Wednesday, 8 August 2018

ಗಿಳಿಬಾಗಿಲು ಹವ್ಯಕ ನುಡಿಗಟ್ಟು 53 ಸ್ವರ್ಗದ ಬಾಗಿಲಿಲಿ ನರಕದ ನಾಯಿ © ಡಾ.ಲಕ್ಷ್ಮೀ ಜಿ ಪ್ರಸಾದ

"ಸ್ವರ್ಗದ ಬಾಗಿಲಿಲಿ ನರಕದ ನಾಯಿ" ಇದೊಂದು  ನಮ್ಮ ಭಾಷೆಲಿ ಬಳಕೆಲಿ ಇಪ್ಪ  ಅಪರೂಪದ ನುಡಿಗಟ್ಟು. ಒಂದು ಕುಟುಂಬಲ್ಲಿ ಗೆಂಡನೋ ಮಗನೋ‌ ಅತೀ ದಾಂದೂಂ ಮಾಡುವ ಸ್ವಭಾವದೋರು.ಅದೇ ಮನೆಲಿ ಹೆಂಡತಿಯೋ ಅಬ್ಬೆಯೋ ತುಂಬಾ ಕುರೆ ಇದ್ದರೆ ಅಂತಹ ಸಂದರ್ಭಲ್ಲಿ ಬಳಕೆ ಮಾಡುವ ಮಾತಿದು.ಗೆಂಡ ತುಂಬಾ ದುಂದುವೆಚ್ಚದ ಸ್ವಭಾವದೋನು.ಯಾವಾಗಲೂ ತುಂಬಾ ಕ್ರಯದ ಅಂಗಿ ವಸ್ತ್ರ ಹಾಕುದು .ಮನೆಗೂ ತುಂಬಾ ಕ್ರಯದ ಸಾಮಾನುಗಳ ತಪ್ಪದು‌.ನೆಂಟ್ರುಗೊಕ್ಕೆ ಭಾರಿ ಸಮ್ಮಾನ ಮಾಡುವ ಸ್ವಭಾವದವ.ಅವನ ಹೆಂಡತಿ ತುಂಬಾ ಕುರೆ‌.ಚಾಯ ಮಾಡುವಾಗ ಸೆಕ್ಕರೆ ಕಮ್ಮಿ ಹಾಕುದು.ಊಟ ತಿಂಡಿ ಸರಿಯಾಗಿ ಮಾಡದ್ದೆ ಪೈಸೆ ಒಳಿಸುಲೆ ನೋಡುದು.ಹರುದ ಹಳೆಯ ಸೀರೆಯನ್ನೇ ಸುತ್ತುದದರ ನೋಡಿ ಅಪ್ಪಗ ಜನಂಗ ಸ್ವರ್ಗದ ಬಾಗಿಲಿಲಿ ನರಕದ ನಾಯಿ ಹೇಳುವ ಮಾತಿನ ಬಳಕೆ ಮಾಡುತ್ತವು.ಗೆಂಡ ಹೇಂಗೂ ದಾಂ ದೂಂ.ತುಂಬಾ ಖರ್ಚು ಮಾಡುತ್ತ‌.ಖರ್ಚು ಮಾಡುಲೆ ಪೈಸೆಗೇನೂ ಕೊರತೆ ಇಲ್ಲೆ‌ಹಾಂಗಿಪ್ಪಗ ಸರಿಯಾಗಿ ಊಟ ತಿಂಡಿ ಮಾಡದ್ದೆ ಹರುದ ಸೀರೆ ಸುತ್ತುವ ಹೆಂಡತಿಯ ಸ್ವರ್ಗದ ಬಾಗಿಲಿಲಿ ಇಪ್ಪ ನರಕದ ನಾಯಿಗೆ ಹೋಲಿಸಿ ವ್ಯಂಗ್ಯ ಮಾಡುವ ಮಾತಿದು.   

Monday, 6 August 2018

ಗಿಳಿಬಾಗಿಲು: ಹವ್ಯಕ ನುಡಿಗಟ್ಟು 52 ಒಂದು ರಚ್ಚೆಂದ ಬಿಡ ಒಂದು ಗೂಂಜಿಂದ ಬಿಡ .© ಡಾ.ಲಕ್ಷ್ಮೀ ಜಿ ಪ್ರಸಾದ

