Saturday 24 August 2013

ಗಿಳಿ ಬಾಗಿಲು(ಹವ್ಯಕ ಬ್ಲಾಗ್ ) -ಪೊಡುಂಬು



ಮೊನ್ನೆ ಒಂದಿನ ಇಲ್ಲೇ ಹತ್ತರೆ  ಒಂದು  ಮದುವೆಗೆ ಹೋಗಿತ್ತಿದೆ.ಅಲ್ಲಿಗೆ ಬಂದಿದ್ದ  ನಮ್ಮೋರು ಒಬ್ಬ್ರು ಪ್ರಾಯದೋರ ಪರಿಚಯ ಆತೆನಗೆ .ಅವು ಮಾತಾಡುತ್ತಾ "ಈ ಪೇಟೆ ಬದುಕು ಎಲ್ಲ ನೋಡುಲೆ ಅಬ್ಬರ,ಒಂದು ಬಾಳೆ ಹಣ್ಣು ಬೇಕಾರೆ ೩ ರೂಪಾಯಿ ಕೊಡಕ್ಕು ,ಬೊಂಡಕ್ಕು ಪೈಸೆ ಕೊಡಕ್ಕು ನೀರಿಂಗು ಪೈಸೆ ಕೊಡಕ್ಕು ತಿಂಬಲು ಪೈಸೆ ಕೊಡಕ್ಕು ...ಗೂ ಪೈಸೆ ಕೊಡಕ್ಕು  ಈ ಪೇಟೆಲಿ ಎಲ್ಲಾ ಹೆರಂದ ನೋಡ್ಲೆ ಎಲ್ಲ ಚಂದ, ಒಳ ಎಂತ ಇಲ್ಲೆ ಬರೀ ಪೂಡುಂಬು ,ಎಂಗೊಗೆ ಇಲ್ಲಿ ಪೇಟೆ ಹವೆ ಸರಿ ಆವುತ್ತಿಲ್ಲೆ ,ಎಂಗ ಬಾಕ್ರ ಬೈಲು ಹತ್ತರೆ ಇಪ್ಪದು, ಮಗ ಸೊಸೆ ಇಲ್ಲಿದ್ದವು,ಹಾಂಗೆ ಎರಡು ದಿನಕ್ಕೆ ಬಂದೋವು ಇಲ್ಲಿ ಮದುವೆಗೆ ಬಂದದು ಹೇಳಿ ಹೇಳಿದವು .ಅದು ಸಮ ,ಹಳ್ಳಿಲಿ ಹುಟ್ಟಿ ಬೆಳದೋರಿನ್ಗೆ ಪೇಟೆ ಹೊಂದಾಣಿಕೆ ಅಪ್ಪದು ಕಷ್ಟವೇ !  ಅದು ಬೇರೆ ವಿಚಾರ .ಎನಗೆ ಅವು ಬಳಕೆ ಮಾಡಿದ "ಪೊಡುಂಬು" ಹೇಳುವ ಪದ ರಜ್ಜ ವಿಶಿಷ್ಟ ಹೇಳಿ ಅನ್ಸಿತ್ತು. ಅಂಬಗ ಆನು "ಪೊಡುಂಬು ಹೇಳ್ರೆ ಎಂತ ಅಜ್ಜ "ಹೇಳಿ ಕೇಳಿದೆ. ಅಷ್ಟಪ್ಪಗ ಅವು "ಬಲ ಇಲ್ಲೆ,ಗಟ್ಟಿತನ ಇಲ್ಲೆ,ಸಾರ ಇಲ್ಲೆ"ಹೇಳುವ ಅರ್ಥಂಗಳ ಹೇಳಿದವು !

