಿ ಹೋಪಲೆ ಬಿಡೆಯ ಹೇಳಿ" ಹೇಳಿದೆಯ .
ಎಂಗೊಗು ಆಚ ಮನೆ ರಾಜಣ್ಣ ನೋರಿಂಗೂ ತುಂಬಾ ಒಳ್ಳೆದಿದ್ದು .ಅವು ಗೆಂಡ ಹೆಂಡತಿ ಇಬ್ರೂ ಕೆಲಸಕ್ಕೆ ಹೋಪ ಕಾರಣ ಅವು ಬಪ್ಪಲ್ಲಿಯವರೆಗೆ ಅವರ ಇಬ್ರು ಮಕ್ಕಳೂ ಎಂಗಳ ಮಕ್ಕಳ ಒಟ್ಟಿಂಗೆ ಎಂಗಳ ಮನೆ ಮಕ್ಕಳ ಹಾಂಗೆ ಬೆಳದ್ದು..ಹೊತ್ತಪ್ಪಗ ಕಾಪಿ ತಿಂಡಿ ಎಂಗಳಲ್ಲಿಯೇ ಆನು ಕೊಟ್ಟು ಗೊಂಡು ಇದ್ದದು.ಎಷ್ಟೋ ಸರ್ತಿ ಅವು ಕೆಲಸಂದ ಬಪ್ಪಗ ತಡವು ಆದರೆ ಅವರ ಮಕ್ಕ ಎರಡುದೆ ಎಂಗಳಲ್ಲಿ ಉಂಡು ಒರಗಿಕೊಂಡು ಇತ್ತಿದವು .
ಈಗ ಆಚ ಮನೆ ರಾಜಣ್ಣ ಅವಕ್ಕೆ ಹೋಪಲೆ ದಾರಿ ಬಿಟ್ಟಿದ. .ಅ ಮಾರ್ಗದ ಹತ್ರಣ ಜಾಗೆ ಬಗ್ಗೆ ಎಂಗಳತ್ರೆ ರೆಕಾರ್ಡ್ ಗಟ್ಟಿ ಇದ್ದು .ಆದರೆ ಎಂಗಳ ಜಾಗೆ ಎಂಗಳದ್ದು ಹೇಳಿ ಸಾಧಿಸಕ್ಕಾದರೆ ಇನ್ನು ಕೋರ್ಟ್ ಗೆ ಹೋಗಿ ಆಯಕ್ಕು.ಆಚ ಮನೆ ರಾಜಣ್ಣನ್ಗೆ ಆ ಜಾಗೆ ಎಂಗಳದ್ದು ಹೇಳಿ ಗೊಂತಿದ್ದು ಆದರೂ ಎಂಗ ಕೋರ್ಟು ಕಚೇರಿ ಅಲವಾಂಗೆ ಮಾಡಿದ .ಪಕ್ಕದ ಜಾಗೆ ತೆಕ್ಕೊಂಡೋರು ಹೊಣದ್ದರಂದ ಹೆಚ್ಚು ಬೇಜಾರು ಆದ್ದು ಎಂಗೊಗೆ ಆಚ ಮನೆ ರಾಜಣ್ಣ ಮಾಡಿದ ವಿಶ್ವಾಸ ದ್ರೋಹ "ಹೇಳಿ ಹೇಳಿತ್ತು .

ಅವ ಎಂಥಕೆ ಹಾಂಗೆ ಮಾಡಿದ್ದು ?ಹೇಳಿ ಆನು ಕೇಳಿದೆ ."ಆನು  ಇಬ್ರ ಕಡೆಲಿ ಇಲ್ಲೆ,ಎನಗೆ ಇಬ್ರೂ ಅಕ್ಕ ಪಕ್ಕದೋರು ,ಹೋಪಲೆ ದಾರಿ ಕೇಳುವಾಗ ಇಲ್ಲೆ ಹೇಳಿ ಹೇಂಗೆ ಹೇಳುದು ?ಹೇಳುತ್ತ ಹೇಳಿ ಹೇಳಿತ್ತು .