ಮಕ್ಕೊಗೆ ಆಡುಲೆ ಎಷ್ಟೇ ಸಾಮಾನುಗ ಇರಲಿ,ಒಬ್ಬ ತೆಕ್ಕೊಂಡದೇ ಇನ್ನೊಬ್ಬಂಗೆ ಬೇಕು.ಅದೇ ಬೇಕು ಹೇಳಿ ಇಬ್ರುದೆ ಹಠ ಮಾಡುತ್ತವು.ಅಷ್ಟಪ್ಪಗ ಅಲ್ಲಿಪ್ಪೆ ಹೆರಿಯೋರು ದೊಡ್ಡೋನತ್ರೆ ಅವ ನಿನ್ನ ತಮ್ಮ ಅಲ್ಲದಾ ಅವಂಗೆ ಕೊಡು ಹೇಳಿರೆ ಅವ ಕೇಳುತ್ತಾ ಇಲ್ಲ ,ಸಣ್ಣೋನ ಹತ್ತರೆ ಬಾ ನಿನಗೆ ಬೇರೆ ಕೊಡ್ತೆ ಅದರ ಅಣ್ಣಂಗೆ ಕೊಡ್ತೆ ಹೇಳಿರೆ ಅವಂದೆ ಒಪ್ಪುತ್ತಾ ಇಲ್ಲೆ‌.ಇಬ್ರನ್ನು ಒಪ್ಪುಸುಲೆ ಎಡಿಯದ್ದ ಸಂದರ್ಭಲ್ಲಿ ಒಂದು ರಚ್ಚೆಂದ ಬಿಡ,ಒಂದು ಗೂಂಜಿಂದ ಬಿಡ ಹೇಳುವ ಮಾತಿನ ಬಳಕೆ ಮಾಡುತ್ತವು.ರೆಚ್ಚೆ ಗೂಂಜು ಇಪ್ಪದು ಹಲಸಿನ ಹಣ್ಣಿಂಗೆ‌.ಇಬ್ರುದೆ ಒಂದೇ ಹಣ್ಣಿಂಗೆ ಎಳದಾಡುತ್ತವು ಹೇಳಿ ಭಾವಿಸಿರೆ ಒಬ್ಬ ಗೂಂಜಿನ ಗಟ್ಟಿಯಾಗಿ ಹಿಡಿತ್ತ.ಇನ್ನೊಬ್ಬ ರೆಚ್ಚೆಯ ಗಟ್ಟಿಯಾಗಿ ಹಿಡಿತ್ತ.ಒಟ್ಟಿಲಿ ಹಣ್ಣು ಇಬ್ರಿಂಗೂ ಸಿಕ್ಕುತ್ತಿಲ್ಲೆ ಹೇಳಿ ಅರ್ಥ .
ಹಾಂಗೆಯೇ ಒಂದೇ ವಿಷಯಕ್ಕೆ ಸಂಬಂಧಿಸಿ ಅವರವರದ್ದೇ ಸರಿ ಹೇಳಿ ವಾದ ಮಾಡುವೋರ ಬಗ್ಗೆದೆ ಈ ಮಾತಿನ ಬಳಕೆ ಮಾಡುತ್ತವು.
ಡಾ.ಲಕ್ಷ್ಮೀ ಜಿ ಪ್ರಸಾದ

Thursday, 2 August 2018

ಗಿಳಿಬಾಗಿಲು 51 ಹವ್ಯಕ ನುಡಿಗಟ್ಟು : ಮುಂದಣ ಎಮ್ಮೆಯ ಪಚ್ಚೆಯ ನೋಡಿ ಹಿಂದಣ ಎಮ್ಮೆ ನೆಗೆಮಾಡಿತ್ತಡ - ಡಾ.ಲಕ್ಷ್ಮೀ ಜಿ ಪ್ರಸಾದ