 "ಅವ ಬರೀ ಪೊಡುಂಬು ,ಎಲ್ಲಾ ಬಾಯಿಲಿ ಅಷ್ಟೇ ,ಒಳಂದ ಎಂತದೂ ಇಲ್ಲೆ" ಈ ಮಾತಿನ ಸಣ್ಣಾ ದಿಪ್ಪಗಂದ ಸುಮಾರು ಸರ್ತಿ ಕೇಳಿದ್ದೆ . ಎಂಗಳ ಕಡೆಯ ಹವ್ಯಕ ಭಾಷೆಲಿ ಈ ಪದದ ಬಳಕೆ ಇದ್ದು.  ಅವಂದು ಬರೀ ಪೊಡುಮ್ಬುತನ/ಪೊಡುಂಬು ಬುದ್ಧಿ  ಹೇಳಿದರೆ ಅವಂಗೆ ಬುದ್ಧಿವಂತಿಕೆ ಏನೂ ಇಲ್ಲೆ ,ಬುದ್ಧಿವಂತಿಕೆ ಸಾಲ ಹೇಳಿ ಅರ್ಥ .ಆದರೆ ಈ ಶಬ್ದದ ಅರ್ಥ ಎಂತದು ?ಇದರ ಮೂಲ ಎಂತದು ಹೇಳಿ ಗೊಂತಿತ್ತಿಲ್ಲೆ.ಈಗ ಇವು ಪೇಟೆಯ ಒಳ ಎಂತ ಇಲ್ಲೆ ಬರೀ ಪೊಡುಂಬು ಹೇಳಿ ಹೇಳಿದವು! ಅಲ್ಲಿಂದ ಬಂದ ಮೇಲೂ "ಅಂಬಗ ಪೊಡುಂಬು ಹೇಳಿರೆ ಎಂತ" ಹೇಳಿ ಎರಡು ಮೂರು ದಿನಂದ ಆಲೋಚನೆ ಮಾಡಿಗೊಂಡು ಇತ್ತಿದೆ
.
ಎಂಗಳ ಮನೆ ಎದುರಿನ ಮಾರ್ಗದ ಆಚ ಹೊಡೆಲಿ ಒಂದೆರಡು ದಿನ ಮೊದಲು ಯಾವುದೋ ಹೊಸ ಅಂಗಡಿ ಹಾಕಿತ್ತಿದವು .ಆರು ?ಎಂತ ಅಂಗಡಿ ಹೇಳಿ ಆನು ಗಮನಿಸಿತ್ತಿಲ್ಲೆ.ನಿನ್ನೆ ಹೊತ್ತಪ್ಪಗ ಟೆರೇಸ್ ಹತ್ತಿ  ಆ ಕಡೆ ಈ ಕಡೆ ಗೆಬ್ಬಾಯಿಸಿ ಗೊಂಡು ಇಪ್ಪಗ ಎದುರಣ ಹೊಸ ಅಂಗಡಿ ಕಂಡತ್ತು. ಅದು  ಒಂದು ಮರ ಕೆಲಸದ ಅಂಗಡಿ .ಆನು ನೋಡುವಗ  ಎದುರಿನ ಅಂಗಡಿಯ  ಮರ ಕೆಲಸದೋರು ಒಂದು ದೊಡ್ಡ ಮರದ ತುಂಡಿಂದ ಸುಮಾರು ಭಾಗವ ಗೀಸಿ ಗೀಸಿ ತೆಗೆತ್ತಾ ಇತ್ತಿದವು.
