Friday 13 December 2013

ಗಿಳಿ ಬಾಗಿಲು (ಹವ್ಯಕ ಬ್ಲಾಗ್ )-ಅಲ್ಪ ಒಳುದು ಹಾಳು ಹಲಾಕು ಆಯಿದು



“ಅಡಿಗ್ಗೆಯೋವು ಅಲ್ಪ ಮಾಡಿ ಹಾಕಿದ್ದವು . ಅಲ್ಪ ಒಳುದು ಹಾಳು ಹಲಾಕು ಆಯಿದು ಹೇಳುವ ಮಾತಿನ ನಮ್ಮ ಭಾಷೆಲಿ ಸಾಮನ್ಯಾವಾಗಿ ಉಪಯೋಗಿಸುತ್ತವು.ಅನುಪತ್ಯ ಮಾಡಿ ಅಪ್ಪಗ ಕೆಲವು ಸರ್ತಿ ಅಡಿಗೆಯೋರ (ಇದು ಸತ್ಯಣ್ಣನ ಬಗ್ಗೆ ಅಲ್ಲ.ಸತ್ಯಣ್ಣನ ಅಡಿಗೆ ಮೂರನೇ ಹಂತಿಗೆ ಅಲ್ಲಿಂದಲ್ಲಿಗೆ ಹರ ಹರಾ ಆವುತ್ತಡ!!)!ಅಂದಾಜು ತಪ್ಪಿ ಅಶನ, ಕೊದಿಲು,ಮೇಲಾರಂಗ ತುಂಬಾ ಒಳುದು ಹಾಳಪ್ಪದು ಇದ್ದು .ಕೆಲವು ಸರ್ತಿ ಗ್ರೇಶಿದಷ್ಟು ಜನಂಗ ಬಾರದ್ದೆ ಒಳಿವದು ಇದ್ದು .ಇಂಥ ಸಂದರ್ಭಲ್ಲಿ ತುಂಬ ಒಳುದು ಹಾಳಾಯಿದು ಹೇಳುದರ ಅಲ್ಪ /ಅಲ್ಪ ಒಳುದು ಹಾಳಾಯಿದು ಹೇಳಿ ಹೇಳ್ತವು.

ಕನ್ನಡದ ಪ್ರಾದೇಶಿಕ ಉಪ ಭಾಷೆ ಹೇಳಿಯೇ ಗುರುತಿಸಲ್ಪಡುವ ನಮ್ಮ ಭಾಷೆಲಿ ಬಳಕೆಲಿ ಇಪ್ಪ ಕೆಲವು ಕನ್ನಡ ಪದಂಗೊಕ್ಕೆ ನಮ್ಮ ಭಾಷೆಲಿ ವಿರುದ್ಧವಾದ ಅರ್ಥ ಬಳಕೆಲಿ ಇದ್ದು .ಇಂತಾದ್ದೆ ಒಂದು ಪದ ಅಲ್ಪ ಹೇಳುದು .ಕನ್ನಡಲ್ಲಿ ಅಲ್ಪ ಹೇಳ್ರೆ ಕಮ್ಮಿ ಹೇಳಿ ಅರ್ಥ .ಆದರೆ ನಮ್ಮ ಭಾಷೆಲಿ ತುಂಬ ಹೇಳುವ ಅರ್ಥಲ್ಲಿ ಇದು ಬಳಕೆ ಆವುತ್ತು .”ಅವೆಂತ ಒಂದೆರಡು ಜನಂಗಳ?ಅವು ಅಪ್ಪಚ್ಚಿ ದೊಡ್ಡಪ್ಪ ಮಾವ ಅತ್ತೆ ಮಕ್ಕ ಮರಿಗ ಹೇಳಿ ಅಲ್ಪ ಇದ್ದವು” ಹೇಳಿ ದೊಡ್ಡ ಕುಟುಂಬದ ಬಗ್ಗೆ ಹೇಳುದು ಇದ್ದು .

ಸುತ್ತ ಮುತ್ತ ಎಲ್ಲಿ ನೋಡ್ರೂ ಬ್ಯಾರಿಗಳೇ ಕಾಣ್ತಾ ಇಪ್ಪ ಕನ್ಯಾನ ಉಪ್ಪಳದ ನಡುವೆ ಮನೆ ಇಪ್ಪ ಎಂಗಳ ಬೇತದ ಅಜ್ಜ , ”ಅಲ್ಪ ಸಂಖ್ಯಾತರು ಹೇಳಿ ಇವರ ದೆನಿಗೇಳುದು ಸರಿ.ಆದರೆ ಅದು ನಮ್ಮ ಭಾಷೆಯ ಅಲ್ಪ ಕನ್ನಡದ ಅಲ್ಪ ಅಲ್ಲ” ಹೇಳಿ ಎರಡು ಕೈ ಆಕಡೆ ಈ ಕಡೆ ಬಿಡುಸಿ ಅಗಾಲ್ಸಿ ತೋರ್ಸಿ ನೆಗೆ ಮಾಡಿಗೊಂಡು ಇತ್ತಿದವು!