ಮುಂದಣ ಎಮ್ಮೆಯ ಪಚ್ಚೆಯ ನೋಡಿ ಹಿಂದಣ ಎಮ್ಮೆ ನೆಗೆ ಮಾಡಿತ್ತಡ.ಆದರೆ ಅದಕ್ಕುದೆ ಹಿಂದೆ ಅದೇ ಇದ್ದು ಹೇಳಿ ಗೊಂತಿಲ್ಲೆ ಹೇಳುವ ಮಾತು ಹವ್ಯಕ ಭಾಷೆಲಿ ಬಳಕೆಲಿ ಇದ್ದು.ಅವರವರ ತಪ್ಪು ಅವಕ್ಕವಕ್ಕೆ ಕಾಣ್ತಿಲ್ಲೆ.ಬೇರೆಯೋರ ತಪ್ಪು ಕಾಣುತ್ತು.ಅದರ ದೊಡ್ಡದಾಗಿ ಮಾಡಿ ಹೇಳ್ತವು.ಇಂತೋರ ಬಗ್ಗೆ ಹೇಳುವಗ ಬಳಕೆ ಅಪ್ಪ ನುಡಿಗಟ್ಟು ಇದು.ಮುಂದಣ ಎಮ್ಮೆಯ ಪಚ್ಚೆ( ಮೂತ್ರ ವಿಸರ್ಜನಾಂಗ)ಯ ನೋಡಿ ಹಿಂದಣ ಎಮ್ಮೆ ನೆಗೆ ಮಾಡಿತ್ತಡ.ಆದರೆ ಅದಕ್ಕೆ ಕೂಡ ಅದು ಇದ್ದು ಹೇಳುದು ಅದಕ್ಕೆ ಗೊಂತಿಲ್ಲೆ.
ಹಾಂಗೆ ಬೇರೆಯೋರ ಲೋಪದೋಷಂಗಳ ಎತ್ತಿ ಹೇಳುವ ಜನಂಗೊಕ್ಕೆ ಅವರವರ ಲೋಪ ದೋಷಂಗ ಕಾಣುತ್ತೇ ಇಲ್ಲೆ.ಅವರ ಬಟ್ಲಿಲಿ ಹೆಗ್ಳ ಕೊಳದು ನಾರುತ್ತರೂ ಬೇರೆಯೋರ ಬಟ್ಲಿಲಿ ನೆಳವು ಕೂಯಿದು ಹೇಳಿ ಹೇಳಿದಡ ಹೇಳುವ ಇನ್ನೊಂದು ನುಡಿಗಟ್ಟು ಇದಕ್ಕೆ ಸಂವಾದಿಯಾಗಿ ಬಳಕೆ ಆವುತ್ತು. ಅದೇ ರೀತಿ ಅವರವರ ಬೆನ್ನು ಅವಕ್ಕವಕ್ಕೆ ಕಾಣುತ್ತಿಲ್ಲೆ.ಹೇಳುವ ಮಾತುದೆ ಬಳಕೆಲಿ ಇದ್ದು.

Sunday, 10 June 2018

ಗಿಳಿ ಬಾಗಿಲು( ಹವ್ಯಕ ಬ್ಲಾಗ್) ಹವ್ಯಕ ನುಡಿಗಟ್ಟು - 50 ತೌಡು‌ ಮುಕ್ಕೇಲ ಹೋಗಿ ಉಮಿ‌ ಮುಕ್ಕೇಲ ಬತ್ತ - ಡಾ.ಲಕ್ಷ್ಮೀ ಜಿ ಪ್ರಸಾದ