ಸಣ್ಣಾದಿಪ್ಪಗ ಎಂಗಳ ಮನೆ ಕೆಲಸಕ್ಕೆ ಬಂದ ಆಚಾರಿಗಳುದೆ ಹೀಂಗೆ ಮರದ ತುಂಡಿಂದ ಸುಮಾರು ಭಾಗವ ತೆಗೆತ್ತಾ ಇತ್ತಿದವು .ಅಂಬಗ ಹೀಂಗೆ ಎಂತಕೆ ಮಾಡುದು ಹೇಳಿ ಕೇಳಿಪ್ಪಗ "ಅದು ಬೊಳುಂಬು ಇಪ್ಪ ಜಾಗೆ ,ಅದು ಎಳತ್ತು ಜಾಗೆ ,ಅದರ ಹಾಂಗೆ ಬಿಟ್ರೆ ಆ ಜಾಗೆ ಕುಮ್ಬಾಗಿ ಮಂಚ, ಕುರ್ಚಿ ಹಾಳಾವುತ್ತು ,ಅದಕ್ಕೆ ಆ ಜಾಗೆಯ ತೆಗದು ಹಾಕುತ್ತವು "ಹೇಳಿ ಎನ್ನ  ಅಜ್ಜ ಹೇಳಿತ್ತಿದವು. ಈಗ ಈ ಅಂಗಡಿಯೋರುದೆ ಹಾಂಗೆ ಬೋಳುಮ್ಬಿನ ತೆಗೆತ್ತಾ ಇಪ್ಪದು ಆದಿಕ್ಕು ಹೇಳಿ ಅನ್ಸಿತ್ತು ಎನಗೆ .ಬೊಳುಂಬು ಇಪ್ಪ ಮರ ನೋಡುಲೆ ಮಾತ್ರ ದಪ್ಪ ಕಾಣುತ್ತು .ಅದು ಒಳ ಗಟ್ಟಿ ಇಲ್ಲೆ.ಬೊಳುಂಬು ಎಲ್ಲ ತೆಗದರೆ ಆ ಮರ ತುಂಡಿಲಿ ಉಪಯೋಗಕ್ಕೆ ಸಿಕ್ಕುವ ಭಾಗ ಬರೀ ರಜ್ಜ .ಎಂತಕೋ ಏನೋ ಎನಗೆ ಅಂಬಗ ಬೊಳುಂಬು ಹೇಳುದೆ ಕಾಲಾಂತರಲ್ಲಿ  ಪೊಡುಂಬು ಹೇಳಿ ಬದಲಾಗಿ ಈಗ ಎಳಸು /ಕಡಮೆ ಬುದ್ಧಿ ಹೇಳುವ ಅರ್ಥಲ್ಲಿ ಬಳಕೆಗೆ ಬಂದಿಕ್ಕಾ  ಏನೋ ಹೇಳಿ ಅನ್ಸಿತ್ತು.ಜೊತೆಗೆ ಒಳ ಟೊಳ್ಳು/ಗಟ್ಟಿ ಇಲ್ಲೆ/ಸತ್ವ ಇಲ್ಲೆ ಹೇಳುವ ಅರ್ಥಲ್ಲಿ  ಬಳಕೆಗೆ ಬಂತೋ ಏನೋ ಹೇಳಿ ಅನ್ಸಿತ್ತು. ಭಾಷಾ ವಿಜ್ಞಾನದ ಆಧಾರಲ್ಲಿ ಹೇಳುದಾದರೆ ಳ ಮತ್ತು ಡ  ನಡುವೆ ವರ್ಣ ವ್ಯತ್ಯಯ ಸಾಮಾನ್ಯ (ಉದಾ-ಇಳಾ<>ಇಡಾ,ಕುಮ್ಬುಳ<>ಕುಮ್ಬುಡ,ಬಳುಸು <>ಬಡುಸು)ಅಪರೂಪಕ್ಕೆ ಪ ಬ ನಡುವೆ ವರ್ಣ ವ್ಯತ್ಯಯ ಇದ್ದು (ಉದಾ -ಪಡಿವಾರ<>ಬಡಿವಾರ )ಹಾಂಗಾಗಿ ಬೊಳುಂಬು <>ಪೊಡುಂಬು ಹೇಳಿ ಬಪ್ಪ ಸಾಧ್ಯತೆ ಇದ್ದು .  ನಿಂಗ  ಎಲ್ಲ  ಎಂತ ಹೇಳ್ತೀರಿ ?ನಿಂಗಳ ಅಭಿಪ್ರಾಯವ ತಿಳುಸಿ

