Monday 13 November 2017

ಗಿಳಿ ಬಾಗಿಲು ಹವ್ಯಕ ನುಡಿಗಟ್ಟು 45 ಆನೆ ಹೋಪಗಳೂ ಗಂಟೆ ಕಟ್ಟಕ್ಕಾವುತ್ತು© ಡಾ.ಲಕ್ಷ್ಮೀ ಜಿ ಪ್ರಸಾದ


ಗಿಳಿ ಬಾಗಿಲು ಹವ್ಯಕ ನುಡಿಗಟ್ಟು 45 ಆನೆ ಹೋಪಗಳೂ ಗಂಟೆ ಕಟ್ಟಕ್ಕಾವುತ್ತು© ಡಾ.ಲಕ್ಷ್ಮೀ ಜಿ ಪ್ರಸಾದ
ನಾವು ಮಾಡುದು ಒಳ್ಳೆಯ ಮಹತ್ವದ ಕೆಲಸವೇ ಆಗಿದ್ದರೂ ಅದಕ್ಕೆ ಪ್ರಚಾರದ ಅವಶ್ಯಕತೆ ಇರುತ್ತು.ಇಲ್ಲದ್ದರೆ ಅದು ಬೇರೆಯೋರಿಂಗೆ ಮುಟ್ಟುತ್ತಿಲ್ಲೆ ಹೇಳುವ ಅರ್ಥ ಕೊಡುವ ಮಾತಿದು.
ಆನೆ ತುಂಬಾ ದೊಡ್ಡ ಪ್ರಾಣಿ ಆದರೂ ಅದು ಹೋಪಗ ಅದರ ಕೊರಳಿಂಗೆ ಗಂಟೆ ಕಟ್ಟಕ್ಕಾವುತ್ತು.ಇಲ್ಲದ್ದರೆ ಅದು ಬಂದದು ಗೊಂತಾವುತ್ತಿಲ್ಲೆ ಹೇಳುದು ಇದರ ಅರ್ಥ.
ಮೊನ್ನೆ ಶನಿವಾರ ಬೆಂಗಳೂರಿನ ಹವ್ಯಕ ಸಭೆಲಿ ಯಕ್ಷಗಾನ ತರಗತಿಗಳ ಉದ್ಘಾಟಣೆಯ ನಂತರ ಅಧ್ಯಕ್ಷೀಯ ಭಾಷಣ ಮಾಡುವಾಗ ಡಾ.ಗಿರಿಧರ ಕಜೆ ಈ ನುಡಿಗಟ್ಟಿನ ಮಾತಿನ ನಡುವೆ ಹೇಳಿದವು.ಹವ್ಯಕ ಸಭಾಂಗಣಲ್ಲಿ ಪ್ರತಿ ಆದಿತ್ಯವಾರ ಉದಿಯಪ್ಪಗ ಎಲ್ಲಾ ಜಾತಿ ವರ್ಗ ಧರ್ಮದ ಆಸಕ್ತಿ ಇಪ್ಪ ಜನಂಗೊಕ್ಕೆ ಉಚಿತವಾಗಿ ಹೇಳಿಕೊಡುವ ವಿಚಾರವ ಫೇಸ್ ಬುಕ್, ವಾಟ್ಸಪ್ ಗಳಲ್ಲಿ ಹರಡಕ್ಕು.ಇಲ್ಲದ್ದರೆ ಜನಂಗೊಕ್ಕೆ ಗೊಂತಾವುತ್ತಿಲ್ಲೆ ಹೇಳಿ ಹೇಳುತ್ತಾ ಆನೆ ಹೋಪಗಳುದೆ ಗಂಟೆ ಕಟ್ಟಕ್ಕಾವುತ್ತು ಹೇಳುವ ಮಾತಿನ ಬಳಕೆ ಮಾಡಿದವು‌
ಒಳ್ಳೆಯ  ವಿಚಾರ ಗೊಂತಾಯಕ್ಕಾದರೂ ಅದಕ್ಕೆ ಪ್ರಚಾರ ಬೇಕಾವುತ್ತು ಹೇಳುದರ ಹೇಳುವ  ಚಂದದ ನುಡಿಗಟ್ಟು ಇದು.ಇದರ ಸಣ್ಣಾದಿಪ್ಪಗಲೇ ಆನು ಕೇಳಿತ್ತಿದೆ.ಅದರ ಅರ್ಥ ಸ್ಪಷ್ಟವಾಗಿ ಗೊಂತಾದ್ದು ಮೊನ್ನೆಯೇ ಎನಗೆ.
ಇಂದು ಮತ್ತೆ ಇದು ನೆನಪಾತು.ಇಂದು ಕಾಲೇಜಿಂದ ಬಪ್ಪಗ ಬಸ್ಸಿಲಿ  ಮುನಿಯಮ್ಮ ಹೇಳುವ  ಅಜ್ಜಿಯ ಪರಿಚಯ ಆತು.ಗೆಂಡ ಮಕ್ಕ ಆರೂ ಇಲ್ಲೆ.ಇದ್ದ ರಜ್ಜ ಗೆದ್ದೆಯ ದಾಯಾದಿಗ ಒಳಹಾಕಿಕೊಂಡಿದವು.ಈ ಅಜ್ಜಿ ಎಡಿಗಾದಷ್ಟು ಸಮಯ ಕೂಲಿ ಕೆಲಸಕ್ಕೆ ಹೋಗಿ ಬದುಕಿತ್ತು.ಈಗ ಕೆಲಸ ಮಾಡುಲೆ ಎಡಿಯದ್ದೆ ಭಿಕ್ಷೆ ಬೇಡಿ ಬದುಕುವ ವಿಚಾರವ ಕೇಳಿ ಬೇಜರಾಗಿ ಎನ್ನ ಕೈಲಿದ್ದ ಐನೂರು ರುಪಾಯಿ ಕೊಟ್ಟು ಎನ್ನ ಮೊಬೈಲ್ ನಂಬರ್ ‌ಮತ್ತೆ ಕಾಲೇಜು ವಿಳಾಸ ಕೊಟ್ಟು ಅಲ್ಲಿಗೆ ಬಪ್ಪಲೆ ಹೇಳಿದೆ‌.ಬಂದರೆ ಅ ಅಜ್ಜಿಯ ಯಾವುದಾದರೂ ವೃದ್ಧಾಶ್ರಮಕ್ಕೆ ಸೇರಿಸಿ ಒಂದು ವ್ಯವಸ್ಥೆ ಮಾಡುವ ಉದ್ದೇಶ ಎನ್ನದು.
ಇದರ ಫೇಸ್ ಬುಕ್ ಲಿ ಹಾಕಕ್ಕಾ ಬೇಡದಾ ಹೇಳಿ ದ್ವಂದ್ವ ಆತೆನಗೆ.ಆ ಮೇಲೆ ಹಾಕಿದೆ‌ಎಂತಕೆ ಹೇಳಿರೆ ಪ್ರಾಯದೋರಿಂಗೆ ಆಶಕ್ತರಿಂಗೆ ಸಹಾಯ ಮಾಡುಲೆ ಪ್ರೇರಣೆ ಆಗಲಿ ಹೇಳಿ ಅನ್ಸಿತ್ತು.ಅಷ್ಟಪ್ಪಗ ಆನೆ ಹೋಪಗಳುದೆ ಗಂಟೆ ಕಟ್ಟಕ್ಕು ಹೇಳುವ ಮಾತು ನೆಂಪಾತು
© ಡಾ.ಲಕ್ಷ್ಮೀ ಜಿ ಪ್ರಸಾದ