ತೌಡು‌ ಮುಕ್ಕೇಲ ಹೋಗಿ ಉಮಿ‌ ಮುಕ್ಕೇಲ ಬತ್ತ - ಡಾ.ಲಕ್ಷ್ಮೀ ಜಿ ಪ್ರಸಾದ

"ತೌಡು‌ ಮುಕ್ಕೇಲ ಹೋಗಿ ಉಮಿ‌ ಮುಕ್ಕೇಲ ಬತ್ತ "
- ಇದೊಂದು ಹವ್ಯಕ ಭಾಷೆಲಿ ಪ್ರಚಲಿತವಾಗಿಪ್ಪ ನುಡಿಗಟ್ಟು ,ಇದು ತುಳು ಮತ್ತೆ ಕನ್ನಡ  ಭಾಷೆಲಿಯೂ ಬಳಕೆಲಿ ಇದ್ದು.
ಮೊದಲಿನ ಕಾಲಲ್ಲಿ ಒಬ್ಬ ರಾಜ ಇತ್ತಿದ ಅಡ.ಅವನ ಊರಿಲಿ ತುಂಬಾ ಬರಗಾಲ ಬಂತು.ಅಂಬಗ ಅವ ಎಲ್ಲೊರಿಂಗೂ ಒಂದೊಂದು ಸೇರು ತೌಡು ಕೊಟ್ಟ ಅಡ.ಅಕ್ಕಿಯ ಹೆರಣ ಚೋಲಿಯ ಹೊಡಿಗೆ ತೌಡು ಹೇಳುತ್ತವು.ದನಗೊಕ್ಕೆ ಇದರ ಹಿಂಡಿ ಒಟ್ಟಿಂಗೆ ಕೊಡುತ್ತವು.ನಂತರ ಆ ರಾಜ ಒಂದು ಸೇರು ತೌಡಿನ ಬದಲು ಒಂದು ಸೇರು ಅಕ್ಕಿಯ ಹಿಂದೆ ಕೊಡಕ್ಕು ಹೇಳಿ‌ ಕಾನೂನು ಮಾಡಿದ ಅಡ‌.ಈ ರಾಜನ ದುರಾಡಳಿತಕ್ಕೆ ಜನ ರೋಸಿ ಹೋಗಿ ಬೇರೊಬ್ಬ ರಾಜ ಬಪ್ಪಲೆ ಕಾಯ್ತಾ ಇರ್ತವು.ಒಂದು ದಿನ ಇನ್ನೊಬ್ಬ ರಾಜ ಬಂದು ಇವನ ಸೋಲಿಸಿ ಆ ಊರಿನ ರಾಜ ಆದ ಅಡ.ಜನಂಗ ರಜ್ಜ ನೆಮ್ಮದಿಯ ಉಸುಲು ಬಿಟ್ಟವು.ಆದರೆ ಅದು ಹೆಚ್ಚು ದಿನ ಇತ್ತಿಲ್ಲೆ‌
ಈ ರಾಜ ಒಂದು ಸೇರು ಉಮಿ ಕೊಟ್ಟು ಒಂದು ಸೇರು ಅಕ್ಕಿ ವಸೂಲು ಮಾಡಿದ ಅಡ‌.
ಈ ಜಾನಪದ ಕಥೆಯ ಅಧರಿಸಿ ತೌಡು‌ ಮುಕ್ಕೇಲ ಹೋಗಿ ಉಮಿ ಮುಕ್ಕೇಲ ಬಂದ / ಬತ್ತ ಹೇಳುವ ಮಾತು ಹುಟ್ಟಿತ್ತು.
ಒಬ್ಬ  ಕೆಟ್ಟ ಅಧಿಕಾರಿ ಹೋಗಿ ಅವಂದಲೂ ಹೆಚ್ಚು ಧೂರ್ತ ಅಧಿಕಾರಿ ಬತ್ತ ಹೇಳುವ ಸಂದರ್ಭಲ್ಲಿ ಈ ಮಾತಿನ ಬಳಕೆ ಅವುತ್ತು.ಇದಕ್ಕೆ ಸಂವಾದಿಯಾಗಿ ಒಬ್ಬಂದೊಬ್ಬ ಅಸಲು ಹೇಳುವ ಮಾತುದೆ ಬಳಕೆಲಿ ಇದ್ದು
© ಡಾ.ಲಕ್ಷ್ಮೀ ಜಿ ಪ್ರಸಾದ

Monday, 4 June 2018

ಗಿಳಿ ಬಾಗಿಲು ( ಹವ್ಯಕ ಬ್ಲಾಗ್) ಹವ್ಯಕ ನುಡಿಗಟ್ಟು 49 ತನ್ನಿಚ್ಛೆಗುದೆ ಸಾಣೆ ತಲೆಗುದೆ ಮದ್ದಿಲ್ಲೆ © ಡಾ.ಲಕ್ಷ್ಮೀ ಜಿ ಪ್ರಸಾದ