ಇನ್ನೊಂದರಿ ಕಾಂಬ
ನಮಸ್ಕಾರ
     ಡಾ. ಲಕ್ಷ್ಮೀ ಜಿ ಪ್ರಸಾದ

Thursday 15 August 2013

ಗಿಳಿ ಬಾಗಿಲು (ಹವ್ಯಕ ಬ್ಲಾಗ್ )-ಅವ ಮಹಾ ತೆಗಲೆ ಕಂಠ

                                                    
"ಅವ ಎಂತಕ್ಕೂ ಆಗ ,ಮಹಾ ತೆಗಲೆ ಕಂಠ " ಈ ಮಾತಿನ ಎಂಗಳ ಕಡೆ ತುಂಬಾ ಸತ್ತಿ ಕೇಳಿದ್ದೆ ಆನು .ಎಂತ ಕೆಲಸವನ್ನೂ ಸಸೂತ್ರ ಮಾಡದ್ದೋರ ಬಗ್ಗೆ ಮಾತಾಡುವಗ ಈ ಮಾತಿನ ಹೇಳ್ತವು .ಸಾಮಾನ್ಯವಾಗಿ ತುಂಬಾ ಉದಾಸೀನ ಪ್ರವೃತ್ತಿಯ ಸೋಮಾರಿಗಳ ಸ್ವಭಾವವ ಈ ಮಾತು ಸೂಚಿಸುತ್ತು.ಇದು ತುಳುವಿಲಿ ಕೂಡ ಚಾಲ್ತಿಲಿ ಇದ್ದು . ತುಳುವಿಲಿ ತಿಗಲೆ ಕಂಟೆ  ಹೇಳಿ ಉದಾಸೀನದ ಮುದ್ದೆಗಳ ಬೈತ್ತವು .ಈ ನುಡಿಗಟ್ಟಿನ ಆನು ಸಣ್ಣಾ ದಿಪ್ಪಗಂದ ಕೇಳುತ್ತಾ ಬಂದಿದ್ದರೂ ಇದರ ಅರ್ಥ ಎಂತ ಹೇಳಿ ಎನಗೆ ತಲೆಗೆ ಹೋಗಿತ್ತಿಲ್ಲೆ .ಆ ಬಗ್ಗೆ ತಲೆ ಕೆಡುಸುಲೆ ಹೋಗಿಯೂ ಇತ್ತಿಲ್ಲೆ ಹೇಳುದು ಬೇರೆ ವಿಚಾರ .ಇಂದು ಸ್ವಾತಂತ್ರ್ಯೋತ್ಸವ ಎಲ್ಲರಿಂಗು ಗೊಂತಿದ್ದನ್ನೆ .ಎಲ್ಲ ಶಾಲಾ ಕಾಲೇಜುಗಳಲ್ಲಿ ಉದಿಯಪ್ಪಗ ಒಂಬತ್ತು ಗಂಟೆ ಒಳ ಧ್ವಜಾರೋಹಣ ಮಾಡಿ ಉತ್ಸವ ಆಚರಣೆ ಮಾಡುತ್ತವು ,ಮಾಡಕ್ಕಾದ್ದೆ ಅನ್ನೆ !
ವಿಷಯ ಅದಲ್ಲ ! ಆನುದೆ ಇಂದು ಉದಿಯಪ್ಪಗ ಬೇಗ 8 ಗಂಟೆಗೆ ಎತ್ತಕ್ಕಾದ ಕಾರಣ ಬೇಗ ಎದ್ದು ೬ ಗಂಟೆಗೆ ಬಸ್ಸು ಹತ್ತಿದೆ .ಎನ್ನ ಹಾಂಗೆ ದೂರಂದ ಶಾಲೆ ಕಾಲೇಜಿನ್ಗೆ ಹೋಗಿ ಬಪ್ಪ  ಸುಮಾರು  ಜನಂಗ ಮಾಸ್ತ್ರಕ್ಕ ಟೀಚರುಗ ಆ ಬಸ್ಸಿಲಿ  ಇತ್ತಿದವು .