Tuesday 7 November 2017

ಗಿಳಿ ಬಾಗಿಲು: ಹವ್ಯಕ ನುಡಿಗಟ್ಟು 45 ಬೆಂದಷ್ಟು ಸಮಯ ತಣಿವಲಿಲ್ಲೆ© ಡಾ.ಲಕ್ಷ್ಮೀ ಜಿ ಪ್ರಸಾದ

ಮೊನ್ನೆ ಅಮ್ಮನ ಹತ್ತರೆ ಮಾತಾಡುವಾಗ ನಮ್ಮ ಹವ್ಯಕ ಮಾಣಿಯಂಗೊಕ್ಕೆ ಕೂಸು ಹುಡುಕುವ ಅಬ್ಬೆ ಅಪ್ಪಂದಿರ ತೊಳಲಾಟದ ಬಗ್ಗೆ ಮಾತು ಬಂತು.ಎರಡು ದಶಕಗಳ ಹಿಂದೆ ನಿರಂತರ ಸ್ತ್ರೀ ಬ್ರೂಣ ಹತ್ಯೆ ಮಾಡಿದ್ದರ ಪರಿಣಾಮ ಈಗ ಕಾಣುತ್ತಾ ಇದ್ದು.ಕೂಸು ಬೇಡ ಹೇಳಿ ಕಾಂಬಲೆ ನಮ್ಮ ಸಮಾಜವೇ ಕಾರಣ ಆಗಿತ್ತು. ಈಗ ಒಂದು ಹದಿನೈದು ಇಪ್ಪತ್ತು ವರ್ಷಂಗಳ ಮೊದಲಿನವರೆಗೂ ಹವ್ಯಕರಲ್ಲಿ ಬದಿ( ವರದಕ್ಷಿಣೆ ) ಇತ್ತು.ಇಪ್ಪತ್ತು ಮೂವತ್ತು ವರ್ಷ ಮೊದಲು ಕೂಸು ರಜ್ಜ ಕಪ್ಪಾದರೆ ಕಲಿಯದ್ದೆ ಇದ್ದರೆ ಅಂತ ಕೂಸುಗೊಕ್ಕೆ ಮಾಣಿ ಸಿಕ್ಕುದು ಕಷ್ಟ ಇತ್ತು‌ಚಂದ ಇದ್ದ ಕೂಸುಗೊಕ್ಕೆ ಕೂಡ ಬದಿ‌ಕೊಡದ್ದೆ ಮದುವೆ ಆಗಿಯೊಂಡು ಇತ್ತಿಲ್ಲೆ. ಇದರ ಪರಿಣಾಮವಾಗಿ ಅಂಬಗ ತುಂಬಾ ಕೂಸುಗ ಮದುವೆ ಆಗದ್ದೆ ಹಾಂಗೆ ಒಳುದ್ದವು.
ಕೂಸು ಹುಟ್ಟುದು ಭಾರ ಹೇಳಿ ಅನ್ಸಿಯಪ್ಪಗ ಸ್ತ್ರೀ ಬ್ರೂಣ ಹತ್ಯೆ ಶುರು ಮಾಡಿದವು.ಇದರ ಪರಿಣಾಮಂದಾಗಿ ಈಗ ಹವ್ಯಕರಲ್ಲಿ  ಮಾಣಿ ಕೂಸು ಅನುಪಾತ ಕುಸುದು ಸಾವಿರ ಮಾಣಿಯಂಗೊಕ್ಕೆ ಎಂಟುನೂರ ಹದಿನಾಲ್ಕು ಕೂಸುಗ ಇಪ್ಪದು ಅಡ( ನಮ್ಮ ಸ್ವಾಮಿಗ ಭಾಷಣ ಮಾಡುವಾಗ ಹೇಳಿದ್ದರ ಕೇಳಿದ ನೆನಪು).ಇದರಂದಾಗಿ ಹಳ್ಳಿಲಿ ಇಪ್ಪ ಕೃಷಿಕ ,ಪೌರೋಹಿತ್ಯ ಮಾಡುವ,ಸಣ್ಣ ಪುಟ್ಟ ಕೆಲಸ ವ್ಯಾಪಾರ ಮಾಡುವ ಮಾಣಿಯಂಗೊಕ್ಕೆ ಕೂಸು ಸಿಕ್ಕುತ್ತಿಲ್ಲೆ.ಬೇಡಿಕೆ ಇಪ್ಪಗ ಪೇಟೆಲಿ ಆರಾಮಿಲಿ ಇಪ್ಪ ಒಳ್ಳೆಯ ಓದಿದ ಕೆಲಸ ಇಪ್ಪ ಮಾಣಿಯಂಗಳ ನೋಡುದು ಸಹಜ.
ಅಂತೂ ಇಂತೂ ಹಿಂದಣೋರು ಮಾಡಿದ ತಪ್ಪಿಂಗೆ ಈಗಣ ಮಾಣಿಯಂಗ ಅನುಭವಿಸಕ್ಕಾಗಿ ಬಂತು‌‌.
ಹವ್ಯಕ ರಲ್ಲಿ ಮಾಣಿ ಕೂಸು ಅನುಪಾತ ಕುಸಿವಲೆ ಸ್ತ್ರೀ ಬ್ರೂಣ ಹತ್ಯೆ ಕಾರಣ ಹೇಳಿ ಆನು ಇತ್ತೀಚೆಗೆ ಫೇಸ್ ಬುಕ್ ಲಿ ಬರದ್ದಕ್ಕೆ ಸುಮಾರು ಜನಂಗ ಆಕ್ಷೇಪ ಮಾಡಿದವು.ಹೇಳುವ ವಿಚಾರವು ಎಂಗಳ ಮಾತಿನ ನಡುವೆ ಬಂತ
ಹಾಂಗೆ ಎಂಗಳ‌ಪೈಕಿ ಮಾಣಿಗೆ ಒಬ್ಬಂಗೆ ಸರಿಯಾದ ಕೂಸು ಸಿಕ್ಕದ್ದ ಬಗ್ಗೆ ಆರೋ ಕುಹಕದ ಮಾತಾಡಿದ್ದರ ಅಮ್ಮ ಹೇಳಿದ.ಆನು ಅಂಬಗ ಅವಕ್ಕೆ ಮಗ ಇಲ್ಲೆಯಾ ಕೇಳಿದೆ.ಇದ್ದ ,ಈಗ ಎಂತದೋ ಓದುತ್ತಾ ಇದ್ದ.ಇನ್ನೊಂದು ನಾಲ್ಕು ಐದು ವರ್ಷಲ್ಲಿ ಅವಕ್ಕುದೆ ಇದೇ ಸಮಸ್ಯೆ ಬತ್ತು‌‌.ಬೆಂದಷ್ಟು ಹೊತ್ತು ತಣಿವಲಿಲ್ಲೆ ಹೇಳಿ ಹೇಳಿದ.
ಈ ನುಡಿಗಟ್ಟಟ್ಟಿನ ಆನು ಸಣ್ಣದಿಪ್ಪಗಳೇ ಕೇಳಿದ್ದೆ.ಮದುವೆ ಆಗಿ ಪೇಚಾಡುವಆರನ್ನಾದರೂ ಕಂಡು ನೆಗೆ ಮಾಡಿರೆ ,ಅಥವಾ ಅಡಿಗೆ ಸರಿ ಅಯಿದಿಲ್ಲೆ ಹೇಳಿ ಕೊಂಕು ತೆಗದರೆ ಎಂಗಳ ಅಜ್ಜಿ  ಅಂಬಗಳೇ ಬೆಂದಷ್ಟು ಸಮಯ ತಣಿವಲಿಲ್ಲೆ, ನೀನು ಎಂತ ಮಾಡ್ತೆ ನೋಡುವಾ ಹೇಳಿ ಹೇಳಿಗೊಂಡು ಇತ್ತಿದ.
ಅಡಿಗೆ ಬೇವಷ್ಟು ಹೊತ್ತು ತಣಿವಲೆ ಬೇಕಾವುತ್ತಿಲ್ಲೆ.ಆ ಕಾಲ ನಿನಗೂ ಹತ್ತರವೇ ಇದ್ದು ಹೇಳುದರ ಈ ಮಾತು ಸೂಚಿಸುತ್ತು.