ಕಳುದ ರಜೆಲಿ ಅಮ್ಮನ ಮನೆಗೆ ಹೋದಿಪ್ಪಗ ಅರಂತಾಡಿ ತಿಮ್ಮಪ್ಪಪ್ಪಚ್ಚಿ ಬಂದಿತ್ತಿದವು.ಅದೂ ಇದೂ ಮಾತನಾಡುತ್ತಾ ಆರೋ ಒಬ್ಬನ ವಿಚಾರ ಬಂತು.ಅಮ್ಮ ಅಪ್ಪಚ್ಚಿ ಹತ್ತರೆ ಅವಕ್ಕೆ ರಜ್ಜ ಬುದ್ಧಿ ಹೇಳಿ ಸರಿ ಮಾಡುಲಾಗದಾ ಹೇಳಿ ಕೇಳಿದ‌.ಅಷ್ಟಪ್ಪಗ ಅಪ್ಪಚ್ಚಿ " ಅವು ಆರ ಮಾತುದೆ ಕೇಳುವ ಜಾತಿಗ ಅಲ್ಲ ,ಅವಕ್ಕೆ ಅವು ಹೇಳಿದ್ದೆ ಆಯಕ್ಕು.ನಮ್ಮಲ್ಲಿ ತನ್ನಿಚ್ಚೆ ಹೇಳ್ತವಲ್ಲ ಹಾಂಗೆ ಇಪ್ಪ ಸ್ವಭಾವ ಹೇಳಿ ಹೇಳಿದವು.ಮತ್ತೆ ಪುನಃ ತನ್ನಿಚ್ಚೆಗುದೆ ಸಾಣೆ ತಲೆಗುದೆ ಮದ್ದಿಲ್ಲೆ ಹೇಳುವ ಮಾತೇ ಇದ್ದನ್ನೇ ಹೇಳಿ ಹೇಳಿದವು.
ತನ್ನಿಚ್ಚೆಗುದೆ ಸಾಣೆ ತಲೆಗುದೆ ಮದ್ದಿಲ್ಲೆ ಹೇಳುವ ಮಾತು ಕೇಳಿ ಅಪ್ಪಗ ಎನ್ನ ಕೆಮಿ ಕುತ್ತ ಆತು.ಅಂಬಗಳೇ ಕೇಳಿದೆ ಹಾಂಗೆ ಹೇಳಿರೆ ಎಂತದು ಹೇಳಿ.
 ಸುಮಾರು ಮಾಣಿಯಂಗೊಕ್ಕೆ ಪ್ರಾಯ ಆದ ಹಾಂಗೆ ತಲೆಕಸವು ಉದುರಿ ಬೋಳು ಅಪ್ಪದು ಇದ್ದು.ಇದಕ್ಕೆ ‌ಮದ್ದು ಇಲ್ಲೆ ಹಾಂಗೆಯೇ ತನ್ನ ಮಾತೇ ಅಂತಿಮ ಹಾಂಗೇ ನಡೆಯಕ್ಕು ಹೇಳುವೋರ ತಿದ್ದುಲೆ ಎಡಿಯ.ಈ ಎರಡಕ್ಕೂ ಪರಿಹಾರ ಇಲ್ಲೆ (ಸಾಣೆ ತಲೆಯ ಮಾಣಿಗೆ ಕೂಸು ಸಿಕ್ಕದ್ದ ಸಮಸ್ಯೆಯ ಎಳೆಯ ಆಧರಿಸಿ ಒಂದು ‌ಮೊಟ್ಟೆಯ ಕಥೆ ಸಿನೆಮಾ ಬಂದು ರೈಸಿದ್ದು ನಿಂಗೊಗೆಲ್ಲ ಗೊಂತಿಕ್ಕು)
ಎರಡು ಒಂದೇ ರೀತಿದು.ಹಾಂಗಾಗಿ ಎರಡನ್ನೂ ಸಮೀಕರಿಸಿ ತನ್ನಿಚ್ಛೆಗುದೆ ಸಾಣೆ ತಲೆಗುದೆ ಮದ್ದಿಲ್ಲೆ ಹೇಳಿ ಹೇಳುತ್ತವು.ನಮ್ಮ ಹವ್ಯಕ ಭಾಷೆಲಿ ಇಂತಹ ಅಪರೂಪದ ನುಡಿಗಟ್ಟುಗ ಇದ್ದು. ಇವೆಲ್ಲದರೆ ಸಂಗ್ರಹ ಮಾಡುವ ಅಗತ್ಯ ಇದ್ದು.
ಕಾಲಕ್ರಮೇಣ ಇಂಗ್ಲಿಷ್ ಹಾಂಗೆ ಇತರ ಭಾಷೆಗಳ ಪ್ರಭಾವಂದಾಗಿ ಇಂತಹ ನುಡಿಗಟ್ಟುಗಳ ಬಳಕೆ ಕಮ್ಮಿ ಆವುತ್ತಾ ಇದ್ದು.ನಮ್ಮ ಮುಂದಣ ಜನಾಂಗೊಕ್ಕೆ ತಿಳಿಸುವ ಸಲುವಾಗಿ ಆದರೂ ಇದರ ಸಂಗ್ರಹ ಮಾಡಕ್ಕು ಅಲ್ಲದಾ ?
ಡಾ.ಲಕ್ಷ್ಮೀ ಜಿ ಪ್ರಸಾದ