ಎಲ್ಲರೂ ಎನ್ನ ಹಾಂಗೆ ಉದಿಯಪ್ಪಗ ೪-೫ ಗಂಟೆಗೆ ಎದ್ದು ತಯಾರಾಗಿ ೬  ಗಂಟೆಗೆ ಬಸ್ಸು ಹತ್ತಿದೊರು .ಬೆಂಗಳೂರಿಂದ ದೊಡ್ಡ ಬಳ್ಳಾಪುರ ಹೋಪಲೆ ಸುಮಾರು ಒಂದು ಒನ್ದೂವರೆ ಗಂಟೆ ಬೇಕಾವುತ್ತು .ಆ ಬಸ್ಸಿಲಿದ್ದೊರು ಹೆಚ್ಚಿನೋರು ದೊಡ್ಡ ಬಲ್ಲಾಪುರಕ್ಕೆ ಹೊಪೋರು .ಬಸ್ಸು ಹೆರಟು ೫-೧೦ ನಿಮಿಷಕ್ಕೆ ಎಲ್ಲರೂ ಚಂದಕ್ಕೆ ಬಸ್ಸಿಲಿಯೇ ಒರಗಿದವು !ಎನಗೆ ಬಸ್ಸಿಲಿ ಜಪ್ಪಯ್ಯ ಹೇಳಿರೂ ಒರಕ್ಕು ಬತ್ತಿಲ್ಲೆ .ಹಾಂಗೆ ಅಲ್ಲಿ ಇಲ್ಲಿ ಗೆಬ್ಬಾಯಿಸಿಕೊಂಡು ಇತ್ತಿದೆ.ಹಾಂಗೆ ಎಲ್ಲ ಕಡೆ ನೋಡುವಗ ಅಕ್ಕ ಪಕ್ಕ ಸುತ್ತ ಮುತ್ತ ಇಪ್ಪೋರೆಲ್ಲ ಒರಗಿದ್ದವು ! ಎಲ್ಲರ ಮೋರೆ (ಗಡ್ಡ )ಎದೆಗೆ ತಾಗಿಕೊಂಡು ಇದ್ದು !!ಕೂಡ್ಲೆ ಜ್ಞಾನೋದಯ ಆತು ,ತೆಗಲೆ ಕಂಠ ಹೇಳಿರೆ ಎಂತ ಹೇಳಿ ತಲೆಗೆ ಹೋತು !ತೆಗಲೆ=ಎದೆ ,ಕಂಠ =ಕೊರಳು ,ಕೊರಳು ಎದೆಗೆ ಬಗ್ಗಿ ಒರಗಿಕೊಂಡು ಇಪ್ಪದಕ್ಕೆ ತೆಗಲೆ ಕಂಠ ಹೇಳುದು !ಯಾವ ಕೆಲಸವೂ ಮಾಡದ್ದೆ ಉದಾಸೀನಂದ ಒರಕ್ಕು ತೂಗಿಕೊಂಡು ಇಪ್ಪೋರಿನ್ಗೆ ಒಪ್ಪುವ ಮಾತಿದು ,ಉದಾಸೀನದ ಮುದ್ದೆಗಳ ಬಗ್ಗೆ ಹೇಳುಲೇ ಇದಕ್ಕಿಂತ ಚಂದದ ಪದ ಬೇರೆಲ್ಲ್ಲಿಯೂ ಸಿಕ್ಕ ,ನಿಂಗ ಎಂತ ಹೇಳ್ತೀರಿ ?ನಿಂಗಳ ಅಭಿಪ್ರಾಯ ತಿಳುಸಿ
,ಇನ್ನೊಂದರಿ ಕಾಂಬ ,
                                                    ನಮಸ್ಕಾರ  
                                                                                               