ಅಲ್ಪ ಹೇಳುವ ಪದಕ್ಕೆ ನುಡಿಗಟ್ಟಾಗಿ ಬಳಕೆ ಮಾಡುವಗ ತುಂಬಾ /ಹೆಚ್ಚು ಹೇಳುವ ಅರ್ಥ ಇದ್ದರೂ ಕಮ್ಮಿ ಹೇಳುವ ಸರ್ತ ಅರ್ಥಲ್ಲಿಯೂ ಬಳಕೆ ಆವುತ್ತು ಕೆಲವು ಸರ್ತಿ. “ಅವು ಬರಿ ಅಲ್ಪಂಗ ಅವರ ವ್ಯವಹಾರ ಆಗ ” ಹೇಳುವ ಮಾತು ನಮ್ಮ ಭಾಷೆಲಿ ಬಳಕೆಲಿ ಇದ್ದು.ಇಲ್ಲಿ ಆ ಅಲ್ಪಂಗ ಹೇಳ್ರೆ ಅವು ರಜ್ಜ ಬುದ್ಧಿ ಇಲ್ಲದ್ದೋರು,ನೀತಿ ನಿಯತ್ತು ಇಲ್ಲದ್ದೋರು, ಸಣ್ಣ ಮನಸ್ಸಿನೋರು ಹೇಳುವ ಅರ್ಥ ಇದ್ದು.
ಕೋಳ್ಯೂರು ಸೀಮೆಲಿ ” ಅಲ್ಪ ”ಪದಕ್ಕೆ ಹೀಂಗೆ ಇಪ್ಪ ಅರ್ಥ ಪ್ರಚಲಿತ ಇದ್ದು .ಹವ್ಯಕಲ್ಲಿ ಎಲ್ಲ ಕಡೆಲಿಯೂ ಇಕ್ಕು ಅಲ್ಲದ ?ತಿಳುಸಿ