Thursday, 26 April 2018

ಗಿಳಿ ಬಾಗಿಲು : ಹವ್ಯಕ ನುಡಿಗಟ್ಟು 48 ಕಥೆ ಕೈಲಾಸ © ಡಾ.ಲಕ್ಷ್ಮೀ ಜಿ ಪ್ರಸಾದ

ಗಿಳಿ ಬಾಗಿಲು : ಹವ್ಯಕ ನುಡಿಗಟ್ಟು 48 ಕಥೆ ಕೈಲಾಸ  © ಡಾ.ಲಕ್ಷ್ಮೀ ಜಿ ಪ್ರಸಾದ
ಕಳುದ ಸರ್ತಿ ಊರಿಂಗೆ ಹೋದಿಪ್ಪಗ ಅಪ್ಪನ ಮನೆಲಿ ಮೂರು ಪುಚ್ಚೆ ಕುಂಞಿಗ ಇತ್ತಿದವು.ಇಲ್ಲಿ ಪುಚ್ಚೆಗ ಹಾವು ಚೇಳು ಅದು ಇದು ಹಿಡುದು ಮನೆ ಒಳ ತಂದು ಹಾಕುತ್ತವು ಹೇಳಿ ಪುಚ್ಚೆ ಕುಂಞಿಗಳ ಸಾಂಕಿಗೊಂಡು ಇತ್ತಿದವಿಲ್ಲೆ .ಇತ್ತೀಚೆಗೆ ಎನ್ನ ಸೊಸೆಯಕ್ಕ ( ತಮ್ಮನ ಮಗಳಕ್ಕ) ಅವರ ಅಜ್ಜನ ಮನೆ ಪೆರುವೊಡಿಗೆ ಹೋದಿಪ್ಪಗ ಅಲ್ಯಣ ಹತ್ರಣ ಮನೆಲಿ  ಎರಡು ಪುಚ್ಚೆ ಕುಂಞಿಗಳ ನೋಡಿ ಬೇಕು ಹೇಳಿ ಹಠ ಮಾಡಿ ಮನೆಗೆ ತಂದು ಸಾಂಕುತ್ತಾ ಇದ್ದವು.ಇವರ ಒಟ್ಟಿಂಗೆ ಕಾಕೆ ಅಥವಾ ಗೂಮನ  ಬಾಯಿಂದ ಬಿದ್ದ ಒಂದು ಸಣ್ಣ ಪುಚ್ಚೆ ಕುಂಞಿಗೆ ಸೇರ್ಪಡೆ ಆಯಿದು .ಅವು ಸಣ್ಣ ಕುಂಞಿಗ ಆಗಿದ್ದು ಅವಕ್ಕೆ ಪೆಡಿಗ್ರಿ ಹಾಕುತ್ತವು.ರಜೆಲಿ ಸೊಸೆಯಕ್ಕ ಮತ್ತೆ ಅಜ್ಜನ ಮನೆಗೆ ಹೋದವು.  ಅವು ಹೋದ ದಿನ ಇರುಳು ಒಂದು ಪುಚ್ಚೆ ಕುಂಞಿ ಸುಮಾರು ಹೊತ್ತ ಕಾಣೆ ಆತು. ಚೂ ಚು ಹೇಳಿ ದೆನಿಗೇಳಿರುದೆ ಒಂದರ ಸುದ್ದಿ ಇಲ್ಲೆ‌.ಒಂದು ವೇಳೆ ನಿಜಕ್ಕೂ ಒಂದು ಕುಂಞಿ ಕಾಣೆ ಆದರೆ ಮಕ್ಕ ಹಿಂದೆ ಬಪ್ಪಗ ಕೂಗಿ ಗಲಾಟೆ ಮಾಡುಗನ್ನೆ.ಅದರ ಊಹಿಸಿ ಆನು ಅಮ್ಮನತ್ತರೆ ಈ ಪುಚ್ಚೆ ಕುಂಞಿ ಕಾಣೆ ಆದರೆ ನಾವಿನ್ನು ಎಲ್ಲಿಯಾದರೂ ಆಶ್ರಮ ನೋಡಕ್ಕಷ್ಟೇ ಹೇಳಿ ನೆಗೆ ಮಾಡಿದೆ.