                                                                             ಡಾ. ಲಕ್ಷ್ಮೀ ಜಿ ಪ್ರಸಾದ

Wednesday 7 August 2013

ಗಿಳಿ ಬಾಗಿಲು -ಅವ ದೊಡ್ಡ ಮುಂಡೆಂಗಿ ಕುಜುವೆ

                                                 ಅವ ದೊಡ್ಡ ಮುಂಡೆಂಗಿ ಕುಜುವೆ
ಎನ್ನ ಮಗ ೧೦ನೆಲಿ ಓದ್ತಾ ಇದ್ದ .ಮೊಬೈಲ್ ಲಿ ಫೇಸ್ ಬುಕ್ ಲಿ ಅವನ ಸಹಪಾಟಿ  ಗಳತ್ತರೆ ಮಾತಾಡ್ತಾ ಇರ್ತ .ಒಳ್ಳೆ ಸಾತ್ವಿಕ ಮಾಣಿ ,ಆದರೂ  ಆವ ಆರತ್ತರೆ ಎಂತ ಮಾತಾಡ್ತಾ ಹೇಳುದರ ಗಮನಿಸುತ್ತಾ ಇರ್ತೆ ,ಹಾಂಗೆ ಇಂದು ಅವನ ಫೇಸ್ ಬುಕ್  ತೆಗದು ಆರತ್ತರೆ ಎಂತ ಚಾಟ್  ಮಾಡಿದ್ದ ಹೇಳಿ ನೋಡ್ತಾ ಇತ್ತಿದೆ .ಅವನ ಗೆಳೆಯನೊಟ್ಟಿನ್ಗೆ ಅದು ಇದು ಮಾತಾಡಿದ್ದ .ಅದರಲ್ಲಿ ಒಬ್ಬನ ಹತ್ತರೆ ನಮ್ಮ ಭಾಷೇಲಿ ಮಾತಾಡಿದ್ದ .ಆರನ್ನೊ  ಅವು ಇಬ್ರು ದೂರಿದ್ದವು !ಅದರಲ್ಲಿ ಆರೋ ಒಬ್ಬ ಇವಕ್ಕಿಬ್ರಿಂಗೆ ಎಂಥದೋ ಬೇಕಾದ ಸಹಾಯ ಮಾಡಿದ್ದಾ ಇಲ್ಲೆ .ಅದರ ಎನ್ನ ಮಗ "ಅ ವ ಎಂತಕ್ಕೂ ಆಗ ಮಾರಾಯ"  ಹೇಳಿ ಬರದ್ದ .ಮಗನ ಗೆಳೆಯ " ಅಪ್ಪು ಮಾರಾಯ ಅವ ದೊಡ್ಡ ಮುಂಡೆಂಗಿ ಕುಜುವೆ" ಹೇಳಿ ಬರದ್ದ .ಎನಗೆ ಇದರ ಓದಿ ಭಾರಿ ಕೊಷಿ ಆತು.! ನಮ್ಮ ಭಾಷೆಲಿ ಎಷ್ಟು ಚಂದದ ಪದಂಗಳ ಬಳಕೆ ಇದ್ದು ಹೇಳಿ .ಒತ್ತಿನ್ಗೆ ಈಗಣ ಮಕ್ಕೊಗೂ ಇಂತ ವಿಶಿಷ್ಟ ಪದಂಗಳ ಬಳಕೆ ಗೊಂತಿದ್ದಲ್ಲದಾ ಹೇಳಿ! .ಕುಜುವೆ ಹೇಳಿದರೆ ಹಲಸಿನ ಕಾಯಿ. ಬಹು ಉಪಯೋಗಿ ತರಕಾರಿ ಅದು .