Tuesday 3 December 2013

ಗಿಳಿ ಬಾಗಿಲು(ಹವ್ಯಕ ಬ್ಲಾಗ್ ) ಪೊಡುಂಬು

ಮೊನ್ನೆ ಒಂದಿನ ಇಲ್ಲೇ ಹತ್ತರೆ ಒಂದು ಮದುವೆಗೆ ಹೋಗಿತ್ತಿದೆ.ಅಲ್ಲಿಗೆ ಬಂದಿದ್ದ ನಮ್ಮೋರು ಒಬ್ಬ್ರು ಪ್ರಾಯದೋರ ಪರಿಚಯ ಆತು .ಅವು ಮಾತಾಡುತ್ತಾ “ಈ ಪೇಟೆ ಬದುಕು ಎಲ್ಲ ನೋಡುಲೆ ಅಬ್ಬರ,ಒಂದು ಬಾಳೆ ಹಣ್ಣು ಬೇಕಾರೆ ಮೂರು ರೂಪಾಯಿ ಕೊಡಕ್ಕು ,ಬೊಂಡಕ್ಕು ಪೈಸೆ ಕೊಡಕ್ಕು ನೀರಿಂಗು ಪೈಸೆ ಕೊಡಕ್ಕು ತಿಂಬಲು ಪೈಸೆ ಕೊಡಕ್ಕು …ಗೂ ಪೈಸೆ ಕೊಡಕ್ಕು ಈ ಪೇಟೆಲಿ ಎಲ್ಲಾ ಹೆರಂದ ನೋಡ್ಲೆ ಎಲ್ಲ ಚಂದ, ಒಳ ಎಂತ ಇಲ್ಲೆ ಬರೀ ಪೊಡುಂಬು ,ಎಂಗೊಗೆ ಇಲ್ಲಿ ಪೇಟೆ ಹವೆ ಸರಿ ಆವುತ್ತಿಲ್ಲೆ ,ಎಂಗ ಬಾಕ್ರ ಬೈಲು ಹತ್ತರೆ ಇಪ್ಪದು, ಮಗ ಸೊಸೆ ಇಲ್ಲಿದ್ದವು,ಹಾಂಗೆ ಎರಡು ದಿನಕ್ಕೆ ಬಂದೋವು ಇಲ್ಲಿ ಮದುವೆಗೆ ಬಂದದು” ಹೇಳಿ ಹೇಳಿದವು .
ಅದು ಸಮ ,ಹಳ್ಳಿಲಿ ಹುಟ್ಟಿ ಬೆಳದೋರಿನ್ಗೆ ಪೇಟೆ ಹೊಂದಾಣಿಕೆ ಅಪ್ಪದು ಕಷ್ಟವೇ ! ಅದು ಬೇರೆ ವಿಚಾರ .ಎನಗೆ ಅವು ಬಳಕೆ ಮಾಡಿದ “ಪೊಡುಂಬು” ಹೇಳುವ ಪದ ರಜ್ಜ ವಿಶಿಷ್ಟ ಹೇಳಿ ಅನ್ಸಿತ್ತು. ಅಂಬಗ ಆನು “ಪೊಡುಂಬು ಹೇಳ್ರೆ ಎಂತ ಅಜ್ಜ “ಹೇಳಿ ಕೇಳಿದೆ. ಅಷ್ಟಪ್ಪಗ ಅವು “ಬಲ ಇಲ್ಲೆ,ಗಟ್ಟಿತನ ಇಲ್ಲೆ,ಸಾರ ಇಲ್ಲೆ”ಹೇಳುವ ಅರ್ಥಂಗಳ ಹೇಳಿದವು !
“ಅವ° ಬರೀ ಪೊಡುಂಬು ,ಎಲ್ಲಾ ಬಾಯಿಲಿ ಅಷ್ಟೇ ,ಒಳಂದ ಎಂತದೂ ಇಲ್ಲೆ” ಈ ಮಾತಿನ ಸಣ್ಣಾ ದಿಪ್ಪಗಂದ ಸುಮಾರು ಸರ್ತಿ ಕೇಳಿದ್ದೆ . ಕೋಳ್ಯೂರು ಕಡೆಯ ಹವ್ಯಕ ಭಾಷೆಲಿ ಈ ನುಡಿಗಟ್ಟಿನ ಬಳಕೆ ಇದ್ದು. ಅವಂದು ಬರೀ ಪೊಡು೦ಬುತನ/ಪೊಡುಂಬು ಬುದ್ಧಿ ಹೇಳಿದರೆ ಅವಂಗೆ ಬುದ್ಧಿವಂತಿಕೆ ಏನೂ ಇಲ್ಲೆ ,ಬುದ್ಧಿವಂತಿಕೆ ಸಾಲ ಹೇಳಿ ಅರ್ಥ .ಆದರೆ ಈ ಶಬ್ದದ ಅರ್ಥ ಎಂತದು ?ಇದರ ಮೂಲ ಎಂತದು ಹೇಳಿ ಗೊಂತಿತ್ತಿಲ್ಲೆ.ಈಗ ಇವು ಪೇಟೆಯ ಒಳ ಎಂತ ಇಲ್ಲೆ ಬರೀ ಪೊಡುಂಬು ಹೇಳಿ ಹೇಳಿದವು! ಅಲ್ಲಿಂದ ಬಂದ ಮೇಲೂ “ಅಂಬಗ ಪೊಡುಂಬು ಹೇಳಿರೆ ಎಂತ” ಹೇಳಿ ಎರಡು ಮೂರು ದಿನಂದ ಆಲೋಚನೆ ಮಾಡಿಗೊಂಡು ಇತ್ತಿದ್ದೆ.