ಅಂಬಗ ಅಮ್ಮ ನಿನ್ನ ಮಗ  ಸಣ್ಅದಿಪ್ಪಗ ಎನಗು ಗಣೇಶಂಗೂ  ಕಥೆ ಕೈಲಾಸ ಮಾಡುತ್ತಿತ್ತ ಹೇಳಿ ಹಿಂದೆ ನಡದ ಒಂದು ವಿಚಾರವ ಹೇಳಿದ.ಅನು ಮಗ ಸಣ್ಣದಿಪ್ಪಗ ಒಂದು ವರ್ಷದ ಮಾಣಿಯ ಅಮ್ಮನ ಮನೆಲಿ ಬಿಟ್ಟಿತ್ತಿದೆ.ಆನು ಸೈಂಟ್ ಅಲೋಶಿಯಸ್ ಕಾಲೇಜಿಲಿ ಲೆಕ್ಚರ್ ಆಗಿತ್ತಿದೆ.ಹಾಂಗಾಗಿ ಮಗನ ಅಮ್ಮನ ಮನೆಲಿ ಬಿಟ್ಟು ವಾರಕ್ಕೊಂದರಿ ಬಂದು ಗೊಂಡು ಇತ್ತಿದೆ.ಒಂದು ದಿನ ಅಮ್ಮ ಎನ್ನ ಮಗಂಗೆ ರಸ್ಕ್ ತಿಂಬಲೆ ಕೊಟ್ಟಿತ್ತಿದ ಅಡ.ತಮ್ಮ ಅವನ ನೋಡಿಗೊಂಡು ಎಂತದೋ ಕೆಲಸ ಮಾಡುತ್ತಾ ಇತ್ತಿದ ಅಡ‌.ರಜ್ಜ ಹೊತ್ತಿಲಿ ತಿರುಗಿ ನೋಡುವಗ ಎನ್ನ ಮಗನ ಉಸಿರು ಸಿಕ್ಕಾಕೊಂಡಿದು.ಅವನ ಹಿಡ್ಕೊಂಡು ಓಡಿ ಅಮ್ಮನ ಹತ್ತರೆ ಬಂದ ತಮ್ಮ.ಅಂಬಗ ಅಮ್ಮ ಮಗನ ಬಾಯಿಗೆ ಕೈಹಾಕಿ ಗೆಂಟ್ಲಿಲಿ ಸಿಕ್ಕಿ ಹಾಕಿಕೊಂಡ ರಸ್ಕಿನ ತುಂಡಿನ ತೆಗದ ಅಡ‌.ತಮ್ಮ ಅಮ್ಮನ ಹತ್ತರೆ ಕರಕೊಂಡು ಬಪ್ಪಷ್ಟರಲ್ಲಿ ಉಸಿರು ಕಟ್ಟಿ ಮೋರೆ ನೀಲಿ ಆಗಿ  ಮಾಣಿಯ ತಲೆ  ಅಡ್ಡ ಮಾಲಿತ್ತಡ.ದೇವರ ದಯೆಂದ ರಸ್ಕಿನ ತುಂಡು ಹೆರ ಬಂತು .
ಹಾಂಗಾಗಿ ಮಗ ಅರವಿಂದ ಬಚಾವ್ ಆದ.ಇಲ್ಲದ್ದರೆ ಕಥೆ ಕೈಲಾಸ ಆವುತ್ತಿತ್ತು.ಆನುದೆ ಗಣೇಶಂದೆ( ತಮ್ಮ) ಕೆರೆಯೋ ಬಾವಿಯೋ ನೋಡಕ್ಕಾತು ಅಷ್ಟೇ ಹೇಳಿ ಅಮ್ಮ ಹೇಳಿದ.
ಅದು ಸಮ ಕಥೆ ಕೈಲಾಸ ಹೇಳಿರೆ ಎಂತದು ? ತೀರಾ ಎಡವಟ್ಟಿನ ಕೆಲಸ ಹೇಳುವ ಅರ್ಥಲ್ಲಿ ಬಳಕೆ ಅವುತ್ತು‌. ತೀರಾ ಅಪಾಯ ಹೇಳುವ ಅರ್ಥಲ್ಲಿಯೂ ಬಳಕೆ ಆವುತ್ತು ಆದರೆ ಈ ನುಡಿಗಟ್ಟಿನ ಸರಿಯಾದ ಅರ್ಥ ಎಂತದು ? ಗೊಂತಿದ್ದೋರು ತಿಳಿಸಿ ಆತಾ ?
© ಡಾ.ಲಕ್ಷ್ಮೀ ಜಿ ಪ್ರಸಾದ