ಅದರ ಬೆಂದಿ ಮಾಡುಲೆ, ಆವುತ್ತು ಬೇಳೆ ಯನ್ನೂ ಕೊದಿಲಿನ್ಗೆ ಹಾಕುತ್ತವು ,ಇನ್ನು ರೆಚ್ಚೆ, ಹೊದುಂಕುಳು,ಹೂಸರೆ  ಎಲ್ಲವೂ ದನಗೊಕ್ಕೆ ತಿಮ್ಬಲೆ ಆವುತ್ತು .ಅದರ ಎಲ್ಲ ಭಾಗಂಗಳುದೆ ಉಪಕಾರಿ .ಆದರೆ ಮುಂಡೆಂಗಿ ಕುಜುವೆ ಇದಕ್ಕೆ ತದ್ವಿರುದ್ಧ .ಹಸೆ ಮಡವಲೆ ಉಪಯೋಗಿಸುವ ಮುಂಡೆಂಗಿ  ಸೆಸಿ /ಬಲ್ಲೆಲಿ ಎಷ್ಟುದೆ ಕಾಯಿ ಬಿಡ್ತು. ಇದು ನೋಡುಲೆ ಕುಜುವೆ (ಎಳತ್ತು ಹಲಸಿನ ಕಾಯಿ )ಹಾಂಗೆ ಕಾಣ್ತು .ಹಾಂಗಾಗಿ ಇದರ ಮುಂಡೆಂಗಿ ಕುಜುವೆ ಹೇಳಿ ಹೇಳ್ತವು .ಆದರೆ ಇದು ನಿರರ್ಥಕ ವಸ್ತು .ಇದರಲ್ಲಿ ಸೊಳೆ ,ಬೇಳೆ ಯಾವದೂ ಇಲ್ಲೆ .ಇದರ ದನಗ ಕೂಡ ತಿನ್ತವಿಲ್ಲೆ .ಇದರಲ್ಲಿ ಬೀಜ ಇಲ್ಲೆ ,ಹಾಂಗಾಗಿ ಇನ್ನೊಂದು ಮುಂಡೆಂಗಿ  ಸೆಸಿ ಕೂಡಾ ಇದರಲ್ಲಿ ಹುಟ್ಟುತ್ತಿಲ್ಲೆ. ಹಾಂಗಾಗಿ ಇದರ ಹುಟ್ಟೇ ವ್ಯರ್ಥ .ಅದರಂದ ಆರಿನ್ಗೂ ಒಂದಿನಿತೂ ಉಪಯೋಗ ಆಗ .ಆರೋಬ್ಬಂಗೂ ಏನೊಂದೂ ಉಪಕಾರ ಮಾಡದ್ದೋರಿನ್ಗೆ ನಮ್ಮ  ಭಾಷೆಲಿ " ಅವ ದೊಡ್ಡ ಮುಂಡೆಂಗಿ ಕುಜುವೆ" ಹೇಳಿ ಹೇಳ್ತವು .ಎಷ್ಟು ಚೆಂದದ ಹೋಲಿಕೆ ,ಉಪಮೆ ಅಲ್ಲದ ? ಇದು  ಆಡು ಮಾತಿಲಿ ರೂಪಕವಾಗಿ  ಬತ್ತು .ಇದೊಂದು ಅತ್ಯಂತ ನೈಜವಾದ ಮಾತಿನ ಬಳಕೆ ,ಇಂತ ತುಂಬಾ ಚೆಂದದ ಪದಂಗ ಎಂಗಳ ಭಾಷೆಲಿ ಇದ್ದು ಇತ್ತೀಚೆಗಂಗೆ ಇಂತ ಪದಂಗಳ ಬದಲಿನ್ಗೆ ಆವಾ ಯೂಸ್ಲೆಸ್ ಇತ್ಯಾದಿ ಇಂಗ್ಲಿಷ್ ಪದಂಗ ಬತ್ತಾ ಇದ್ದು ಹೇಳುದು ರಜ್ಜ ಬೇಜಾರಿನ ವಿಷಯ !ಯೂಸ್ಲೆಸ್ ಹೇಳುವ ಪದ ಮುಂಡೆಂಗಿ ಕುಜುವೆ ಯಷ್ಟು ಗಟ್ಟಿ  ಪದ ಅಲ್ಲ !ಇದಕ್ಕೆ ಎಂತ ಹೇಳ್ತಿ ?ನಿಂಗಳ ಅಭಿಪ್ರಾಯ ತಿಳಿಸಿ ,
   