ಅಪ್ಪು !ಅದರ ಪರಿಸ್ಥಿತಿ ಎನಗೆ ಅರ್ಥ ಆತು .ಆರೋ ಮಾಡುವ ದ್ರೋಹಂದ ನಮ್ಮ ಆತ್ಮೀಯರು ಹೇಳಿ ಇಪ್ಪೋರು ಮಾಡುವ ವಿಶ್ವಾಸ ದ್ರೋಹ ತುಂಬಾ ಪೆಟ್ಟು ಕೊಡುತ್ತು.!ಅದರಂದ ಚೇತರಿಸಿ ಕೊಳ್ಳಕ್ಕಾದರೆ ತುಂಬಾ ಸಮಯ ಹಿಡಿತ್ತು.
ಹರಿತದ ಕತ್ತಿಲಿ ಕಡುದರೆ ಗಾಯ ಆವುತ್ತು .ಗಾಯ ಗುಣ ಆದರೆ ಅಲ್ಲಿಗೆ ಬೇನೆದೆ ಹೋವುತ್ತು.ಆದರೆ ಬಡ್ದು ಕತ್ತಿಲಿ ಬಡುದರೆ ಹೇರಂದ ಗಾಯ ಕಾಣುತ್ತಿಲ್ಲೇ,ಆದರೆ ಅಪ್ಪ ಬೇನೆ ತುಂಬಾ ಸಮಯ ಒಳಿತ್ತು .
ಹಾಂಗೆ ಆರೋ ದ್ರೋಹ ಮಾಡ್ರೆ ಅವರತ್ರೆ ಕೋಪ, ದ್ವೇಷ ಮಾತ್ರ ಬತ್ತು ,ಆದರೆ ನಂಬಿದೋರು ವಿಶ್ವಾಸ ದ್ರೋಹ ಮಾಡಿ ನಮ್ಮ ವಿರೋಧಿಗಳ ಒಟ್ಟಿಂಗೆ ಕೈ ಜೋಡಿಸಿದರೆ, ಕೋಪಂದ ಹೆಚ್ಚು ಮನಸಿಂಗೆ ಪೆಟ್ಟು ಆವುತ್ತು .ಆ ಬೇನೆ ತುಂಬಾ ಸಮಯ ಒಳಿತ್ತು .ಇಂಥ ಸಂದರ್ಭಲ್ಲಿ ಬಡ್ದು ಕತ್ತಿಲಿ ಬಡುದ ಹೇಳುವ ಮಾತಿನ ಬಳಕೆ ಮಾಡುತ್ತವು.ಇದಕ್ಕೆ ಸಂವಾದಿಯಾಗಿ ಬೆನ್ನಿಂಗೆ ಕತ್ತಿ  ಹಾಕಿದ ಹೇಳುವ ಮಾತುದೆ ಬಳಕೆಲಿ ಇದ್ದು .
ಕನ್ನಡಲ್ಲಿ ಕಂಬಳಿಯಲ್ಲಿ ಸುತ್ತಿ ಹೊಡೆಯುವುದು ಹೇಳುವ ಮಾತು ಮೇಲ್ನೋಟಕ್ಕೆ ಇದಕ್ಕೆ ಸಮಾನ ಹೇಳುವ ಹಾಂಗೆ ಅನ್ಸುತ್ತು .ಆದರೆ ಇದಕ್ಕೂ ಅದಕ್ಕೂ ಭಾವಲ್ಲಿ ತುಂಬಾ ವ್ಯತ್ಯಾಸ ಇದ್ದು .ಬಡ್ದು ಕತ್ತಿಲಿ ಬಡುದ ಹೇಳುದು ವಿಶ್ವಾಸ ದ್ರೋಹ ಮಾಡಿದ ಹೇಳುವ ಅರ್ಥವ ಸೂಚಿಸುತ್ತು.ಕಂಬಳಿಲಿ ಸುತ್ತಿ ಬಡಿವದು ಹೇಳ್ರೆ  ಮಾಡಕ್ಕಾದ್ದರ  ನೇರವಾಗಿ ಮಾಡದ್ದೆ ಉಪಾಯವಾಗಿ ಮಾಡಿದ ಹೇಳುವ ಅರ್ಥ ಬತ್ತು ಹೇಳಿ ಎನಗೆ ಅನ್ಸುತ್ತು .
ಈ ಬಗ್ಗೆ ತಿಳುದೋರು ತಿಳುಸಿ