ಗಿಳಿ ಬಾಗಿಲು : ಹವ್ಯಕ ನುಡಿಗಟ್ಟು - 44 ಬೆಳಿ ನೆಗೆ©ಡಾ.ಲಕ್ಷ್ಮೀ ಜಿ ಪ್ರಸಾದ

ಬೆಳಿ ಹೇಳುದು ಶುದ್ಧದ ನಿಷ್ಕಳಂಕದ ಸಂಕೇತ
ನೆಗೆ ಹೇಳುದುದೆ ಹಾಸ್ಯ ತಮಾಷೆಯ ಅಭಿವ್ಯಕ್ತಿ. ಆದರೆ ಬೆಳಿ ನೆಗೆ ಹೇಳುದು ಶುದ್ಧ ಹೃದಯದ ಸೂಚಿಸುವ ಮಾತಲ್ಲ.ಇದು ನಯವಂಚಕರ ಬಗ್ಗೆ ಹೇಳುವ ಮಾತು. ನಮ್ಮತ್ತರೆ ಎದುರಂದ ಚಂದ ಮಾತಾಡಿಕೊಂಡೇ ಹಿಂದದ್ದ ಕತ್ತಿ ಹಾಕುವ ಜನಂಗ ನಮ್ಮ ಸುತ್ತ ಮುತ್ತ ಇರ್ತವು.ನಮ್ಮತ್ತರೆ ಎದುರಿಂದ ನಮ್ಮ ಭಾರೀ ಹಿತ ಬಯಸುವೋರ ಹಾಂಗೆ ನಮ್ಮ ಕಷ್ಟ ಸುಖವ ವಿಚಾರ್ಸುತ್ತವು.ಅಯ್ಯೋ ಅದಕ್ಕೆ ಹಾಂಗಾತನ್ನೆ  ಹಾಂಗಪ್ಪಲಾಗಿತ್ತೂ ಇತ್ಯಾದಿ ಬಣ್ಣದ ಮಾತುಗಳ ಹೇಳುತ್ತವು‌ಭಾರೀ ಒಳ್ಳೆಯೋರ ಹಾಂಗೆ ಪ್ರದರ್ಶನ ಮಾಡುತ್ತವು.ಒಣ ಉಪಚಾರ ಮಾಡುತ್ತವು.
ಹಿಂದಂದ ನಮಗೆ ಎಷ್ಟು ಎಡಿಗು ಅಷ್ಟು ದ್ರೋಹ ಮಾಡುತ್ತವು‌.ಅವು ನಮಗಮತ್ತರೆ ವ್ಯವಹರಿಸುವ ರೀತಿ ನೋಡಿದರೆ ಅವು ಹೀಂಗೆ ಹಿಂದಂದ ಮಾಡುಗಾ ಹೇಳಿ ಸಂಶಯ ಆವುತ್ತು. ಅಷ್ಟರ ಮಟ್ಟಿಂಗೆ ಅವರ ಒಳ್ಳೆಯತನದ ಪ್ರದರ್ಶನ ಇರ್ತು.ಹಾಂಗಾಗಿ ಇಂತೋರು ಹಿಂದಂದ ಹೀಂಗೆ ಮಾಡಿದ್ದವು ಹೇಳಿರೆ ಆರಿಂಗೂ ನಂಬಿಕೆ ಬಾರ.ಅವರ ಬಗ್ಗೆ ಹೇಳಿದ ನಮ್ಮ ಬಗ್ಗೆಯೇ ಸಂಶಯ ಕಾಣುಗು.ಅಂತೋರ ಬಗ್ಗೆ ಅವರದ್ದೆಲ್ಲ ಎದುರಂಗೆ ಬೆಳೆ ನೆಗೆ ಅಷ್ಟೇ, ಹಿಂದಂದ ಮಾಡುದೇ ಅನಾಚಾರ ಹೇಳುವ‌ಮಾತಿನ ಹವ್ಯಕ ಭಾಷೆಲಿ ಬಳಕೆ ಮಾಡುತ್ತವು.
ಕನ್ನಡದ ನಯವಂಚಕತನ ಹೇಳುದು ಇದಕ್ಕೆ ಸಂವಾದಿಯಾಗಿ ಇದ್ದು .ಕನ್ನಡಲ್ಲಿ ಬಿಳಿ ನಗು ಹೇಳುವುದು ಮುಗ್ಧತೆಯ ಸರಳತೆಯ ಪ್ರಾಮಾಣಿಕತೆಯ ಸಂಕೇತ.ಆದರೆ ಹವ್ಯಕ ಭಾಷೆಲಿ ಬೆಳೆ ನೆಗೆ ಹೇಳುದು ನಯವಂಚಕರ ಬಗ್ಗೆ ಹೇಳುವ ಮಾತು‌.ನಯ ವಂಚಕರ ಬಗ್ಗೆ ಬೆಳಿ ನೆಗೆ ಹೇಳುವ ಮಾತು ತುಂಬಾ ಅರ್ಥಪೂರ್ಣವಾಗಿ ಇದ್ದು 