ಇನ್ನೊಂದರಿ ಕಾಂಬ
                           ನಮಸ್ಕಾರ
                                                           ಲಕ್ಷ್ಮೀ ಜಿ ಪ್ರಸಾದ 

Sunday 4 August 2013

ಗಿಳಿ ಬಾಗಿಲು-ಅವ ಹುಳಿ ಬಂದು ಮೊಗಚ್ಚಿದ್ದ

ಗಿಳಿ ಬಾಗಿಲು-ಅವ ಹುಳಿ ಬಂದು ಮೊಗಚ್ಚಿದ್ದ
ಎನ್ನ ಅಮ್ಮಎನಗೆ ಅಮ್ಮ ಮಾತ್ರ ಅಲ್ಲ ಒಳ್ಳೆಯ ಫ್ರೆಂಡ್ ಕೂಡಾ ! ಫ್ರೆಂಡ್ ಗಳ ಹತ್ತರೆ ಗಂಟೆ ಗಟ್ಲೆ ಪಟ್ಟಾಂಗ ಹೊಡವ ಹಾಂಗೆ ಎಂಗ ಹೇಳಿರೆ ಆನುದೇ ಅಮ್ಮಂದೆ ಪಟ್ಟಾಂಗ ಹೊಡೆತ್ತೆಯ.ಎಂಗಳ ಮಾತು ಕತೇಲಿ ಆನು ಓದಿದ ಕಥೆ ಲೇಖನದ ಬಗ್ಗೆ ಚರ್ಚೆ ,ಆನು ಬರದ ಲೇಖನದ ಬಗ್ಗೆ ಆರು ಎಂತ ಹೇಳಿದವು ಹೇಳುವ ವಿಚಾರ ಹಾಂಗೆ ಅಮ್ಮಂಗೆ ಊರಿಲಿ ಸಿಕ್ಕ ವಿಚಾರ ಆರಿಂಗೋ ಮದುವೆ ನಿಘಂಟು ಆದ್ದು ,ಆರೋ ಅಪರೂಪಲ್ಲಿ ಹೆತ್ತದು ಹೀಂಗೆ ಸುಮಾರು ವಿಚಾರಂಗ ಇರ್ತು .ಹೀಂಗೆ ಮೊನ್ನೆ ಒಂದಿನ ಅಮ್ಮ್ಮಂದೆ ಆನುದೆ ಮಾತಾಡ್ತಾ ಇಪ್ಪಗ ಆರೋ ಒಬ್ಬನ ಬಗ್ಗೆ ವಿಚಾರ ಬಂತು.ಆವ ತುಂಬಾ ಒಳ್ಳೆಯ ಕೆಲಸಲ್ಲಿ ಇಪ್ಪೋನು .ಉಪಕಾರಿ ,ಸಹೃದಯಿ ಕೂಡಾ .ಆದರೆ ರಜ್ಜ ತೋರ್ಸಿಗೊಂಬ ಸ್ವಭಾವ .ತಾನು ಮಹಾ ಬ್ಯುಸಿ ,ಬುದ್ದಿವಂತ ಹೇಳುವ ಹಾಂಗೆ ,ಎನಗೆ ಮಾತಾಡಲೇ ಪುರುಸೊತ್ತು ಇಲ್ಲೇ ಎನ್ಗೊಗೆ ಸಮಯ ಭಾರಿ ಮುಖ್ಯ ಹೇಳಿಗೊಂಡು ಅಮ್ಮನತ್ರೆ ಆವ ಗಂಟೆ ಗಟ್ಲೆ ಮಾತಾಡಿದ ಅಡ !!ಈ  ಬಗ್ಗೆ ಅಮ್ಮ ಹೇಳುವಗ "ಅವ ಹುಳಿ ಬಂದು ಮೊಗಚ್ಚಿದ್ದ " ಹೇಳಿ ಹೇಳಿದ !ಎಷ್ಟು ಚೆಂದದ ಭಾಷಾ ಪ್ರಯೋಗ ಅಲ್ಲದ ? ಉದ್ದಿನ ದೋಸೆಗೆ ಅಕ್ಕಿ ಕಡದು ಮಡುಗಿದ್ದು ಮರದಿನಕ್ಕೆ  ಹುಳಿ ಬರಕ್ಕು.ಇಲ್ಲದ್ದರೆ ದೋಸೆ ಮೆಸ್ತಂಗೆ ಆವುತ್ತಿಲ್ಲೆ .ಅದು ಗಟ್ಟಿಯಾಗಿ ಬಲ್ಚಟ್ಟಿ ನ ಹಾಂಗೆ ಆವುತ್ತು .ಹಾಂಗಾಗಿ ಲಾಯ್ಕಕ್ಕೆ ಹುಳಿ ಬರಕ್ಕು ಹೇಳಿ ಬೆಚ್ಚಂಗೆ ಒಲೆಕಟ್ಟೆಲಿ ಮಡುಗುದು ಕ್ರಮ . ಕೆಲವು ಸರ್ತಿ ಜಾಸ್ತಿ ಹುಳಿ ಬತ್ತು . ತುಂಬಾ ಜಾಶ್ತಿ ಹುಳಿ ಬಂದರೆ ಹಿಟ್ಟು ಉಬ್ಬಿ ಮೇಲೆ ಬಂದು ಪಾತ್ರಕ್ಕೆ ಮುಚ್ಚಿದ ಮುಚ್ಚೆಲಿನ ನೂಕಿ ಹಿಟ್ಟೆಲ್ಲ ಹೆರ ಬಂದು ಚೆಲ್ಲುತ್ತು !ಇದಕ್ಕೆ ಹುಳಿ ಬಂದು ಮೊಗಚ್ಚುದು ಹೇಳಿ ಹೇಳುದು ! ಇದರ ಮನುಷ್ಯರ ಸ್ವಭಾವದ ಬಗ್ಗೆ ಹೇಳುವಗ  ಎಂಗಳ ಭಾಷೆಲಿ  ನುಡಿಗಟ್ಟು  ಆಗಿ ಬತ್ತು .ಎಷ್ಟು ಸಹಜವಾದ ಉಪಮೆ ,ಪ್ರತಿಮೆ ಅಲ್ಲದ ?! ಇಂತ  ಚೆಂದದ ಪದಂಗ ಎಂಗಳ ಭಾಷೆಲಿ ತುಂಬಾ  ಇದ್ದು .ನೆನೆಪ್ಪಾದಪ್ಪಗ ,ಪುರುಸೊತ್ತು ಸಿಕ್ಕಿಯಪ್ಪಗ ಬರೆತ್ತೆ ,ಓದಿ ನಿಂಗ ಅಭಿಪ್ರಾಯ ತಿಳಿಸಿ ಇನ್ನೊಂದರಿ ಕಾಂಬ ,ನಮಸ್ಕಾರ