ಎಂಗಳ ಮನೆ ಎದುರಿನ ಮಾರ್ಗದ ಆಚ ಹೊಡೆಲಿ ಒಂದೆರಡು ದಿನ ಮೊದಲು ಯಾವುದೋ ಹೊಸ ಅಂಗಡಿ ಹಾಕಿತ್ತಿದವು .ಆರು ?ಎಂತ ಅಂಗಡಿ ಹೇಳಿ ಆನು ಗಮನಿಸಿತ್ತಿಲ್ಲೆ.ನಿನ್ನೆ ಹೊತ್ತಪ್ಪಗ ಟೆರೇಸ್ ಹತ್ತಿ ಆ ಕಡೆ ಈ ಕಡೆ ಗೆಬ್ಬಾಯಿಸಿಗೊಂಡು ಇಪ್ಪಗ ಎದುರಣ ಹೊಸ ಅಂಗಡಿ ಕಂಡತ್ತು. ಅದು ಒಂದು ಮರ ಕೆಲಸದ ಅಂಗಡಿ .ಆನು ನೋಡುವಗ ಎದುರಿನ ಅಂಗಡಿಯ ಮರ ಕೆಲಸದೋರು ಒಂದು ದೊಡ್ಡ ಮರದ ತುಂಡಿಂದ ಸುಮಾರು ಭಾಗವ ಗೀಸಿ ಗೀಸಿ ತೆಗೆತ್ತಾ ಇತ್ತಿದವು.
ಸಣ್ಣಾದಿಪ್ಪಗ ಎಂಗಳ ಮನೆ ಕೆಲಸಕ್ಕೆ ಬಂದ ಆಚಾರಿಗಳುದೆ ಹೀಂಗೆ ಮರದ ತುಂಡಿಂದ ಸುಮಾರು ಭಾಗವ ತೆಗೆತ್ತಾ ಇತ್ತಿದವು .ಅಂಬಗ ಹೀಂಗೆ ಎಂತಕೆ ಮಾಡುದು ಹೇಳಿ ಕೇಳಿಪ್ಪಗ “ಅದು ಬೊಳುಂಬು ಇಪ್ಪ ಜಾಗೆ ,ಅದು ಎಳತ್ತು ಜಾಗೆ ,ಅದರ ಹಾಂಗೆ ಬಿಟ್ರೆ ಆ ಜಾಗೆ ಕು೦ಬಾಗಿ ಮಂಚ, ಕುರ್ಚಿ ಹಾಳಾವುತ್ತು ,ಅದಕ್ಕೆ ಆ ಜಾಗೆಯ ತೆಗದು ಹಾಕುತ್ತವು “ಹೇಳಿ ಎನ್ನ ಅಜ್ಜ ಹೇಳಿತ್ತಿದವು. ಈಗ ಈ ಅಂಗಡಿಯೋರುದೆ ಹಾಂಗೆ ಬೊಳು೦ಬಿನ ತೆಗೆತ್ತಾ ಇಪ್ಪದು ಆದಿಕ್ಕು ಹೇಳಿ ಅನ್ಸಿತ್ತು ಎನಗೆ .
ಬೊಳುಂಬು ಇಪ್ಪ ಮರ ನೋಡುಲೆ ಮಾತ್ರ ದಪ್ಪ ಕಾಣುತ್ತು .ಅದು ಒಳ ಗಟ್ಟಿ ಇಲ್ಲೆ.ಬೊಳುಂಬು ಎಲ್ಲ ತೆಗದರೆ ಆ ಮರ ತುಂಡಿಲಿ ಉಪಯೋಗಕ್ಕೆ ಸಿಕ್ಕುವ ಭಾಗ ಬರೀ ರಜ್ಜ .ಎಂತಕೋ ಏನೋ ಎನಗೆ ಅಂಬಗ ಬೊಳುಂಬು ಹೇಳುದೆ ಕಾಲಾಂತರಲ್ಲಿ ಪೊಡುಂಬು ಹೇಳಿ ಬದಲಾಗಿ ಈಗ ಎಳಸು /ಕಡಮೆ ಬುದ್ಧಿ ಹೇಳುವ ಅರ್ಥಲ್ಲಿ ಬಳಕೆಗೆ ಬಂದಿಕ್ಕಾ ಏನೋ ಹೇಳಿ ಅನ್ಸಿತ್ತು.ಜೊತೆಗೆ ಒಳ ಟೊಳ್ಳು/ಗಟ್ಟಿ ಇಲ್ಲೆ/ಸತ್ವ ಇಲ್ಲೆ ಹೇಳುವ ಅರ್ಥಲ್ಲಿ ಬಳಕೆಗೆ ಬಂತೋ ಏನೋ ಹೇಳಿ ಅನ್ಸಿತ್ತು. ಭಾಷಾ ವಿಜ್ಞಾನದ ಆಧಾರಲ್ಲಿ ಹೇಳುದಾದರೆ ಳ ಮತ್ತು ಡ ನಡುವೆ ವರ್ಣ ವ್ಯತ್ಯಯ ಸಾಮಾನ್ಯ (ಉದಾ-ಇಳಾ-ಇಡಾ,ಕುಮ್ಬುಳ-ಕುಮ್ಬುಡ,ಬಳುಸು- ಬಡುಸು)ಅಪರೂಪಕ್ಕೆ ಪ ಬ ನಡುವೆ ವರ್ಣ ವ್ಯತ್ಯಯ ಇದ್ದು (ಉದಾ -ಪಡಿವಾರ-ಬಡಿವಾರ )ಹಾಂಗಾಗಿ ಬೊಳುಂಬು- ಪೊಡುಂಬು ಹೇಳಿ ಬಪ್ಪ ಸಾಧ್ಯತೆ ಇದ್ದು . ಪೊಟ್ಟು ಹಮ್ಮು /ಒಣ ಹಮ್ಮು ಹೇಳುದರಿಂದಲೂ ಪೊಡುಂಬು ಪದ ಬಂದಿಪ್ಪ ಸಾಧ್ಯತೆ ಇದ್ದು , ನಿಂಗ ಎಲ್ಲ ಎಂತ ಹೇಳ್ತೀರಿ ?ನಿಂಗಳ ಅಭಿಪ್ರಾಯವ ತಿಳುಸಿ.