ಗಿಳಿ ಬಾಗಿಲು ಹವ್ಯಕ ನುಡಿಗಟ್ಟು-43 ಮೋರೆಲಿ ಚೋಲಿ‌ ಇಲ್ಲದ್ದೋವು© ಡಾ.ಲಕ್ಷ್ಮೀ ಜಿ ಪ್ರಸಾದ

ಇತ್ತೀಚೆಗೆ ಎಂಗಳ ನೆಂಟರ ಪೈಕಿ ಒಬ್ಬರ ನೋಡಿದೆ.ಕಂಡೂ ಕಾಣದ್ದ ಹಾಂಗೆ ಹೋದವು.ಆನೂ ಹಾಂಗೆ ಮಾಡಿದೆ.ಅದು ಬೇರೆ ವಿಚಾರ .
ಆನು ಎರಡನೇ ವರ್ಷ ಬಿಎಸ್ಸಿ ಓದುತ್ತಾ ಇಪ್ಪಗ ಎನ್ನ ಮದುವೆ ಆತು
ಆ ಸಮಯಲ್ಲಿ ಎನ್ನ ಮುಂದಿನ ಓದಿನ ಬಗ್ಗೆ ಮನೆ ಮಂದಿ ನೆಂಟರು ಬಂಧು ಬಳಗಂದ ತುಂಬಾ ವಿರೋಧ ಬಂತು(.ನೆಂಟರುಗೊಕ್ಕೆ  ಆನು ಓದಿದರೆ ಅಪ್ಪ ಸಮಸ್ಯೆ ಎಂತಾ ಹೇಳುದು ಎನಗೆ ಅಂಬಗ ಮಾತ್ರ ಅಲ್ಲ ಈಗಲೂ ಅರ್ಥ ಆವುತ್ತಿಲ್ಲೆ,ಬಹುಶಃ ಹೊಟ್ಟೆ ಕಿಚ್ಚೇ ಕಾರಣ ಆದಿಕ್ಕು)ಅಂಬಗ ಈ ನೆಂಟರುದೆ ವಿರೋಧ ಮಾಡಿ ಚಾಡಿ ಹೇಳಿಕೊಟ್ಟು ಸಮಬಂಧ ಬಿಟ್ಟು ಹೊಣದ್ದವು.ಇದೆಲ್ಲಾ ಆಗಿ ಸುಮಾರು ವರ್ಷ ಕಳುತ್ತು.ಆ ನೆಂಟರ ಮಗಂಗೆ ಏನೋ ಸಮಸ್ಯೆ ಬಂತು..ಅಂಬಗ ಈ ನೆಂಟರು ಎನಗೆ ಪೋನ್ ಮಾಡಿ ಎಂತ ಮಾಡುದೂ ಹೇಳಿ ಗೊಂತಾವುತ್ತಿಲ್ಲೆ . ಹೇಳಿ ಸಹಾಯ ಕೇಳಿತ್ತಿದವು.ಇವಕ್ಕೆ ಸಹಾಯ ಕೇಳುವಗ ಅವು ಮಾಡಿದ ದ್ರೋಹ ಯಾವುದೂ ನೆನಪಿತ್ತಿಲ್ಲೆ.ಎನಗಪ್ಪ ಸಹಾಯವ ಆನು ಮಾಡಿದೆ.
ಇದಾಗಿಯೂ ಸುಮಾರು ವರ್ಷ ಕಳುತ್ತು ಈಗ. ಈಗ ಮತ್ತೆ ಅದೇ ಹಾಂಕಾರ ಇದ್ದು.ಇನ್ನು ಏನಾದರೂ ಸಹಾಯ ಬೇಕಾದರೆ ಯಾವುದೇ ನಾಚಿಕೆ ಮಾನ ಮರ್ಯಾದೆ ಇಲ್ಲದ್ದೆ ಓಡಿ ಬಕ್ಕು.ಅವರ ಕಂಡಪ್ಪಗ ಎನಗೆ ನೆನಪಾದ ಮಾತು ಮೋರೆಲಿ ಚೋಲಿ‌ ಇಲ್ಲದ್ದೋವು

ಅವಕ್ಕೆ ನಾಚಿಕೆ ಮಾನ‌ ಮರ್ಯಾದಿ ಯಾವುದೂ ಇಲ್ಲೆ .ಮೋರೆಲಿ ಚೋಲಿ ಇಲ್ಲದ್ದೋವು ಹೇಳುವ ಮಾತು ಹವ್ಯಕ ಭಾಷೆಲಿ ಅಂಬಗಂಬಗ ಬಳಕೆ ಆವುತ್ತು. ನಮಗೆ ಈ ಮೊದಲು ಬಲವಾದ ದ್ರೋಹ ಮಾಡಿರ್ತವು.ಹಿಂದಂದ ಎಡಿಗಾದಷ್ಟು ಈಗಲೂ ಹೊಣೆತ್ತಾ ಇರುತ್ತವು.ಆದರೆ ನಮ್ಮಂದ ಎಂತಾದರೂ ಉಪಕಾರ ಬೇಕಿದ್ದರೆ ಯಾವ ಮುಲಾಜಿಲ್ಲದ್ದೆ ಓಂಗಿಯೊಂಡು ಬತ್ತವು ಕೆಲವು ಜೆನಂಗ.ಅಂತೋರ ಬಗ್ಗೆ ಹೇಳುವ ಮಾತಿದು.
ತುಳುವಿಲಿ ಕೂಡ ಈ ನುಡಿಗಟ್ಟು ಬಳಕೆಲಿ ಇದ್ದು.ತುಳುವಿಲಿ ಮೋನೆಡ್ ಚೋಲಿ ಇಜ್ಯಾಂದಿನಕುಲು ಹೇಳಿ ಹೇಳುತ್ತವು.

Monday 30 October 2017

ಗಿಳಿಬಾಗಿಲು ಹವ್ಯಕ ನುಡಿಗಟ್ಟು 42 ಕೆಮಿ ಹರುದೋವು © ಡಾ.ಲಕ್ಷ್ಮೀ ಜಿ ಪ್ರಸಾದ



ನಿನ್ನೆ ಅಮ್ಮನತ್ತರೆ ಪಟ್ಟಾಂಗ ಹೊಡವಗ ಒಬ್ಬರ ಮಾತು ನಡೆನುಡಿ ಬಗ್ಗೆ ಯೂ ವಿಷಯ ಬಂತು.ನೇರವಾಗಿ ಯಾವುದೇ ಲೋಕಾಪವಾದದ ಹೆದರಿಕೆ ಇಲ್ಲದ್ದೆ ಇದ್ದದರ ಇದ್ದ ಹಾಂಗೆ ಹೇಳುವೋರ ಸ್ವಭಾವದ ಬಗ್ಗೆ ಹೇಳುತ್ತಾ ಅವು ಕೆಮಿ ಹರುದೋವು.ಆರ ಬಗ್ಗೆ ಮಾತಾಡಲುದೆ ಹಿಂದೆ ಮುಂದೆ ನೋಡದ್ದೋರು.ಅಂತೋರತ್ತರೆ ವ್ಯವಹರುಸುವಗ ತುಂಬಾ ಜಾಗೃತೆ ಇರಕ್ಕಾವುತ್ತು.ಇಲ್ಲದ್ದರೆ ಸಮಯ ಸಂದರ್ಭ ನೋಡದ್ದೆ ನಮ್ಮ ಮರ್ಯಾದೆ ತೆಗೆಗು ಹೇಳಿ ಅಮ್ಮ ಹೇಳಿದ.ಕೆಮಿ ಹರುದೋವು ಹೇಳುವದರ ಕೇಳಿ ಅಪ್ಪಗ ಎನ್ನ ಕೆಮಿ ಕುತ್ತ ಆತು.ಅಮ್ಮ ಹೇಳುವ ವಿಷಯವ ಅರ್ಧಲ್ಲಿ ನಿಲ್ಲಿಸಿ ಕೆಮಿ ಹರುದೋವು ಹೇಳಿರೆ ಕೆಮಿ ತಮ್ಮಟೆ ಹರುದು ಹೋಗಿ‌ಕೆಮಿ ಕೇಳದ್ದೋರ ಹೇಳಿ ಕೇಳಿದೆ.ಕೆಮಿ ಕೇಳದ್ದೋರಿಂಗೆ ಬೇರೆಯೋರು ಎಂತ ಹೇಳ್ತವು ಹೇಳುದು ಕೇಳ್ತಿಲ್ಲೆ.ಹಾಂಗಾಗಿ ಹೇಳಕ್ಕಾದ್ದರ ಯಾವುದೇ ಮುಲಾಜಿಲ್ಲದ್ದೆ ಹೇಳುಗು ಹಾಂಗಾಗಿ ಕೆಮಿ ಹರುದೋವು ಹೇಳುವ ನುಡಿಗಟ್ಟು ಬಂದಿಕ್ಕು ಹೇಳಿ ಗ್ರೇಸಿ ಆನು ಹಾಂಗೆ ಕೇಳಿದೆ.ಆದರೆ ಅಮ್ಮ ಹೇಳಿದ ಅರ್ಥ ಬೇರೆಯೇ ಇದ್ದು.
ಮೊದಲೆಲ್ಲ ಜನಂಗ ಕೆಮಿಗೆ ಹೆಮ್ಮಕ್ಕ ಬೆಂಡು ಹಾಕಿಯೊಂಡು ಇತ್ತಿದವು.ಹಾಂಗೆ ಗೆಂಡುಮಕ್ಕ ಕೆಮಿಗೆ ಟಿಕ್ಕೆ ಹಾಕಿಕೊಂಡು ಇತ್ತಿದವು ಅನ್ನೇ. ಸೊಪ್ಬಪು ಕೈವಗಲೋ ಅಥವಾ ಇನ್ನೇನಾದರೂ ಕೆಲಸಕ್ಕೆ  ಬಲ್ಲ್ಲೆ ಎಡಕ್ಕಿಲಿ ನುರ್ಕುವಗ ಕೆಮಿಗೆ ಹಾಕಿದ ಬೆಂಡು ಅಥವಾ ಟಿಕ್ಕಿಗೆ ಬಳ್ಳಿಗ ಸಿಕ್ಕಾಕೊಂಡು ಬಂಙ ಆವುತ್ತು.
ಆದರೆ ಕೆಮಿಯ ಹಾಳೆ ಹರುದು ಹೋದೋರಿಂಗೆ ಬೆಂಡು ಅಥವಾ ಟಿಕ್ಕಿ ಹಾಕುಲೆ ಎಡಿತ್ತಿಲ್ಲೆ.ಹಾಂಗಾಗಿ ಬಲ್ಲೆ ಒಳ ನುಗ್ಗುವಗ ಸಿಕ್ಕಾಕೊಂಬ ಹೆದರಿಕೆ ಇಲ್ಲೆ.ಹಾಂಗಾಗಿ ಅಂತೋರು ಸೀದಾ ಬಲ್ಲೆ ಒಳ ನುಗ್ಗುತ್ತವು