ಗಿಳಿ ಬಾಗಿಲು : ಹವ್ಯಕ ನುಡಿಗಟ್ಟು 47 ಅಳ್ಳೆಲಿಲ್ಲೆ © ಡಾ.ಲಕ್ಷ್ಮೀ ಜಿ ಪ್ರಸಾದ


ಅಳ್ಳೆಲಿಲ್ಲೆ
ಕಳುದ ಸರ್ತಿ ಊರಿಂಗೆ ಹೋದಿಪ್ಪಗ ಅಪ್ಪನ ಮನೆಲಿ ಮೂರು ಪುಚ್ಚೆ ಕುಂಞಿಗ ಇತ್ತಿದವು.ಇಲ್ಲಿ ಪುಚ್ಚೆಗ ಹಾವು ಚೇಳು ಅದು ಇದು ಹಿಡುದು ಮನೆ ಒಳ ತಂದು ಹಾಕುತ್ತವು ಹೇಳಿ ಪುಚ್ಚೆ ಕುಂಞಿಗಳ ಸಾಂಕಿಗೊಂಡು ಇತ್ತಿದವಿಲ್ಲೆ .ಇತ್ತೀಚೆಗೆ ಎನ್ನ ಸೊಸೆಯಕ್ಕ ( ತಮ್ಮನ ಮಗಳಕ್ಕ) ಅವರ ಅಜ್ಜನ ಮನೆ ಪೆರುವೊಡಿಗೆ ಹೋದಿಪ್ಪಗ ಅಲ್ಯಣ ಹತ್ರಣ ಮನೆಲಿ  ಎರಡು ಪುಚ್ಚೆ ಕುಂಞಿಗಳ ನೋಡಿ ಬೇಕು ಹೇಳಿ ಹಠ ಮಾಡಿ ಮನೆಗೆ ತಂದು ಸಾಂಕುತ್ತಾ ಇದ್ದವು.ಇವರ ಒಟ್ಟಿಂಗೆ ಕಾಕೆ ಅಥವಾ ಗೂಮನ  ಬಾಯಿಂದ ಬಿದ್ದ ಒಂದು ಸಣ್ಣ ಪುಚ್ಚೆ ಕುಂಞಿಗೆ ಸೇರ್ಪಡೆ ಆಯಿದು .ಅವು ಸಣ್ಣ ಕುಂಞಿಗ ಆಗಿದ್ದು ಅವಕ್ಕೆ ಪೆಡಿಗ್ರಿ ಹಾಕುತ್ತವು.ರಜೆಲಿ ಸೊಸೆಯಕ್ಕ ಮತ್ತೆ ಅಜ್ಜನ ಮನೆಗೆ ಹೋದವು. ಪೆಡಿಗ್ರಿ ತಿಂದು ಅ ಭ್ಯಾಸ ಆದ ಈ ಪುಚ್ಚೆಗ ಎನ್ನ ಅಮ್ಮ ಹಾಕಿದ ಯಾವುದನ್ನೂ ಮೂಸಿಕೂಡ ನೋಡಿಗೊಂಡು ಇತ್ತಿದವಿಲ್ಲೆ.ತಮ್ಮನ ಹೆಂಡತಿ ಅವಕ್ಕೆ ಹಾಲಿನ ಒಂದು ಗಿಣ್ಣಾಲಿಲಿ ಹಾಕಿ ಮಡುಗಿದರೆ ಕುಡುಕ್ಕೊಂಡು ಇತ್ತಿದವು.ಹಾಂಗೆ ಆನು ಅಮ್ಮನ ಹತ್ತರೆ ಇವಕ್ಕೆ ಹಾಲು ಹಾಕಮ್ಮ ಕುಡಿಗು ಹೇಳಿ ಹೇಳಿದೆ.ಅಮ್ಮ ಒಂದು ಗಿಣ್ಣಾಲಿಲಿ ಹಾಲು ಹಾಕಿ ಪುಚ್ಚೆ ಕುಂಞಿಗಳ ಎದುರು ಮಡುಗಿದ.ಒಂದು ಮೂಸಿಕ್ಕಿ ಹಾಂಗೆ ಹೋತು.ಇನ್ನೊಂದು ಮೂಸಿ ಕೂಡ ನೋಡಿದ್ದಿಲ್ಲೆ‌.ಅಂಬಗ ಆನು ಇವಕ್ಕೆ ಅಳ್ಳೆಲಿಲ್ಲೆ ಅಮ್ಮ ಹೇಳಿ ಹೇಳಿದೆ.ತಕ್ಷಣವೇ ಅಳ್ಳೆಲಿಲ್ಲೆ ಹೇಳಿರೆ ಎಂತದು ಹೇಳಿ ಸಂಶಯ ಆತು‌.ಅಮ್ಮನತ್ತರೆ ಕೇಳಿದೆ.ಉಮ್ಮ ಎನಗೂ ಗೊಂತಿಲ್ಲೆ ಹೇಳಿ ಅಮ್ಮ ಹೇಳಿದ.ಹಶುವಿಲ್ಲೆ ಹೇಳುವ ಅರ್ಥಲ್ಲಿ ಇದು ಬಳಕೆ ಆವುತ್ತು.
ಅಳ್ಳೆ ಹೇಳಿದರೆ ಪಕ್ಕೆಲುಬಿನ ಒಳಭಾಗಕ್ಕೆ ಹೇಳುದು.ಅಲ್ಲಿ ರಜ್ಜದೆ ಜಾಗೆ ಇಲ್ಲೆ ಹೇಳುವ ಅರ್ಥಲ್ಲಿ ಅಳ್ಳೆಲಿಲ್ಲೆ ಹೇಳುವ ನುಡಿಗಟ್ಟು ಬಳಕೆಗೆ ಬಂದಿಕ್ಕಾ ? ಗೊಂತಿಪ್ಪೋರು ದಯಮಾಡಿ ತಿಳಿಸಿ ಆತಾ
ನಮಸ್ಕಾರ
ಡಾ.ಲಕ್ಷ್ಮೀ ಜಿ ಪ್ರಸಾದ