Monday 30 October 2017

ಗಿಳಿಬಾಗಿಲು ಹವ್ಯಕ ನುಡಿಗಟ್ಟು 42 ಕೆಮಿ ಹರುದೋವು © ಡಾ.ಲಕ್ಷ್ಮೀ ಜಿ ಪ್ರಸಾದ



ನಿನ್ನೆ ಅಮ್ಮನತ್ತರೆ ಪಟ್ಟಾಂಗ ಹೊಡವಗ ಒಬ್ಬರ ಮಾತು ನಡೆನುಡಿ ಬಗ್ಗೆ ಯೂ ವಿಷಯ ಬಂತು.ನೇರವಾಗಿ ಯಾವುದೇ ಲೋಕಾಪವಾದದ ಹೆದರಿಕೆ ಇಲ್ಲದ್ದೆ ಇದ್ದದರ ಇದ್ದ ಹಾಂಗೆ ಹೇಳುವೋರ ಸ್ವಭಾವದ ಬಗ್ಗೆ ಹೇಳುತ್ತಾ ಅವು ಕೆಮಿ ಹರುದೋವು.ಆರ ಬಗ್ಗೆ ಮಾತಾಡಲುದೆ ಹಿಂದೆ ಮುಂದೆ ನೋಡದ್ದೋರು.ಅಂತೋರತ್ತರೆ ವ್ಯವಹರುಸುವಗ ತುಂಬಾ ಜಾಗೃತೆ ಇರಕ್ಕಾವುತ್ತು.ಇಲ್ಲದ್ದರೆ ಸಮಯ ಸಂದರ್ಭ ನೋಡದ್ದೆ ನಮ್ಮ ಮರ್ಯಾದೆ ತೆಗೆಗು ಹೇಳಿ ಅಮ್ಮ ಹೇಳಿದ.ಕೆಮಿ ಹರುದೋವು ಹೇಳುವದರ ಕೇಳಿ ಅಪ್ಪಗ ಎನ್ನ ಕೆಮಿ ಕುತ್ತ ಆತು.ಅಮ್ಮ ಹೇಳುವ ವಿಷಯವ ಅರ್ಧಲ್ಲಿ ನಿಲ್ಲಿಸಿ ಕೆಮಿ ಹರುದೋವು ಹೇಳಿರೆ ಕೆಮಿ ತಮ್ಮಟೆ ಹರುದು ಹೋಗಿ‌ಕೆಮಿ ಕೇಳದ್ದೋರ ಹೇಳಿ ಕೇಳಿದೆ.ಕೆಮಿ ಕೇಳದ್ದೋರಿಂಗೆ ಬೇರೆಯೋರು ಎಂತ ಹೇಳ್ತವು ಹೇಳುದು ಕೇಳ್ತಿಲ್ಲೆ.ಹಾಂಗಾಗಿ ಹೇಳಕ್ಕಾದ್ದರ ಯಾವುದೇ ಮುಲಾಜಿಲ್ಲದ್ದೆ ಹೇಳುಗು ಹಾಂಗಾಗಿ ಕೆಮಿ ಹರುದೋವು ಹೇಳುವ ನುಡಿಗಟ್ಟು ಬಂದಿಕ್ಕು ಹೇಳಿ ಗ್ರೇಸಿ ಆನು ಹಾಂಗೆ ಕೇಳಿದೆ.ಆದರೆ ಅಮ್ಮ ಹೇಳಿದ ಅರ್ಥ ಬೇರೆಯೇ ಇದ್ದು.
ಮೊದಲೆಲ್ಲ ಜನಂಗ ಕೆಮಿಗೆ ಹೆಮ್ಮಕ್ಕ ಬೆಂಡು ಹಾಕಿಯೊಂಡು ಇತ್ತಿದವು.ಹಾಂಗೆ ಗೆಂಡುಮಕ್ಕ ಕೆಮಿಗೆ ಟಿಕ್ಕೆ ಹಾಕಿಕೊಂಡು ಇತ್ತಿದವು ಅನ್ನೇ. ಸೊಪ್ಬಪು ಕೈವಗಲೋ ಅಥವಾ ಇನ್ನೇನಾದರೂ ಕೆಲಸಕ್ಕೆ  ಬಲ್ಲ್ಲೆ ಎಡಕ್ಕಿಲಿ ನುರ್ಕುವಗ ಕೆಮಿಗೆ ಹಾಕಿದ ಬೆಂಡು ಅಥವಾ ಟಿಕ್ಕಿಗೆ ಬಳ್ಳಿಗ ಸಿಕ್ಕಾಕೊಂಡು ಬಂಙ ಆವುತ್ತು.
ಆದರೆ ಕೆಮಿಯ ಹಾಳೆ ಹರುದು ಹೋದೋರಿಂಗೆ ಬೆಂಡು ಅಥವಾ ಟಿಕ್ಕಿ ಹಾಕುಲೆ ಎಡಿತ್ತಿಲ್ಲೆ.ಹಾಂಗಾಗಿ ಬಲ್ಲೆ ಒಳ ನುಗ್ಗುವಗ ಸಿಕ್ಕಾಕೊಂಬ ಹೆದರಿಕೆ ಇಲ್ಲೆ.ಹಾಂಗಾಗಿ ಅಂತೋರು ಸೀದಾ ಬಲ್ಲೆ ಒಳ ನುಗ್ಗುತ್ತವು

ಇದರ ಯಾವುದೇ ಮುಲಾಜಿಲ್ಲದ್ದೆ ಮಾತಾಡುವೋರ ಬಗ್ಗೆ ಸಮೀಕರಣ ಮಾಡಿ ಅವರ ಸ್ವಭಾವದ ಬಗ್ಗೆ ಹೇಳುವಾಗ ಅವು ಕೆಮಿ ಹರುದೋವು, ಅವರತ್ತರೆ ಜಾಗ್ರತೆ ಇರಕ್ಕು ಹೇಳಿ ಹೇಳುತ್ತವು.
ಬಹುಶಃ  ಈ ಮಾತಿನ ಮೂಲ ತುಳು ಭಾಷೆಲಿ ಇದ್ದು .ತುಳುವಿಲಿ ಇಂತಹ ಸ್ವಭಾದೋವಕ್ಕೆ ಕೆಬಿ ಪರಿನಾಕುಲು ಹೇಳಿ ಹೇಳುತ್ತವು.
ಪರಿಸರದ ಭಾಷೆಯ ನುಡಿಗಟ್ಟುಗ ದಕ್ಷಿಣ ಕನ್ನಡ ಕಾಸರಗೋಡು ಪರಿಸರದ ಹವ್ಯಕ ಭಾಷೆಯ ಮೇಲೆ ಬೀರಿ ಇಂತಹ ಮಾತುಗ ಹವ್ಯಕ ಭಾಷೆಲಿ ಬಂದಿಕ್ಕು
ಕನ್ನಡದ ಮೂರೂ ಬಿಟ್ಟವರು ಹೇಳುವ ನುಡಿಗಟ್ಟು ಇದಕ್ಕೆ ಸಂವಾದಿಯಾಗಿ ಇದ್ದು
ಇಂತಹ ಚಂದದ ಶಬ್ದ ಪ್ರಯೋಗಂಗ ನಮ್ಮ ಭಾಷೆಲಿ ತುಂಬಾ ಇದ್ದು ಅಲ್ಲದಾ
- ಡಾ.ಲಕ್ಷ್ಮೀ ಜಿ ಪ್ರಸಾದ

No comments:

Post a Comment