ಇದರ ಯಾವುದೇ ಮುಲಾಜಿಲ್ಲದ್ದೆ ಮಾತಾಡುವೋರ ಬಗ್ಗೆ ಸಮೀಕರಣ ಮಾಡಿ ಅವರ ಸ್ವಭಾವದ ಬಗ್ಗೆ ಹೇಳುವಾಗ ಅವು ಕೆಮಿ ಹರುದೋವು, ಅವರತ್ತರೆ ಜಾಗ್ರತೆ ಇರಕ್ಕು ಹೇಳಿ ಹೇಳುತ್ತವು.
ಬಹುಶಃ  ಈ ಮಾತಿನ ಮೂಲ ತುಳು ಭಾಷೆಲಿ ಇದ್ದು .ತುಳುವಿಲಿ ಇಂತಹ ಸ್ವಭಾದೋವಕ್ಕೆ ಕೆಬಿ ಪರಿನಾಕುಲು ಹೇಳಿ ಹೇಳುತ್ತವು.
ಪರಿಸರದ ಭಾಷೆಯ ನುಡಿಗಟ್ಟುಗ ದಕ್ಷಿಣ ಕನ್ನಡ ಕಾಸರಗೋಡು ಪರಿಸರದ ಹವ್ಯಕ ಭಾಷೆಯ ಮೇಲೆ ಬೀರಿ ಇಂತಹ ಮಾತುಗ ಹವ್ಯಕ ಭಾಷೆಲಿ ಬಂದಿಕ್ಕು
ಕನ್ನಡದ ಮೂರೂ ಬಿಟ್ಟವರು ಹೇಳುವ ನುಡಿಗಟ್ಟು ಇದಕ್ಕೆ ಸಂವಾದಿಯಾಗಿ ಇದ್ದು
ಇಂತಹ ಚಂದದ ಶಬ್ದ ಪ್ರಯೋಗಂಗ ನಮ್ಮ ಭಾಷೆಲಿ ತುಂಬಾ ಇದ್ದು ಅಲ್ಲದಾ
- ಡಾ.ಲಕ್ಷ್ಮೀ ಜಿ ಪ್ರಸಾದ

Monday 9 October 2017

ಗಿಳಿಬಾಗಿಲು - ಹವ್ಯಕ ನುಡಿಗಟ್ಟು 41 ವಾಸನೆ ಬರಲೇಳಿ ಸಗಣನೀರು ಹಾಕಿದ್ದು ಶುದ್ದಾತು©ಡಾ.ಲಕ್ಷ್ಮೀ ಜಿ ಪ್ರಸಾದ

ವಾಸನೆ ಬರಲೇಳಿ ಸಗಣನೀರು ಹಾಕಿದ್ದು ಶುದ್ದಾತು
ನಿನ್ನೆ ಅಮ್ಮನತ್ತರೆ ಮಾತಾಡುವಾಗ ಒಂದು ವಿಷಯ ಬಂತು.ಈ ಹಿಂದೆ ಎಂಗೊಗೆ ಒಬ್ರು ಉಪದ್ರ ಆಯಕ್ಕು ಹೇಳಿ ಏನೋ ಮಾಡಿತ್ತಿದವು.ಆದರೆ ಎಂಗೊಗೆ ಅದರಂದ ಉಪಕಾರ ಆಯಿದು ಇದರ ಮಾತಿನ ನಡುವೆ ಅಮ್ಮನ ಹತ್ತರೆ ಅನು ಹೇಳಿದೆ.ಅಂಬಗ ಅಮ್ಮ " ನಿನ್ನ ಅಪ್ಪ ಯಾವಾಗಲೂ ಹೇಳುಗು ವಾಸನೆ ಬಪ್ಪಲೆ ಹೇಳಿ ಸಗಣ ನೀರು ಹಾಕಿದರೆ ಶುಧ್ದ ಆತು ಹೇಳಿ.ಇದು ಹಾಂಗೆ ಆತು ಹೇಳಿ ಅಮ್ಮ ಹೇಳಿದ. ಅದರ ಕೇಳಿ ಎನ್ನ‌ಕೆಮಿ ಕುತ್ತ ಆತು.ಪುನಃ ಅಪ್ಪ ಎಂತ ಹೇಳಿಗೊಂಡಿತ್ತದು ಹೇಳಿ ಕೇಳಿದೆ. ಅಮ್ಮ ಈ ಮಾತಿನ ಹೇಳಿ ಅದರ ಅರ್ಥವ ವಿವರಿಸಿದ.
ನಮ್ಮ ಕಡೆ ಹವ್ಯಕ ಭಾಷೆಲಿ ಬಳಕೆಲಿ ಇಪ್ಪ ಒಂದು ನುಡಿಗಟ್ಟು ಇದು.ವಾಸನೆ ಬರಕ್ಕು ಹೇಳಿ ಆರೋ ಮನೆ ಜಾಲಿಂಗೆ ಸಗಣ ನೀರು ಹಾಕಿದವು.ಆದರೆ ಅದು ಯಜಮಾನಂಗೆ ಅದರಂದ ಉಪದ್ರ ಅಪ್ಪ ಬದಲು ಉಪಕಾರವೇ ಆತು.ಜಾಲು ಶುದ್ಧ ಆತು ಹೇಳಿದು ಈ ಮಾತಿನ ಅರ್ಥ.
ಆರಾದರೂ ನಮಗೆ ತೊಂದರೆ ಆಯಕ್ಕು  ಹೇಳಿ ಕುತಂತ್ರ ಮಾಡಿದರೂ ಅದುರಂದ  ಕೆಲವು ಸರ್ತಿ ನಮಗೆ ಉಪಕಾರವೇ ಆವುತ್ತು.ಅಂತಹ ಸಂದರ್ಭವ ವಿವರುಸುವಾಗ ಬಳಕೆಗೆ ಬಂದ ನುಡಿಗಟ್ಟು ಇದು.
© ಡಾ.ಲಕ್ಷ್ಮೀ ಜಿ ಪ್ರಸಾದ
ಕನ್ನಡ ಉಪನ್ಯಾಸಕರು ಸರ್ಕಾರಿ ಪದವಿ ಪೂರ್ವ ಕಾಲೇಜು ನೆಲಮಂಗಲ

Sunday 13 August 2017

ಗಿಳಿ ಬಾಗಿಲು ಹವ್ಯಕ ನುಡಿಗಟ್ಟು -40 ಸೀವಿದ್ದು ಹೇಳಿ ಬೇರಿನವರೆಗೆ ಅಗಿವಲಾಗ - ಡಾ ಲಕ್ಷ್ಮೀ ಜಿ ಪ್ರಸಾದ

ಸೀವಿದ್ದು ಹೇಳಿ ಬೇರಿನವರೆಗೆ ಅಗಿವಲಾಗ ಹೇಳುದು ನಮ್ಮ ಭಾಷೆಲಿ ಸಾಮಾನ್ಯವಾಗಿ ಅಂಬಗಂಬಗ ಮಾತಿನ ನಡುವೆ ಬಳಕೆ ಅಪ್ಪ ನುಡಿಗಟ್ಟು .ಆನುದೆ ಇದರ ಸಣ್ಣಾದಿಪ್ಪಗಲೇ ಕೇಳಿದ್ದೆ.ಆದರೆ ಸೀವಿಪ್ಪದು ಎಂತರ ಅಗಿವದು ಎಂತರ ಹೇಳಿ ಅಲೋಚನೆ ಮಾಡಿತ್ತಿಲ್ಲೆ
ಮೊನ್ನೆ ಅಮ್ಮನ ಹತ್ತರೆ ಮಾತಾಡುವಾಗ ಈ ಮಾತು ನಡುವೆ ಬಂತು.ನಮ್ಮಲ್ಲಿ ಹೆಚ್ಚಿನೋರಿಂಗೆ ಬೇರೆಯೋರ  ಕಷ್ಟ ಕಾರ್ಪಣ್ಯಗಳ ನೋಡಿ ಮರುಗುವ ಮನೋಭಾವ ಇಲ್ಲೆ .ಹೆಸರಿಂಗೆ ಬೇಕಾಗಿ ಶಿಫಾರ್ಸಿಂಗೆ ಬೇಕಾಗಿ ಸಂಘ ಸಂಸ್ಥೆಗೊಕ್ಕೆ ಲಕ್ಷ ಗಟ್ಟಲೆ ಪೈಸೆ ಕೊಡುವೋರು ಕೆಲವು ಜನಂಗ ಇದ್ದವು.ಆದರೆ ಮದ್ದಿಂಗೋ ಕಲಿವಲೋ ಸಹಾಯ ಮಾಡುವೋರು ತುಂಬಾ ಕಮ್ಮಿ ಜನಂಗ ಇಪ್ಪದು .ಇದು ಬೆಳ್ಳಾರೆಲಿ ಇಪ್ಪಗ ಎನಗೆ ಸ್ಪಷ್ಟವಾಗಿ ಅನುಭವಕ್ಕೆ ಬೈಂದು .ಬೆಳ್ಳಾರೆಯ ಹತ್ತರದ ನೆಟ್ಟಾರಿನ ಒಬ್ಬ ಸಣ್ಣ ಪ್ರಾಯದ ಮಾಣಿಗೆ ಕಿಡ್ನಿ ಹಾಳಾಗಿ ಬದಲಿ ಚಿಕಿತ್ಸೆ ಮಾಡಬೇಕಾಗಿ ಬಂತು.ಈ ಬಗ್ಗೆ ಸಹಾಯ ಕೇಳಿ ಸುಳ್ಯ ಸುದ್ದಿ ಬಿಡುಗಡೆ ಪತ್ರಿಕೆಲಿ ಹಾಕಿದ್ದರ ನೋಡಿ ಆನು ರಜ್ಜ ಪೈಸೆ ಸಂಗ್ರಹ ಮಾಡುಲೆ ಹೆರಟೆ. ಕೆಲವು ಗುರಿಕ್ಕಾರಕ್ಕಳ ದೊಡ್ಡ ಪೈಸೆ ಇಪ್ಪೋರ ಹತ್ರೆ ಪ್ರಸ್ತಾಪ ಮಾಡಿಯಪ್ಪಗ ಅವರ ಊರಿನ ಮಾಣಿ ಬಗ್ಗೆ ಅವಕ್ಕೆ ಜಾಣ ಮರೆವು ಬಂತು ! ಕೆಲವು ಜನಂಗ ನೂರಿನ್ನೂರು ಕೊಟ್ಟವು .ಆನು ಎನ್ನತ್ರೆ ಇಪ್ಪ ಮೂವತ್ತು ಸಾವಿರಕ್ಕೆ ಎನ್ನ ಅಣ್ಣ ತಮ್ಮಂದಿರು ಅಕ್ಕನ ಮಗ ಕೊಟ್ಟ ಪೈಸೆ ಎಲ್ಲಾ ಸೇರಿಸಿ ಒಂದು ಲಕ್ಷ ದಷ್ಟು ಮಾಡಿ ಕೊಟ್ಟೆ .ತಮಗಮನ ಗೆಳೆಯರಾಗಿಪ್ಪ ಒಬ್ಬರು ಒಂದರೆಡು ಲಕ್ಷ ಸಹಾಯ ಮಾಡಿದವು ನಂತರ ಬೇರೆ ಕಡೆಂದಲೂ ಸಹಾಯ ಬಂತಡ ಮತ್ತೆ ಆನು ಬೆಂಗಳೂರಿಂಗೆ ವರ್ಗಾವಣೆ ಪಡೆದು ಬಂದೆ ಮತ್ತೆ ಎಂತಾತು ಎನಗೆ ಗೊಂತಿಲ್ಲೆ  .ಎರಡು ತಿಂಗಳು ಮೊದಲು  ಅಲ್ಲೇ ಹತ್ರದ ಊರಿಂದ ಫೋನ್ ಮಾಡಿ ಎನ್ಬೇರಿನಂಗೆ ಪಿಯುಸಿ  ಓದುಲೆ ಸಹಾಯ ಮಾಡಕ್ಕು ಹೇಳಿ ಕೇಳಿದವು .ಅತು ಹೇಳಿ ಎಷ್ಟು ಫೀಸ್ ಅವುತ್ತು ಕೇಳಿದೆ.ಎರಡು ಲಕ್ಷ ಹೇಳಿದವು ಅಷ್ಟು ದುಬಾರಿ ಕಾಲೇಜೆಂತಕೆ ? ಅಲ್ಲೇ ಹತ್ರಣ ಬೆಳ್ಳಾರೆ ಗವರ್ನಮೆಂಟ್ ಕಾಲೇಜಿಂಗೆ ಹಾಕುಲಾಗದಾ ? ಹೇಳಿ ಕೇಳಿದೆ .( ಬೆಳ್ಳಾರೆ ಕಾಲೇಜಿಲಿಲಿ ಪಾಠ ಪ್ರವಚನಂಗ ಸರಿಯಾಗಿ ನಡೆತ್ರು ಒಳ್ಳೆಯ ರಿಸಲ್ಟ್ ಕೂಡ ಇದ್ದು)   ನಿಂಗಳ ಉಪದೇಶ ಬೇಡ ಸಹಾಯ ಮಾಡುವ ಮನಸಿದ್ದರೆ ಕೊಡಿ ಹೇಳಿದವು .ಆನೆಂತ ಮಾತಾಡಿದಿಲ್ಲೆ.ಎನ್ನ ದೂರುವ ನೂರಾರು ಜನರಲ್ಲಿ ಇವಂದೆ ಒಬ್ಬ ಸೇರಿದ ಅಷ್ಟೇ .
ಆರುದೆ ಪೈಸೆ ಹೆಚ್ಚಾಗಿ ಆರಿಂಗಾದರೂ ಸಹಾಯ ಮಾಡುದಲ್ಲ ಅದರ ಅರ್ಥ ಮಾಡಗೊಳ್ಳಕ್ಕು .ಅದು ಬಿಟ್ಟು ಕೊಡ್ತವು ಹೇಳಿ ಎಲ್ಲದಕ್ಕೂ ಕೇಳುದಲ್ಲ
ಮೊನ್ನೆ ಅಮ್ಮ ಊರಿಲಿ ಆರೋ ಹೀಂಗೆ ಮಾಡಿದ್ದರ ಹೇಳುವಾಗ ಆನು ಈ ವಿಚಾರ ಹೇಳಿದೆ ಅಂಬಗ ಅಮ್ಮ ಹೇಳಿದ ಆರಾದರು ಕೊಡ್ತವು ಹೇಳಿ ಅವರ ತೊಳ್ಳುಲಾಗ ಸೀವಿದ್ದು ಹೇಳಿ ಬೇರಿನ ವರೆಗೆ ಅಗಿವಲಾಗ ಹೇಳಿ.

ಕಬ್ಬು ಸೀವಿದ್ದು ಹೇಳಿ ಅದರ ಬೇರಿನವರೆಗೆ ತುಂಡು ಮಾಡುಲಾಗ ರಜ್ಜ ಕಡುದು ಚಿಗುರುಲೆ ಬಿಡಕ್ಕು ಇಲ್ಲದ್ದರೆ ಬುಡವೇ ಸತ್ತು ಹೋವುತ್ತಿಲ್ಲೆಯಾ ? ಆದರೆ ಜನಂಗ ಅದರ ಅರ್ಥ ಮಾಡಗೊಳ್ಳಕ್ಕು ಅಲ್ಲದಾ ?

Tuesday 23 May 2017

ಹವ್ಯಕ ನುಡಿಗಟ್ಟು 39 ಬೆಲ್ಲಲ್ಲಿ ಕಡೆ ಕೊಡಿ ಇಲ್ಲೆ © ಡಾ ಲಕ್ಷ್ಮೀ ಜಿ ಪ್ರಸಾದ


ಸಾಮಾನ್ಯವಾಗಿ ಕೆಟ್ಟ ಜನರ ಬೈವಗ ಅಥವಾ ಒಂದು ಗುಂಇನ ಜನರ ಬಗ್ಗೆ ಹೇಳುವಾಗ ಪ್ರಯೋಗ ಮಾಡುವ ಹವ್ಯಕ ಮಾತಿದು
ಉದಾಹರಣೆಗೆ ಹೇಳುದಾದರೆ ದು ಕುಟುಂಬ ಇದ್ದು ಹೇಳಿ ಮಡಿಕೊಂಬ .ಅದರಲ್ಲಿ ಎಲ್ಲರೂ ಕೋಪಿಷ್ಟಂಗ ,ಸಂಸ್ಕರ ಇಲ್ಲದ್ದೋವು.ಅದರಲ್ಲಿ ಒಬ್ಬ ರಜ ವಾಸಿ ಹೇಳಿ ಆರಿಗಾದರೂ ಅನಿಸಿ ಅವ ತೊಂದರೆ ಇಲ್ಲೆ ಅಲ್ಲದಾ ? ರಜ್ಜ ಮನುಷ್ಯತ್ವ ಇದ್ದು ಅವನ ಅಣ್ಣ ತಮ್ಮಂದಿರ ಹಾಂಗ ಅಲ್ಲ ಹೇಳಿರೆ ಅವಂದೆ ಅದೇ ಸ್ವಭಾವ ಹೇಳಿ ಗೊಂತಿಪ್ಪೋರು ಎಂಥದೂ ಇಲ್ಲೆ ಬೆಲ್ಲಲ್ಲಿ ಕಡೆ ಕೊಡಿ ಇದ್ದಾ ? ಹಾಂಗೆ ಅವೆಲ್ಲ ಒಂದೇ ಹೇಳಿ ಹೇಳುತ್ತವು
ಕಬ್ಬಿಂದ ಬೆಲ್ಲ ತಯಾರು ಮಾಡುದು .ಕಬ್ಬಿಲಿ ಕಡೆ ಕೊಡಿ ತುಂಡು ಗಳಲ್ಲಿ ರುಚಿಲಿ ವ್ಯತ್ಯಾಸ ಇದ್ದು ಆದರೆ ಅದರಿದಲೇ  ತಯಾರಾದ
ಬೆ ಲ್ಲದ ಯಾವ ಕಡೆಲಿ ತಿಂದು ನೋಡಿರೂ ಒಂದೇ ರೀತಿಯ ರುಚಿ ಇರ್ತು ಅದರಲ್ಲಿ ಕಡೆ ತುಂಡು ಹೇಳಿ ಹೆಚ್ಚು ಸೀವು ಕೊಡಿ ತುಂಡು ಹೇಳಿ ಕಮ್ಮಿ ಸೀವು ಇರ್ತಿಲ್ಲೆ ( ಬೇಕಾರೆ ಈ ನೆಪಲ್ಲಿ ಆದರೂ ಅಚ್ಚು ಬೆಲ್ಲ ತಿಂದು ರುಚಿಯ ಸವಿಯಿರಿ ಆನು ಅದೇ ಮಾಡುತ್ತಾ ಇದ್ದೆ ಈಗ)  ಹಾಂಗೆ ದುಷ್ಟರ ಗುಂಪಿನ ಎಲ್ಲರೂ ಒಂದೇ ಅವರಲ್ಲಿ ಎಂತ ವ್ಯತ್ಯಾಸ ದೆ ಇಲ್ಲೆ ಹೇಳುವ ಸಂದರ್ಭಲ್ಲಿ ಬೆಲ್ಲಲ್ಲಿ ಕಡೆ ಕೊಡಿ ಇಲ್ಲೆ ಹೇಳುವ ನುಡಿಗಟ್ಟಿನ ನಮ್ಮ ಹಿರಿಯರು ಬಳಕೆ ಮಾಡಿಕೊಂಡು ಬೈಂದವು ಅದು ಎಷ್ಟು ಚಂದ ಇದ್ದು ಅಲ್ಲದಾ ? ಓದಿ ನಿಂಗಳ ಅಭಿಪ್ರಾಯ ತಿಳಿಸಿ ಇನ್ನೊಂದರಿ ಕಾಂಬ ಧನ್ಯವಾದಂಗ
ಡಾ ಲಕ್ಷ್ಮೀ ಜಿ ಪ್ರಸಾದ ಕನ್ನಡ ಉಪನ್ಯಾಸಕಿ ಮತ್ತು ತುಳು ಸಂಶೋಧಕಿ ಸರ್ಕಾರಿ ಪದವಿ ಪೂರ್ವ ಕಾಲೇಜು ನೆಲಮಂಗಲ ಬೆಂಗಳೂರು ಗ್ರಾಮಾಂತರ ಜಿಲ್ಲೆ

Tuesday 16 May 2017

ಗಿಳಿ ಬಾಗಿಲು ಹವ್ಯಕ‌ನುಡಿಗಟ್ಟು 38 ಕೇರೆ ತಿಂಬ ರಾಜ್ಯಕ್ಕೆ ಹೋದರೆ ನಡು ತುಂಡು ತಿನ್ನಕ್ಕು © ಡಾ ಲಕ್ಷ್ಮೀ ಜಿ ಪ್ರಸಾದ

ಕಳುದ ಸರ್ತಿ ಊರಿಂಗೆ ಹೋದಿಪ್ಪಗ ಅಕ್ಕಂದೆ ಭಾವಂದೆ ಅಮೇರಿಕಲ್ಲಿ ಇಪ್ಪ ಮಗಳು ಅಳಿಯ ಮಗ ಸೊಸೆ ಮನೆಗೆ ಹೋಪ‌ ಸುದ್ಧಿ ಬಂತು.ಅಮ್ಮಂದೆ ಒಟ್ಟಂಗೆ ಹೋಪ ಅಂದಾಜು ಎನ್ನ ಅಣ್ಣಂದೆ ಒಬ್ಬ ತಮ್ಮಂದೆ ಅಮೇರಿಕಲ್ಲಿ ಇಪ್ಪದು ಈಗ ಅಕ್ಕನ‌ಮಗಳ‌ಅಳಿಉ‌ಮಗ ಸೊಸೆದೆ ಅಲ್ಲಿ ಇಪ್ಪದು ಇವು ಅಮ್ಮಂಗೆ ಪುಳ್ಳಿಯಕ್ಕ ಅನ್ನೇ ಹಾಂಗೆ ಎಲ್ಲರ ಮನೆಗೆ ಹೋಗಿ ಊರು ನೋಡಿ ಬಪ್ಪ ಪ್ಲಾನ್ ಲಿ ಇದ್ದವು ಎನ್ನ ಅಮ್ಮ ಇದಕ್ಕೆ ಮೊದಲೇ ಒಂದು ಸರ್ತಿ ಹೋಗಿ‌ಮಗಂದಿರ ಮನೆಲಿ ಆರು ತಿಂಗಳು ಇದ್ದು ಬೈಂದ .ಎನ್ನ ಅಕ್ಕ ಶುರು ಹೋಪದು  .ಅಕ್ಕಂಗೆ ರಜ್ಜ ಶುಧ್ಧ ಕ್ಲೀನ್ ಮಡಿ ಮೈಲಿಗೆ ಜಾಸ್ತಿ.ಹಾಂಗೆ ವಿಮಾನಲ್ಲಿ ಅಲ್ಲಿಯಣ ಹೋಟೆಲ್ ಗಳಲ್ಲಿ ಇದು ಎಂತ ಮಾಡುಗಪ್ಪ ಹೇಳಿ ಆನು ಯೋಚನೆ ಮಾಡಿದೆ .ಅಮ್ಮನತ್ತರೆ ಅದನ್ನೇ ಹೇಳಿದೆ.ನಾವು ಹೆರ ಹೋದಿಪ್ಪಗ ಅದೆಲ್ಲ ನೋಡುಲಾಗ ನಮ್ಮ ಊರಿಲಿ ಇಪ್ಪಗ ಇಲ್ಲಿ ಇಪ್ಪ ಹಾಂಗೆ ಇರಕ್ಕು .ಬೇರೆ ಊರಿಂಗೆ ಹೋದರೆ ಅಲ್ಲಿ ಇಪ್ಪ ಹಾಂಗೆ ಇರಕ್ಕು .ಕೇರೆ ತಿಂಬ ಊರಿಂಗೆ ಹೋದರೆ ನಡು ತುಂಡು ತಿನ್ನಕ್ಕು ಹೇಳುವ ಹವ್ಯಕ ನುಡಿಗಟ್ಟಿನ ಮಾತಿನ‌ನಡುವೆ ಹೇಳಿದ .ಅಪ್ಪಲ್ಲದ ? ಎಷ್ಟು ಒಳ್ಳೆಯ ಮಾತು.ಹೇಂಗೂ ಕೇರೆ ಮಾತ್ರ ತಿಂಬೋರ ಊರಿಂಗೆ ಹೋವುತ್ತು ಹೇಳಿ ಆದರೆ ಮತ್ತೆ ಅಂಜಿಕೆ ಮಾಡಿಕೊಂಡು ಕಡೆ ಕೊಡಿ ತಿಂಬದಲ್ಲ ನಡು ತುಂಡು ತಿಂದು ಖುಷಿ ಪಡಕ್ಕು ! ಹಾಂಗೆ ಬೇರೆ ಊರಿಂಗೆ ಹೋದಿಪ್ಪಗ ನಮ್ಮಮೂಲಭೂತ ಆಹಾರ ಸಂಸ್ಕೃತಿ ಸಸ್ಯಾಹಾರ ಹೇಳುದರ ಮಾತ್ರ ಮಡುಕ್ಕೊಂಡು ಒಳುದ ಮಡಿ ಮೈಲಿಗೆ ಎಲ್ಲ ಬಿಟ್ಟು ಸಂತೋಷ ಪಡಕ್ಕು .ಹುಟ್ಟಿನಿಂದ ಸಸ್ಯಾಹಾರಿ ಗೊಕ್ಕೆ ಅದರ ಯಾವ ಊರಿಂಗೆ ಹೋದರೂ ಬಿಡುಲೆ ಎಡಿಯ ಬ್ರಾಹ್ಮಣಾಗಿ ಹುಟ್ಟಿದ ಮೇಲೆ ಅಸರ ಬಿಡುಲೂ ಆಗ ಅಲ್ಲದ ? ಉಳಿದಂತೆ ವೇಷಭೂಷಣ, ಮಡಿ ಮೈಲಿಗೆ ಸಂಪ್ರದಾಯ ವ ಇಲ್ಲಿ ಬಿಟ್ಟು ಹೋಗಿ‌ಮತ್ತೆ ಪುನಃ ಬಂದ ಮೇಲೆ ಶುರು ಮಾಡಿದರೆ ಸಾಕು ಇಲ್ಲದ್ದರೆ ಅಲ್ಲಿ ಹೋಗಿ ಖುಷಿಯಾಗಿ ಇಪ್ಪಲೆ ಎಡಿಯ ಅಲ್ಲದ ? ನಿಂಗ ಎಲ್ಲ ಎಂಥ ಹೇಳ್ತೀರಿ ? ತುಂಬಾ ದಿನದ ನಂತರ ಗಿಳಿಬಾಗಿಲು ತೆರದ್ದೆ ಧನ್ಯವಾದಂಗ ©ಡಾ ಲಕ್ಷ್ಮೀ ಜಿ ಪ್ರಸಾದ ಕನ್ನಡ ಉಪನ್ಯಾಸಕರು ಸರ್ಕಾರಿ ಪದವಿ ಪೂರ್ವ ಕಾಲೇಜು ನೆಲಮಂಗಲ ಬೆಂಗಳೂರು ಗ್ರಾಮಾಂತರ ಜಿಲ್ಲೆ.